ADVERTISEMENT

ಉಡಾನ್‌–3: ಆರು ವಿಮಾನಕ್ಕೆ ಸಮ್ಮತಿ

ಮಂಡಕಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ₹ 700 ಕೋಟಿ ಮೊತ್ತದ ಪ್ರಸ್ತಾವ

ಡಿ.ಬಿ, ನಾಗರಾಜ
Published 25 ಜೂನ್ 2019, 19:46 IST
Last Updated 25 ಜೂನ್ 2019, 19:46 IST
ಮಂಡಕಳ್ಳಿ ವಿಮಾನ ನಿಲ್ದಾಣ
ಮಂಡಕಳ್ಳಿ ವಿಮಾನ ನಿಲ್ದಾಣ   

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಅಭಿವೃದ್ಧಿಗೆ ₹ 700 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್‌–3 ಯೋಜನೆ ಅಡಿಯಲ್ಲಿ, ಆರು ವಿಮಾನಗಳ ಹಾರಾಟಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಸಿರು ನಿಶಾನೆ ದೊರೆತಿದೆ.

ಉಡಾನ್‌–1 ಯೋಜನೆ ಅಡಿಯಲ್ಲಿ 2017ರ ಸೆಪ್ಟೆಂಬರ್‌ನಿಂದ ಟ್ರೂ ಜೆಟ್‌ ವಿಮಾನಯಾನ ಸಂಸ್ಥೆಯ ವಿಮಾನವು ನಿತ್ಯವೂ ಮೈಸೂರು–ಚೆನ್ನೈ ನಡುವೆ ಹಾರಾಟ ನಡೆಸಿದೆ. ಉಡಾನ್‌–3 ಅಡಿಯಲ್ಲಿ, ಅಲಯನ್ಸ್‌ ಏರ್‌ ಸಂಸ್ಥೆಯು ಮೈಸೂರು–ಬೆಂಗಳೂರು–ವಿಜಯವಾಡ–ವಿಶಾಖಪಟ್ಟಣಂ ನಡುವೆ ಜೂನ್‌ 7 ರಿಂದ ವಿಮಾನ ಹಾರಾಟ ಆರಂಭಿಸಿದೆ.‌

‘ಅಲಯನ್ಸ್‌ ಏರ್ ಸಂಸ್ಥೆ ಮೈಸೂರು–ಕೊಚ್ಚಿ, ಮೈಸೂರು–ಗೋವಾ, ಮೈಸೂರು–ಹೈದರಾಬಾದ್‌ ನಡುವೆ ವಿಮಾನ ಹಾರಾಟದ ಪರವಾನಗಿ ಪಡೆದಿದ್ದು, ಜುಲೈನಿಂದ ಹಂತ ಹಂತವಾಗಿ ಸೇವೆ ಆರಂಭಿಸುವುದು. ಟ್ರೂ ಜೆಟ್‌ ಸಂಸ್ಥೆಯು ಮೈಸೂರು–ಬೆಳಗಾವಿ–ತಿರುಪತಿ–ಹೈದರಾಬಾದ್‌ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿದೆ.

ADVERTISEMENT

ಜುಲೈ ಅಂತ್ಯ ಇಲ್ಲವೇ, ಆಗಸ್ಟ್‌ ಆರಂಭದಲ್ಲಿ ತನ್ನ ಸೇವೆ ಆರಂಭಿಸುವ ನಿರೀಕ್ಷೆಯಿದೆ. ಮೈಸೂರು–ಹೈದರಾಬಾದ್ ನಡುವೆ ವಿಮಾನ ಹಾರಾಟಕ್ಕಾಗಿ ಇಂಡಿಗೊ ಸಂಸ್ಥೆ ಅನುಮತಿ ಪಡೆದುಕೊಂಡಿದ್ದು, ಎಂದಿನಿಂದ ಹಾರಾಟ ಆರಂಭಿಸಲಿದೆ ಎಂಬುದನ್ನು ಇದುವರೆಗೂ ಖಚಿತಪಡಿಸಿಲ್ಲ’ ಎಂದು ವಿಮಾನ ನಿಲ್ದಾಣದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

280 ಎಕರೆ ಜಮೀನು ಭೂಸ್ವಾಧೀನ: ಮಂಡಕಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಅಭಿವೃದ್ಧಿಗೆ 280 ಎಕರೆ ಜಮೀನು ಬೇಕಾಗಿದೆ. ಅಗತ್ಯ ಭೂಮಿ ಕೊಡಲು ರಾಜ್ಯ ಸರ್ಕಾರವೂ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಜಿಲ್ಲಾಡಳಿತ, ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

‘ಏಕಕಾಲಕ್ಕೆ ಅಂದಾಜು 1,500 ಜನರು ವಿಮಾನ ನಿಲ್ದಾಣಕ್ಕೆ ಬಂದು ಹೋದರೂ ಕಿಂಚಿತ್ ಸಮಸ್ಯೆಯಾಗದಂತೆ ಸಕಲ ಸೌಲಭ್ಯ ಕಲ್ಪಿಸಲು ಬೃಹತ್ ಟರ್ಮಿನಲ್‌ ನಿರ್ಮಾಣ, 1740 ಮೀಟರ್ ಉದ್ದವಿರುವ ರನ್‌ ವೇ ಯನ್ನು 2750 ಮೀಟರ್‌ವರೆಗೂ ವಿಸ್ತರಿ
ಸುವುದು, ಈ ಭಾಗದ ಕೃಷಿ, ಕೈಗಾರಿಕಾ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಅನುಕೂಲವಾಗುವಂತೆ ಕಾರ್ಗೋ ಕಾಂಪ್ಲೆಕ್ಸ್‌ ನಿರ್ಮಾಣ, ಪರ್ಯಾಯ ಟ್ಯಾಕ್ಸಿ ಮಾರ್ಗದ ನಿರ್ಮಾಣವೂ ಉದ್ದೇಶಿತ ವಿಸ್ತರಣೆ–ಅಭಿವೃದ್ಧಿ ಯೋಜನೆಯಲ್ಲಿ ಒಳಗೊಂಡಿದೆ. ₹ 700 ಕೋಟಿ ಮೊತ್ತದ ಡಿಪಿಆರ್‌’ ಸಿದ್ಧಗೊಂಡಿದೆ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘ತುರ್ತಾಗಿ 115 ಎಕರೆ ಭೂಮಿ ಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯೂ ಪ್ರಕಟಗೊಂಡಿದೆ. ರಾಜ್ಯ ಸರ್ಕಾರವು, ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಪರಿಹಾರ ಕೊಟ್ಟು, ಈ ಜಮೀನನ್ನು ನಮಗೆ ಹಸ್ತಾಂತರಿಸಿದರೆ, ಶೀಘ್ರವಾಗಿಯೇ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.