ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆ ಅಂದಾಜನ್ನು ವಿಶ್ವಬ್ಯಾಂಕ್ ಪರಿಷ್ಕರಿಸಿದ್ದು, ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಇರಲಿದೆ ಎಂದು ಹೇಳಿದೆ. ಈ ಮೊದಲಿನ ಅಂದಾಜಿನಲ್ಲಿ ವಿಶ್ವಬ್ಯಾಂಕ್, ಬೆಳವಣಿಗೆ ಪ್ರಮಾಣವು ಶೇ 6.3ರಷ್ಟು ಆಗಬಹುದು ಎಂದು ಹೇಳಿತ್ತು.
ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಭಾರತವು ದಾಖಲಿಸುವ ನಿರೀಕ್ಷೆ ಇದೆ ಎಂದು ಕೂಡ ಅದು ಹೇಳಿದೆ. ಬೇಡಿಕೆಯಲ್ಲಿನ ಹೆಚ್ಚಳವು ದೇಶದ ಆರ್ಥಿಕ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲಲಿದೆ.
ಭಾರತದ ಸರಕುಗಳಿಗೆ ಅಮೆರಿಕವು ಶೇ 50ರಷ್ಟು ಸುಂಕವನ್ನು ವಿಧಿಸಿರುವ ಪರಿಣಾಮವು ಮುಂದಿನ ವರ್ಷದಲ್ಲಿ ಕಾಣಿಸಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಹೀಗಾಗಿ, 2026–27ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣದ ಅಂದಾಜನ್ನು ತಗ್ಗಿಸಲಾಗಿದ್ದು, ಅದು ಶೇ 6.3ರಷ್ಟು ಇರಲಿದೆ ಎಂದು ಹೇಳಿದೆ.
ಕೃಷಿ ಉತ್ಪಾದನೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕೂಲಿ ಮೊತ್ತವು ನಿರೀಕ್ಷೆಗಿಂತ ಹೆಚ್ಚಾಗಿದೆ. ಜಿಎಸ್‌ಟಿ ದರವನ್ನು ತಗ್ಗಿಸುವ ಮೂಲಕ ಸರ್ಕಾರ ತಂದಿರುವ ಸುಧಾರಣೆಗಳು ಆರ್ಥಿಕ ಚಟುವಟಿಕೆಗಳಿಗೆ ನೆರವಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.