ADVERTISEMENT

ಮೀಸಲು ನಿಧಿ ವರ್ಗಾವಣೆ ಬೇಡ: ರಘುರಾಂ ರಾಜನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:00 IST
Last Updated 17 ಡಿಸೆಂಬರ್ 2018, 20:00 IST
ರಘುರಾಂ
ರಘುರಾಂ   

ನವದೆಹಲಿ:ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿಯಲ್ಲಿ ಇರುವ ಮೀಸಲು ನಿಧಿಯಲ್ಲಿನ ಹೆಚ್ಚುವರಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಿದರೆ ಅದರಿಂದ ಕೇಂದ್ರೀಯ ಬ್ಯಾಂಕ್‌ನ ಮಾನದಂಡ ಕಡಿಮೆಯಾಗಲಿದೆ ಎಂದು ಮಾಜಿ ಗವರ್ನರ್‌ ರಘುರಾಂ ರಾಜನ್‌ ಪ್ರತಿಪಾದಿಸಿದ್ದಾರೆ.

‘ಆರ್‌ಬಿಐನ ಮಾನದಂಡವನ್ನು ‘ಎಎಎ’ನಿಂದ ಕೆಳಗೆ ಇಳಿಸಿದರೆ ಅದರಿಂದ ಕೇಂದ್ರೀಯ ಬ್ಯಾಂಕ್ ಪಡೆಯುವ ಸಾಲ ದುಬಾರಿಯಾಗಲಿದೆ. ಇದು ದೇಶದ ಇಡೀ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಎಷ್ಟು ಪ್ರಮಾಣದಲ್ಲಿ ಹೆಚ್ಚುವರಿ ನಿಧಿಯನ್ನು ವರ್ಗಾಯಿಸಲಾಗುತ್ತಿದೆ ಎನ್ನುವುದನ್ನು ಆಧರಿಸಿ ಮಾನದಂಡ ಕಡಿಮೆಯಾಗುತ್ತದೆ. ಸದ್ಯಕ್ಕಂತೂ ಅಂತಹ ಸಮಸ್ಯೆ ಉದ್ಭವಿಸಿಲ್ಲ. ಮುಂದೊಂದು ದಿನ ಎದುರಾಗಬಹುದು. ಆ ಬಗ್ಗೆ ಕಾಳಜಿ ವಹಿಸಬೇಕಾಗಿದೆ.

‘ಹೆಚ್ಚುವರಿ ನಿಧಿಯ ವರ್ಗಾವಣೆ ಸಂಬಂಧ ಯಾವುದೇ ಒಂದು ನಿರ್ಧಾರಕ್ಕೆ ಬರುವ ಮುನ್ನ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಾತುಕತೆ ನಡೆಸಬೇಕು’ ಎಂದು ರಾಜನ್‌ ಅವರು ಎನ್‌ಡಿಟಿವಿ ನ್ಯೂಸ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

‘ಭಾರತ ಸದ್ಯಕ್ಕೆ ‘ಬಿಎಎ’ ಮಾನದಂಡ ಹೊಂದಿರುವ ದೇಶವಾಗಿದೆ. ಕೆಲವೊಮ್ಮೆ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ನಡೆಸಬೇಕಾಗುತ್ತದೆ. 2013ರಲ್ಲಿ ಕರೆನ್ಸಿ ಅದಲು ಬದಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂತಹ ಸಂದರ್ಭ ಮತ್ತೆ ಉದ್ಭವವಾದರೆ ಗರಿಷ್ಠ ಮಟ್ಟದ ಮಾನದಂಡ ಇರಬೇಕಾಗುತ್ತದೆ. ಆರ್‌ಬಿಐನ ಬ್ಯಾಲನ್ಸ್‌ಶೀಟ್‌, ಆಕ್ಷೇಪಗಳಿಂದಲೂ ಮುಕ್ತವಾಗಿರಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ವೃದ್ಧಿಗೆ ಅಡ್ಡಿಯಾದ ನೋಟು ರದ್ದತಿ
‘ನೋಟು ರದ್ದತಿಯು ದೇಶಿ ಆರ್ಥಿಕತೆಯ ಬೆಳವಣಿಗೆಯ ದರವನ್ನು ಕುಂಠಿತಗೊಳಿಸಿತು’ ಎಂದೂ ರಾಜನ್‌ ವಿಶ್ಲೇಷಿಸಿದ್ದಾರೆ. ‘ನೋಟು ರದ್ದತಿಯು ಜಿಡಿಪಿ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಅನೇಕ ಅಧ್ಯಯನಗಳು ಇದನ್ನು ಪುಷ್ಟೀಕರಿಸಿವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.