ADVERTISEMENT

ಹಣಕಾಸು ಸಾಕ್ಷರತೆ | ಷೇರು ಹೂಡಿಕೆ ಮಾಡುವಾಗ ಈ ತಪ್ಪು ಮಾಡಬೇಡಿ

ರಾಜೇಶ್ ಕುಮಾರ್ ಟಿ. ಆರ್.
Published 21 ಜನವರಿ 2024, 19:02 IST
Last Updated 21 ಜನವರಿ 2024, 19:02 IST
   

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಶುರುವಾದರೆ ಸಾಕು, ಡಿ ಮ್ಯಾಟ್‌ ಖಾತೆ ತೆರೆದು ಹೊಸ ಹೂಡಿಕೆದಾರರು ಷೇರುಪೇಟೆಯ ರಂಗಪ್ರವೇಶ ಮಾಡುತ್ತಾರೆ. ಆದರೆ, ಷೇರು ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಒಂದಷ್ಟು ಅಧ್ಯಯನದೊಂದಿಗೆ ಪೂರ್ವ ತಯಾರಿ ಮಾಡಿಕೊಂಡು ಬರಬೇಕು. ಇಲ್ಲದಿದ್ದರೆ ಹೂಡಿಕೆಯ ಆಟದಲ್ಲಿ ಲಾಭ ಗಳಿಸಲು ಸಾಧ್ಯವಾಗುವುದಿಲ್ಲ. ಬನ್ನಿ ಮೊದಲ ಬಾರಿಗೆ ಷೇರು ಮಾರುಕಟ್ಟೆ ಪ್ರವೇಶಿಸುವವರು ಯಾವ 5 ತಪ್ಪುಗಳನ್ನು ಮಾಡಲೇಬಾರದು ಎನ್ನುವ ಬಗ್ಗೆ ವಿವರವಾಗಿ ತಿಳಿಯೋಣ.


1. ಟ್ರೇಡರ್ ಮನಸ್ಥಿತಿಯಲ್ಲಿ ಹೂಡಿಕೆ ಮಾಡುವುದು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಪ್ರವೇಶ ಮಾಡುವ ಅನೇಕರು ರಾತ್ರೋರಾತ್ರಿ ಹಣಗಳಿಸಿ ಬಿಡಬಹುದು ಎನ್ನುವ ಲೆಕ್ಕಾಚಾರದಲ್ಲಿ ಇರುತ್ತಾರೆ. ಇವತ್ತು ₹1,000 ಕೊಟ್ಟು ಖರೀದಿಸಿದ ಷೇರು ನಾಳೆಯೇ ₹1,200 ಆಗಬೇಕು ಎಂದು ಬಯಸುತ್ತಾರೆ. ಒಂದೊಮ್ಮೆ ₹ 1,000ಕ್ಕೆ ಖರೀದಿಸಿದ್ದ ಷೇರು ₹800ಕ್ಕೆ ಬಂದರೆ ಕೂಡಲೇ ಅದನ್ನು ಮಾರಾಟ ಮಾಡಿ ನಷ್ಟ ಮಾಡಿಕೊಳ್ಳುತ್ತಾರೆ. ಇದನ್ನು ಟ್ರೇಡರ್ ಮನಸ್ಥಿತಿ ಎನ್ನಬಹುದು. ಟ್ರೇಡರ್ ಮನಸ್ಥಿತಿ ಇದ್ದರೆ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಸಂಪತ್ತು ಗಳಿಸಲು ಸಾಧ್ಯವಿಲ್ಲ.

ಹಣ ತೊಡಗಿಸುವಾಗ ಹೂಡಿಕೆದಾರನ ಮನಸ್ಥಿತಿ ಇರಬೇಕು. ಸಂಪತ್ತಿನೆಡೆಗೆ ನಿಧಾನಗತಿಯ ನಡಿಗೆ ಎನ್ನುವ ಧೋರಣೆ ನಿಮ್ಮದಾಗಬೇಕು. ಕಂಪನಿಯೊಂದರ ಅಧ್ಯಯನ ನಡೆಸಿ ಅದರಲ್ಲಿ ಲಾಭ ಗಳಿಸುವ ಸಾಧ್ಯತೆ ಇದೆ ಎಂದು ಹೂಡಿಕೆ ಮಾಡಿದಾಗ ಸೂಚ್ಯಂಕಗಳ ತಾತ್ಕಾಲಿಕ ಏರಿಳಿತಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ADVERTISEMENT

