ನವದೆಹಲಿ: ವೇತನ ಪರಿಷ್ಕರಣೆ ಕುರಿತು ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ ಎಂದು ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಭಾನುವಾರ ತಿಳಿಸಿದೆ.
2017ರಲ್ಲಿ ವೇತನ ಪರಿಷ್ಕರಣೆ ನಡೆದಿತ್ತು. ಮುಂದಿನ ಬಾರಿಯ ವೇತನ ಪರಿಷ್ಕರಣೆ 2022ರಲ್ಲಿ ನಡೆಯಬೇಕಿತ್ತು. 2023ರ ಫೆಬ್ರುವರಿಯಲ್ಲಿ ಈ ಕುರಿತು ಕಾರ್ಮಿಕ ಸಂಘಟನೆಗಳಿಂದ ಬೇಡಿಕೆ ಸಲ್ಲಿಕೆಯಾಯಿತು. 2024ರ ಆಗಸ್ಟ್‌ನಲ್ಲಿ ದ್ವಿಪಕ್ಷೀಯ ಉಪ ಸಮಿತಿ ತನ್ನ ಶಿಫಾರಸು ಸಲ್ಲಿಸಿತು.
ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳು ಮತ್ತು ಎನ್‌ಎಂಡಿಸಿ ಆಡಳಿತ ಒಪ್ಪಂದಕ್ಕೆ ಬಂದಿವೆ. ಇದರ ಒಪ್ಪಿಗೆಗಾಗಿ ಕೇಂದ್ರ ಉಕ್ಕು ಸಚಿವಾಲಯಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಯಿಂದ ಉತ್ಪಾದನೆ ಕುಸಿಯುತ್ತಿದೆ. ಈ ಕುರಿತು ಕೇಂದ್ರ ಉಕ್ಕು ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. 2024–25ನೇ ಆರ್ಥಿಕ ವರ್ಷದಲ್ಲಿ 4.8 ಕೋಟಿ ಟನ್ ಉತ್ಪಾದನೆಯ ಗುರಿ ಹೊಂದಿದೆ. ಆದರೆ, ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಿಂದ ಶೇ 60ರಷ್ಟು ಉತ್ಪಾದನೆ ಕುಸಿದಿದೆ. ಇದು ಗುರಿ ಸಾಧನೆಗೆ ಸವಾಲಾಗಿದ್ದು, ಲಾಭದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
4 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಮಾರ್ಚ್ 6ರಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.