ADVERTISEMENT

ವೊಡಾಫೋನ್‌ ಐಡಿಯಾ ಬಗ್ಗೆ ಫಿಚ್‌ ಅನುಮಾನ

ಪಿಟಿಐ
Published 8 ಸೆಪ್ಟೆಂಬರ್ 2020, 12:58 IST
Last Updated 8 ಸೆಪ್ಟೆಂಬರ್ 2020, 12:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸರ್ಕಾರಕ್ಕೆ ನೀಡಬೇಕಿರುವ ಬಾಕಿ ಪಾವತಿಗೆ ಸುಪ್ರೀಂ ಕೋರ್ಟ್‌ 10 ವರ್ಷಗಳ ಕಾಲಾವಕಾಶ ನೀಡಿದ್ದರೂ, ವೊಡಾಫೋನ್‌ ಐಡಿಯಾ ಲಿಮಿಟೆಡ್ (ವಿಐಎಲ್‌)‌ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲು ಈ ಅವಧಿ ಸಾಕಾಗಲಿಕ್ಕಿಲ್ಲ ಎಂದು ಫಿಚ್ ರೇಟಿಂಗ್ಸ್ ಹೇಳಿದೆ. ಇದೇ ಅವಧಿಯಲ್ಲಿ ಏರ್‌ಟೆಲ್‌ ಮತ್ತು ಜಿಯೊ ಕಂಪನಿಗಳು ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಲಿವೆ ಎಂದು ಅದು ಹೇಳಿದೆ.

ಮುಂದಿನ ಒಂದು ವರ್ಷದ ಅವಧಿಯಲ್ಲಿ ಮೊಬೈಲ್‌ ಸೇವಾಶುಲ್ಕದಲ್ಲಿ ಕನಿಷ್ಠ ಶೇಕಡ 20ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಫಿಚ್ ಭವಿಷ್ಯ ನುಡಿದಿದೆ. ಷೇರು ಹಾಗೂ ಸಾಲಪತ್ರಗಳ ಮೂಲಕ ಹಣ ಸಂಗ್ರಹಿಸುವ ವಿಐಎಲ್‌ನ ಉದ್ದೇಶವು ಆ ಕಂಪನಿಯ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಅಥವಾ ಅದು ಗ್ರಾಹಕರನ್ನು ಕಳೆದುಕೊಳ್ಳುತ್ತಿರುವುದನ್ನು ತಡೆಯುವ ಸಾಧ್ಯತೆ ಇಲ್ಲ ಎಂದೂ ಫಿಚ್ ಅಂದಾಜಿಸಿದೆ.

‘ವಿಐಎಲ್‌ ಕಾಲಕ್ರಮೇಣ ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳಲಿದೆ. ಜಿಯೊ ಮತ್ತು ಏರ್‌ಟೆಲ್‌ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ’ ಎಂದು ಅದು ಹೇಳಿದೆ. ವಿಐಎಲ್‌ ಕಳೆದುಕೊಳ್ಳುವ ಗ್ರಾಹಕರ ಸಂಖ್ಯೆಯಲ್ಲಿ ಶೇಕಡ 50ರಷ್ಟಕ್ಕಿಂತ ಹೆಚ್ಚು ಜನ ಜಿಯೊ ಕಡೆ ಮುಖ ಮಾಡಲಿದ್ದಾರೆ. ಇನ್ನುಳಿದವರು ಏರ್‌ಟೆಲ್‌ನ ಗ್ರಾಹಕರಾಗಲಿದ್ದಾರೆ ಎಂಬುದು ಫಿಚ್‌ನ ಅಂದಾಜು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.