ADVERTISEMENT

ನಿಮಿಷಗಳಲ್ಲಿ ಡೆಲಿವರಿಗೆ ತಂತ್ರಜ್ಞಾನ ಕಾರಣ: ಕಂಪನಿಗಳ ವಿವರಣೆ

ವಿಜಯ್ ಜೋಷಿ
Published 15 ಜನವರಿ 2026, 0:11 IST
Last Updated 15 ಜನವರಿ 2026, 0:11 IST
<div class="paragraphs"><p>ಡೆಲಿವರಿ ಬಾಯ್‌ – ಸಾಂಕೇತಿಕ ಚಿತ್ರ</p></div>

ಡೆಲಿವರಿ ಬಾಯ್‌ – ಸಾಂಕೇತಿಕ ಚಿತ್ರ

   

ಬೆಂಗಳೂರು: ಹಣ್ಣು, ತರಕಾರಿ ಹಾಗೂ ವಿವಿಧ ಬಗೆಯ ಗ್ರಾಹಕ ಬಳಕೆ ಉತ್ಪನ್ನಗಳನ್ನು ಮನೆ ಬಾಗಿಲಿಗೆ ಕೆಲವೇ ನಿಮಿಷಗಳಲ್ಲಿ ತಲುಪಿಸುವ ಕ್ವಿಕ್‌ ಕಾಮರ್ಸ್‌ ವಲಯದ ಕಂಪನಿಗಳು ‘10 ನಿಮಿಷಗಳಲ್ಲಿ ಡೆಲಿವರಿ’ ಎಂಬ ಘೋಷವಾಕ್ಯವನ್ನು ಹಿಂಪಡೆದಿದ್ದರೂ, ಗ್ರಾಹಕರಿಗೆ ಉತ್ಪನ್ನವನ್ನು ತಲುಪಿಸುವ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಆಗದು.

ಕ್ವಿಕ್‌ ಕಾಮರ್ಸ್‌ ವಲಯದ ಕಂಪನಿಗಳ ಡಾರ್ಕ್‌ ಸ್ಟೋರ್‌ನಿಂದ ಗ್ರಾಹಕರ ವಿಳಾಸಕ್ಕೆ ಉತ್ಪನ್ನಗಳನ್ನು ತಲುಪಿಸಲು ಮೊದಲು ಎಷ್ಟು ನಿಮಿಷಗಳು ಬೇಕಾಗುತ್ತಿದ್ದವೋ ಈಗಲೂ ಅಷ್ಟೇ ನಿಮಿಷಗಳು ಸಾಕಾಗುತ್ತವೆ. ‘ನಾವು ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸುವಂತೆ ನಮ್ಮ ಡೆಲಿವರಿ ಕಾರ್ಮಿಕರಿಗೆ ಮೊದಲೂ ಒತ್ತಡ ಹೇರುತ್ತಿರಲಿಲ್ಲ, ಈಗಲೂ ಒತ್ತಡ ಹೇರುತ್ತಿಲ್ಲ. ಮುಂದೆಯೂ ಒತ್ತಡ ಹೇರುವುದಿಲ್ಲ’ ಎಂದು ಕಂಪನಿಯೊಂದರ ಪ್ರತಿನಿಧಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಂಪನಿಯ ಡಾರ್ಕ್‌ ಸ್ಟೋರ್‌ (ಕ್ವಿಕ್‌ ಕಾಮರ್ಸ್‌ ಕಂಪನಿಯು ವಿವಿಧ ಉತ್ಪನ್ನಗಳನ್ನು ಇರಿಸಿಕೊಳ್ಳುವ ಸ್ಥಳ) ಗ್ರಾಹಕರೊಬ್ಬರ ಮನೆಗೆ ಹತ್ತಿರದಲ್ಲಿ ಇದೆ ಎಂದಾದರೆ, ಆ ಗ್ರಾಹಕನಿಗೆ ಉತ್ಪನ್ನವು ಬಹಳ ಬೇಗನೆ ಸಿಗುತ್ತದೆ. ಇದಕ್ಕೆ ಕಾರಣ ಡಾರ್ಕ್‌ ಸ್ಟೋರ್‌ ಹತ್ತಿರ ಇರುವಿಕೆಯೇ ಹೊರತು, ಡೆಲಿವರಿ ಕಾರ್ಮಿಕರ ಮೇಲೆ ಒತ್ತಡ ತಂದು ಉತ್ಪನ್ನವನ್ನು ಬೇಗನೆ ತಲುಪಿಸುವ ಪದ್ಧತಿ ಇಲ್ಲ ಎಂದು ಅವರು ವಿವರಿಸಿದರು. ಕಂಪನಿಗಳು ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸಲು ಕೃತಕ ಬುದ್ಧಿಮತ್ತೆಯ (ಎ.ಐ) ನೆರವನ್ನೂ ಪಡೆಯುತ್ತಿವೆ.

