ಅಶ್ವಿನಿ ವೈಷ್ಣವ್
ನೋಯ್ಡಾ: ಮೊಬೈಲ್ ಫೋನ್‌ನ ಪರದೆಯ ರಕ್ಷಣೆಗೆ ಬಳಸುವ ಟೆಂಪರ್ಡ್ ಗ್ಲಾಸ್‌ಗಳನ್ನು ತಯಾರಿಸುವ ದೇಶದ ಮೊದಲ ತಯಾರಿಕಾ ಘಟಕವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಉದ್ಘಾಟಿಸಿದರು.
ಆಪ್ಟಿಮಸ್ ಇನ್ಫ್ರಾಕಾಮ್ ಕಂಪನಿಯು ಉತ್ತರಪ್ರದೇಶದ ನೋಯ್ಡಾದಲ್ಲಿ ಘಟಕ ಸ್ಥಾಪಿಸಿದ್ದು, ಟೆಂಪರ್ಡ್ ಗ್ಲಾಸ್ ತಯಾರಿಸಲು ಅಮೆರಿಕದ ಮೆಟೀರಿಯಲ್ ಟೆಕ್ನಾಲಜಿ ಕಂಪನಿ ಕಾರ್ನಿಂಗ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
ಘಟಕವು ವಾರ್ಷಿಕ 2.5 ಕೋಟಿ ಟೆಂಪರ್ಡ್ ಗ್ಲಾಸ್ ತಯಾರಿಕಾ ಸಾಮರ್ಥ್ಯವನ್ನು ಹೊಂದಿದೆ. ನೇರವಾಗಿ 600ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಿದೆ. ಎರಡನೇ ಹಂತದಲ್ಲಿ, ತಯಾರಿಕೆಯನ್ನು ವಾರ್ಷಿಕ 20 ಕೋಟಿ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು ಎಂದರು.
ಕಳೆದ 11 ವರ್ಷದಲ್ಲಿ ದೇಶದ ಎಲೆಕ್ಟ್ರಾನಿಕ್ಸ್ ತಯಾರಿಕೆಯು ಆರು ಪಟ್ಟು ಹೆಚ್ಚಳವಾಗಿದ್ದು, ₹11.5 ಲಕ್ಷ ಕೋಟಿ ಮೌಲ್ಯ ಹೊಂದಿದೆ. ರಫ್ತು ಮೌಲ್ಯ ₹3 ಲಕ್ಷ ಕೋಟಿಯಾಗಿದ್ದು, 25 ಲಕ್ಷ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಗಳನ್ನು ನೀಡಿದೆ ಎಂದು ತಿಳಿಸಿದ್ದಾರೆ.
‘ಟೆಂಪರ್ಡ್ ಗ್ಲಾಸ್ ತಯಾರಿಕೆಗೆ ಮುಂದಿನ ಒಂದು ವರ್ಷದಲ್ಲಿ ₹800 ಕೋಟಿ ಹೂಡಿಕೆ ಮಾಡಲಾಗುವುದು. ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 16 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ಅಂದಾಜಿದೆ’ ಎಂದು ಆಪ್ಟಿಮಸ್ ಇನ್ಫ್ರಾಕಾಮ್‌ನ ಅಧ್ಯಕ್ಷ ಅಶೋಕ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಸೆಪ್ಟೆಂಬರ್ ವೇಳೆಗೆ ರೈನೋಟೆಕ್ ಬ್ರ್ಯಾಂಡ್ ಅಡಿಯಲ್ಲಿ ಟೆಂಪರ್ ಗ್ಲಾಸ್‌ಗಳನ್ನು ಮಾರಾಟ ಮಾಡಲಾಗುವುದು. ಇದಕ್ಕೆ ಒಂದು ವರ್ಷದ ವಾರಂಟಿ ಇರುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.