ADVERTISEMENT

ಹಣಕಾಸು ಸಾಕ್ಷರತೆ | ಚಿನ್ನದ ಮೇಲಿನ ಹೂಡಿಕೆ ಎಲ್ಲಿ ಮಾಡಬೇಕು?

ರಾಜೇಶ್ ಕುಮಾರ್ ಟಿ. ಆರ್.
Published 26 ನವೆಂಬರ್ 2023, 20:06 IST
Last Updated 26 ನವೆಂಬರ್ 2023, 20:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನಮ್ಮ ಬಳಿ ಹೂಡಿಕೆಗೆ ನೂರು ರೂಪಾಯಿ ಇದೆ ಎಂದಾದರೆ ಅದರಲ್ಲಿ ಹತ್ತರಿಂದ ಹನ್ನೆರಡು ರೂಪಾಯಿಯನ್ನು ಚಿನ್ನದ ಮೇಲೆ ತೊಡಗಿಸಬೇಕು ಎನ್ನುವುದು ಒಂದು ಲೆಕ್ಕಾಚಾರ. ನಮ್ಮ ಪೂರ್ವಜರಿಗೆ ಚಿನ್ನದ ಮೇಲಿನ ಹೂಡಿಕೆಗೆ ವಿವಿಧ ಆಯ್ಕೆಗಳಿರಲಿಲ್ಲ. ಹಾಗಾಗಿ ಅವರು ಚಿನ್ನವನ್ನು ನಾಣ್ಯ, ಗಟ್ಟಿ, ಆಭರಣಗಳ ರೂಪದಲ್ಲಿ ಖರೀದಿಸುತ್ತಿದ್ದರು. ಹೊಸ ತಲೆಮಾರಿನವರಿಗೆ ಚಿನ್ನದ ಮೇಲಿನ ಹೂಡಿಕೆಗೆ ಹಲವು ಅಯ್ಕೆಗಳಿವೆ. ಸಾವರಿನ್ ಗೋಲ್ಡ್ ಬಾಂಡ್, ಗೋಲ್ಡ್ ಮ್ಯೂಚುಯಲ್ ಫಂಡ್, ಗೋಲ್ಡ್ ಇಟಿಎಫ್, ಡಿಜಿಟಲ್ ಗೋಲ್ಡ್ ಮತ್ತು ಘನ ರೂಪದ ಚಿನ್ನದ ಮೇಲೆ ಹೂಡಿಕೆದಾರರು ಹಣ ತೊಡಗಿಸಬಹುದಾಗಿದೆ. ಇಷ್ಟೆಲ್ಲಾ ಆಯ್ಕೆಗಳಿರುವಾಗ ನಿಮಗೆ ಸಹಜವಾಗೇ ಯಾವುದರಲ್ಲಿ ಹೂಡಿಕೆ ಮಾಡಿದರೆ ಸೂಕ್ತ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ಲೇಖನದಲ್ಲಿ ನಾವು ಸಾವರಿನ್ ಗೋಲ್ಡ್ ಬಾಂಡ್, ಗೋಲ್ಡ್ ಇಟಿಎಫ್ ಮತ್ತು ಘನ ಚಿನ್ನ ಖರೀದಿಯ ಸಾಧಕ – ಬಾಧಕಗಳ ಬಗ್ಗೆ ವಿವರವಾಗಿ ತಿಳಿಯೋಣ.

