ADVERTISEMENT

ಕಡಿಮೆ ಬಡ್ಡಿ ದರದಲ್ಲಿ ಸಾಲ: ಬಜೆಟ್‌ನಲ್ಲಿ ಸರ್ಕಾರದಿಂದ ಘೋಷಣೆ ಸಾಧ್ಯತೆ

ಚಿಲ್ಲರೆ ವ್ಯಾಪಾರಕ್ಕೆ ಸುಲಭ ಸಾಲ?

ರಾಯಿಟರ್ಸ್
Published 16 ಜನವರಿ 2023, 21:07 IST
Last Updated 16 ಜನವರಿ 2023, 21:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಸಣ್ಣ ಪ್ರಮಾಣದ ಚಿಲ್ಲರೆ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ಒದಗಿಸುವ ಹಾಗೂ ಈ ವಲಯಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಸಡಿಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಫೆಬ್ರುವರಿ 1ರಂದು ಮಂಡನೆ ಆಗಲಿರುವ ಕೇಂದ್ರ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಇರುವ ನಿರೀಕ್ಷೆ ಇದೆ. ಭೌತಿಕ ಮಳಿಗೆ ಮೂಲಕ ವಹಿವಾಟು ನಡೆಸುವ ಚಿಲ್ಲರೆ ವ್ಯಾಪಾರ ವಲಯವು ಇ–ವಾಣಿಜ್ಯ ವಲಯದ ಅಮೆಜಾನ್, ಫ್ಲಿಪ್‌ಕಾರ್ಟ್‌, ಬಿಗ್‌ಬಾಸ್ಕೆಟ್‌ನಂತಹ ಕಂಪನಿಗಳಿಂದಾಗಿ ಮಾರುಕಟ್ಟೆ ಪಾಲು ಕಳೆದುಕೊಂಡಿವೆ. ಹೀಗಾಗಿ, ಭೌತಿಕ ಅಂಗಡಿಗಳ ಮೂಲಕ ನಡೆಯುವ ವ್ಯಾಪಾರ ವಹಿವಾಟು ಪ್ರಮಾಣ ಹೆಚ್ಚಿಸುವ ಉದ್ದೇಶ ಇದರ ಹಿಂದೆ ಇದೆ ಎನ್ನಲಾಗಿದೆ.

‘ಸಾಲವು ಸುಲಭವಾಗಿ ಹಾಗೂ ಕಡಿಮೆ ಬಡ್ಡಿ ದರಕ್ಕೆ ಈ ವಲಯಕ್ಕೆ ಸಿಗುವಂತೆ ಮಾಡಲು ಸರ್ಕಾರವು ಮುಂದಡಿ ಇರಿಸಿದೆ. ಗೋದಾಮಿನಲ್ಲಿ ಇರುವ ಉತ್ಪನ್ನಗಳನ್ನು ಅಡಮಾನವಾಗಿ ಇರಿಸಿಕೊಂಡು, ಅದಕ್ಕೆ ಕಡಿಮೆ ಬಡ್ಡಿ ದರಕ್ಕೆ ಸುಲಭವಾಗಿ ಸಾಲ ಕೊಡುವುದು ಒಂದು ಆಯ್ಕೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಈ ವಿಚಾರವಾಗಿ ಕೇಂದ್ರ ವಾಣಿಜ್ಯ ಸಚಿವಾಲಯ ಪ್ರತಿಕ್ರಿಯೆ ನೀಡಿಲ್ಲ. ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ಒದಗಿಸುವ ಬ್ಯಾಂಕ್‌ಗಳಿಗೆ ಹೇಗೆ ಪರಿಹಾರ ನೀಡಲಾಗುತ್ತದೆ ಎಂಬ ವಿವರವನ್ನು ಮೂಲಗಳು ತಿಳಿಸಿಲ್ಲ.

ಹೊಸ ಮಳಿಗೆಗಳನ್ನು ತೆರೆಯಲು ಪಡೆಯಬೇಕಿರುವ ಪರವಾನಗಿ ಹಾಗೂ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಳವಾಗಿ ಆನ್‌ಲೈನ್‌ ಮೂಲಕ ಪೂರೈಸುವ ನೀತಿಯನ್ನು ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಿಲ್ಲರೆ ವ್ಯಾಪಾರದ (ರಿಟೇಲ್‌) ಮಳಿಗೆಗಳು ಈಗಿನ ನಿಯಮಗಳ ಪ್ರಕಾರ 25ರಿಂದ 50 ವಿಧದ ಪರವಾನಗಿಗಳನ್ನು ಪಡೆದುಕೊಳ್ಳಬೇಕಿದೆ. ಇವುಗಳಲ್ಲಿ ಕೆಲವು ಪರವಾನಗಿಗಳನ್ನು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕಾಗುತ್ತದೆ ಎಂದು ಸಣ್ಣ ವ್ಯಾಪಾರಿಗಳ ಒಕ್ಕೂಟದ (ಆರ್‌ಎಐ) ಸಿಇಒ ಕುಮಾರ್ ರಾಜಗೋಪಾಲನ್ ತಿಳಿಸಿದ್ದಾರೆ.

ಭಾರತದ ರಿಟೇಲ್‌ ವಹಿವಾಟುಗಳಲ್ಲಿ ಇ–ವಾಣಿಜ್ಯ ವೇದಿಕೆಗಳ ಪಾಲು ಈಗ ಶೇ 7ರಷ್ಟು ಇದೆ. ಇದು 2030ರೊಳಗೆ ಶೇ 19ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಆರ್‌ಎಐ ವರದಿಯೊಂದು ಹೇಳಿದೆ. ‘ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಅಡ್ಡಿಯಾಗಿರುವ ಹಲವು ಸಮಸ್ಯೆಗಳನ್ನು ಪರಿಹರಿಸಲು ನಾವು ಏಕರೂಪಿ ನಿಯಮಾವಳಿ ಜಾರಿಗೆ ಸಲಹೆ ನೀಡಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.