ADVERTISEMENT

ಹೆಚ್ಚುವರಿಯಾಗಿ 6,750 ಟನ್‌ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 23:45 IST
Last Updated 4 ಮಾರ್ಚ್ 2024, 23:45 IST
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಸೋಮವಾರ ನೋಂದಣಿಗೆ ಮುಗಿಬಿದ್ದ ರೈತರು
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಸೋಮವಾರ ನೋಂದಣಿಗೆ ಮುಗಿಬಿದ್ದ ರೈತರು   

ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರವು ಸ್ಪಂದಿಸಿದ್ದು, ಪ್ರಸಕ್ತ ಋತುವಿನಡಿ ರಾಜ್ಯದಲ್ಲಿ ಒಟ್ಟು 69,250 ಟನ್‌ ಉಂಡೆ ಕೊಬ್ಬರಿ ಖರೀದಿಗೆ ಅನುಮತಿ ನೀಡಿದೆ.

ಕೇಂದ್ರವು ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಉತ್ಪಾದನೆಯಾಗುವ ಶೇ 25ರಷ್ಟು ಕೊಬ್ಬರಿಯನ್ನು ಮಾತ್ರ ಖರೀದಿಸಲಿದೆ.

ಈ ಮೊದಲು 62,500 ಟನ್‌ ಖರೀದಿಸಲು ಅನುಮತಿ ನೀಡಿತ್ತು. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆಯು ಕುಸಿದಿದೆ. ರೈತರ ಬಳಿ ದಾಸ್ತಾನು ಇರುವ ಕೊಬ್ಬರಿ ಪೈಕಿ ಅರ್ಧದಷ್ಟನ್ನು ಖರೀದಿಸಬೇಕು. ಕೇರಳ, ತಮಿಳುನಾಡಿಗೆ ನಿಗದಿಪಡಿಸಿರುವ ಮಾನದಂಡವನ್ನೇ ಕರ್ನಾಟಕಕ್ಕೂ ಅನ್ವಯಿಸಬಾರದು ಎಂದು ರಾಜ್ಯ ಸರ್ಕಾರ ಕೋರಿತ್ತು. ಈ ಮನವಿಯನ್ನು ಕೇಂದ್ರವು ಪುರಸ್ಕರಿಸಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬೆಳೆಗಾರರ ಹೆಸರಲ್ಲಿ ವರ್ತಕರು ನೋಂದಣಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ರಾಜ್ಯ ಸರ್ಕಾರವು ಹಳೆಯ ನೋಂದಣಿಯನ್ನು ರದ್ದುಪಡಿಸಿದ್ದು, ಹೊಸ ನೋಂದಣಿಗೆ 45 ದಿನಗಳ ಕಾಲಾವಕಾಶ ನೀಡಿದೆ.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ರೈತರ ಹೆಸರು ನೋಂದಣಿ ಸೋಮವಾರದಿಂದ ಆರಂಭವಾಗಿದ್ದು, ಒಟ್ಟು 76 ಕೇಂದ್ರಗಳನ್ನು ತೆರೆಯಲಾಗಿದೆ.

‘ಬೆಳಿಗ್ಗೆ ಕೆಲವು ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ತಲೆದೋರಿತ್ತು. ಅದನ್ನು ಸರಿಪಡಿಸಲಾಗಿದೆ. ಇಂಟರ್‌ನೆಟ್‌ ಸಮಸ್ಯೆ ಇರುವ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಗೆ ವಿಳಂಬವಾಗುತ್ತಿದೆ’ ಎಂದು ಮಹಾಮಂಡಳದ ಅಧಿಕಾರಿಗಳು ಹೇಳಿದ್ದಾರೆ.

ಕೆಲಕಾಲ ನೋಂದಣಿ ಸ್ಥಗಿತ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ನೋಂದಣಿ ಕೇಂದ್ರ ತೆರೆಯಲಾಗಿದೆ. ರೈತರು ಸರದಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸುತ್ತಿದ್ದ ದೃಶ್ಯ ಕಂಡುಬಂದಿತು.

