ADVERTISEMENT

UPI: ಯುಪಿಐ ಬಳಸಿ ಹಣ ಕೇಳುವ ವಹಿವಾಟಿಗೆ ಅಂಕುಶ

ಪಿಟಿಐ
Published 14 ಆಗಸ್ಟ್ 2025, 15:59 IST
Last Updated 14 ಆಗಸ್ಟ್ 2025, 15:59 IST
<div class="paragraphs"><p>ಯುಪಿಐ</p></div>

ಯುಪಿಐ

   

ನವದೆಹಲಿ: ಅಕ್ಟೋಬರ್‌ 1ರಿಂದ ಜಾರಿಗೆ ಬರುವಂತೆ ಯುಪಿಐ ಆ್ಯಪ್‌ ಬಳಸಿ ಬೇರೊಬ್ಬರಿಗೆ ‘ಹಣ ಕೊಡಿ’ ಎಂಬ ಕೋರಿಕೆ ಸಲ್ಲಿಸಲು ಅವಕಾಶ ಇರುವುದಿಲ್ಲ.

ಈ ಸೌಲಭ್ಯವನ್ನು ಅಕ್ಟೋಬರ್ 1ರಿಂದ ಸ್ಥಗಿತಗೊಳಿಸುವಂತೆ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಬ್ಯಾಂಕುಗಳು ಹಾಗೂ ಯುಪಿಐ ಪಾವತಿ ಸೇವೆ ಒದಗಿಸುವ ಆ್ಯಪ್‌ಗಳಿಗೆ ಸೂಚನೆ ನೀಡಿದೆ. ಹಣಕಾಸಿನ ವಂಚನೆಯನ್ನು ತಡೆಯುವ ಉದ್ದೇಶದಿಂದ ಎನ್‌ಪಿಸಿಐ ಈ ಕ್ರಮ ಕೈಗೊಂಡಿದೆ.

ADVERTISEMENT

ಎನ್‌ಪಿಸಿಐ ಈ ಸೂಚನೆಯನ್ನು ಜುಲೈ 29ರಂದೇ ರವಾನಿಸಿದೆ. ಇದು ಜಾರಿಗೆ ಬಂದ ನಂತರದಲ್ಲಿ ಫೋನ್‌ಪೆ, ಗೂಗಲ್‌ ಪೆ, ಪೇಟಿಎಂ, ಭೀಮ್‌ ಸೇರಿದಂತೆ ಯಾವುದೇ ಯುಪಿಐ ಆ್ಯಪ್‌ಗಳು, ಯುಪಿಐ ಸದಸ್ಯ ಬ್ಯಾಂಕ್‌ಗಳು ಈ ಬಗೆಯಲ್ಲಿ ವ್ಯಕ್ತಿಗಳ ನಡುವೆ ‘ಹಣ ಕೇಳುವ’ ವಹಿವಾಟು ಸೇವೆ ಒದಗಿಸಲು ಅವಕಾಶ ಇರುವುದಿಲ್ಲ.

ಈಗಿರುವ ನಿಯಮಗಳ ಅನ್ವಯ ಈ ಬಗೆಯ ಪ್ರತಿ ವಹಿವಾಟಿನಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯಿಂದ ಗರಿಷ್ಠ ₹2,000 ಪಡೆಯಬಹುದು. ದಿನವೊಂದಕ್ಕೆ ಇಂತಹ 50 ವಹಿವಾಟುಗಳನ್ನು ನಡೆಸಲು ಅವಕಾಶ ಇದೆ.

‘ಈ ಸೌಲಭ್ಯವನ್ನು ಇನ್ನಿಲ್ಲವಾಗಿಸುವ ಮೂಲಕ ಯುಪಿಐ ವ್ಯವಸ್ಥೆಯು ತಾನು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಕೂಡ ಹೌದು ಎಂಬುದನ್ನು ಹೇಳುತ್ತಿದೆ. ಈ ಬದಲಾವಣೆಯು ವಂಚನೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇನ್ನು ಮುಂದೆ ವ್ಯಕ್ತಿಗಳ ನಡುವೆ ನಡೆಯುವ ಎಲ್ಲ ವಹಿವಾಟುಗಳು, ಪಾವತಿ ಮಾಡುವ ವ್ಯಕ್ತಿಯ ಕಡೆಯಿಂದ ಆರಂಭವಾಗುವಂತೆ ಇರಲಿವೆ’ ಎಂದು ಎನ್‌ಟಿಟಿ ಡೇಟಾ ಪೇಮೆಂಟ್ ಸರ್ವಿಸಸ್ ಇಂಡಿಯಾ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ರಾಹುಲ್ ಜೈನ್‌ ಹೇಳಿದ್ದಾರೆ.

ಅಂದರೆ, ಪಾವತಿ ಮಾಡುವ ವ್ಯಕ್ತಿಗೆ ತಾನು ಆರಂಭಿಸುವ ವಹಿವಾಟುಗಳ ಮೇಲೆ ಪೂರ್ಣ ನಿಯಂತ್ರಣ ಇರುತ್ತದೆ ಎಂದು ಹೇಳಿದ್ದಾರೆ.

ಎನ್‌ಪಿಸಿಐ 2019ರಲ್ಲಿ ಈ ಬಗೆಯ ವಹಿವಾಟಿಗೆ  ₹2,000ದ ಮಿತಿ ವಿಧಿಸಿತ್ತು. ಹೀಗಿದ್ದರೂ ವಂಚನೆ ಪ್ರಕರಣಗಳು ವರದಿಯಾಗಿದ್ದವು. ಈಗಿನ ಕ್ರಮವು ಬಳಕೆದಾರರ ಹಣದ ಸುರಕ್ಷತೆಯನ್ನು ಖಾತರಿಪಡಿಸಲು ನೆರವಾಗಲಿದೆ ಎಂಬ ನಿರೀಕ್ಷೆಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.