ಎಚ್.ಡಿ.ಕುಮಾರಸ್ವಾಮಿ
ನವದೆಹಲಿ: ಉಕ್ಕಿನ ಆಮದು ಸುಂಕವನ್ನು ಶೇ 7.5ರಿಂದ ಶೇ 12ಕ್ಕೆ ಏರಿಸಲು ಹಣಕಾಸು ಸಚಿವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಭಾರತೀಯ ಉಕ್ಕು ಸಂಘಟನೆಯು ಗುರುವಾರ ಇಲ್ಲಿ ಆಯೋಜಿಸಿದ್ದ ಐದನೇ ಉಕ್ಕು ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಕಳೆದ ಎರಡು ತಿಂಗಳಲ್ಲಿ ಹಲವು ಉಕ್ಕು ಉದ್ಯಮಿಗಳನ್ನು ತಮ್ಮನ್ನು ಭೇಟಿ ಮಾಡಿ ಈ ಉದ್ಯಮ ಕ್ಷೇತ್ರದಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಚೀನಾದಿಂದ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹೀಗಾಗಿ, ಚೀನಾದ ಉಕ್ಕಿನ ಆಮದಿನ ಮೇಲೆ ಹೆಚ್ಚಿನ ಸುಂಕ ವಿಧಿಸುವುದು ಅನಿವಾರ್ಯ’ ಎಂದರು.
ಜಾಗತಿಕ ಬೇಡಿಕೆ ಕುಸಿತದಂತಹ ಸವಾಲುಗಳ ವಿರುದ್ಧ ಜಾಗರೂಕರಾಗಿರಬೇಕಾದ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ನಮ್ಮ ದೇಶವು ವಿಶ್ವದ ಎರಡನೇ ಅತಿ ದೊಡ್ಡ ಉಕ್ಕು ಉತ್ಪಾದಕ ಹಾಗೂ ಗ್ರಾಹಕ ದೇಶವಾಗಿದೆ. ಭಾರತದ ಉಕ್ಕಿನ ಉದ್ಯಮವು ಹೊಸ ಎತ್ತರಕ್ಕೆ ಏರಲು ಸಿದ್ಧವಾಗಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ಬೇಡಿಕೆಯು ಎರಡಂಕಿಯ ದರದಲ್ಲಿ ಬೆಳೆಯುತ್ತಿದೆ ಮತ್ತು ಈ ಪ್ರವೃತ್ತಿಯು ಮುಂದುವರಿಯುವ ನಿರೀಕ್ಷೆಯಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.