ADVERTISEMENT

ಕೇಂದ್ರದ ವಿರುದ್ಧ ವೊಡಾಫೋನ್‌ಗೆ ಜಯ

ರಾಯಿಟರ್ಸ್
Published 25 ಸೆಪ್ಟೆಂಬರ್ 2020, 13:51 IST
Last Updated 25 ಸೆಪ್ಟೆಂಬರ್ 2020, 13:51 IST
ವೊಡಾಫೋನ್
ವೊಡಾಫೋನ್   

ನವದೆಹಲಿ: ಬ್ರಿಟನ್ನಿನ ವೊಡಾಫೋನ್ ಸಮೂಹವು ಕೇಂದ್ರ ಸರ್ಕಾರದ ವಿರುದ್ಧದ ಪೂರ್ವಾನ್ವಯ ತೆರಿಗೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಪ್ರಕರಣದಲ್ಲಿ ಜಯ ಸಾಧಿಸಿದೆ. ಈ ಪೂರ್ವಾನ್ವಯ ತೆರಿಗೆ ಮೊತ್ತ ಅಂದಾಜು ₹ 14,200 ಕೋಟಿ ಎಂದು ಮೂಲಗಳು ತಿಳಿಸಿವೆ.

ವೊಡಾಫೋನ್‌ ಕಂಪನಿಯ ಮೇಲೆ ಕೇಂದ್ರ ಸರ್ಕಾರ ವಿಧಿಸಿದ ತೆರಿಗೆ, ಬಡ್ಡಿ ಮತ್ತು ದಂಡವು ಭಾರತ ಮತ್ತು ನೆದರ್ಲೆಂಡ್ಸ್‌ ನಡುವೆ ಆದ ಹೂಡಿಕೆ ಒಪ್ಪಂದದ ಉಲ್ಲಂಘನೆ ಎಂಬ ತೀರ್ಮಾನವನ್ನು ದಿ ಹೇಗ್‌ನಲ್ಲಿನ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ವೊಡಾಫೋನ್‌ನಿಂದ ಬಾಕಿ ವಸೂಲಿಗೆ ಯತ್ನಿಸುವುದನ್ನು ಕೇಂದ್ರ ಸರ್ಕಾರವು ನಿಲ್ಲಿಸಬೇಕು. ಅಲ್ಲದೆ, ₹ 40.31 ಕೋಟಿಯಷ್ಟು ಹಣವನ್ನು ಕಂಪನಿಗೆ ಕಾನೂನು ವೆಚ್ಚವಾಗಿ ಕೇಂದ್ರವು ಪಾವತಿ ಮಾಡಬೇಕು ಎಂದು ನ್ಯಾಯಮಂಡಳಿ ಸೂಚಿಸಿದೆ ಎಂದು ಗೊತ್ತಾಗಿದೆ. ಈ ವಿಚಾರವಾಗಿ ವೊಡಾಫೋನ್ ಮತ್ತು ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ADVERTISEMENT

2007ರಲ್ಲಿ ವೊಡಾಫೋನ್‌ ಕಂಪನಿಯು ಹಚಿಸನ್ ವ್ಯಾಂಪೊ ಕಂಪನಿ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಂದಿದ್ದ ಆಸ್ತಿಗಳನ್ನು ಖರೀದಿಸಿದ ನಂತರ ಈ ತೆರಿಗೆ ವಿವಾದ ಸೃಷ್ಟಿಯಾಗಿತ್ತು. ಆಸ್ತಿ ಖರೀದಿಗೆ ವೊಡಾಫೋನ್ ತೆರಿಗೆ ಪಾವತಿಸಬೇಕು ಎಂದು ಸರ್ಕಾರ ಹೇಳಿತ್ತು. ಆದರೆ, ಇದನ್ನು ವೊಡಾಫೋನ್ ಪ್ರಶ್ನಿಸಿತ್ತು.

ವೊಡಾಫೋನ್‌ ಪರವಾಗಿ 2012ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಹೀಗಿದ್ದರೂ, ಅದೇ ವರ್ಷ ನಿಯಮಗಳಲ್ಲಿ ಬದಲಾವಣೆ ತಂದ ಸರ್ಕಾರವು, ಅದಾಗಲೇ ಪೂರ್ಣಗೊಂಡಿರುವ ಆಸ್ತಿ ಖರೀದಿಗೂ ತೆರಿಗೆ ಪಾವತಿ ಅನ್ವಯ ಆಗುವಂತೆ ಮಾಡಿತ್ತು. 2014ರ ಏಪ್ರಿಲ್‌ನಲ್ಲಿ ವೊಡಾಫೋನ್‌ ಕಂಪನಿಯು ಮಧ್ಯಸ್ಥಿಕೆಯ ಮೊರೆ ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.