2. ಸಿಕ್ಕಸಿಕ್ಕವರ ಸಲಹೆ ಆಧರಿಸಿ ಹೂಡಿಕೆ ಮಾಡಬೇಡಿ: ಷೇರು ಮಾರುಕಟ್ಟೆ ಪ್ರವೇಶಿಸುವ ಮುನ್ನ ಅದರ ಬಗ್ಗೆ ನಿಮಗೆ ಮೂಲಭೂತ ಜ್ಞಾನ ಅವಶ್ಯಕ. ಸ್ನೇಹಿತರು, ಪರಿಚಯದವರ ಸಲಹೆ ಆಧರಿಸಿ ಷೇರು ಹೂಡಿಕೆ ಮಾಡಿದರೆ ನಷ್ಟದ ಸಾಧ್ಯತೆಯೇ ಹೆಚ್ಚು. ನಿಮ್ಮ ಸ್ನೇಹಿತ ಯಾವುದೇ ಷೇರು ಖರೀದಿಸಿದ್ದಾನೆ ಎಂದಾಕ್ಷಣ ಅದೇ ಷೇರುಗಳನ್ನು ನೀವು ಕಣ್ಣು ಮುಚ್ಚಿ ಖರೀದಿಸಬಾರದು. ನಿಮ್ಮ ಆರ್ಥಿಕ ಪರಿಸ್ಥಿತಿಯೇ ಬೇರೆ ಇರುತ್ತದೆ ಮತ್ತು ನಿಮ್ಮ ಸ್ನೇಹಿತನ ಆರ್ಥಿಕ ಪರಿಸ್ಥಿತಿಯೇ ಬೇರೆ ಇರುತ್ತದೆ. ಹಾಗಾಗಿ, ಯಾವುದರಲ್ಲಿ ಹೂಡಿಕೆ ಮಾಡಬೇಕು ಎನ್ನುವ ತೀರ್ಮಾನ ನಿಮ್ಮದಾಗಿರಬೇಕು. ನಿರ್ದಿಷ್ಟ ಕಂಪನಿಯ ಮೇಲೆ ಹಣ ತೊಡಗಿಸುವ ಮುನ್ನ ಸಾಧಕ –ಬಾಧಕಗಳನ್ನು ಅರಿತು ಮುನ್ನಡೆಯಬೇಕು.

3. ದೊಡ್ಡ ಹೂಡಿಕೆದಾರರ ಅನುಕರಣೆ ಮಾಡುವುದು: ಹಲವು ಹೂಡಿಕೆದಾರರು ದೊಡ್ಡ ಹೂಡಿಕೆದಾರರ ಪೋರ್ಟ್ ಫೋಲಿಯೊ ಅನುಕರಣೆ ಮಾಡುವ ತಪ್ಪು ಮಾಡುತ್ತಾರೆ. ಉದಾಹರಣೆಗೆ ಪ್ರಮುಖ ಹೂಡಿಕೆದಾರನೊಬ್ಬ ನಿರ್ದಿಷ್ಟ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದಾನೆ ಎಂದರೆ, ಅದೇ ಕಂಪನಿಯಲ್ಲಿ ಸಾಮಾನ್ಯ ರಿಟೇಲ್ ಹೂಡಿಕೆದಾರನು ಹಣ ತೊಡಗಿಸಲು ಮುಂದಾಗುತ್ತಾನೆ. ದೊಡ್ಡ ಹೂಡಿಕೆದಾರ ಯಾವ ಕಾರಣಕ್ಕೆ ಆ ನಿರ್ದಿಷ್ಟ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾನೆ, ಯಾವ ಬೆಲೆಯಲ್ಲಿ ಷೇರು ಖರೀದಿಸಿದ್ದಾನೆ, ಆತ ಹೂಡಿಕೆ ಅವಧಿ ಎಷ್ಟು ಹೀಗೆ ಯಾವ ಮಾಹಿತಿಯೂ ಅನುಕರಣೆ ಮಾಡುವ ಹೂಡಿಕೆದಾರನಿಗೆ ಇರುವುದಿಲ್ಲ. ಒಟ್ಟಾರೆ ಅಳತೆ, ಅಂದಾಜಿಲ್ಲದೆ ಹೂಡಿಕೆ ಮಾಡಿದರೆ ನಷ್ಟ ಕಟ್ಟಿಟ್ಟಬುತ್ತಿ.

