ಅಲ್ಪಾವಧಿ ಹೂಡಿಕೆ ಅಂತ ಬಂದಾಗ ಹಲವು ದಶಕಗಳಿಂದ ದೇಶದಲ್ಲಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಅತ್ಯಂತ ಜನಪ್ರಿಯ ಹೂಡಿಕೆಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳು ಬ್ಯಾಂಕ್‌ನ ನಿಶ್ಚಿತ ಠೇವಣಿಗೆ ಪರ್ಯಾಯವಾಗಿ ರೂಪುಗೊಳ್ಳುತ್ತಿವೆ.
ನಿಶ್ಚಿತ ಠೇವಣಿಯಲ್ಲಿ ಇಲ್ಲದ ಹಲವು ಅನುಕೂಲಗಳು ಲಿಕ್ವಿಡ್ ಫಂಡ್‌ನಲ್ಲಿ ಸಿಗುತ್ತವೆ. ಬನ್ನಿ, ಈ ಫಂಡ್‌ಗಳು ನಿಶ್ಚಿತ ಠೇವಣಿಗಿಂತ ಹೂಡಿಕೆದಾರರಿಗೆ ಹೇಗೆ ಹೆಚ್ಚು ಲಾಭದಾಯಕ ಎಂಬ ಬಗ್ಗೆ ತಿಳಿಯೋಣ.
ಕಡಿಮೆ ಅವಧಿಗೆ ಹೂಡಿಕೆ ಮಾಡುವ ಅವಕಾಶ ಕಲ್ಪಿಸುವ ಮ್ಯೂಚುವಲ್ ಫಂಡ್‌ಗಳನ್ನು ಲಿಕ್ವಿಡ್ ಮ್ಯೂಚುವಲ್ ಫಂಡ್ ಎಂದು ಕರೆಯಬಹುದು. ಡೆಟ್ ಫಂಡ್ ಮಾದರಿಯಲ್ಲಿರುವ ವಿವಿಧ ಮ್ಯೂಚುವಲ್ ಫಂಡ್‌ಗಳ ಪೈಕಿ ಲಿಕ್ವಿಡ್ ಮ್ಯೂಚುಯಲ್ ಫಂಡ್ ಪ್ರಮುಖವಾದುದು.
ಹೆಸರೇ ಹೇಳುವಂತೆ ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಅಗತ್ಯ ಎನಿಸಿದಾಗ ಹೂಡಿಕೆ ಹಣವನ್ನು ವಾಪಸ್ ಪಡೆದುಕೊಳ್ಳುವುದು ಸುಲಭ. ದುಡ್ಡಿನ ಅಗತ್ಯ ಬಿದ್ದಾಗ ಲಿಕ್ವಿಡ್ ಫಂಡ್‌ಗಳಲ್ಲಿ ಹೂಡಿಕೆ ಮೊತ್ತವನ್ನು 24 ಗಂಟೆಯೊಳಗೆ ನಗದೀಕರಣ ಮಾಡಲು ಸಾಧ್ಯವಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮದ ಪ್ರಕಾರ, ಲಿಕ್ವಿಡ್ ಫಂಡ್‌ಗಳು ಹೂಡಿಕೆದಾರರ ಹಣವನ್ನು ನಿಶ್ಚಿತ ಆದಾಯ ತಂದುಕೊಡುವ, 91 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವಂತಹ ಸರ್ಕಾರಿ ಬಾಂಡ್‌ಗಳು, ಟ್ರೆಷರಿ ಬಿಲ್‌ಗಳು, ಕಮರ್ಷಿಯಲ್ ಪೇಪರ್‌ಗಳಲ್ಲಿ ತೊಡಗಿಸಬಹುದು. ಸಾಮಾನ್ಯವಾಗಿ 7 ದಿನಗಳಿಂದ 1 ವರ್ಷದ ಒಳಗಿನ ಹೂಡಿಕೆಗಳಿಗೆ ಈ ಫಂಡ್‌ಗಳು ಸರಿಹೊಂದುತ್ತವೆ.