ಚಿನ್ನದ ಮೇಲೆ ಯಾಕೆ ಹೂಡಿಕೆ ಮಾಡಬೇಕು: ಯಾವೆಲ್ಲಾ ಸಂದರ್ಭಗಳಲ್ಲಿ ಹಣದುಬ್ಬರ (ಬೆಲೆ ಏರಿಕೆ) ಜಾಸ್ತಿಯಾಗುತ್ತಾ ಸಾಗಿದೆಯೋ ಆಗೆಲ್ಲಾ ಚಿನ್ನದ ಬೆಲೆಯೂ ಏರುಗತಿಯಲ್ಲೇ ಸಾಗಿದೆ. ಇನ್ನು ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲಿರುವಾಗ ಚಿನ್ನದ ಮೇಲಿನ ಹೂಡಿಕೆ ಪುಟಿದೇಳುತ್ತಾ ಹೋಗುತ್ತದೆ. 1992 ರ ಆರ್ಥಿಕ ಬಿಕ್ಕಟ್ಟಿರಬಹುದು (ಕರೆನ್ಸಿ ಕ್ರೈಸಿಸ್), 2008 ರ ಜಾಗತಿಕ ಆರ್ಥಿಕ ಕುಸಿತವಿರಬಹುದು, 2002 ರ ಡಾಟ್ ಕಾಂ ಬಬಲ್ ಇರಬಹುದು ಅಥವಾ 2020 ರ ಕೋವಿಡ್ ಸ್ಥಿತಿ ಇರಬಹುದು ಅಥವಾ ಸದ್ಯದ ರಷ್ಯಾ– ಉಕ್ರೇನ್ ಯುದ್ಧವಿರಬಹುದು. ಈ ಎಲ್ಲಾ ಸಂದರ್ಭಗಳಲ್ಲೂ ಬಂಗಾರದ ಮೇಲಿನ ಹೂಡಿಕೆ ಹೆಚ್ಚು ಸ್ಥಿರ ಎನಿಸಿಕೊಂಡಿದೆ. ದೀರ್ಘಾವಧಿಯಲ್ಲಿ ಚಿನ್ನದ ಮೇಲಿನ ಹೂಡಿಕೆ ಉತ್ತಮ ಲಾಭಾಂಶವನ್ನೂ ತಂದುಕೊಟ್ಟಿದೆ. ಕಳೆದ 9 ವರ್ಷಗಳ ಅವಧಿಯಲ್ಲಿ ಚಿನ್ನದ ಮೇಲಿನ ಹೂಡಿಕೆ ಸರಾಸರಿ ಶೇ 9.6 ರಷ್ಟು ಗಳಿಕೆ ತಂದುಕೊಟ್ಟಿದೆ.

ADVERTISEMENT

ಘನ ಚಿನ್ನ, ಗೋಲ್ಡ್ ಇಟಿಎಫ್ ಮತ್ತು ಸಾವರಿನ್ ಗೋಲ್ಡ್ ಬಾಂಡ್ ಪರಿಚಯ: ಆಭರಣ ಖರೀದಿ, ಗೋಲ್ಡ್ ಕಾಯಿನ್ ಖರೀದಿ, ಗೋಲ್ಡ್ ಬಿಸ್ಕಿಟ್ ಖರೀದಿ ಇವೆಲ್ಲವೂ ಘನ ರೂಪದ ಚಿನ್ನದ ಖರೀದಿಗಳಾಗುತ್ತವೆ. ಇನ್ನು ಗೋಲ್ಡ್ ಇಟಿಎಫ್, ಕಾಮಾಡಿಟಿ ಅಧಾರಿತ ಮ್ಯೂಚುಯಲ್ ಫಂಡ್ ಆಗಿದ್ದು ಇಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಇಟಿಎಪ್‌ಗಳ ಮೂಲಕವೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಆದರೆ ಈ ಹೂಡಿಕೆ ಮಾಡಲು ನಿಮ್ಮ ಬಳಿ ಡಿ-ಮ್ಯಾಟ್ ಖಾತೆ ಇರಬೇಕು. ಚಿನ್ನದ ಮೌಲ್ಯ ಹೆಚ್ಚಾದಂತೆ ಗೋಲ್ಡ್ ಇಟಿಎಫ್ ಮೌಲ್ಯ ವೃದ್ಧಿಸುತ್ತದೆ. ಬಂಗಾರದ ಮೌಲ್ಯ ಕುಸಿದಂತೆ ಇಟಿಎ ಮೌಲ್ಯವೂ ಇಳಿಕೆ ಕಾಣುತ್ತದೆ. ಚಿನ್ನದ ಮೌಲ್ಯಕ್ಕೆ ಪ್ರತಿಯಾಗಿ ಭಾರತೀಯ ರಿಸರ್ವ ಬ್ಯಾಂಕ್ (ಆರ್‌ಬಿಐ) ನೀಡುವ ಬಾಂಡ್‌ಗಳನ್ನು ಸಾವರಿನ್ ಗೋಲ್ಡ್ ಬಾಂಡ್ ಎನ್ನುತ್ತಾರೆ. ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಸರ್ಕಾರದ ಪರವಾಗಿ ಆರ್‌ಬಿಐ ವಿತರಿಸುತ್ತದೆ.

