ADVERTISEMENT

ಟಿಸಿಎಸ್‌ ನಿವ್ವಳ ಲಾಭ ₹ 8,126 ಕೋಟಿ

ಪ್ರತಿ ಷೇರಿಗೆ ₹ 18 ಅಂತಿಮ ಲಾಭಾಂಶ ಘೋಷಣೆ

ಪಿಟಿಐ
Published 14 ಏಪ್ರಿಲ್ 2019, 20:15 IST
Last Updated 14 ಏಪ್ರಿಲ್ 2019, 20:15 IST
ರಾಜೇಶ್‌
ರಾಜೇಶ್‌   

ಮುಂಬೈ: ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌), 2018–19ನೆ ಹಣಕಾಸು ವರ್ಷದ ನಾಲ್ಕನೆ ತ್ರೈಮಾಸಿಕ ಅವಧಿಯಲ್ಲಿ ₹ 8,126 ಕೋಟಿ ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ಇದೇ ಅವಧಿಯಲ್ಲಿನ ₹ 6,904 ಕೋಟಿಗೆ ಹೋಲಿಸಿದರೆ, ಈ ಬಾರಿಯ ನಿವ್ವಳ ಲಾಭವು ಶೇ 17.7ರಷ್ಟು ಹೆಚ್ಚಳವಾಗಿದೆ.

ವರಮಾನ ಹೆಚ್ಚಳ: ಮಾರ್ಚ್‌ ತ್ರೈಮಾಸಿಕದಲ್ಲಿ ಸಂಸ್ಥೆಯ ವರಮಾನವು ಶೇ 18.5ರಷ್ಟು ಏರಿಕೆಯಾಗಿ ₹ 38,010 ಕೋಟಿಗೆ ತಲುಪಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿನ ವರಮಾನವು ₹ 32,075 ಕೋಟಿಗಳಷ್ಟಿತ್ತು.

ADVERTISEMENT

2018–19 ಹಣಕಾಸು ವರ್ಷದ ಒಟ್ಟಾರೆ ನಿವ್ವಳ ಲಾಭವು ಶೇ 21.9ರಷ್ಟು ಏರಿಕೆಯಾಗಿ ₹ 31,472 ಕೋಟಿಗೆ ತಲುಪಿದೆ. ಒಟ್ಟಾರೆ ವರಮಾನವು ಶೇ 19ರಷ್ಟು ಹೆಚ್ಚಳಗೊಂಡು ₹ 1,46,463 ಕೋಟಿಗೆ ತಲುಪಿದೆ.

‘ಹಿಂದಿನ 15 ತ್ರೈಮಾಸಿಕಗಳಲ್ಲಿಯೇ ಇದು ಗರಿಷ್ಠ ಪ್ರಮಾಣದ ವರಮಾನ ಹೆಚ್ಚಳವಾಗಿದೆ. ಮುಂಬರುವ ದಿನಗಳಲ್ಲಿನ ಒಪ್ಪಂದಗಳೂ ಗಣನೀಯ ಪ್ರಮಾಣದಲ್ಲಿ ವರಮಾನ ತರಲಿವೆ. ಹೊಸ ಹಣಕಾಸು ವರ್ಷದಲ್ಲಿನ ನಮ್ಮ ಹಣಕಾಸು ಸಾಧನೆ ಗಮನಾರ್ಹವಾಗಿರಲಿದೆ’ ಎಂದು ಸಂಸ್ಥೆಯ ಸಿಇಒ ರಾಜೇಶ್‌ ಗೋಪಿನಾಥನ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲಾಭಾಂಶ: ಪ್ರತಿ ಷೇರಿಗೆ ₹ 18ರ ಅಂತಿಮ ಲಾಭಾಂಶ ನೀಡಲು ಸಂಸ್ಥೆಯ ನಿರ್ದೇಶಕ ಮಂಡಳಿಯು ಶಿಫಾರಸು ಮಾಡಿದೆ.

ಸ್ವಾಧೀನದ ಹಸಿವು!

ಇತರ ತಂತ್ರಜ್ಞಾನ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಹಸಿವು ತನಗಿದೆ ಎಂದು ಟಿಸಿಎಸ್‌ ಹೇಳಿಕೊಂಡಿದೆ.

‘ಸ್ವಾಧೀನ ಪ್ರಕ್ರಿಯೆ ಕುರಿತು ನಾವು ಸದಾ ಮುಕ್ತ ಧೋರಣೆ ತಳೆದಿದ್ದೇವೆ. ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ ಹಸಿವು ನಮಗಿದೆ. ಬೌದ್ಧಿಕ ಆಸ್ತಿ ಹೆಚ್ಚಿಸುವ, ಮಾರುಕಟ್ಟೆ ವಿಸ್ತರಿಸುವ ಮತ್ತು ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಲು ನೆರವಾಗುವ ಸೂಕ್ತ ಸಂಸ್ಥೆಗಳ ಸ್ವಾಧೀನಕ್ಕೆ ನಾವು ಎದುರು ನೋಡುತ್ತಿದ್ದೇವೆ’ ಎಂದು ಸಂಸ್ಥೆಯ ಸಿಒಒ ಎನ್‌. ಗಣಪತಿ ಸುಬ್ರಮಣಿಯನ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.