ADVERTISEMENT

ಹುದ್ದೆ ತೊರೆಯಲ್ಲ: ಗಾಳಿ ಸುದ್ದಿಗೆ ಮಿಂತ್ರಾ-ಜಬಾಂಗ್ ಸಿಇಒ ಅನಂತ್‌ ಸ್ಪಷ್ಟನೆ

ಪಿಟಿಐ
Published 16 ನವೆಂಬರ್ 2018, 17:50 IST
Last Updated 16 ನವೆಂಬರ್ 2018, 17:50 IST
ಅನಂತ್‌ ನಾರಾಯಣನ್‌
ಅನಂತ್‌ ನಾರಾಯಣನ್‌   

ನವದೆಹಲಿ: ಬದಲಾದ ಪರಿಸ್ಥಿತಿಯಲ್ಲಿ ತಾವು ಮಿಂತ್ರಾ – ಜಬಾಂಗ್‌ ಸಿಇಒ ಹುದ್ದೆ ತೊರೆಯುತ್ತಿರುವುದಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಅನಂತ್ ನಾರಾಯಣನ್‌ ಅವರು ಶುಕ್ರವಾರ ತೆರೆ ಎಳೆದಿದ್ದಾರೆ.

ಆನ್‌ಲೈನ್‌ ಫ್ಯಾಷನ್‌ ರಿಟೇಲರ್‌ ಮಿಂತ್ರಾ ಮತ್ತು ಜಬಾಂಗ್‌, ವಾಲ್‌ಮಾರ್ಟ್‌ ಸ್ವಾಧೀನಕ್ಕೆ ಹೋಗಿರುವ ಫ್ಲಿಪ್‌ಕಾರ್ಟ್‌ ಒಡೆತನಕ್ಕೆ ಒಳಪಟ್ಟಿವೆ. ಈ ಎರಡೂ ವಿಭಾಗಗಳನ್ನು ನಾರಾಯಣನ್‌ ಮುನ್ನಡೆಸಲಿದ್ದಾರೆ.

ತಮ್ಮ ವಿರುದ್ಧ ದುರ್ನಡತೆ ಆರೋಪಗಳು ಕೇಳಿ ಬಂದು ವಿಚಾರಣೆ ನಡೆದಿದ್ದರಿಂದ ಫ್ಲಿಪ್‌ಕಾರ್ಟ್ ಗ್ರೂಪ್‌ನ ಸಿಇಒ ಹುದ್ದೆಗೆ ಬಿನ್ನಿ ಬನ್ಸಲ್‌ ಅವರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಅನಂತ್‌ ನಾರಾಯಣನ್ ಅವರು ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಅವರ ಕೈಕೆಳಗೆ ಕೆಲಸ ಮಾಡಬೇಕಾಗಿದೆ. ಈ ಕಾರಣಕ್ಕೆ ಅವರು ಹುದ್ದೆ ತೊರೆಯುವ ನಿರ್ಧಾರಕ್ಕೆ ಬರಲಿದ್ದಾರೆ ಎಂದು ವರದಿಯಾಗಿತ್ತು.

ADVERTISEMENT

ಸಿಎಫ್‌ಒ ದೀಪಂಜನ್‌ ಬಸು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫ್ಲಿಪ್‌ಕಾರ್ಟ್‌ನ ಸಹ ಸ್ಥಾಪಕ ಬಿನ್ನಿ ಬನ್ಸಲ್‌ ಅವರು ಅನಿರೀಕ್ಷಿತವಾಗಿ ಹುದ್ದೆ ತೊರೆದಿರುವುದರಿಂದ ಉನ್ನತ ಹುದ್ದೆಯಲ್ಲಿ ಇರುವ ಇನ್ನೂ ಕೆಲವರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಈ ಗಾಳಿ ಸುದ್ದಿಗಳಿಗೆ ಸ್ಪಷ್ಟನೆ ನೀಡಿರುವ ನಾರಾಯಣನ್‌, ‘ನಾನು ಈ ಹುದ್ದೆಯಲ್ಲಿ ಮುಂದುವರೆಯಲಿದ್ದು, ವಹಿವಾಟನ್ನು ಮುನ್ನಡೆಸಲಿರುವೆ’ ಎಂದು ಹೇಳಿದ್ದಾರೆ. ಇವರು 2015ರಲ್ಲಿ ಮಿಂತ್ರಾದ ಸಿಇಒ ಆಗಿ ಅಧಿಕಾರವಹಿಸಿಕೊಂಡಿದ್ದರು.

ವಾಲ್‌ಮಾರ್ಟ್‌ ಸ್ವಾಧೀನಕ್ಕೆ ಹೋಗುತ್ತಿದ್ದಂತೆ ಸಂಸ್ಥೆಯಿಂದ ಹೊರ ನಡೆದ ಫ್ಲಿಪ್‌ಕಾರ್ಟ್‌ ಸಹ ಸ್ಥಾಪಕ ಸಚಿನ್‌ ಬನ್ಸಲ್‌ ಮತ್ತು ಈಗ ಬಿನ್ನಿ ರಾಜೀನಾಮೆ ಕಾರಣಕ್ಕೆ ಸಂಸ್ಥೆಯಲ್ಲಿ ನಾಯಕತ್ವ ಕುರಿತ ಬಿಕ್ಕಟ್ಟು ಎದುರಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಫ್ಲಿಪ್‌ಕಾರ್ಟ್‌ನ ಸಿಇಒ ಕಲ್ಯಾಣ ಕೃಷ್ಣಮೂರ್ತಿ ಅವರು ಈಗ ನಿರ್ದೇಶಕ ಮಂಡಳಿಗೆ ನೇರವಾಗಿ ವರದಿ ಮಾಡಲಿದ್ದಾರೆ.

ಮಿಂತ್ರಾ, ಜಬಾಂಗ ವಿಲೀನ: ಆನ್‌ಲೈನ್‌ ಫ್ಯಾಷನ್‌ ಅಂತರ್ಜಾಲ ತಾಣ ಮಿಂತ್ರಾವನ್ನು ಫ್ಲಿಪ್‌ಕಾರ್ಟ್‌ 2014ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. 2016ರಲ್ಲಿ ಮಿಂತ್ರಾ, ಜಬಾಂಗ್‌ ವಶಪಡಿಸಿಕೊಂಡಿತ್ತು. ಈಗ ಅವೆರಡನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಕೆಲವರು ಉದ್ಯೋಗಕ್ಕೆ ಎರವಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.