ADVERTISEMENT

ಮಾರುಕಟ್ಟೆಗೆ ಬಂದ ತೊಗರಿ: ಇಳುವರಿಯೂ ಇಲ್ಲ, ಧಾರಣೆಯೂ ಸಿಕ್ತಿಲ್ಲ..!

ಡಿ.ಬಿ, ನಾಗರಾಜ
Published 6 ಡಿಸೆಂಬರ್ 2018, 19:45 IST
Last Updated 6 ಡಿಸೆಂಬರ್ 2018, 19:45 IST
ವಿಜಯಪುರ ಎಪಿಎಂಸಿ ವ್ಯಾಪಾರಿ ನಿಂಗರಾಜ ಗಣಿಹಾರ ಗುರುವಾರ ಮಾರಾಟಕ್ಕೆಂದು ತಂದಿದ್ದ ರೈತರ ತೊಗರಿಯ ಗುಣಮಟ್ಟ ಪರಿಶೀಲಿಸಿದರುಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ಎಪಿಎಂಸಿ ವ್ಯಾಪಾರಿ ನಿಂಗರಾಜ ಗಣಿಹಾರ ಗುರುವಾರ ಮಾರಾಟಕ್ಕೆಂದು ತಂದಿದ್ದ ರೈತರ ತೊಗರಿಯ ಗುಣಮಟ್ಟ ಪರಿಶೀಲಿಸಿದರುಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಒಂದೆಡೆ ಬರದ ಭೀಕರತೆ; ಇನ್ನೊಂದೆಡೆ ಸರಣಿ ಸಾಲು ಸಾಲು ಸಮಸ್ಯೆಗಳು. ಸಂಕಷ್ಟಗಳ ಸರಮಾಲೆಯಲ್ಲೇ ಹಲವು ಅಡ್ಡಿಗಳ ನಡುವೆಯೂ, ತೊಗರಿ ರಾಶಿ ಮಾಡಿಕೊಂಡು ಮಾರುಕಟ್ಟೆಗೆ ಬಂದ ರೈತನಿಗೆ ಧಾರಣೆ ಕುಸಿತದ ಬರೆ.

ಈ ವರ್ಷ ತೊಗರಿ ಇಳುವರಿಯೇ ಇಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಅರ್ಧಕ್ಕರ್ಧ ಉತ್ಪನ್ನ ಕಡಿಮೆಯಿದೆ. ಇಂಥ ಸ್ಥಿತಿಯಲ್ಲೂ ಬೆಲೆ ಸಿಗದಿರುವುದು ಬೆಳೆಗಾರರನ್ನು ಹೈರಾಣಾಗಿಸಿದೆ.

ಡಿಸೆಂಬರ್‌ ಆರಂಭದ ಬೆನ್ನಿಗೆ ರೈತರು ರಾಶಿಯಾದ ಹೊಸ ತೊಗರಿಯನ್ನು ಮಾರಾಟಕ್ಕಾಗಿ ಜಿಲ್ಲೆಯಲ್ಲಿರುವ ವಿಜಯಪುರ, ಸಿಂದಗಿ, ಇಂಡಿ, ತಾಳಿಕೋಟೆ ಎಪಿಎಂಸಿ ಮಾರುಕಟ್ಟೆಗಳಿಗೆ ತರುತ್ತಿದ್ದಾರೆ. ಇದರಲ್ಲಿ ವಿಜಯಪುರ ಮಾರುಕಟ್ಟೆಗೆ ಬರುತ್ತಿರುವ ತೊಗರಿ ಉತ್ಪನ್ನದ ಪ್ರಮಾಣ ಹೆಚ್ಚಿದೆ.

ADVERTISEMENT

ರೈತರಿಂದ ಮಾರುಕಟ್ಟೆಗೆ ತೊಗರಿಯ ಮಾಲು ಬರುತ್ತಿದ್ದಂತೆ, ಬೆಲೆಯಲ್ಲೂ ಏರಿಳಿತ ಆರಂಭಗೊಂಡಿದೆ. ಪ್ರಸ್ತುತ ಪ್ರತಿ ಕ್ವಿಂಟಲ್‌ ತೊಗರಿ ಧಾರಣೆ ₹ 4600ರಿಂದ ₹ 5000ದ ತನಕವೂ ನಡೆದಿದೆ.

