ADVERTISEMENT

ಜನವರಿಯಿಂದ ಟಿ.ವಿ ಬೆಲೆ ಹೆಚ್ಚಳ ಸಾಧ್ಯತೆ: ಉದ್ಯಮದ ತಜ್ಞರ ಅಭಿಪ್ರಾಯ

ಮೆಮೊರಿ ಚಿಪ್‌ಗಳ ಬೆಲೆಯಲ್ಲಿನ ಹೆಚ್ಚಳ, ರೂಪಾಯಿ ಮೌಲ್ಯ ಇಳಿಕೆಯು ದರ ಹೆಚ್ಚಳಕ್ಕೆ ಕಾರಣ

ಪಿಟಿಐ
Published 14 ಡಿಸೆಂಬರ್ 2025, 15:47 IST
Last Updated 14 ಡಿಸೆಂಬರ್ 2025, 15:47 IST
   

ನವದೆಹಲಿ: ಜನವರಿಯಿಂದ ಟೆಲಿವಿಷನ್‌ಗಳ (ಟಿ.ವಿ) ಬೆಲೆ ಶೇ 3ರಿಂದ ಶೇ 4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉದ್ಯಮದ ತಜ್ಞರು ಹೇಳಿದ್ದಾರೆ.

ಟಿ.ವಿಗಳಲ್ಲಿ ಬಳಸುವ ಮೆಮೊರಿ ಚಿಪ್‌ಗಳ ಬೆಲೆಯಲ್ಲಿನ ಹೆಚ್ಚಳ ಮತ್ತು ರೂಪಾಯಿ ಮೌಲ್ಯ ಇಳಿಕೆಯು ಟಿ.ವಿಗಳ ಬೆಲೆ ಏರಿಕೆಗೆ ಕಾರಣವಾಗಲಿವೆ ಎಂದು ಅವರು ಹೇಳಿದ್ದಾರೆ.

ಓಪನ್ ಸೆಲ್, ಸೆಮಿಕಂಡಕ್ಟರ್ ಚಿಪ್‌ಗಳು ಮತ್ತು ಮದರ್‌ಬೋರ್ಡ್‌ನಂತಹ ಪ್ರಮುಖ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ, ರೂಪಾಯಿ ಮೌಲ್ಯ ಇಳಿಕೆಯು ಉದ್ಯಮವನ್ನು ಸಂಕಷ್ಟದ ಸ್ಥಿತಿಯಲ್ಲಿ ಇರಿಸಿದೆ ಎಂದು ಹೇಳಿದ್ದಾರೆ.

ADVERTISEMENT

ಕೃತಕ ಬುದ್ಧಿಮತ್ತೆ ಸರ್ವರ್‌ಗಳಲ್ಲಿ ಬಳಸುವ ಎಚ್‌ಬಿಎಂ ಮೆಮೊರಿಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ಜಾಗತಿಕವಾಗಿ ಮೆಮೊರಿ ಚಿಪ್‌ಗಳ ಪೂರೈಕೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ, ಎಲ್ಲ ಪ್ರಕಾರಗಳ ಮೆಮೊರಿ ಚಿಪ್‌ಗಳ ಬೆಲೆ ಹೆಚ್ಚಾಗುತ್ತಿದೆ. ಚಿಪ್ ತಯಾರಕರು ಹೆಚ್ಚು ಲಾಭ ಕೊಡುವ ಎ.ಐ ಚಿಪ್‌ಗಳ ತಯಾರಿಕೆಗೆ ಗಮನ ನೀಡಿದ್ದರಿಂದ ಚಿಪ್‌ ಪೂರೈಕೆಯಲ್ಲಿ ಕೊರತೆಯಾಗಿದೆ ಎಂದು ಹೇಳಿದ್ದಾರೆ. 

ಕೆಲವು ಟಿ.ವಿ ತಯಾರಕರು ಟಿ.ವಿ. ಬೆಲೆ ಹೆಚ್ಚಳದ ಕುರಿತು ಡೀಲರ್‌ಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.

