
ನವದೆಹಲಿ: ಹಬ್ಬಗಳ ಋತು ಮುಗಿದ ನಂತರವೂ ದೇಶದಲ್ಲಿ ವಾಹನ ಮಾರಾಟವು ಬಿರುಸು ಉಳಿಸಿಕೊಂಡಿದೆ. ನವೆಂಬರ್‌ನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣವು ಶೇ 20ರಷ್ಟು ಹೆಚ್ಚಳ ಕಂಡಿದೆ.
ಒಟ್ಟಾರೆಯಾಗಿ ನವೆಂಬರ್‌ನಲ್ಲಿ ವಾಹನಗಳ ನೋಂದಣಿ ಪ್ರಮಾಣವು ಶೇ 2ರಷ್ಟು ಹೆಚ್ಚಾಗಿದೆ. 2024ರ ನವೆಂಬರ್‌ನಲ್ಲಿ ದೇಶದಲ್ಲಿ ಒಟ್ಟು 32.31 ಲಕ್ಷ ವಾಹನಗಳ ಮಾರಾಟ ಆಗಿತ್ತು. ಈ ವರ್ಷದ ನವೆಂಬರ್‌ನಲ್ಲಿ ಅದು 33 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಆಟೊಮೊಬೈಲ್ ಡೀಲರ್ ಸಂಘಗಳ ಒಕ್ಕೂಟ (ಎಫ್‌ಎಡಿಎ) ನೀಡಿರುವ ಅಂಕಿ–ಅಂಶಗಳು ತಿಳಿಸಿವೆ.
‘ಜಿಎಸ್‌ಟಿ ದರ ಪರಿಷ್ಕರಣೆ, ಕಂಪನಿಗಳು ಹಾಗೂ ಡೀಲರ್‌ಗಳು ನೀಡಿದ ಕೆಲವು ಕೊಡುಗೆಗಳ ಕಾರಣದಿಂದಾಗಿ ಗ್ರಾಹಕರು ವಾಹನ ಮಾರಾಟ ಮಳಿಗೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಇದರಿಂದಾಗಿ ಹಬ್ಬದ ಋತುವಿನ ನಂತರವೂ ಗ್ರಾಹಕರ ಸ್ಪಂದನ ಹೆಚ್ಚಿನ ಮಟ್ಟದಲ್ಲಿಯೇ ಇದೆ’ ಎಂದು ಎಫ್ಎಡಿಎ ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ ತಿಳಿಸಿದ್ದಾರೆ.
ಹಬ್ಬಗಳು ಮುಗಿದ ನಂತರದಲ್ಲಿ ವಾಹನ ಮಾರಾಟವು ಸಾಮಾನ್ಯವಾಗಿ ಕಡಿಮೆ ಆಗುತ್ತದೆ. ಆದರೆ ಈ ವರ್ಷದ ನವೆಂಬರ್ ತಿಂಗಳು ಇದಕ್ಕೆ ಭಿನ್ನವಾಗಿದೆ. ಕಳೆದ ವರ್ಷವೂ ಹಬ್ಬಗಳ ಕಾರಣದಿಂದಾಗಿ ನವೆಂಬರ್‌ನಲ್ಲಿ ಮಾರಾಟ ಹೆಚ್ಚಿತ್ತು. ಆದರೆ ಈ ಬಾರಿಯ ಮಾರಾಟ ಪ್ರಮಾಣವು ಅದಕ್ಕಿಂತಲೂ ಜಾಸ್ತಿ ಆಗಿದೆ ಎಂದು ವಿಘ್ನೇಶ್ವರ ಹೇಳಿದ್ದಾರೆ.
ಈ ವರ್ಷದ ನವೆಂಬರ್‌ನಲ್ಲಿ 3.94 ಲಕ್ಷದಷ್ಟು ಪ್ರಯಾಣಿಕ ವಾಹನಗಳು ಮಾರಾಟ ಆಗಿವೆ. ಕಳೆದ ವರ್ಷದಲ್ಲಿ ಈ ಸಂಖ್ಯೆಯು 3.29 ಲಕ್ಷ ಆಗಿತ್ತು.
ಜಿಎಸ್‌ಟಿ ದರ ಪರಿಷ್ಕರಣೆಯ ಪ್ರಯೋಜನ, ವಿವಾಹ ಮುಹೂರ್ತಗಳು ಸಾಲು ಸಾಲು ಇದ್ದಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಯುವ ಕೆಲವು ನಿರ್ದಿಷ್ಟ ಮಾದರಿಯ ವಾಹನಗಳ ಪೂರೈಕೆ ಉತ್ತಮವಾಗಿದ್ದುದು ಮಾರಾಟ ಹೆಚ್ಚಾಗಲು ಕಾರಣವಾಗಿವೆ ಎಂದು ಎಫ್‌ಎಡಿಎ ಹೇಳಿದೆ. ವಾಣಿಜ್ಯ ವಾಹನಗಳ ಮಾರಾಟ ಕೂಡ ಶೇ 20ರಷ್ಟು ಹೆಚ್ಚಾಗಿದೆ. ತ್ರಿಚಕ್ರ ವಾಹನಗಳ ಮಾರಾಟ ಪ್ರಮಾಣವು ಶೇ 24ರಷ್ಟು ಜಾಸ್ತಿ ಆಗಿದೆ.
ಆದರೆ ನವೆಂಬರ್‌ನಲ್ಲಿ ದ್ವಿಚಕ್ರ ವಾಹನಗಳ ರಿಟೇಲ್ ಮಾರಾಟವು ಶೇ 3ರಷ್ಟು ಇಳಿಕೆ ಕಂಡಿದೆ. ಇದೇ ಅವಧಿಯಲ್ಲಿ ಟ್ರ್ಯಾಕ್ಟರ್‌ಗಳ ಮಾರಾಟವು ಶೇ 57ರಷ್ಟು ಹೆಚ್ಚಾಗಿದೆ.
ಮಾರಾಟ ಹೆಚ್ಚಳದ ಸೂಚನೆ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವುದು ಅರ್ಥ ವ್ಯವಸ್ಥೆ ಪೂರಕವಾಗಿರುವುದು ಹಿಂಗಾರು ಬಿತ್ತನೆ ಚೆನ್ನಾಗಿ ಇರುವುದು ರೈತರ ವರಮಾನವು ಚೆನ್ನಾಗಿ ಇರುವ ಸೂಚನೆಗಳು ಇರುವುದು... ಇವೆಲ್ಲ ಒಳ್ಳೆಯ ಲಕ್ಷಣಗಳು. ಇವು ಹಾಗೂ ಇನ್ನೂ ಕೆಲವು ಅಂಶಗಳು ಟ್ರ್ಯಾಕ್ಟರ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಾಗುವ ಸೂಚನೆ ನೀಡುತ್ತವೆ ಎಂದು ಎಫ್‌ಎಡಿಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.