ಬೆಂಬಲ ಬೆಲೆಯತ್ತ ಚಿತ್ತ:‘ಮುಕ್ತ ಮಾರುಕಟ್ಟೆಯಲ್ಲಿ ಪ್ರಸ್ತುತ, ಗುಣಮಟ್ಟದ ತೊಗರಿಗೆ ಪ್ರತಿ ಕ್ವಿಂಟಲ್‌ಗೆ ₹ 4800ರಿಂದ ₹ 5000 ಧಾರಣೆಯಿದೆ. ಇದು ಯಾವುದಕ್ಕೂ ಸಾಲದು. ಈ ಬಾರಿ ಇಳುವರಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ. ಹಿಂದಿನ ವರ್ಷ ಬಂಪರ್‌ ಬೆಳೆ ಬಂದಾಗ ಸರ್ಕಾರ ಮಧ್ಯ ಪ್ರವೇಶಿಸಿ ಪ್ರತಿ ರೈತರಿಂದ ತಲಾ 10 ಕ್ವಿಂಟಲ್‌ ತೊಗರಿಯನ್ನು ₹ 6000ದಂತೆ ಖರೀದಿಸಿತ್ತು.

ಈ ಬಾರಿ ಪರಿಸ್ಥಿತಿ ಬಿಗಡಾಯಿಸಿದೆ. ಉತ್ಪನ್ನವೇ ಇಲ್ಲವಾಗಿದೆ. ಬಹುತೇಕರಿಗೆ ಮನೆ ಬಳಕೆಗೂ ತೊಗರಿಯಾಗಿಲ್ಲ. ಇಂಥ ಸನ್ನಿವೇಶದಲ್ಲಿ ಕೊಂಚ ಬೆಳೆದಿದ್ದವರು ಮಾರುಕಟ್ಟೆಗೆ ಮಾರಾಟಕ್ಕೆಂದು ಬಂದರೆ ಧಾರಣೆ ಕುಸಿದಿದೆ. ಇದು ತೊಗರಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ’ ಎಂದು ಬಸವನಬಾಗೇವಾಡಿಯ ಮುದಕಪ್ಪ ಕುಳಗೇರಿ ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದಿನ ವರ್ಷ ಒಂದ್‌ ಎಕ್ರೇಲೀ ನಾಲ್ಕ್‌ ಕ್ವಿಂಟಲ್‌ ತೊಗರಿ ಬೆಳೆದಿದ್ದೆ. ಈ ವರ್ಷ ಎಕರೆಗೆ ಕೇವಲ 70 ಕೆ.ಜಿ. ಇಳುವರಿ ಸಿಕ್ಕಿದೆ. ಬಿತ್ತನೆಯಿಂದ ರಾಶಿ ಮಾಡುವ ತನಕ ಕನಿಷ್ಠ ₹ 7000 ಖರ್ಚಾಗಿದೆ. ಧಾರಣೆ ಹೆಚ್ಚಾಗಬಹುದು, ಇಲ್ಲವೇ ಸರ್ಕಾರ ತೊಗರಿ ಖರೀದಿಗೆ ಕೇಂದ್ರ ಆರಂಭಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದು ಭೀಮು ನಿಡಗುಂದಿ ಹೇಳಿದರು.

ಬೆಂಬಲ ಬೆಲೆ ಕ್ವಿಂಟಲ್‌ಗೆ ₹ 5675
‘ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ತೊಗರಿಗೆ ಬೆಂಬಲ ಬೆಲೆ ₹ 5675 ಎಂದು ಘೋಷಿಸಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಇಲ್ಲಿವರೆಗೂ ಯಾವುದೇ ಪ್ರೋತ್ಸಾಹಧನ ಘೋಷಿಸಿಲ್ಲ’ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಚಬನೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ವರ್ಷ ವಿಜಯಪುರ ಜಿಲ್ಲೆಯಲ್ಲಿನ ನಾಲ್ಕು ಎಪಿಎಂಸಿ ಹಾಗೂ ಖರೀದಿ ಕೇಂದ್ರಗಳಿಗೆ ಕನಿಷ್ಠ 15 ಲಕ್ಷ ಕ್ವಿಂಟಲ್‌ ತೊಗರಿ ಆವಕವಾಗಿತ್ತು. ಆದರೆ ಈ ವರ್ಷ ಇದರಲ್ಲಿ ಶೇ 30ರ ಪ್ರಮಾಣದ ತೊಗರಿ ಆವಕವಾದರೆ ಹೆಚ್ಚು ಎನ್ನುವ ಸ್ಥಿತಿಯಿದೆ’ ಎಂದು ಅವರು ಹೇಳಿದರು.

