ADVERTISEMENT

ಜಿಯೊ, ಏರ್‌ಟೆಲ್‌ ಆದಾಯ ಪಾಲು ಹೆಚ್ಚಳ ಸಾಧ್ಯತೆ

ಪಿಟಿಐ
Published 20 ಡಿಸೆಂಬರ್ 2020, 12:19 IST
Last Updated 20 ಡಿಸೆಂಬರ್ 2020, 12:19 IST
   

ನವದೆಹಲಿ: ಜಿಯೊ ಮತ್ತು ಏರ್‌ಟೆಲ್‌ ಕಂಪನಿಗಳು ದೂರಸಂಪರ್ಕ ವಲಯದ ಆದಾಯ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳುತ್ತಿದ್ದು, ವೊಡಾಫೋನ್‌ ಐಡಿಯಾ ಕಂಪನಿಯ ಆದಾಯದ ಪಾಲಿನಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ. ಇದರಿಂದಾಗಿ ದೂರಸಂಪರ್ಕ ಉದ್ಯಮದಲ್ಲಿ ಪ್ರಮುಖವಾಗಿ ಎರಡು ಕಂಪನಿಗಳು ಮಾತ್ರ ಉಳಿದುಕೊಳ್ಳುವ ಸಂದರ್ಭ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಐಐಎಫ್‌ಎಲ್‌ ಸೆಕ್ಯುರಿಟೀಸ್‌ ವರದಿ ಹೇಳಿದೆ.

ದೂರಸಂರ್ಪಕ ಸೇವಾ ಕಂಪನಿಗಳು ತಕ್ಷಣಕ್ಕೆ ಸೇವಾ ಶುಲ್ಕ ಹೆಚ್ಚಿನ ಸಾಧ್ಯತೆ ಇಲ್ಲ. ಮುಂದಿನ 12ರಿಂದ 18 ತಿಂಗಳ ಅವಧಿಯಲ್ಲಿ ಸೇವಾ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಐಐಎಫ್‌ಎಲ್‌ ಹೇಳಿದೆ. ‘ಜಿಯೊ ಕಂಪನಿಯ ಪ್ರವೇಶದ ನಂತರ ದೂರಸಂಪರ್ಕ ಉದ್ದಿಮೆ ವಲಯದಲ್ಲಿ ಆದ ಬದಲಾವಣೆಗಳಿಂದಾಗಿ ಒಟ್ಟು ನಾಲ್ಕು ಕಂಪನಿಗಳು ಉಳಿದುಕೊಳ್ಳುವ ಸ್ಥಿತಿ ಉಂಟಾಯಿತು. ನಮ್ಮ ಪ್ರಕಾರ, ಈಗ ಉದ್ದಿಮೆಯು ಬಹುತೇಕ ಎರಡೇ ಕಂಪನಿಗಳ ವ್ಯವಸ್ಥೆಯತ್ತ ಸಾಗುತ್ತಿದೆ. ವೊಡಾಫೋನ್ ಐಡಿಯಾ ಕಂಪನಿಯು ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದೆ, ಅದು ಆದಾಯದ ಪಾಲು ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದು ಐಐಎಫ್‌ಎಲ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಶಾಸನಬದ್ಧ ಪಾವತಿಗಳನ್ನು ಮಾಡಲು ಕಟ್ಟುನಿಟ್ಟಿನ ಗಡುವು ಇರುವ ಕಾರಣ, ವೊಡಾಫೋನ್ ಐಡಿಯಾ ಕಂಪನಿ ಆದಾಯದ ಪಾಲು ಕಳೆದುಕೊಳ್ಳುವ ವೇಗ ಹೆಚ್ಚಬಹುದು. ಏರ್‌ಟೆಲ್‌ ಕಂಪನಿಯು ಆದಾಯದ ಪಾಲು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಈ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಏರ್‌ಟೆಲ್‌ ಕಂಪನಿಯ ಆದಾಯದ ಪಾಲು ಶೇಕಡ 33 ಆಗಿತ್ತು. ಅದು ಮುಂದಿನ ಮೂರು ವರ್ಷಗಳಲ್ಲಿ ಶೇಕಡ 37ಕ್ಕೆ ಹೆಚ್ಚಳವಾಗುವ ಅಂದಾಜಿದೆ. ಈ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಜಿಯೊ ಕಂಪನಿಯ ಆದಾಯದ ಪಾಲು ಶೇಕಡ 38ರಷ್ಟು ಇತ್ತು, ವೊಡಾಫೋನ್ ಐಡಿಯಾದ್ದು ಶೇಕಡ 22ರಷ್ಟಿತ್ತು. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕಂಪನಿ ಶೇ 7ರಷ್ಟು ಪಾಲು ಹೊಂದಿತ್ತು’ ಎಂದು ಐಐಎಫ್‌ಎಲ್‌ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.