ಕನಿಷ್ಠ ಹೂಡಿಕೆ: ಘನ ರೂಪದ ಚಿನ್ನ ಅಂದ್ರೆ ಚಿನ್ನದ ನಾಣ್ಯ, ಬಿಸ್ಕಿಟ್ ಅಥವಾ ಆಭರಣದ ಖರೀದಿಗೆ ಯಾವುದೇ ಮಿತಿ ಇಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ಖರೀದಿಸಬಹುದು. ಗೋಲ್ಡ್ ಇಟಿಎಫ್‌ಗಳನ್ನು ಒಂದು ಯುನಿಟ್ ಲೆಕ್ಕದಲ್ಲಿ ಖರೀದಿಸಬಹುದು. 1 ಗೋಲ್ಡ್ ಇಟಿಎಫ್‌ನ ಯುನಿಟ್ ಸಾಮಾನ್ಯವಾಗಿ 0.01 ಗ್ರಾಂ ಚಿನ್ನಕ್ಕೆ ಸಮ. ಇನ್ನು ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಗ್ರಾಂಗಳ ಲೆಕ್ಕದಲ್ಲಿ ಖರೀದಿಸಬಹುದು. ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಒಂದು ವರ್ಷದಲ್ಲಿ ಗರಿಷ್ಠ 4 ಕೆ.ಜಿ. ಮಾತ್ರ ಖರೀದಿಸಬಹುದಾಗಿದೆ.

ಹೂಡಿಕೆ ರಿಸ್ಕ್: ಘನ ರೂಪದ ಚಿನ್ನ ಇಟ್ಟುಕೊಳ್ಳುವಾಗ ರಿಸ್ಕ್ ಜಾಸ್ತಿ ಇರುತ್ತದೆ. ಚಿನ್ನದ ಕಳ್ಳತನ, ಗುಣಮಟ್ಟ ಖಾತರಿ, ಮೇಕಿಂಗ್ ಚಾರ್ಜಸ್‌ನ ಹೊರೆ ಘನ ರೂಪದ ಬಂಗಾರದ ಮೇಲಿರುತ್ತದೆ. ಗೋಲ್ಡ್ ಇಟಿಎಫ್ ಖರೀದಿಸುವಾಗ ನೀವು ಗುಣಮಟ್ಟದ ತಲೆನೋವಿಲ್ಲದೆ ಡಿಜಿಟಲ್ ರೂಪದಲ್ಲಿ ಚಿನ್ನ ಖರೀದಿಸುತ್ತೀರಿ. ಗೋಲ್ಡ್ ಇಟಿಎಫ್ ಗಳನ್ನು ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಂತ್ರಿಸುವುದರಿಂದ ಇದರಲ್ಲಿ ಘನ ರೂಪದ ಚಿನ್ನಕ್ಕಿಂತ ಕಡಿಮೆ ರಿಸ್ಕ್ ಇರುತ್ತದೆ. ಇನ್ನು ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆಯಲ್ಲಿ ಚಿನ್ನದ ಮೌಲ್ಯಕ್ಕೆ ಪ್ರತಿಯಾಗಿ, ಆರ್‌ಬಿಐ ಗೋಲ್ಡ್ ಬಾಂಡ್ ಗಳನ್ನು ವಿತರಿಸುತ್ತದೆ. ಕೇಂದ್ರ ಸರ್ಕಾರದ ಪರವಾಗಿ ಆರ್‌ಬಿಐ ಇಲ್ಲಿ ಬಾಂಡ್ ಗಳನ್ನು ವಿತರಿಸುವುದರಿಂದ ರಿಸ್ಕ್ ಇರುವುದಿಲ್ಲ.

ವೆಚ್ಚ: ಘನರೂಪದ ಚಿನ್ನ ಖರೀದಿಸಿದಾಗ ಮೇಕಿಂಗ್ ಚಾರ್ಜಸ್, ವೇಸ್ಟೇಜ್‌ ಜಾರ್ಜಸ್, ಜಿಎಸ್‌ಟಿ, ಬ್ಯಾಂಕ್ ಲಾಕರ್ ವೆಚ್ಚ ಸೇರಿ ಅನೇಕ ಖರ್ಚುಗಳು ಬರುತ್ತವೆ. ಗೋಲ್ಡ್ ಇಟಿಎಫ್ ಖರೀದಿಸುವಾಗ ಬ್ರೋಕರೇಜ್ ಶುಲ್ಕ ಮತ್ತು ಇಟಿಎಫ್ ನಿರ್ವಹಣಾ ಶುಲ್ಕ (ಎಕ್ಸ್‌ ಪೆನ್ಸ್ ರೇಶಿಯೊ) ಶೇ 0.5 ರಿಂದ ಶೇ 1 ರ ವರೆಗೆ ಇರುತ್ತದೆ. ಆದರೆ ಸಾವರಿನ್ ಗೋಲ್ಡ್ ಬಾಂಡ್ ಖರೀದಿಗೆ ಯಾವುದೇ ವೆಚ್ಚ ಇರುವುದಿಲ್ಲ. ಅಲ್ಲದೆ ಆನ್‌ಲೈನ್ ಮೂಲಕ ಖರೀದಿಸಿದರೆ ಕೊಂಚ ರಿಯಾಯಿತಿ ಕೂಡ ಸಿಗುತ್ತದೆ.