ಕಡೂರು ಎಪಿಎಂಸಿ ಆವರಣದಲ್ಲಿ ಎರಡು ಕಡೆ, ಬೀರೂರಿನಲ್ಲಿ ಒಂದು ಮತ್ತು ಪಂಚನಹಳ್ಳಿಯಲ್ಲಿ ಒಂದು ಕೇಂದ್ರ ಆರಂಭವಾಗಿದೆ. ಕೇಂದ್ರದಲ್ಲಿ ಒಂದು ಕಂಪ್ಯೂಟರ್‌ ಮತ್ತು ಒಂದು ಬೆರಳಚ್ಚು ಯಂತ್ರ ಅಳವಡಿಸಲಾಗಿದೆ. ಒಬ್ಬರೇ ಸಿಬ್ಬಂದಿ ಎಲ್ಲಾ ರೈತರ ಹೆಸರನ್ನು ನೋಂದಣಿ ಮಾಡಬೇಕಿದೆ. ಹಾಗಾಗಿ, ನೋಂದಣಿ ಮಂದಗತಿಯಲ್ಲಿ ನಡೆಯಿತು. ಸಂಜೆ ತನಕ ರೈತರು ನೋಂದಣಿ ಮಾಡಿಸಿದರು.

ಬೆಳಿಗ್ಗೆ 11ಗಂಟೆಯಲ್ಲಿ ಸರ್ವರ್ ಸಮಸ್ಯೆ ಕಾಡಿತು. ನೋಂದಣಿ ಸ್ಥಗಿತಗೊಂಡಿದ್ದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಕೆಲವೇ ಹೊತ್ತಿನಲ್ಲಿ ಸರ್ವರ್ ಸರಿಯಾಯಿತು. ಬಳಿಕ ನೋಂದಣಿ ಸರಾಗವಾಗಿ ನಡೆಯಿತು. ಸಾಲಿನಲ್ಲಿ ನಿಲ್ಲುವ ರೈತರಿಗೆ ಅನುಕೂಲ ಆಗುವಂತೆ ಶಾಮಿಯಾನ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ರೈತರ ತಳ್ಳಾಟ: 

ಮಂಡ್ಯ ಜಿಲ್ಲೆಯ ಕಿಕ್ಕೇರಿ ಪಟ್ಟಣದ ಎಪಿ‌ಎಂಸಿ ಮಾರುಕಟ್ಟೆಯಲ್ಲಿ ತೆರೆದಿದ್ದ ನೋಂದಣಿ ಕೇಂದ್ರದಲ್ಲಿ ರೈತರು ತಳ್ಳಾಟ ನಡೆಸಿದರು.

ತಡರಾತ್ರಿಯಿಂದಲೇ ಕೇಂದ್ರದ ಮುಂದೆ ರೈತರು ನೆರೆದಿದ್ದರು. ಬೆಳಿಗ್ಗೆ ವೇಳೆಗೆ ರೈತರ ಸಂಖ್ಯೆ ಹೆಚ್ಚಾಯಿತು. ಮಧ್ಯಾಹ್ನದ ವೇಳೆಗೆ ಸರದಿ ಬಿಟ್ಟು ಹಲವರು ನೂಕಾಟ ನಡೆಸಿ ನೋಂದಣಿಗೆ ಮುಂದಾದರು. ಇದರಿಂದ ಕೆಲಕಾಲ ಗದ್ದಲ ಉಂಟಾಯಿತು. ರೈತ ಮುಖಂಡರ ಮನವಿಗೂ ಕಿವಿಗೊಡಲಿಲ್ಲ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. 