ಟಿ.ವಿ ತಯಾರಿಕಾ ಕಂಪನಿ ಸೂಪರ್‌ ಪ್ಲಾಸ್ಟ್ರೋನಿಕ್ಸ್‌ ಪ್ರೈವೆಟ್‌ ಲಿಮಿಟೆಡ್‌ನ (ಎಸ್‌ಪಿಪಿಎಲ್‌) ಸಿಇಒ ಅವನೀತ್ ಸಿಂಗ್‌ ಮಾರ್ವಾ, ‘ಕಳೆದ ಮೂರು ತಿಂಗಳಿನಲ್ಲಿ ಮೆಮೊರಿ ಚಿಪ್‌ ಬೆಲೆ ಶೇ 500ರಷ್ಟು ಹೆಚ್ಚಳವಾಗಿದೆ. ಟಿ.ವಿ. ಬೆಲೆ ಜನವರಿಯಿಂದ ಶೇ 7ರಿಂದ ಶೇ 10ರಷ್ಟು ಏರಿಕೆಯಾಗಬಹುದು’ ಎಂದು ಹೇಳಿದ್ದಾರೆ.

ಮೆಮೊರಿ ಚಿಪ್‌ ಬೆಲೆಯು ಇನ್ನೆರಡು ತ್ರೈಮಾಸಿಕಗಳಲ್ಲಿ ಇದೇ ಮಟ್ಟದಲ್ಲಿ ಮುಂದುವರಿದರೆ ಟಿ.ವಿ ಬೆಲೆ ಮತ್ತಷ್ಟು ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ.

ಜಿಎಸ್‌ಟಿ ಮಂಡಳಿಯು 32 ಇಂಚು ಮತ್ತು ಅದಕ್ಕಿಂತ ದೊಡ್ಡದಾದ ಟಿ.ವಿ.ಗಳಿಗೆ ವಿಧಿಸುವ ತೆರಿಗೆಯನ್ನು ಶೇ 28ರಿಂದ ಶೇ 18ಕ್ಕೆ ಇಳಿಸಿದೆ. ಇದು ಟಿ.ವಿ ಮಾರಾಟಕ್ಕೆ ಉತ್ತೇಜನ ನೀಡಿದೆ. ಆದರೆ, ಮುಂದಿನ ದಿನಗಳಲ್ಲಿ ಟಿ.ವಿ ಬೆಲೆ ಹೆಚ್ಚಳವು ಮಾರಾಟವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಜಿಎಸ್‌ಟಿ ಇಳಿಕೆಯಿಂದ ಟಿ.ವಿ ಬೆಲೆಯು ಅಂದಾಜು ₹4,500ರಷ್ಟು ಕಡಿಮೆ ಆಗಿತ್ತು. 

ಫ್ಲಾಷ್‌ ಮೆಮೊರಿ ಮತ್ತು ಡಿಡಿಆರ್‌4 ಬೆಲೆಯು ಶೇ 1 ಸಾವಿರದವರೆಗೆ ಏರಿಕೆ ಆಗಿದೆ ಎಂದು ವಿಡಿಯೊಟೆಕ್ಸ್‌ನ ನಿರ್ದೇಶಕ ಅರ್ಜುನ್ ಬಜಾಜ್ ಹೇಳಿದ್ದಾರೆ.

2024ರಲ್ಲಿ ಭಾರತದ ಟಿ.ವಿ ಮಾರುಕಟ್ಟೆ ಮೌಲ್ಯ ₹1 ಲಕ್ಷ ಕೋಟಿ ಪ್ರಸಕ್ತ ಜೂನ್ ತ್ರೈಮಾಸಿಕದಲ್ಲಿ ದೇಶದ ಸ್ಮಾರ್ಟ್ ಟಿ.ವಿ ರಫ್ತು ಶೇ 4ರಷ್ಟು ಇಳಿಕೆ  ಜಿಎಸ್‌ಟಿ ದರ ಇಳಿಕೆಯಿಂದ ಕಡಿತವಾಗಿದ್ದ ಟಿ.ವಿ ಬೆಲೆ ಹೆಚ್ಚಳ ಸಾಧ್ಯತೆ

ಮೆಮೊರಿ ಚಿಪ್‌ಗಳ ಕೊರತೆ ಮತ್ತು ರೂಪಾಯಿ ಮೌಲ್ಯ ಇಳಿಕೆಯಿಂದ ಎಲ್‌ಇಡಿ ಟಿವಿಗಳ ಬೆಲೆ ಶೇ 3ರಷ್ಟು ಹೆಚ್ಚಾಗಬಹುದು
ಎನ್‌.ಎಸ್‌. ಸತೀಶ್ ಹಾಯರ್‌ ಅಪ್ಲಯನ್ಸ್‌ನ ಭಾರತದ ಅಧ್ಯಕ್ಷ