ADVERTISEMENT

ಕುಸಿದ ಎಲ್‌ಐಸಿ ಷೇರು ಮೌಲ್ಯ

ಪಿಟಿಐ
Published 17 ಮೇ 2022, 14:38 IST
Last Updated 17 ಮೇ 2022, 14:38 IST
   

ಮುಂಬೈ/ನವದೆಹಲಿ: ಷೇರು ಮಾರುಕಟ್ಟೆ ಅಸ್ಥಿರವಾಗಿದ್ದ ಕಾರಣದಿಂದಾಗಿ ಎಲ್‌ಐಸಿ ಷೇರು ಮೌಲ್ಯವು ಮಂಗಳವಾರ ಕುಸಿದಿದೆ, ಹೂಡಿಕೆದಾರರು ಷೇರುಗಳನ್ನು ದೀರ್ಘಾವಧಿಗೆ ತಮ್ಮಲ್ಲಿ ಇರಿಸಿಕೊಳ್ಳಬೇಕು ಎಂದು ಕೇಂದ್ರ ಸಾರ್ವಜನಿಕ ಆಸ್ತಿ ನಿರ್ವಹಣೆ ಮತ್ತು ಹೂಡಿಕೆ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಎಲ್‌ಐಸಿಯು ತನ್ನ ಷೇರುಗಳನ್ನು ₹ 949ಕ್ಕೆ ಹೂಡಿಕೆದಾರರಿಗೆ ನೀಡಿತ್ತು. ಷೇರುಗಳು ಮಂಗಳವಾರ ಷೇರುಪೇಟೆಗಳಲ್ಲಿ ₹ 872ರಂತೆ ವಹಿವಾಟು ಆರಂಭಿಸಿದವು. ಇದು ಎಲ್‌ಐಸಿ ಹೂಡಿಕೆದಾರರು ನೀಡಿದ್ದ ಬೆಲೆಗಿಂತ ಶೇಕಡ 8.11ರಷ್ಟು ಕಡಿಮೆ. ವಹಿವಾಟಿನ ಅಂತ್ಯಕ್ಕೆ ಷೇರು ಮೌಲ್ಯವು ₹ 875.25ಕ್ಕೆ ತಲುಪಿತು. ಇದು ಎಲ್‌ಐಸಿ ನೀಡಿದ್ದ ಬೆಲೆಗಿಂತ ಶೇ 7.77ರಷ್ಟು ಕಡಿಮೆ.

‘ಮಾರುಕಟ್ಟೆ ಹೇಗಿರುತ್ತದೆ ಎಂಬುದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್‌ಐಸಿ ಷೇರುಗಳನ್ನು ಒಂದು ದಿನದ ಮಟ್ಟಿಗೆ ಇರಿಸಿಕೊಳ್ಳುವುದಲ್ಲ, ಬಹಳ ದಿನಗಳವರೆಗೆ ಅದನ್ನು ಇರಿಸಿಕೊಳ್ಳಬೇಕು ಎಂಬುದನ್ನು ಮೊದಲಿಂದಲೂ ಹೇಳುತ್ತಿದ್ದೇವೆ’ ಎಂದು ಪಾಂಡೆ ಹೇಳಿದ್ದಾರೆ.

ADVERTISEMENT

‘ಷೇರುಪೇಟೆಯಲ್ಲಿ ತುಸು ಭೀತಿ ಇದೆ. ಮಾರುಕಟ್ಟೆಯು ದೊಡ್ಡ ಮಟ್ಟದಲ್ಲಿ ಜಿಗಿಯಲಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಎಲ್‌ಐಸಿ ಷೇರು ಮೌಲ್ಯ ಹೆಚ್ಚಾಗಲಿದೆ. ಐಪಿಒ ಸಂದರ್ಭದಲ್ಲಿ ಷೇರು ಸಿಗದವರು, ಅದರಲ್ಲೂ ಮುಖ್ಯವಾಗಿ ಪಾಲಿಸಿದಾರರು, ಷೇರುಪೇಟೆಗಳಿಂದ ಷೇರು ಖರೀದಿಸುತ್ತಿದ್ದಾರೆ ಎಂಬ ಭರವಸೆ ಇದೆ’ ಎಂದು ಎಲ್‌ಐಸಿ ಅಧ್ಯಕ್ಷ ಎಂ.ಆರ್. ಕುಮಾರ್ ಹೇಳಿದ್ದಾರೆ.

ಐದನೆಯ ಅತಿದೊಡ್ಡ ಕಂಪನಿ

ಎಲ್‌ಐಸಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ಈಗ ₹ 5.54 ಲಕ್ಷ ಕೋಟಿ ಆಗಿದ್ದು, ದೇಶದ ಷೇರುಪೇಟೆಗಳಲ್ಲಿ ನೋಂದಾಯಿತವಾಗಿರುವ ಕಂಪನಿಗಳ ಪೈಕಿ ಐದನೆಯ ಅತಿದೊಡ್ಡ ಕಂಪನಿಯಾಗಿದೆ.

ಎಲ್‌ಐಸಿ ಮಾರುಕಟ್ಟೆ ಬಂಡವಾಳ ಮೌಲ್ಯವು ಎಚ್‌ಯುಎಲ್‌, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಎಚ್‌ಡಿಎಫ್‌ಸಿ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕಿಂತ ಹೆಚ್ಚು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದೇಶದ ಅತಿದೊಡ್ಡ ಕಂಪನಿ. ಎರಡನೆಯ ಸ್ಥಾನದಲ್ಲಿ ಟಿಸಿಎಸ್ ಇದೆ. ಮೂರು ಮತ್ತು ನಾಲ್ಕನೆಯ ಸ್ಥಾನಗಳಲ್ಲಿ ಕ್ರಮವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಇನ್ಫೊಸಿಸ್ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.