ADVERTISEMENT

ಬೆಲೆ ಬೆಂಬಲ ಯೋಜನೆಯಡಿ 1.31 ಲಕ್ಷ ಟನ್‌ ತೊಗರಿ ಖರೀದಿ: ಕೇಂದ್ರ ಕೃಷಿ ಸಚಿವಾಲಯ

ಪಿಟಿಐ
Published 13 ಮಾರ್ಚ್ 2025, 13:32 IST
Last Updated 13 ಮಾರ್ಚ್ 2025, 13:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಧಾರಣೆ ಕುಸಿತದಿಂದ ತೊಂದರೆಗೆ ಸಿಲುಕಿರುವ ರೈತರ ಹಿತದೃಷ್ಟಿಯಿಂದ ಬೆಲೆ ಬೆಂಬಲ ಯೋಜನೆಯಡಿ (ಪಿಎಸ್‌ಎಸ್‌) ತೊಗರಿ ಖರೀದಿಗೆ ಚಾಲನೆ ನೀಡಿದ್ದು, ಇಲ್ಲಿಯವರೆಗೆ ₹1.31 ಲಕ್ಷ ಟನ್‌ ಖರೀದಿಸಲಾಗಿದೆ. ಒಟ್ಟು 89,219 ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಕೃಷಿ ಸಚಿವಾಲಯವು ಗುರುವಾರ ತಿಳಿಸಿದೆ.

2024–25ನೇ ಮುಂಗಾರು ಋತುವಿನಲ್ಲಿ ಕರ್ನಾಟಕ ಸೇರಿ ಆಂಧ್ರಪ್ರದೇಶ, ಛತ್ತೀಸಗಢ, ಗುಜರಾತ್‌, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರಪ್ರದೇಶದಲ್ಲಿ ಖರೀದಿಗೆ ಸಚಿವಾಲಯವು ಅನುಮತಿ ನೀಡಿದೆ.

ಈಗಾಗಲೇ ಆಂಧ್ರಪ್ರದೇಶ, ಗುಜರಾತ್‌, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಖರೀದಿಗೆ ಚಾಲನೆ ನೀಡಲಾಗಿದೆ. ಶೀಘ್ರವೇ, ಉಳಿದ ರಾಜ್ಯಗಳಲ್ಲೂ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ನಾಫೆಡ್‌ ಮತ್ತು ಎನ್‌ಸಿಸಿಎಫ್‌ನ ಇ–ಸಮೃದ್ಧಿ ಪೋರ್ಟಲ್‌ನಡಿ ನೋಂದಣಿ ಮಾಡಿದ ರೈತರಿಂದಲೂ ತೊಗರಿ ಖರೀದಿಸಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‌ಪಿ) ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದರೆ ಬೆಲೆ ಬೆಂಬಲ ಯೋಜನೆಯಡಿ ಕೃಷಿ ಹುಟ್ಟುವಳಿಗಳನ್ನು ಖರೀದಿಸಲಾಗುತ್ತದೆ ಎಂದು ಹೇಳಿದೆ.

ದೇಶದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರವು ಆತ್ಮನಿರ್ಭರ ಮಿಷನ್‌ ಅನ್ನು 2028–29ರ ವರೆಗೂ ವಿಸ್ತರಿಸಿದೆ. ಕೇಂದ್ರದ ಏಜೆನ್ಸಿಗಳ ಮೂಲಕ ರೈತರಿಂದ ತೊಗರಿ, ಚೆನ್ನಂಗಿ ಬೇಳೆ ಮತ್ತು ಉದ್ದು ಖರೀದಿಸಲಾಗುವುದು ಎಂದು ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.