ನವದೆಹಲಿ: ವರ್ಜಿನಿಯಾ ತಂಬಾಕು ಬೆಳೆಯಲು ನೀಡಲಾಗುವ ಪರವಾನಗಿ ಅವಧಿಯನ್ನು ಒಂದು ವರ್ಷಗಳ ಬದಲು ಮೂರು ವರ್ಷಗಳಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಇದರಿಂದ ದೇಶದ ಸುಮಾರು 83,500 ರೈತರಿಗೆ ಪ್ರಯೋಜನವಾಗಲಿದೆ. ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲಿನ 4.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗುತ್ತಿದೆ.
‘ಸರ್ಕಾರದ ಈ ಕ್ರಮದಿಂದ ರೈತರ ಸಮಯ ಉಳಿತಾಯವಾಗಲಿದೆ. ಪ್ರತಿ ವರ್ಷ ನೋಂದಣಿಗೆ ಕಚೇರಿ ಅಲೆಯುವುದು ತಪ್ಪಲಿದೆ. ಜತೆಗೆ ಮುಂದಿನ ಮೂರು ವರ್ಷಗಳಿಗೆ ತಂಬಾಕು ಬೆಳೆಯಲು ಯೋಜನೆ ರೂಪಿಸುವುದು ಮತ್ತು ಮಾರುಕಟ್ಟೆ ಸೃಷ್ಟಿಸಲು ತಮ್ಮ ಸಮಯವನ್ನು ಮೀಸಲಿಡಬಹುದು’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಹೇಳಿದ್ದಾರೆ.
ಇಡೀ ಜಗತ್ತಿನಲ್ಲಿ ಭಾರತವು ಎರಡನೇ ಅತಿ ದೊಡ್ಡ ತಂಬಾಕು ಬೆಳೆಗಾರ ಮತ್ತು ನಾಲ್ಕನೇ ಅತಿ ದೊಡ್ಡ ರಫ್ತು ರಾಷ್ಟ್ರವಾಗಿದೆ ಎಂದು 2023ರ ದಾಖಲೆಗಳು ಹೇಳುತ್ತವೆ. 2024–25ರಲ್ಲಿ ₹16 ಸಾವಿರ ಕೋಟಿ ವಹಿವಾಟನ್ನು ಈ ಉತ್ಪನ್ನ ದಾಖಲಿಸಿದೆ.
ತಂಬಾಕು ಮಂಡಳಿಯ 1975ರ ಕಾಯ್ದೆಯಡಿ ವರ್ಜಿನಿಯಾ ತಂಬಾಕನ್ನು ನಿಯಂತ್ರಿಸಲಾಗಿದೆ. ಈ ಕಾಯ್ದೆಯಡಿ ವರ್ಜಿನಿಯಾ ತಂಬಾಕು ಬೆಳೆಯುವವರು ಕ್ಷೇತ್ರವಾರ ತಮ್ಮ ಹೆಸರು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಮಂಡಳಿಯು ನೋಂದಣಿ ಪ್ರಮಾಣ ಪತ್ರ ವಿತರಣೆಯ ಹೊಣೆ ಹೊತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.