4. ಯಾವಾಗ ಮಾರಾಟ ಮಾಡಬೇಕು ಎಂದು ಗೊತ್ತಿಲ್ಲದಿರುವುದು: ಒಂದು ಉತ್ತಮ ಕಂಪನಿಯ ಷೇರು ಸಹ ಷೇರು ಮಾರುಕಟ್ಟೆಯಲ್ಲಿ ಕಂಡು ಬರುವ ತಾತ್ಕಾಲಿಕ ಅನಿಶ್ಚಿತತೆಯಿಂದ ಶೇ 10ರಿಂದ ಶೇ 20ರಷ್ಟು ಏರಿಳಿತ ಕಾಣುವುದು ಸರ್ವೇ ಸಾಮಾನ್ಯ. ಒಂದು ತ್ರೈಮಾಸಿಕ ಅವಧಿಯ ಫಲಿತಾಂಶದಲ್ಲಿ ಕಂಪನಿಯೊಂದು ನಿರೀಕ್ಷಿತ ಪ್ರಗತಿ ಸಾಧಿಸದೇ ಇರಬಹುದು. ಹಾಗೆಂದ ಮಾತ್ರಕ್ಕೆ ಆ ಕಂಪನಿ ಭವಿಷ್ಯದಲ್ಲಿ ಮತ್ತೆ ಪುಟಿದೇಳುವುದೇ ಇಲ್ಲ ಎಂದಲ್ಲ. ಒಂದು ತ್ರೈಮಾಸಿಕ ಅವಧಿಯಲ್ಲಿ ಕಂಪನಿಯೊಂದು ಉತ್ತಮ ಪ್ರಗತಿ ತೋರಲಿಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನ ಬೆಲೆಗೆ ಕೊಂಡ ಷೇರನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳಬಾರದು. ಷೇರನ್ನು ಯಾವಾಗ ಮಾರಾಟ ಮಾಡಬೇಕು ಎಂದು ತಿಳಿಯುವುದು ಷೇರು ಹೂಡಿಕೆಯಲ್ಲಿ ಪ್ರಮುಖ ವಿಚಾರ.

5. ಹೂಡಿಕೆಯಲ್ಲಿ ವೈವಿಧ್ಯತೆ ಕಾಯ್ದುಕೊಳ್ಳದೇ ಇರೋದು: ಷೇರು ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ಫಾರ್ಮಾ, ಲೋಹ, ಎಫ್‌ಎಂಸಿಜಿ ಹೀಗೆ ಹಲವು ವಲಯಗಳಿರುತ್ತವೆ. ಹೂಡಿಕೆ ಮಾಡುವಾಗ ನಮ್ಮ ಹೂಡಿಕೆ ಮೊತ್ತ ಹಲವು ವಲಯಗಳ ಕಂಪನಿಗಳ ಮೇಲೆ ಇರಬೇಕು. ಒಂದೇ ವಲಯದ ಒಂದೇ ಕಂಪನಿಯ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡಬಾರದು. ಬೇರೆ ಬೇರೆ ಕಂಪನಿಗಳ ಮೇಲೆ ಹೂಡಿಕೆ ಮಾಡಿದಾಗ ಒಂದಿಷ್ಟು ಕಂಪನಿಗಳು ಏರಿಕೆ ಕಾಣುತ್ತವೆ. ಮತ್ತೊಂದಷ್ಟು ಕಂಪನಿಗಳು ಇಳಿಕೆಯಲ್ಲಿರುತ್ತವೆ. ಹೀಗಿದ್ದಾಗ ನಿಮ್ಮ ಪೋರ್ಟ್ ಫೋಲಿಯೊದಲ್ಲಿ ಸಮತೋಲನ ಇರುತ್ತದೆ.

ಕುಸಿತದ ಹಾದಿ ತುಳಿದ ಷೇರು ಸೂಚ್ಯಂಕಗಳು

ಜನವರಿ 20ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 71,423 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.57ರಷ್ಟು ಇಳಿಕೆಯಾಗಿದೆ. 21,571 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ  ಶೇ 1.47ರಷ್ಟು ತಗ್ಗಿದೆ.