ಹೂಡಿಕೆ ಮೇಲಿನ ಗಳಿಕೆ: ಉದಾಹರಣೆಗೆ ಚಿನ್ನದ ಮೇಲಿನ ಹೂಡಿಕೆಯ ವಾರ್ಷಿಕ ಗಳಿಕೆ ಸರಾಸರಿ ಶೇ 10ರಷ್ಟಿದೆ ಎಂದುಕೊಳ್ಳೋಣ. ಘನ ರೂಪದ ಚಿನ್ನ ಖರೀದಿಸಿದಾಗ ಶೇ 25 ರಿಂದ ಶೇ 35 ರಷ್ಟು ಹಣ ಮೇಕಿಂಗ್ ಚಾರ್ಜಸ್, ಜಿಎಸ್‌ಟಿ ಮತ್ತು ಲಾಕರ್ ನಿರ್ವಹಣೆ ವೆಚ್ಚದಲ್ಲೇ ಹೋಗುವುದರಿಂದ ಘನ ರೂಪದ ಚಿನ್ನದ ವಾರ್ಷಿಕ ಸರಾಸರಿ ಗಳಿಕೆ ಶೇ 6 ರಷ್ಟು ಎಂದುಕೊಳ್ಳಬಹುದು. ಇನ್ನು ಗೋಲ್ಡ್ ಇಟಿಎಫ್‌ನಲ್ಲಿ ನಿರ್ವಹಣಾ ವೆಚ್ಚ ಶೇ 1 ರಷ್ಟು ಕಳೆದಾಗ ಶೇ 9 ರಷ್ಟು ಲಾಭಾಂಶ ಸಿಗುತ್ತದೆ. ಆದರೆ ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಯಾವುದೇ ವೆಚ್ಚವಿರದ ಕಾರಣ ಹೆಚ್ಚು ಲಾಭ ಸಿಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಶೇ 10 ರಷ್ಟು ಮೌಲ್ಯ ವೃದ್ಧಿ ಲಾಭದ ಜೊತೆಗೆ ಹೂಡಿಕೆ ಮೇಲಿನ ಮೊತ್ತದ ಮೇಲೆ ಶೇ 2.5 ರಷ್ಟು ಬಡ್ಡಿ ಲಾಭವೂ ಸಿಗುತ್ತದೆ. ಹಾಗಾಗಿ ಸಾವರಿನ್ ಗೋಲ್ಡ್ ಬಾಂಡ್‌ಗಳಲ್ಲಿ ದೀರ್ಘಾವಧಿಗೆ ಶೇ 12.5 ರಷ್ಟು ಲಾಭಾಂಶ ನಿರೀಕ್ಷಿಸಬಹುದು.

ನಗದೀಕರಣ: ಘನ ರೂಪದ ಚಿನ್ನದ ನಗದೀಕರಣ ಸುಲಭ. ಅಗತ್ಯ ಬಿದ್ದಾಗ ಚಿನ್ನ ಮಾರಾಟ ಮಾಡಿ ಹಣ ಪಡೆಯಬಹುದು. ಇನ್ನು ಗೋಲ್ಡ್ ಇಟಿಎಫ್‌ಗಳು ಷೇರು ಮಾರುಕಟ್ಟೆಯಲ್ಲಿ ವಹಿವಾಟಿಗೆ ಒಳಪಡುವುದರಿಂದ ನಗದೀಕರಣಕ್ಕೆ ಅವಕಾಶವಿದೆ. ಆದರೆ ಸಾವರಿನ್ ಗೋಲ್ಡ್ ಬಾಂಡ್‌ಗಳಲ್ಲಿ 8 ವರ್ಷಗಳ ಲಾಕಿನ್ ಅವಧಿ ಇರುತ್ತದೆ. 5 ವರ್ಷಗಳ ಬಳಿಕ ಅವಧಿಪೂರ್ವ ನಗದೀಕರಣಕ್ಕೆ ಅವಕಾಶವಿದೆ. ಇದಲ್ಲದೆ ಬಾಂಡ್ ಗಳ ಮೇಲೆ ಸಾಲ ಪಡೆಯುವ ಅವಕಾಶವೂ ಇದೆ.

