ADVERTISEMENT

ಉಬರ್‌ ಸೇವೆಗಳಿಗೆ 25 ಸಾವಿರ ಟಾಟಾ ಇ.ವಿ. ಕಾರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 21:45 IST
Last Updated 20 ಫೆಬ್ರುವರಿ 2023, 21:45 IST
   

ನವದೆಹಲಿ : ಉಬರ್‌ ಕಂಪನಿಗೆ 25 ಸಾವಿರ ಎಕ್ಸ್‌ಪ್ರೆಸ್‌–ಟಿ ವಿದ್ಯುತ್ ಚಾಲಿತ ವಾಹನ (ಇ.ವಿ.) ಮಾರಾಟ ಮಾಡುತ್ತಿರುವುದಾಗಿ ಟಾಟಾ ಮೋಟರ್‌ ಕಂಪನಿಯು ಸೋಮವಾರ ಹೇಳಿದೆ.

ಎರಡೂ ಕಂಪನಿಗಳ ಮಧ್ಯೆ ನಡೆದಿರುವ ಒಪ್ಪಂದದ ಪ್ರಕಾರ, ಉಬರ್‌ ಕಂಪನಿಯು ತನ್ನ ಪ್ರೀಮಿಯಂ ಸೇವೆಗಳಲ್ಲಿ ಈ ಎಲೆಕ್ಟ್ರಿಕ್‌ ಸೆಡಾನ್‌ ಬಳಸಲಿದೆ ಎಂದು ಕಂಪನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಆದರೆ, ಎಷ್ಟು ಮೊತ್ತಕ್ಕೆ ಒಪ್ಪಂದ ನಡೆದಿದೆ ಎನ್ನುವ ಬಗ್ಗೆ ಕಂಪನಿಗಳು ಮಾಹಿತಿ ನೀಡಿಲ್ಲ.

ಒಂದು ಬಾರಿ ಚಾರ್ಜ್‌ ಮಾಡಿದರೆ 315 ಕಿಲೋ ಮೀಟರ್‌ ದೂರ ಕ್ರಮಿಸುವ ಸಾಮರ್ಥ್ಯವಿರುವ ಒಂದು ಸೆಡಾನ್‌ನ ಎಕ್ಸ್‌ ಷೋರೂಂ ಬೆಲೆ ₹ 14.98 ಲಕ್ಷ ಆಗುತ್ತದೆ. ಫೇಮ್‌ ಸಬ್ಸಿಡಿ ₹2.6 ಲಕ್ಷ ಸಿಗಲಿದೆ.

ADVERTISEMENT

ಬೆಂಗಳೂರು, ದೆಹಲಿ ಎನ್‌ಸಿಆರ್‌, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್‌ ಮತ್ತು ಅಹಮದಾಬಾದ್ ನಗರಗಳಲ್ಲಿ ಎಕ್ಸ್‌ಪ್ರೆಸ್‌–ಟಿ ಸೇವೆಗೆ ಲಭ್ಯವಾಗಲಿದೆ ಎಂದು ಹೇಳಿವೆ.

ಟಾಟಾ ಮೋಟರ್ಸ್‌ ಕಂಪನಿಯು ಈ ತಿಂಗಳಿನಿಂದ ಆರಂಭಿಸಿ ಹಂತ ಹಂತವಾಗಿ ಉಬರ್‌ಗೆ ಕಾರನ್ನು ನೀಡಲಿದೆ.

‘ಈ ಒಪ್ಪಂದದಿಂದಾಗಿ ಬಾಡಿಗೆ ವಾಹನಗಳ ವಿಭಾಗದಲ್ಲಿ ನಮ್ಮ ಮಾರುಕಟ್ಟೆ ಸ್ಥಾನವು ಇನ್ನಷ್ಟು ಬಲಗೊಳ್ಳಲಿದೆ’ ಎಂದು ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್‌ ಚಂದ್ರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.