ಬ್ಯಾಂಕ್ ಉಳಿತಾಯ ಖಾತೆ ಮತ್ತು ಅಲ್ಪಾವಧಿ ನಿಶ್ಚಿತ ಠೇವಣಿಗಿಂತ ಕೊಂಚ ಹೆಚ್ಚು ಲಾಭಾಂಶ ಕೊಡುವ ಸಾಮರ್ಥ್ಯ ಲಿಕ್ವಿಡ್ ಫಂಡ್‌ಗಳಿಗೆ ಇದೆ. ನಿಶ್ಚಿತ ಠೇವಣಿಯಲ್ಲಿ ನಿರ್ದಿಷ್ಟ ಸಂದರ್ಭದಲ್ಲಿ ನಿಗದಿಯಾಗಿರುವ ಬಡ್ಡಿ ಗಳಿಕೆ ಹೂಡಿಕೆದಾರನಿಗೆ ಸಿಗುತ್ತದೆ. ಆದರೆ, ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳು ಸರ್ಕಾರಿ ಬಾಂಡ್‌ಗಳು, ಟ್ರೆಷರಿ ಬಿಲ್‌ಗಳು, ಕಮರ್ಷಿಯಲ್ ಪೇಪರ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಗಳಿಕೆಯ ಸಾಧ್ಯತೆಯು ಕೊಂಚ ಹೆಚ್ಚಿರುತ್ತದೆ. ಆದರೆ, ನಿಮಗೆ ಗೊತ್ತಿರಲಿ ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಇರುವಷ್ಟು ಮಾರ್ಕೆಟ್ ರಿಸ್ಕ್ ಇಲ್ಲದಿದ್ದರೂ ಒಂದಷ್ಟು ರಿಸ್ಕ್ ಇದ್ದೇ ಇರುತ್ತದೆ.
ನಗದೀಕರಣ ಸುಲಭ: ಬ್ಯಾಂಕ್‌ನ ನಿಶ್ಚಿತ ಠೇವಣಿಗಳಿಗೆ ಲಾಕಿನ್ ಅವಧಿ (ಲಾಕಿನ್ ಪೀರಿಯಡ್) ಇರುತ್ತದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಠೇವಣಿ ಇಟ್ಟಿರುವ ಹಣ ಬಿಡಿಸಿಕೊಂಡರೆ ಒಂದಷ್ಟು ದಂಡ ಪಾವತಿಸಬೇಕಾಗುತ್ತದೆ. ಆದರೆ, ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಇಂತಹ ಸಮಸ್ಯೆ ಇಲ್ಲ. ಹೂಡಿಕೆ ಮೊತ್ತವನ್ನು ಅಗತ್ಯ ಎನಿಸಿದಾಗ 24 ಗಂಟೆಯ ಒಳಗಾಗಿ ವಾಪಸ್ ಪಡೆದುಕೊಳ್ಳಬಹುದು. ಹಾಗಾಗಿ, ನಗದೀಕರಣದ ವಿಷಯದಲ್ಲಿ ನಿಶ್ಚಿತ ಠೇವಣಿಗಿಂತ ಲಿಕ್ವಿಡ್ ಫಂಡ್ ಉತ್ತಮ.
ತೆರಿಗೆ ಅನುಕೂಲ ಅಂತ ಬಂದಾಗ ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳು ನಿಶ್ಚಿತ ಠೇವಣಿಗಿಂತ ಹೆಚ್ಚಿನ ಅನುಕೂಲ ಒದಗಿಸುತ್ತವೆ. ಅದರಲ್ಲೂ ಹೆಚ್ಚು ತೆರಿಗೆ ಪಾವತಿಸುತ್ತಿರುವವರಿಗೆ ನಿಶ್ಚಿತ ಠೇವಣಿಗಿಂತ ಲಿಕ್ವಿಡ್ ಫಂಡ್‌ನಿಂದಲೇ ಹೆಚ್ಚು ಲಾಭ. ಈ ಫಂಡ್‌ಗಳಲ್ಲಿ ಹೂಡಿಕೆ ಮೇಲೆ ಬರುವ ಲಾಭಕ್ಕೆ ಮಾತ್ರ ನಿರ್ದಿಷ್ಟ ವ್ಯಕ್ತಿ ತನ್ನ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿದಾಗ ಹೂಡಿಕೆಯ ಅಸಲಿನ ಮೊತ್ತ ಮತ್ತು ಬಡ್ಡಿ ಗಳಿಕೆ ಒಳಗೊಂಡಂತೆ ನಿರ್ದಿಷ್ಟ ವ್ಯಕ್ತಿ ತನ್ನ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ಕಟ್ಟಬೇಕಾಗುತ್ತದೆ.