‘ಬರದ ಭೀಕರತೆಗೆ ಸಿಲುಕಿದ ತೊಗರಿ ಬೆಳೆ ಹೊಲದಲ್ಲೇ ಅರ್ಧಕ್ಕರ್ಧ ನಾಶವಾಗಿದೆ. ಇಳುವರಿ ಪ್ರಮಾಣವೂ ಸಾಕಷ್ಟು ಕುಸಿದಿದೆ. ಹಿಂದಿನ ವರ್ಷ 100 ಚೀಲ ತೊಗರಿ ಬೆಳೆದಿದ್ದವರು, ಈ ವರ್ಷ 20ರಿಂದ 25 ಚೀಲ ತೊಗರಿ ಬೆಳೆದಿದ್ದರೇ ಹೆಚ್ಚು ಎನ್ನುವಂಥ ವಾತಾವರಣವಿದೆ.

ನಿರೀಕ್ಷೆಯಂತೆ ಈ ವರ್ಷ 5 ಲಕ್ಷ ಕ್ವಿಂಟಲ್‌ ತೊಗರಿ ವಿಜಯಪುರ ಜಿಲ್ಲೆಯ ಮಾರುಕಟ್ಟೆಗೆ ಆವಕವಾದರೆ ಹೆಚ್ಚು. ಪ್ರಸ್ತುತ ಮಾರುಕಟ್ಟೆಯಲ್ಲಿ ₹ 5000ದಿಂದ ₹ 5200 ಧಾರಣೆಯಿದೆ’ ಎಂದು ಚಬನೂರ ಮಾಹಿತಿ ನೀಡಿದರು.

ಸೀಝನ್‌ ಆರಂಭ
‘ಮಾರುಕಟ್ಟೆಯಲ್ಲಿ ತೊಗರಿ ಉತ್ಪನ್ನದ ಸೀಝನ್‌ ಆರಂಭಗೊಂಡಿದೆ. ಫೆಬ್ರುವರಿ ಅಂತ್ಯದವರೆಗೂ ರೈತರು ಮಾರಾಟಕ್ಕೆ ತರಲಿದ್ದಾರೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಕ್ವಿಂಟಲ್‌ ತೊಗರಿ ಧಾರಣೆ ₹ 5300 ಇದ್ದರೆ, ಪ್ರಸ್ತುತ ₹ 4600–₹ 4700 ಆಸುಪಾಸಿದೆ’ ಎಂದು ವಿಜಯಪುರ ಎಪಿಎಂಸಿ ವ್ಯಾಪಾರಿ ನಿಂಗರಾಜ ಗಣಿಹಾರ ತಿಳಿಸಿದರು.

‘ವಿಜಯಪುರ ಜಿಲ್ಲೆ ಸೇರಿದಂತೆ ದೂರದ ಧಾರವಾಡ, ಕುಷ್ಟಗಿ, ನೆರೆಯ ಬೆಳಗಾವಿ, ಜತ್ತ ತಾಲ್ಲೂಕಿನ ಭಾಗದಿಂದಲೂ ಇಲ್ಲಿನ ಮಾರುಕಟ್ಟೆಗೆ ತೊಗರಿಯನ್ನು ಮಾರಾಟಕ್ಕಾಗಿ ರೈತರು ತರಲಿದ್ದಾರೆ. ರೈತರಿಂದ ಖರೀದಿಸಿದ ತೊಗರಿಯನ್ನು ವರ್ತಕರು ನೆರೆಯ ಮಹಾರಾಷ್ಟ್ರ, ತಮಿಳುನಾಡು, ಛತ್ತೀಸ್‌ಘಡ ರಾಜ್ಯಗಳಿಗೆ ಮಾರಾಟ ಮಾಡಿ, ಲಾಭ ಗಳಿಸುತ್ತಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.