ಅಮೆರಿಕ ಫೆಡರಲ್ ಬ್ಯಾಂಕ್‌ನಿಂದ ಬಡ್ಡಿದರ ಇಳಿಕೆ ವಿಳಂಬ, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಗಣನೀಯ ಇಳಿಕೆ ಸೇರಿ ಹಲವು ಅಂಶಗಳು ಷೇರುಪೇಟೆ ಕುಸಿತಕ್ಕೆ ಕಾರಣವಾಗಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹22,972.66 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹10,712.73 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ನಿಫ್ಟಿ ವಲಯವಾರು ಪ್ರಗತಿಯಲ್ಲಿ ಬ್ಯಾಂಕ್ ಸೂಚ್ಯಂಕ ಶೇ 3.43, ಫಾರ್ಮಾ ಸೂಚ್ಯಂಕ ಶೇ 0.66, ಫೈನಾನ್ಸ್ ಸೂಚ್ಯಂಕ ಶೇ 3.56, ಎಫ್‌ಎಂಸಿಜಿ ಸೂಚ್ಯಂಕ ಶೇ 0.9, ಸರ್ವೀಸ್ ಸೂಚ್ಯಂಕ ಶೇ 2.25, ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 2.17ರಷ್ಟು ಕುಸಿದಿವೆ. ನಿಫ್ಟಿ ಐ.ಟಿ ಶೇ 0.48, ಎನರ್ಜಿ ಸೂಚ್ಯಂಕ ಶೇ 7.6, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 3.32ರಷ್ಟು ಗಳಿಸಿಕೊಂಡಿವೆ.

ಏರಿಕೆ – ಇಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಎಲ್‌ಟಿಐ ಮೈಂಡ್ ಟ್ರೀ, ನೈಕಾ, ಇಂಡಸ್ಇಂಡ್ ಬ್ಯಾಂಕ್ ಮತ್ತು ಐಸಿಐಸಿಐ ಪ್ರೂಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ ಕುಸಿದಿವೆ. ಪೇಟಿಎಂ, ಎಲ್‌ಐಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಒಎನ್‌ಜಿಸಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜಿಗಿತ ಕಂಡಿವೆ.

ಮುನ್ನೋಟ: ಈ ವಾರ ಎಂಆರ್‌ಪಿಎಲ್, ಆಕ್ಸಿಸ್ ಬ್ಯಾಂಕ್, ಕ್ಯೂಪಿಡ್, ಹ್ಯಾವೆಲ್ಸ್, ಆರ್‌ಇಸಿ ಲಿಮಿಟೆಡ್, ರಾಲಿಸ್, ಪಿಡಿಲೈಟ್ ಇಂಡಸ್ಟ್ರೀಸ್, ಕರ್ನಾಟಕ ಬ್ಯಾಂಕ್, ಪವರ್ ಇಂಡಿಯಾ, ಸಿಯೆಟ್ ಲಿಮಿಟೆಡ್, ಕೆನರಾ ಬ್ಯಾಂಕ್, ಡಿಸಿಬಿ ಬ್ಯಾಂಕ್, ಬಜಾಜ್ ಆಟೊ, ಐಒಸಿ, ಟಾಟಾ ಸ್ಟೀಲ್ , ರೇಲ್ ಟೆಲ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎಸಿಸಿ, ಅದಾನಿ ಪವರ್, ಸಿಪ್ಲಾ,  ಎಸ್‌ಬಿಐ ಲೈಫ್, ಟಾಟಾ ಟೆಕ್ನಾಲಜೀಸ್ ಲಿಮಿಟೆಡ್, ಯೆಸ್ ಬ್ಯಾಂಕ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಮುಂಬರುವ ಬಜೆಟ್, ಕಂಪನಿಗಳ ತ್ರೈಮಾಸಿಕ ವರದಿಗಳು, ಜಾಗತಿಕವಾಗಿ ಬಡ್ಡಿದರ ಇಳಿಕೆ ಬಗ್ಗೆ ವಿವಿಧ ದೇಶಗಳ ಬ್ಯಾಂಕ್‌ಗಳು ಕೈಗೊಳ್ಳುವ ತೀರ್ಮಾನ, ಅಮೆರಿಕದ ಜಿಡಿಪಿ ದತ್ತಾಂಶ ಸೇರಿ ಪ್ರಮುಖ ಅಂಶಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ. ಸೋಮವಾರ ರಾಮ ಜನ್ಮಭೂಮಿ ಪ್ರಾಣಪ್ರತಿಷ್ಠಾಪನೆ ಕಾರಣದಿಂದಾಗಿ ಷೇರುಪೇಟೆ ಕಾರ್ಯ ನಿರ್ವಹಿಸುವುದಿಲ್ಲ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.