ನಿಶ್ಚಿತ ಠೇವಣಿಯಲ್ಲಿ ಹಣ ಇಟ್ಟಾಗ ಲಾಕಿನ್ ಅವಧಿ ಮುಗಿಯುವ ತನಕ ನಗದೀಕರಣ ಮಾಡಿಕೊಂಡರೆ ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ, ಅಗತ್ಯ ಎನಿಸಿದಾಗ ಹಣ ವಾಪಸ್ ತೆಗೆದುಕೊಳ್ಳುವುದು ಕಷ್ಟ. ಆದರೆ, ಲಿಕ್ವಿಡ್ ಫಂಡ್‌ನಲ್ಲಿ ಅಗತ್ಯ ಎನಿಸಿದಾಗ ಕೂಡಲೇ ಹಣ ವಾಪಸ್ ಪಡೆಯಬಹುದು. ಅಂದರೆ ತುರ್ತು ಅಗತ್ಯಗಳಿಗೆ ಬೇಕಾದ ದುಡ್ಡನ್ನು ಇಟ್ಟುಕೊಳ್ಳಲು ಈ ಫಂಡ್ ಹೆಚ್ಚು ಸೂಕ್ತ.
ಕಿವಿಮಾತು: ನಿಶ್ಚಿತ ಠೇವಣಿಗೆ ಹೋಲಿಸಿದರೆ ಲಿಕ್ವಿಡ್ ಫಂಡ್‌ಗಳಲ್ಲಿ ಹೆಚ್ಚು ಗಳಿಕೆ ಸಾಧ್ಯತೆ, ತೆರಿಗೆ ಅನುಕೂಲ ಮತ್ತು ಸುಲಭ ನಗದೀಕರಣದ ಅನುಕೂಲಗಳಿವೆ. ಈ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ ಸಿಗುವ ಅನುಕೂಲಗಳ ಬಗ್ಗೆ ಮೇಲೆ ನೀಡಿರುವ ಮಾಹಿತಿಯು ನಿಮ್ಮ ಹೂಡಿಕೆಗಳನ್ನು ಅಲ್ಪಾವಧಿಗೆ ಎಲ್ಲಿ ತೊಗಡಿಸಬೇಕು ಎನ್ನುವ ತೀರ್ಮಾನ ಮಾಡಲು ನೆರವಿಗೆ ಬರುತ್ತದೆ.
(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)
ಮಾರ್ಚ್ 13ಕ್ಕೆ ಕೊನೆಗೊಂಡ ವಾರದಲ್ಲಿ ಷೇರು ಸೂಚ್ಯಂಕಗಳು ಕುಸಿತ ದಾಖಲಿಸಿವೆ. 73828 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.69ರಷ್ಟು ಇಳಿಕೆ ಕಂಡಿದೆ. 22397 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.65ರಷ್ಟು ತಗ್ಗಿದೆ.
ಇನ್ನು ನಿಫ್ಟಿ ಮಿಡ್‌ಕ್ಯಾಪ್ ಸೂಚ್ಯಂಕ ಶೇ 2.48ರಷ್ಟು ಇಳಿಕೆ ಕಂಡಿದ್ದರೆ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 3.27ರಷ್ಟು ಇಳಿಕೆ ದಾಖಲಿಸಿದೆ. ಆರ್ಥಿಕ ಹಿಂಜರಿತದ ಭಯ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ ಸೇರಿ ಹಲವು ಅಂಶಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ.