‘ಬೆಂಗಳೂರಿನಲ್ಲಿ ಒಂದು ಡಾರ್ಕ್‌ ಸ್ಟೋರ್‌ ಸಾಮಾನ್ಯವಾಗಿ 2 ಕಿ.ಮೀ ಅಥವಾ 3 ಕಿ.ಮೀ ವ್ಯಾಪ್ತಿಯಲ್ಲಿನ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತದೆ. ಡಾರ್ಕ್‌ ಸ್ಟೋರ್‌ ಆರಂಭಿಸುವ ಸ್ಥಳವನ್ನು ಯೋಜಿತವಾಗಿ ಆಯ್ಕೆ ಮಾಡಲಾಗುತ್ತದೆ. ಡಾರ್ಕ್‌ ಸ್ಟೋರ್‌ನಲ್ಲಿ ಯಾವ ಉತ್ಪನ್ನವನ್ನು ಎಲ್ಲಿ ಇರಿಸಬೇಕು ಎಂಬುದನ್ನು ತೀರ್ಮಾನಿಸಲು ಎ.ಐ ಬಳಸಿಕೊಳ್ಳಲಾಗುತ್ತದೆ. ಇವೆಲ್ಲವೂ ನಮ್ಮ ಕಾರ್ಯವಿಧಾನದಲ್ಲಿ ನೆರವಾಗುತ್ತವೆ’ ಎಂದು ಅವರು ಹೇಳಿದರು.

‘ಗ್ರಾಹಕರು ಮತ್ತೆ ಮತ್ತೆ ಖರೀದಿ ಮಾಡುವ ಉತ್ಪನ್ನಗಳನ್ನು ಡಾರ್ಕ್‌ ಸ್ಟೋರ್‌ನಲ್ಲಿ ತಕ್ಷಣಕ್ಕೆ ಲಭ್ಯವಾಗುವ ಸ್ಥಳದಲ್ಲಿ ಇರಿಸಲಾಗುತ್ತದೆ. ಹೀಗಾಗಿ, ಆ ಉತ್ಪನ್ನಕ್ಕೆ ಹೊಸ ಬೇಡಿಕೆ ಬಂದಾಗ ಅದಕ್ಕೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತದೆ’ ಎಂದು ‘ಜೆಪ್ಟೊ’ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು.

ಬೇರೆ ಬೇರೆ ಸಂದರ್ಭಗಳಲ್ಲಿ ಯಾವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಬಹುದು ಎಂಬುದನ್ನು ಎ.ಐ. ನೆರವಿನಿಂದ ಅಂದಾಜಿಸಿ, ಡಾರ್ಕ್‌ ಸ್ಟೋರ್‌ಗಳಲ್ಲಿ ಆ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇರಿಸುವ ಕೆಲಸವನ್ನೂ ಕಂಪನಿಗಳು ಮಾಡುತ್ತಿವೆ. ಇದು ಕೂಡ ಅವುಗಳಿಗೆ ತ್ವರಿತವಾಗಿ ಉತ್ಪನ್ನ ತಲುಪಿಸಲು ನೆರವಾಗುತ್ತಿದೆ.

ಡಾರ್ಕ್‌ ಸ್ಟೋರ್‌ನಿಂದ ಉತ್ಪನ್ನವನ್ನು ಗ್ರಾಹಕರಿಗೆ ತಲುಪಿಸಲು ಇರುವ ಅತ್ಯಂತ ಸನಿಹದ ಮಾರ್ಗ ಯಾವುದು ಎಂಬುದನ್ನು ತಂತ್ರಜ್ಞಾನದ ನೆರವಿನಿಂದ ತೀರ್ಮಾನಿಸಲಾಗುತ್ತದೆ. ಇದು ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸುವಲ್ಲಿ ನೆರವಾಗುತ್ತಿದೆ ಎಂದು ಹೇಳಿದರು.

‘ದಂಡ ವಿಧಿಸಿದ್ದೂ ಇದೆ’: ಆದರೆ ಕಂಪನಿ ‍ಪ್ರತಿನಿಧಿಗಳ ಹೇಳಿಕೆಗೆ ಭಿನ್ನವಾದ ವಿವರವನ್ನು ಗಿಗ್‌ ಕಾರ್ಮಿಕರ ಸಂಘಟನೆಗಳ ನಾಯಕರು ನೀಡಿದ್ದಾರೆ. ‘ಉತ್ಪನ್ನ ತಲುಪಿಸುವುದು ತಡವಾಗಿದ್ದಕ್ಕೆ ದಂಡ ವಿಧಿಸಿದ, ತಲುಪಿಸುವುದು ಮತ್ತೆ ಮತ್ತೆ ತಡವಾದಾಗ ಆ್ಯಪ್‌ಗೆ ಲಾಗಿನ್‌ ಆಗುವುದನ್ನು ತಡೆದ (ಅಂದರೆ, ಕಾರ್ಮಿಕನನ್ನು ಅಮಾನತಿನಲ್ಲಿ ಇಡುವುದು) ನಿದರ್ಶನಗಳು ಇವೆ. ಉತ್ಪನ್ನಗಳನ್ನು ಬೇಗನೆ ತಲುಪಿಸಬೇಕು ಎಂಬ ಒತ್ತಡವು ಕಾರ್ಮಿಕರ ಮೇಲೆ ಇರುವುದು ನಿಜ. ಒತ್ತಡದ ಕಾರಣದಿಂದಾಗಿಯೇ ಅವರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಉದಾಹರಣೆಗಳು ಇವೆ’ ಎಂದು ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್ನರ್ಸ್ ಯೂನಿಯನ್ ಅಧ್ಯಕ್ಷ ವಿನಯ್ ಸಾರಥಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.