ADVERTISEMENT

ಸಗಟು ಹಣದುಬ್ಬರ ಏರಿಕೆ

ಪಿಟಿಐ
Published 16 ಅಕ್ಟೋಬರ್ 2018, 17:07 IST
Last Updated 16 ಅಕ್ಟೋಬರ್ 2018, 17:07 IST

ನವದೆಹಲಿ: ಸಗಟು ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಶೇ 5.13ಕ್ಕೆ ಏರಿಕೆಯಾಗಿದೆ. ಇದು ಎರಡು ತಿಂಗಳ ಗರಿಷ್ಠ ಮಟ್ಟವಾಗಿದೆ.

ಆಹಾರ ಪದಾರ್ಥಗಳ ಬೆಲೆ ಹಾಗೂ ಇಂಧನ ದರಗಳಲ್ಲಿ ಹೆಚ್ಚಳವಾಗಿರುವುದರಿಂದ ಸಗಟು ಹಣದುಬ್ಬರದಲ್ಲಿ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಆಗಸ್ಟ್‌ನಲ್ಲಿ ಶೇ 4.53ರಷ್ಟಿತ್ತು. 2017ರ ಸೆಪ್ಟೆಂಬರ್‌ನಲ್ಲಿ ಶೇ 3.14ರಷ್ಟಿತ್ತು.

ADVERTISEMENT

ಇಂಧನ ಮತ್ತು ವಿದ್ಯುತ್‌ ದರಗಳು ಶೇ 16.65ರಷ್ಟಾಗಿವೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಕ್ರಮವಾಗಿಶೇ 17.21 ಮತ್ತು ಶೇ 22.18ರಷ್ಟಾಗಿವೆ.

‘ಕೆಲ ದಿನಗಳಿಂದ ಕಚ್ಚಾ ತೈಲ ದರ ಇಳಿಕೆಯಾಗುತ್ತಿದೆ. ಕೇಂದ್ರದಿಂದ ಎಕ್ಸೈಸ್‌ ಮತ್ತು ರಾಜ್ಯಗಳಿಂದ ವ್ಯಾಟ್‌ ತಗ್ಗಿಸಿರುವುದರಿಂದ ಇಂಧನ ದರಗಳೂ ಕಡಿಮೆಯಾಗಲಿವೆ. ರೂಪಾಯಿ ಮೌಲ್ಯ ಇಳಿಮುಖವಾಗಿರುವುದು ಈ ತಿಂಗಳಿನಲ್ಲಿ ಸಗಟು ಹಣದುಬ್ಬರದ ಮೇಲೆ ಒತ್ತಡ ತರಲಿದೆ’ ಎಂದು ಇಕ್ರಾ ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

‘ಪ್ರಮುಖ ಮಂಡಿಗಳಲ್ಲಿ ಮುಂಗಾರು ಬೆಳೆಗಳ ದರಗಳು ‘ಎಂಎಸ್‌ಪಿ’ ಗಿಂತಲೂ ಕಡಿಮೆ ಇವೆ. ಆಹಾರಧಾನ್ಯಗಳ ಸಂಗ್ರಹ ಪ್ರಕ್ರಿಯೆಯೂ ಚುರುಕು ಪಡೆದಿಲ್ಲ’ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರೀಸರ್ಚ್‌ನ ಮುಖ್ಯ ಆರ್ಥಿಕ ತಜ್ಞ ಡಿ.ಕೆ. ಪಂತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.