ವಾರದ ಲೆಕ್ಕಾಚಾರದಲ್ಲಿ ವಲಯವಾರು ಪ್ರಗತಿ ನೋಡಿದಾಗ ನಿಫ್ಟಿ ರಿಯಲ್ ಎಸ್ಟೇಟ್ ಶೇ 1.83 ಮಾಧ್ಯಮ ಶೇ 1.5 ಆಟೊ ಶೇ 1.1 ಲೋಹ ಶೇ 0.87 ಮಾಹಿತಿ ತಂತ್ರಜ್ಞಾನ ಶೇ 0.52 ಅನಿಲ ಮತ್ತು ತೈಲ ಶೇ 0.43 ಫಾರ್ಮಾ ಶೇ 0.18 ಎನರ್ಜಿ ಶೇ 0.17 ಫೈನಾನ್ಸ್ ಶೇ 0.16 ಎಫ್‌ಎಂಸಿಜಿ ಶೇ 0.15ರಷ್ಟು ಕುಸಿದಿವೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಬ್ಯಾಂಕ್ ಸೂಚ್ಯಂಕಗಳು ಕ್ರಮವಾಗಿ ಶೇ 0.43 ಮತ್ತು 0.01ರಷ್ಟು ಗಳಿಸಿಕೊಂಡಿವೆ.
ವಾರದ ಅವಧಿಯಲ್ಲಿ ನಿಫ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್ ಶೇ 30.79 ಇನ್ಫೊಸಿಸ್ ಶೇ 7.82 ವಿಪ್ರೊ ಶೇ 7.84 ಟೆಕ್ ಮಹೀಂದ್ರ ಶೇ 4.61 ಟೈಟನ್ ಕಂಪನಿ ಶೇ 3.83 ಶ್ರೀರಾಮ್ ಫೈನಾನ್ಸ್ ಶೇ 3.79 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 3.79 ಹೀರೊ ಮೋಟೊಕಾರ್ಪ್ ಶೇ 3.28 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 3.14 ಒಎನ್‌ಜಿಸಿ ಶೇ 3.05 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 3.03 ಮತ್ತು ಅಪೊಲೊ ಹಾಸ್ಪಿಟಲ್ಸ್ ಶೇ 2.84ರಷ್ಟು ಕುಸಿದಿವೆ. ಸನ್ ಫಾರ್ಮಾ ಶೇ 4.26 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 3.3 ರಿಲಯನ್ಸ್ ಶೇ 3.04 ಬಿಇಎಲ್ ಶೇ 2.68 ಐಸಿಐಸಿಐ ಬ್ಯಾಂಕ್ ಶೇ 2.61 ಟಾಟಾ ಮೋಟರ್ಸ್ ಶೇ 2.45 ಐಟಿಸಿ ಶೇ 1.5 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 0.95 ಬ್ರಿಟಾನಿಯಾ ಶೇ 0.74 ಪವರ್ ಗ್ರಿಡ್ ಕಾರ್ಪೊರೇಷನ್ ಶೇ 0.43 ಬಜಾಜ್ ಆಟೊ ಶೇ 0.43 ಮತ್ತು ಎಚ್‌ಡಿಎಫ್‌ಸಿ ಲೈಫ್ ಶೇ 0.41ರಷ್ಟು ಗಳಿಸಿಕೊಂಡಿವೆ.
ಟ್ರಂಪ್ ಅವರ ಸುಂಕ ಸಮರದ ಪರಿಣಾಮ ಈ ವಾರವೂ ಷೇರುಪೇಟೆಯಲ್ಲಿ ಅನಿಶ್ಚಿತ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಮಾರ್ಚ್ 18 ಮತ್ತು 19ರಂದು ಅಮೆರಿಕದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್‌ನ ಹಣಕಾಸು ಸಮಿತಿ ಸಭೆ ನಡೆಯಲಿದೆ. ಬಡ್ಡಿದರ ನಿಗದಿ ಬಗ್ಗೆ ಸಭೆಯಲ್ಲಿ ತೆಗೆದುಕೊಳ್ಳಲಿರುವ ತೀರ್ಮಾನವು ಜಾಗತಿಕವಾಗಿ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲಿದೆ. ಉಳಿದಂತೆ ಅಮೆರಿಕ ಮತ್ತು ಚೀನಾದ ಚಿಲ್ಲರೆ ಮಾರಾಟದ ಅಂಕಿ-ಅಂಶ ಮತ್ತು ಕೈಗಾರಿಕೆ ಉತ್ಪಾದನೆ ದತ್ತಾಂಶಗಳತ್ತ ಹೂಡಿಕೆದಾರರು ಚಿತ್ತ ಹರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.