ADVERTISEMENT

ಟಿಸಿಎಸ್‌ ಲಾಭ ₹ 8,105 ಕೋಟಿ

ಹಣಕಾಸು ವರ್ಷದ 3ನೇ ತ್ರೈಮಾಸಿಕದ ಆರ್ಥಿಕ ಸಾಧನೆ

ಪಿಟಿಐ
Published 10 ಜನವರಿ 2019, 20:00 IST
Last Updated 10 ಜನವರಿ 2019, 20:00 IST
ರಾಜೇಶ್‌ ಗೋಪಿನಾಥನ್
ರಾಜೇಶ್‌ ಗೋಪಿನಾಥನ್   

ಮುಂಬೈ: ಸಾಫ್ಟ್‌ವೇರ್‌ ಸೇವೆಗಳ ರಫ್ತು ಸಂಸ್ಥೆ ಟಿಸಿಎಸ್‌, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 8,105 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿನ ₹ 6,531 ಕೋಟಿ ಲಾಭಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 24.1ರಷ್ಟು ಏರಿಕೆ ಕಂಡುಬಂದಿದೆ. ಈವರೆಗಿನ ಅತಿ ಹೆಚ್ಚಿನ ನಿವ್ವಳ ಲಾಭ ಇದಾಗಿದೆ ಎಂದು ಕಂಪನಿ ತಿಳಿಸಿದೆ.

ಇದೇ ಅವಧಿಯಲ್ಲಿ, ವರಮಾನ ₹ 30,904 ಕೋಟಿಗಳಿಂದ ₹ 37,338 ಕೋಟಿಗೆ ಶೇ 20.8ರಷ್ಟು ಹೆಚ್ಚಾಗಿದೆ.

ADVERTISEMENT

ಬ್ಯಾಂಕಿಂಗ್, ಹಣಕಾಸು ಸೇವೆಗಳು ಹಾಗೂ ಇನ್ಶೂರೆನ್ಸ್‌ ವಹಿವಾಟು ಶೇ 23ರಷ್ಟು ಪ್ರಗತಿ ಕಂಡಿವೆ.

‘ಡಿಜಿಟಲ್‌ ಸೇವೆಗಳಿಗೆ ಬೇಡಿಕೆ ಹೆಚ್ಚಾಗಿರುವುದು, ಹೊಸ ಒಪ್ಪಂದಗಳಿಂದಾಗಿ ಈ ಪ್ರಗತಿ ಸಾಧ್ಯವಾಗಿದೆ’ ಎಂದು ಸಿಇಒ ರಾಜೇಶ್‌ ಗೋಪಿನಾಥನ್‌ ತಿಳಿಸಿದ್ದಾರೆ.

‘ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ₹ 43 ಸಾವಿರ ಕೋಟಿಯಷ್ಟು ನಗದು ಅಥವಾ ನಗದಿಗೆ ಸಮನಾದ ಸಂಪತ್ತು ಕಂಪನಿ ಬಳಿ ಇದೆ. ಕಂಪನಿಯ ಕಾರ್ಯತಂತ್ರಕ್ಕೆ ಅನುಗುಣವಾಗಿದ್ದರೆ ಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು. ಒಪ್ಪಂದ ಮಾರುಕಟ್ಟೆಯಲ್ಲಿ ನಾವು ಸಕ್ರಿಯವಾಗಿದ್ದೇವೆ’ ಎಂದು ಹೇಳಿದ್ದಾರೆ.

‘ರೂಪಾಯಿ ಮೌಲ್ಯದಲ್ಲಿನ ಏರಿಳಿತ, ವೆಚ್ಚದಲ್ಲಿನ ಹೆಚ್ಚಳದ ಹೊರತಾಗಿಯೂ ಕಂಪನಿಯ ಕಾರ್ಯಾಚರಣೆ ಚೇತರಿಸಿಕೊಂಡಿದೆ.ನಗದು ಲಭ್ಯತೆ ಸೃಷ್ಟಿಸುವುದು, ಭವಿಷ್ಯದಲ್ಲಿನ ಹೂಡಿಕೆಯತ್ತ ಗಮನ ಹರಿಸುವ ಮೂಲಕ ಲಾಭ ಗಳಿಸುವಿಕೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದು’ ಎಂದು ಮುಖ್ಯ ಹಣಕಾಸು ಅಧಿಕಾರಿ ವಿ. ರಾಮಕೃಷ್ಣನ್‌ ಹೇಳಿದ್ದಾರೆ.

ಅಂಕಿ–ಅಂಶಗಳು
*6,827–3ನೇ ತ್ರೈಮಾಸಿಕದಲ್ಲಿ ನೇಮಕ
* 4,17,919 –ಒಟ್ಟು ಸಿಬ್ಬಂದಿ ಸಂಖ್ಯೆ
*11.2–ಉದ್ಯೋಗ ತೊರೆಯುತ್ತಿರುವವರ ಪ್ರಮಾಣ
*₹4 –ಪ್ರತಿ ಷೇರಿಗೆ ಘೋಷಿಸಿರುವ ಮೂರನೇ ಮಧ್ಯಂತರ ಲಾಭಾಂಶದ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.