ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ಭಾರತಕ್ಕೆ ಆಗಸ್ಟ್ 25ರಂದು ಭೇಟಿ ನೀಡಬೇಕಿದ್ದ ಅಮೆರಿಕದ ತಂಡವು ಭೇಟಿಯನ್ನು ಮುಂದೂಡುವ ಸಾಧ್ಯತೆ ಇದೆ.
ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಇದುವರೆಗೆ ಐದು ಸುತ್ತುಗಳ ಮಾತುಕತೆ ನಡೆದಿದೆ. ಆರನೆಯ ಸುತ್ತಿನ ಮಾತುಕತೆಗೆ ಅಮೆರಿಕದ ತಂಡವು ಭೇಟಿ ನೀಡಬೇಕಿದೆ. ಈ ಮೊದಲಿನ ವೇಳಾಪಟ್ಟಿ ಪ್ರಕಾರ ಮಾತುಕತೆಯು ಆಗಸ್ಟ್ 25ರಿಂದ 29ರವರೆಗೆ ನಡೆಯಬೇಕಿತ್ತು.
‘ಈ ಭೇಟಿಯ ದಿನಾಂಕವು ಮರುನಿಗದಿ ಆಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಶೇಕಡ 50ರಷ್ಟು ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ, ಸಭೆಯು ಮುಂದಕ್ಕೆ ಹೋಗಿರುವುದು ಮಹತ್ವ ಪಡೆದಿದೆ.
ಭಾರತದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಹಾಗೂ ಹೈನು ಉತ್ಪನ್ನಗಳ ಮಾರುಕಟ್ಟೆಯನ್ನು ತನಗೆ ಮುಕ್ತವಾಗಿಸಬೇಕು ಎಂದು ಅಮೆರಿಕವು ಒತ್ತಾಯಿಸುತ್ತಿದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ.
ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತವನ್ನು ಸೆಪ್ಟೆಂಬರ್–ಅಕ್ಟೋಬರ್ ವೇಳೆಗೆ ಅಂತಿಮಗೊಳಿಸುವ ಘೋಷಣೆಯನ್ನು ಎರಡೂ ದೇಶಗಳು ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.