ನವದೆಹಲಿ: ದಿನಸಿ ಸಾಮಗ್ರಿಗಳಿಂದ ಆರಂಭಿಸಿ ಎಲೆಕ್ಟ್ರಾನಿಕ್ ಉಪಕರಣಗಳವರೆಗೆ ವಿವಿಧ ಬಗೆಯ ಗ್ರಾಹಕ ಬಳಕೆ ಉತ್ಪನ್ನಗಳನ್ನು ಮನೆಬಾಗಿಲಿಗೆ ತ್ವರಿತವಾಗಿ ತಲುಪಿಸುವ ಜೆಪ್ಟೊ ಕಂಪನಿಯು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ದಾಖಲೆಗಳನ್ನು ಸಲ್ಲಿಸಿದೆ.
ಕಂಪನಿಯು 2026ರಲ್ಲಿ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸುವ ಉದ್ದೇಶ ಹೊಂದಿದೆ. ಇದು ಸಾಧ್ಯವಾದ ನಂತರದಲ್ಲಿ, ದೇಶದ ಷೇರುಪೇಟೆ ಪ್ರವೇಶಿಸಿದ ಅತ್ಯಂತ ಕಿರಿಯ ನವೋದ್ಯಮಗಳ ಸಾಲಿಗೆ ಜೆಪ್ಟೊ ಕೂಡ ಸೇರಲಿದೆ.
ಜೆಪ್ಟೊ ಕಂಪನಿಗೆ ಕ್ವಿಕ್–ಕಾಮರ್ಸ್ ಕ್ಷೇತ್ರದಲ್ಲಿ ಪೈಪೋಟಿ ನೀಡುವ ಎಟರ್ನಲ್, ಸ್ವಿಗ್ಗಿ ಕೂಡ ಷೇರುಪೇಟೆಯಲ್ಲಿ ನೋಂದಾಯಿತವಾಗಿವೆ.
ಜೆಪ್ಟೊ ಕಂಪನಿಯು ಗೋಪ್ಯ ಮಾರ್ಗದ ಮೂಲಕ ದಾಖಲೆಗಳನ್ನು ಸಲ್ಲಿಸಿದೆ. ಇದರಿಂದಾಗಿ ಕಂಪನಿಗೆ ತನ್ನ ದಾಖಲೆಗಳನ್ನು ಸಾರ್ವಜನಿಕರ ಅವಗಾಹನೆಗೆ ಮುಕ್ತವಾಗಿಸದೆಯೇ, ಸೆಬಿ ಜೊತೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಐಪಿಒ ಸಿದ್ಧತೆ ಸಂದರ್ಭದಲ್ಲಿ ಹೆಚ್ಚು ಅನುಕೂಲಗಳು ಇರಲಿ ಎಂಬ ಉದ್ದೇಶದಿಂದ ಬಹಳಷ್ಟು ಕಂಪನಿಗಳು ಈ ಮಾರ್ಗದಲ್ಲಿ ದಾಖಲೆಗಳನ್ನು ಸಲ್ಲಿಸುತ್ತಿವೆ.
ಜೆಪ್ಟೊ ಕಂಪನಿಯು ತಾನು ಆರಂಭವಾದಾಗಿನಿಂದ ಖ್ಯಾತ ಹೂಡಿಕೆದಾರರಿಂದ ₹16 ಸಾವಿರ ಕೋಟಿಯಷ್ಟು ಬಂಡವಾಳ ಸಂಗ್ರಹಿಸಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಕಂಪನಿಯು ₹3,757 ಕೋಟಿ ಬಂಡವಾಳ ಸಂಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.