ಮಾರಾಟಕ್ಕೆ ಬೆಳೆಗಾರರ ನಿರಾಸಕ್ತಿ
ಮಂಗಳೂರು: ಬೆಂಬಲ ಬೆಲೆಯಡಿ ಕೊಬ್ಬರಿ ಮಾರಾಟ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ಬೆಳೆಗಾರರು ಆಸಕ್ತಿ ತೋರಿಸಿಲ್ಲ. ‘ಜಿಲ್ಲೆಯಲ್ಲಿ ಸುಳ್ಯ ಪುತ್ತೂರು ಬೆಳ್ತಂಗಡಿ ಬಂಟ್ವಾಳ ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಎರಡು ಕಡೆ ಸೇರಿ ಒಟ್ಟು ಏಳು ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೆ ಯಾವ ತೆಂಗು ಬೆಳೆಗಾರರೂ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಿಲ್ಲ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಹೆಸರು ನೋಂದಣಿಗೆ ಇಲ್ಲಿ ಸರ್ವರ್‌ ಸಮಸ್ಯೆ ಇಲ್ಲ. ಕರಾವಳಿ ಪ್ರದೇಶದಲ್ಲಿ ತೇವಾಂಶ ಹೆಚ್ಚು ಇರುವುದರಿಂದ ಉಂಡೆ ಕೊಬ್ಬರಿ ಬೇಗ ಹಾಳಾಗುತ್ತದೆ. ಅದರ ಬದಲು ಇಲ್ಲಿನ ತೆಂಗು ಬೆಳೆಗಾರರು ಮಿಲ್ಲಿಂಗ್‌ ಕೊಬ್ಬರಿಯನ್ನೇ (ಚಿಕ್ಕ ಚಿಕ್ಕ ತುಂಡು) ಹೆಚ್ಚಾಗಿ ತಯಾರಿಸುತ್ತಾರೆ. ಅವರು ಅದನ್ನು ನೇರವಾಗಿ ಗಾಣಗಳಿಗೆ ಒಯ್ದು ತೆಂಗಿನ ಎಣ್ಣೆ ಮಾಡಿಸುತ್ತಾರೆ. ಇಲ್ಲವಾದರೆ ಚಿಪ್ಪುಸಹಿತ ತೆಂಗಿನ ಕಾಯಿ ಮಾರುತ್ತಾರೆ’ ಎಂದು ವಿವರಿಸಿದರು. 
ಕೇಂದ್ರದ ಬಳಿ ಬೀಡುಬಿಟ್ಟ ರೈತರು 
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗದ ಎಪಿಎಂಸಿ ಆವರಣದಲ್ಲಿ 2 ಹಿರಿಯೂರು ಚಿತ್ರದುರ್ಗ ಹೊಳಲ್ಕೆರೆ ಹಾಗೂ ಶ್ರೀರಾಂಪುರದಲ್ಲಿ ತಲಾ 1 ಖರೀದಿ ಕೇಂದ್ರ ತೆರೆಯಲಾಗಿದೆ. ಬೆಳಿಗ್ಗೆ 8ರಿಂದ ಆರಂಭವಾದ ನೋಂದಣಿ ಪ್ರಕ್ರಿಯೆ ಸಂಜೆ 6ಕ್ಕೆ ಕೊನೆಗೊಂಡಿತು. ಚಿತ್ರದುರ್ಗ ಹಿರಿಯೂರು ಹೊಳಲ್ಕೆರೆ ಕೇಂದ್ರಗಳ ಬಳಿ ಹೊಸದುರ್ಗದಿಂದ ಬಂದಿದ್ದ ರೈತರು ಜಮಾಯಿಸಿದ್ದರು. ಹೊಸದುರ್ಗದಲ್ಲಿ ಭಾನುವಾರ ರಾತ್ರಿಯಿಂದಲೇ ರೈತರು ಖರೀದಿ ಕೇಂದ್ರದತ್ತ ಧಾವಿಸಿದ್ದರು. ಮೊದಲ ದಿನ 918 ರೈತರು 11862 ಕ್ವಿಂಟಲ್ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ರಾತ್ರಿಯವರೆಗೂ ಕೇಂದ್ರದ ಆವರಣದಲ್ಲಿ ರೈತರು ಬೀಡುಬಿಟ್ಟಿದ್ದರು. ‘ಎರಡೂ ಕಡೆ ನೋಂದಣಿಗೆ ಅವಕಾಶ ಕಲ್ಪಿಸಿದ್ದರೂ ಜನದಟ್ಟಣೆ ಕಡಿಮೆಯಾಗಿಲ್ಲ. ಭಾನುವಾರ ರಾತ್ರಿ 8ಗಂಟೆಗೆ ಖರೀದಿ ಕೇಂದ್ರಕ್ಕೆ ಬಂದಿದ್ದೇವೆ. ಸೋಮವಾರ ಬೆಳಿಗ್ಗೆ 8ಕ್ಕೆ ನೋಂದಣಿ ಆರಂಭವಾಗಿದೆ. ಬಿಸಿಲಿಗೆ ಸಾಕಾಗಿ ಹೋಗಿದೆ. ಶಾಮಿಯಾನ ಶೌಚಾಲಯದ ವ್ಯವಸ್ಥೆ ಸರಿ ಇರಲಿಲ್ಲ’ ಎಂದು ಮುತ್ತಾಗೊಂದಿ ರೈತ ನಿಂಗಪ್ಪ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.