ADVERTISEMENT

6 ಉದ್ಯೋಗಿಗಳ ವಿರುದ್ಧ ಟಿಸಿಎಸ್ ಕ್ರಮ: ಎನ್‌. ಚಂದ್ರಶೇಖರನ್‌

ಪಿಟಿಐ
Published 29 ಜೂನ್ 2023, 17:06 IST
Last Updated 29 ಜೂನ್ 2023, 17:06 IST
   

ಮುಂಬೈ : ಗುತ್ತಿಗೆ ನೌಕರರ ನೇಮಕ ಸಂಬಂಧ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಕಂಪನಿಯಲ್ಲಿನ ಆರು ಉದ್ಯೋಗಿಗಳು ಗುತ್ತಿಗೆ ಸಂಸ್ಥೆಗಳಿಂದ ಕೆಲವು ಅನುಕೂಲಗಳನ್ನು ಪಡೆದುಕೊಂಡಿರುವುದು ಗೊತ್ತಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಟಾಟಾ ಸನ್ಸ್‌ನ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಗುರುವಾರ ತಿಳಿಸಿದ್ದಾರೆ.

ಟಿಸಿಎಸ್‌ನ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆ ನೌಕರರ ನೇಮಕ ಸಂಬಂಧ ಇನ್ನೂ ಮೂರು ಉದ್ಯೋಗಿಗಳ ಪಾತ್ರದ ಕುರಿತಾಗಿಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಆರು ಉದ್ಯೋಗಿಗಳನ್ನು ಅಮಾನತು ಮಾಡಲಾಗಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಆರು ಕಂಪನಿಗಳನ್ನು ಸಹ ನಿಷೇಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಫೆಬ್ರುವರಿ ತಿಂಗಳ ಅಂತ್ಯದ ವೇಳೆಗೆ ಮತ್ತು ಮಾರ್ಚ್‌ನಲ್ಲಿ ಕಂಪನಿಗೆ ಎರಡು ಪ್ರತ್ಯೇಕ ಅನಾಮಧೇಯ ದೂರುಗಳು ಬಂದಿವೆ. ಮೊದಲನೆಯದು ಅಮೆರಿಕದಲ್ಲಿ ಬಿಸಿನೆಸ್‌ ಸಹಾಯಕ ಅಥವಾ ಗುತ್ತಿಗೆ ನೌಕರರ ನೇಮಕ ಮತ್ತು ಎರಡನೆಯದು ಭಾರತದಲ್ಲಿ ನೇಮಕ ಆಗಿರುವುದಕ್ಕೆ ಸಂಬಂಧಿಸಿದ್ದು ಎಂದು ಅವರು ತಿಳಿಸಿದ್ದಾರೆ.

ಅಮಾನತು ಮಾಡಿರುವ ಈ ಉದ್ಯೋಗಿಗಳು ಯಾವ ಸ್ವರೂಪದ ಅನುಕೂಲಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲು ಆಗುವುದಿಲ್ಲ. ಆದರೆ, ಕೆಲವು ನಿರ್ದಿಷ್ಟ ಕಂಪನಿಗಳ ಪರವಾಗಿರುವ ರೀತಿ ಅವರು ವರ್ತಿಸಿದ್ದಾರೆ ಎಂದು ಚಂದ್ರಶೇಖರನ್‌ ಹೇಳಿದ್ದಾರೆ.

ಬಿಸಿನೆಸ್‌ ಸಹಾಯಕರ (ಬಿ.ಎ) ನೇಮಕ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಪ್ರಕ್ರಿಯೆಯು ಎಲ್ಲಿ ದುರ್ಬಲವಾಗಿದೆ ಎಂಬುದನ್ನು ಕಂಡುಕೊಂಡು ಅದನ್ನು ಸರಿಪಡಿಸಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.