ಕೊನೆಯ ಮಾತು: ಆಭರಣದ ಕಾರಣಕ್ಕಾಗಿ ಘನರೂಪದ ಚಿನ್ನ ಖರೀದಿಸಿದರೆ ತೊಂದರೆಯಿಲ್ಲ. ಆದರೆ ಹೂಡಿಕೆಗೆ ಅಂತ ಘನ ರೂಪದ ಚಿನ್ನ ಖರೀದಿಸಿದ್ರೆ ಪ್ರಯೋಜನವಿಲ್ಲ. ಚಿನ್ನದ ಮೇಲೆ ಹೂಡಿಕೆ ಅಂತ ಬಂದಾಗ ಸಾವರಿನ್ ಗೋಲ್ಡ್ ಬಾಂಡ್ ಮೊದಲನೇ ಅತ್ಯುತ್ತಮ ಆಯ್ಕೆ. ಎರಡನೆಯದ್ದು ಗೋಲ್ಡ್ ಇಟಿಎಫ್.

ಷೇರುಪೇಟೆ: ಸತತ ನಾಲ್ಕನೇ ವಾರವೂ ಗಳಿಕೆ

ಷೇರುಪೇಟೆ ಸೂಚ್ಯಂಕಗಳು ಸತತ ನಾಲ್ಕನೇ ವಾರವೂ ಗಳಿಕೆ ದಾಖಲಿಸಿವೆ. ನವೆಂಬರ್ 24ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಗಳಿಕೆ ಕಂಡಿವೆ. ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.26 ರಷ್ಟು ಗಳಿಸಿಕೊಂಡಿದೆ. ನಿಫ್ಟಿ ಶೇ 0.31 ರಷ್ಟು ಜಿಗಿದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಭರಾಟೆ, ತೈಲ ಬೆಲೆ ಇಳಿಕೆ, ಬಾಂಡ್ ಗಳಿಕೆ ಇಳಿಕೆ, ಅಮೆರಿಕದ ಫೆಡರಲ್ ಬ್ಯಾಂಕ್‌ನಿಂದ ಭವಿಷ್ಯದಲ್ಲಿ ಬಡ್ಡಿ ದರ ಹೆಚ್ಚಳ ಸಾಧ್ಯತೆ ಕಡಿಮೆ ಎಂಬ ಮುನ್ಸೂಚನೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 1.5 ರಷ್ಟು ಹೆಚ್ಚಳ ಕಂಡಿದೆ. ಲೋಹ , ತೈಲ ಮತ್ತು ಅನಿಲ ಹಾಗೂ ಫಾರ್ಮಾ ಸೂಚ್ಯಂಕಗಳು ತಲಾ ಶೇ 1 ರಷ್ಟು ಜಿಗಿದಿವೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.7 ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 0.4 ರಷ್ಟು ಕುಸಿದಿವೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಎಲ್‌ಐಸಿ, ಅದಾನಿ ವಿಲ್ಮರ್, ಹಿರೋ ಮೋಟೊ ಕಾರ್ಪ್, ಹಿಂದುಸ್ತಾನ್‌ ಏರೋನಾಟಿಕ್ಸ್, ಬಜಾಜ್ ಆಟೊ ಮತ್ತು ಭಾರತ್ ಪೆಟ್ರೋಲಿಯಂ ಗಳಿಸಿಕೊಂಡಿವೆ. ಜೊಮೆಟೊ, ಇನ್ಫೊ ಎಡ್ಜ್ ಇಂಡಿಯಾ, ಸಿಪ್ಲಾ, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಆಯಿಲ್ ಆ್ಯಂಡ್‌ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಕುಸಿದಿವೆ.

ಮುನ್ನೋಟ: ಈ ವಾರ ಪೊದ್ದಾರ್ ಹೌಸಿಂಗ್ ಆ್ಯಂಡ್‌ ಡೆವಲಪ್‌ಮೆಂಟ್‌ ಲಿ., ಸೀಮನ್ಸ್ ಲಿ., ಬಿನ್ನಿ, ಮಂಜೀರಾ ಕನ್‌ಸ್ಟ್ರಕ್ಷನ್‌ ಲಿ. ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು, ಐದುರಾಜ್ಯಗಳ ಚುನಾವಣಾ ಫಲಿತಾಂಶ ಸೇರಿ ಕೆಲ ಅಂಶಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ಲೇಖಕ ಚಾರ್ಟರ್ಡ್ ಅಕೌಂಟೆಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.