ADVERTISEMENT

‘ಸೆಸ್‌: ಅನ್ಯ ಉದ್ದೇಶಕ್ಕೆ ಬಳಸಿಲ್ಲ’

ಸಿಎಜಿ ವರದಿ: ಹಣಕಾಸು ಸಚಿವಾಲಯದ ಮೂಲಗಳಿಂದ ವಿವರಣೆ

ಪಿಟಿಐ
Published 26 ಸೆಪ್ಟೆಂಬರ್ 2020, 22:17 IST
Last Updated 26 ಸೆಪ್ಟೆಂಬರ್ 2020, 22:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್‌ಟಿ ಪರಿಹಾರ ಸೆಸ್‌ ಮೊತ್ತ ₹ 47,272 ಕೋಟಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಆದರೆ ಆದನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿರುವುದು ಸರಿಯಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಪ್ರತಿಕ್ರಿಯೆ ನೀಡಿವೆ.

2017–18 ಮತ್ತು 2018–19ರಲ್ಲಿ ಸಂಗ್ರಹವಾಗಿದ್ದ ಜಿಎಸ್‌ಟಿ ಪರಿಹಾರ ಸೆಸ್‌ ಮೊತ್ತವನ್ನು ರಾಜ್ಯಗಳಿಗೆ ನೀಡದೇ ಕೇಂದ್ರ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿ, ನಿಯಮ ಉಲ್ಲಂಘಿಸಿದೆ ಎಂದು ಸಿಎಜಿ ಶುಕ್ರವಾರ ತನ್ನ ವರದಿಯಲ್ಲಿ ತಿಳಿಸಿತ್ತು. ಆದರೆ, 2017–18 ಹಾಗೂ 2018–19ನೇ ಹಣಕಾಸು ವರ್ಷಕ್ಕೆ ನೀಡಬೇಕಿದ್ದ ಪರಿಹಾರ ಬಾಕಿಯನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪರಿಹಾರ ಮೊತ್ತವನ್ನು ಹೊಂದಾಣಿಕೆ ಮಾಡಲು ಸಮಯ ತೆಗೆದುಕೊಳ್ಳಲಾಗಿತ್ತು. ಆ ಬಳಿಕ ಪೂರ್ಣ ಪ್ರಮಾಣದಲ್ಲಿ ಪರಿಹಾರ ಬಾಕಿ ಬಿಡುಗಡೆ ಮಾಡಲಾಗಿದೆ. ಹೀಗಿರುವಾಗ ಅನ್ಯ ಉದ್ದೇಶಕ್ಕೆ ಬಳಸಲಾಗಿದೆ ಎನ್ನುವುದು ಸರಿಯಲ್ಲ ಎಂದು ಹೇಳಿವೆ.

ADVERTISEMENT

2017–18ರಲ್ಲಿ ₹ 62,611 ಕೋಟಿ ಪರಿಹಾರ ಸೆಸ್ ಸಂಗ್ರಹವಾಗಿತ್ತು. ಅದರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ
ಗಳಿಗೆ ₹ 41,146 ಕೋಟಿ ಬಿಡುಗಡೆ ಮಾಡಲಾಗಿದೆ. 2018–19ರಲ್ಲಿ ₹ 95,081 ಕೋಟಿ ಸಂಗ್ರಹವಾಗಿದ್ದು, ₹ 69,275 ಕೋಟಿ ನೀಡಲಾಗಿದೆ.

ಈ ಎರಡೂ ಹಣಕಾಸು ವರ್ಷದಲ್ಲಿ ₹ 47,271 ಕೋಟಿಯನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ ಬಳಕೆ ಮಾಡಿರಲಿಲ್ಲ. 2019–20ರಲ್ಲಿ ₹ 95,444 ಕೋಟಿ ಸೆಸ್‌ ಸಂಗ್ರಹವಾಗಿತ್ತು. ಆದರೆ, ಬಳಸದೇ ಇದ್ದ ₹ 47,271 ಕೋಟಿಯನ್ನೂ ಸೇರಿಸಿಕೊಂಡು ₹ 1.65 ಲಕ್ಷ ಕೋಟಿ ಪರಿಹಾರ ಸೆಸ್‌ ಬಿಡುಗಡೆ ಮಾಡಲು ಸರ್ಕಾರ ಸಾಧ್ಯವಾಯಿತು ಎಂದು ಮಾಹಿತಿ ನೀಡಿವೆ.

ಹಣಕಾಸು ಇಲಾಖೆಯಲ್ಲಿ ಸಾರ್ವಜನಿಕ ಲೆಕ್ಕದ ಖಾತೆಗೆ ನಿಧಿಯನ್ನು ವರ್ಗಾಯಿಸುವ ವೇಳೆ ಉಂಟಾಗಿರುವ ಪ್ರಮಾದದಿಂದ ರಾಜ್ಯಗಳಿಗೆ ನೆರವು ವರ್ಗಾವಣೆ ಆಗುವ ಬದಲಾಗಿ ಇತರೆ ಆರ್ಥಿಕ ಸೇವೆಗಳ ವಿಭಾಗಕ್ಕೆ ಹಣ ವರ್ಗಾವಣೆ ಆಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.