ADVERTISEMENT

ಹಣಕಾಸು ಸಾಕ್ಷರತೆ | ಬ್ಯಾಂಕ್‌ ಸಾಲದ ಅರ್ಜಿ ತಿರಸ್ಕರಿಸುವುದೇಕೆ?

ರಾಜೇಶ್ ಕುಮಾರ್ ಟಿ. ಆರ್.
Published 16 ಏಪ್ರಿಲ್ 2023, 23:30 IST
Last Updated 16 ಏಪ್ರಿಲ್ 2023, 23:30 IST
   

ಸಾಲಕ್ಕಾಗಿ ಬ್ಯಾಂಕ್‌‌ಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಸಾಲವೇ ಸಿಗಲಿಲ್ಲ ಎಂದು ಅನೇಕರು ಅಲವತ್ತುಕೊಳ್ಳುತ್ತಾರೆ. ಸಾಮಾನ್ಯವಾಗಿ ಬ್ಯಾಂಕ್‌ಗಳು ಸಾಲ ಕೊಡುವಾಗ ವ್ಯಕ್ತಿಯ ಸ್ಥಿರವಾದ ಆದಾಯ, ಸದ್ಯ ಚಾಲ್ತಿ ಇರುವ ಸಾಲದ ಮಾಸಿಕ ಕಂತುಗಳು (ಇಎಂಐ), ಮತ್ತು ಕ್ರೆಡಿಟ್ ಸ್ಕೋರ್ ಪರಿಗಣಿಸುತ್ತವೆ. ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಿಗೆ ಇದ್ದರೆ, ಸುಲಭದಲ್ಲಿ ಸಾಲ ಸಿಗುತ್ತದೆ. ಯಾವ ಆಧಾರದಲ್ಲಿ ಬ್ಯಾಂಕ್‌ಗಳು ಸಾಲ ಕೊಡುತ್ತವೆ ಮತ್ತು ನಿರಾಕರಿಸುತ್ತವೆ ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿಯೋಣ ಬನ್ನಿ.

ಸಂದರ್ಭ –1: ಪಟ್ಟಿಯಲ್ಲಿರುವಂತೆ ವ್ಯಕ್ತಿಯೊಬ್ಬರ ಆದಾಯ ₹ 50 ಸಾವಿರ ಆಗಿದ್ದು, ಈಗಾಗಲೇ ಪಡೆದಿರುವ ಸಾಲವೊಂದಕ್ಕೆ ಅವರು ₹ 10 ಸಾವಿರ ಮಾಸಿಕ ಇಎಂಐ ಕಂತು ಪಾವತಿಸುತ್ತಿದ್ದಾರೆ. ಸಾಲದ ನಿಯಮದ ಪ್ರಕಾರ ನಮ್ಮ ಸಾಲದ ಇಎಂಐ ಕಂತು ಆದಾಯದ ಶೇ 50 ಕ್ಕಿಂತ ಹೆಚ್ಚಿಗೆ ಇರಬಾರದು. ಅದರಂತೆ ಲೆಕ್ಕ ಮಾಡಿ ನೋಡಿದಾಗ ಆದಾಯದ ಶೇ 20 ರಷ್ಟು( ₹ 10 ಸಾವಿರ) ಹಣವನ್ನು ಅವರು ಸದ್ಯ ಮಾಸಿಕ ಸಾಲದ ಕಂತಿಗೆ ಪಾವತಿಸುತ್ತಿದ್ದಾರೆ. ಇನ್ನೂ ಶೇ 30 ರಷ್ಟು ಹಣವನ್ನು (₹ 15 ಸಾವಿರ) ಸಾಲದ ರೂಪದಲ್ಲಿ ಪಡೆಯಲು ಅವಕಾಶವಿದೆ. ಈ ಲೆಕ್ಕಾಚಾರವನ್ನು ಪರಿಗಣಿಸಿದಾಗ ವ್ಯಕ್ತಿಗೆ ಹೆಚ್ಚುವರಿಯಾಗಿ ಶೇ 10 ರ ಬಡ್ಡಿ ದರದಲ್ಲಿ ₹ 15 ಲಕ್ಷ ಸಾಲವನ್ನು 20 ವರ್ಷಗಳ ಅವಧಿಗೆ ಬ್ಯಾಂಕ್ ನೀಡಹುದು.

