ADVERTISEMENT

ವಿಪ್ರೊ: ಕುಸಿದ ಲಾಭ ಪ್ರಮಾಣ

ಪಿಟಿಐ
Published 12 ಅಕ್ಟೋಬರ್ 2022, 14:09 IST
Last Updated 12 ಅಕ್ಟೋಬರ್ 2022, 14:09 IST
   

ನವದೆಹಲಿ: ಐ.ಟಿ. ಸೇವಾ ಕಂಪನಿ ವಿಪ್ರೊ ಲಿಮಿಟೆಡ್‌ನ ಸೆಪ್ಟೆಂಬರ್ ತ್ರೈಮಾಸಿಕದ ಲಾಭದ ಪ್ರಮಾಣವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 9.3ರಷ್ಟು ಇಳಿಕೆ ಆಗಿದೆ.

ಸಿಬ್ಬಂದಿಗಾಗಿ ಮಾಡುವ ವೆಚ್ಚಗಳು ಜಾಸ್ತಿ ಆಗಿರುವುದು ಮತ್ತು ಅಮೆರಿಕ ಹೊರತುಪಡಿಸಿದ ಮಾರುಕಟ್ಟೆಗಳಿಂದ ವರಮಾನ ಕಡಿಮೆ ಆಗಿರುವುದು ಲಾಭದ ಪ್ರಮಾಣ ಕುಸಿಯಲು ಕಾರಣ.

ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 2,930 ಕೋಟಿ ಲಾಭ ಗಳಿಸಿತ್ತು. ಈ ಬಾರಿ ಲಾಭವು ₹ 2,659 ಕೋಟಿಗೆ ಇಳಿದಿದೆ. ಆದರೆ ಈ ವರ್ಷದ ಜೂನ್‌ ತ್ರೈಮಾಸಿಕದ ಲಾಭಕ್ಕೆ ಹೋಲಿಸಿದರೆ ಸೆಪ್ಟೆಂಬರ್ ತ್ರೈಮಾಸಿಕದ ಲಾಭದ ಪ್ರಮಾಣವು ಶೇ 3.72ರಷ್ಟು ಹೆಚ್ಚಾಗಿದೆ.

ADVERTISEMENT

ಕಂಪನಿಯ ವರಮಾನವು ಶೇ 14.60ರಷ್ಟು ಹೆಚ್ಚಳ ಕಂಡಿದೆ. ‘ಸೇವಾ ಗುತ್ತಿಗೆಗಳು, ದೊಡ್ಡ ಪ್ರಮಾಣದ ಒಪ್ಪಂದಗಳಿಗೆ ಸಹಿ ಹಾಕಿರುವುದು ಮತ್ತು ವರಮಾನವು ನಮ್ಮ ಮಾರುಕಟ್ಟೆ ಸ್ಪರ್ಧಾತ್ಮಕತೆ ಹೆಚ್ಚಿರುವುದನ್ನು ಹೇಳುತ್ತಿವೆ’ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಥಿಯರಿ ಡೆಲಾಪೋರ್ಟ್ ಹೇಳಿದ್ದಾರೆ.

ನೌಕರರು ಕಂಪನಿಯನ್ನು ತೊರೆಯುವ ಪ್ರಮಾಣವು ಶೇ 23ಕ್ಕೆ ಇಳಿದಿದೆ. ಇದು ಹಿಂದಿನ ತ್ರೈಮಾಸಿಕದಲ್ಲಿ ಶೇ 23.3ರಷ್ಟು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.