ಸಂದರ್ಭ - 2: ಪಟ್ಟಿಯಲ್ಲಿರುವಂತೆ ವ್ಯಕ್ತಿಯೊಬ್ಬರ ಆದಾಯ ₹ 1 ಲಕ್ಷ ಆಗಿದ್ದು, ಈಗಾಗಲೇ ಪಡೆದಿರುವ ಸಾಲವೊಂದಕ್ಕೆ ಅವರು ₹ 50 ಸಾವಿರ ಮಾಸಿಕ ಇಎಂಐ ಕಂತು ಪಾವತಿಸುತ್ತಿದ್ದಾರೆ. ಸಾಲದ ನಿಯಮದ ಪ್ರಕಾರ ಸಾಲದ ಇಎಂಐ ಕಂತು ಆದಾಯದ ಶೇ 50 ಕ್ಕಿಂತ ಹೆಚ್ಚಿಗೆ ಇರಬಾರದು. ಅದರಂತೆ ಲೆಕ್ಕ ಮಾಡಿ ನೋಡಿದಾಗ ಆದಾಯದ ಶೇ 50 ರಷ್ಟು (₹ 50 ಸಾವಿರ) ಹಣವನ್ನು ಸದ್ಯ ಅವರು ಮಾಸಿಕ ಸಾಲದ ಕಂತಿಗೆ ಪಾವತಿಸುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಅವರಿಗೆ ಬ್ಯಾಂಕ್‌ನಿಂದ ಯಾವುದೇ ಹೆಚ್ಚುವರಿ ಸಾಲ ಸಿಗುವುದಿಲ್ಲ.

ADVERTISEMENT

ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ?: ರವಿ ಎನ್ನುವ ವ್ಯಕ್ತಿ ₹ 10.29 ಲಕ್ಷದ ಕಾರು ಖರೀದಿಸಲು ತೀರ್ಮಾನಿಸಿ ₹ 4 ಲಕ್ಷ ಹೊಂದಿಸಿಕೊಂದು ಬಾಕಿ ₹ 6.29 ಲಕ್ಷ ಸಾಲಕ್ಕಾಗಿ ಬ್ಯಾಂಕ್ ವೊಂದರಲ್ಲಿ ಅರ್ಜಿ ಸಲ್ಲಿಸಿದರು. ಒಂದು ಬ್ಯಾಂಕ್ ಅವರಿಗೆ ಶೇ 11.70 ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ಸಾಲ ಕೊಡುವುದಾಗಿ ಹೇಳಿತು. ಅದಕ್ಕೆ ಮಾಸಿಕ ಕಂತು ₹ 13,897 ಕಟ್ಟಬೇಕಿತ್ತು. ರವಿ ಮತ್ತೊಂದು ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಅರ್ಜಿ ಹಾಕಿದರು. ಆ ಬ್ಯಾಂಕ್ ಗ್ರಾಹಕನ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ ಶೇ 11.30 ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ತಿಳಿಸಿತು. ಇದರಿಂದ ಮಾಸಿಕ ಕಂತಿನ ಮೊತ್ತದಲ್ಲಿ ₹ 126 ಕಡಿಮೆಯಾಯಿತು. ರವಿ ಮೊದಲು ಅರ್ಜಿ ಹಾಕಿದ್ದ ಬ್ಯಾಂಕ್‌ಗೆ ಕರೆ ಮಾಡಿ ಸಾಲ ಬೇಡ, ಬೇರೆ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿಗೆ ಸಾಲ ಲಭಿಸಿದೆ ಎಂದು ಹೇಳಿದರು. ಇದನ್ನು ತಿಳಿದ ಬ್ಯಾಂಕ್, ರವಿಗೆ ಶೇ 10.34 ರ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ಹೇಳಿತು. ಇದರಿಂದ ಇಎಂಐ ಮೊತ್ತ ₹ 13,470 ಕ್ಕೆ ಇಳಿಯಿತು. ಬಡ್ಡಿ ದರ ಸರಿಸುಮಾರು ಶೇ 3 ರಷ್ಟು ಇಳಿದ ಕಾರಣ ರವಿಗೆ ಒಟ್ಟು ₹ 25,604 (5 ವರ್ಷದ ಅವಧಿಯಲ್ಲಿ) ಉಳಿತಾಯವಾಯಿತು.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.