ADVERTISEMENT

ಹಣಕಾಸು ಸಾಕ್ಷರತೆ | ಐಪಿಒ ಹೂಡಿಕೆ: ಅದೃಷ್ಟ ಪರೀಕ್ಷೆ ಬೇಡ

ರಾಜೇಶ್ ಕುಮಾರ್ ಟಿ. ಆರ್.
Published 6 ಜುಲೈ 2025, 23:45 IST
Last Updated 6 ಜುಲೈ 2025, 23:45 IST
<div class="paragraphs"><p>ಐಪಿಒ</p></div>

ಐಪಿಒ

   

– ಎ.ಐ ಚಿತ್ರ

ಫೋನ್‌ಪೇ, ಜೆಪ್ಟೊ, ಫ್ಯಾಬ್ ಇಂಡಿಯಾ, ಓಯೊ, ಮೀಶೊ, ಕಾರ್ ದೇಖೊ, ಫಿಸಿಕ್ಸ್ ವಾಲಾ, ಕಲ್ಟ್ ಫಿಟ್, ಹಲ್ದಿರಾಮ್ಸ್ ಹೀಗೆ ಸಾಲು ಸಾಲು ಕಂಪನಿಗಳ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಈ ವರ್ಷ ನಡೆಯಲಿದೆ. ಜನರಿಗೆ ಈ ಬ್ರ್ಯಾಂಡ್‌ಗಳ ಪರಿಚಯವಿರುವ ಕಾರಣ ಸಹಜವಾಗಿಯೇ ಐಪಿಒದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರುತ್ತಾರೆ. ಮಾರುಕಟ್ಟೆಯಲ್ಲಿ ನಿರ್ದಿಷ್ಟ ಕಂಪನಿಯ ಷೇರಿನ ವಹಿವಾಟು ಶುರುವಾದಾಗ ಸಿಗುವ ಸಂಭಾವ್ಯ ಗಳಿಕೆ ಅಂದಾಜು (ಗ್ರೇ ಮಾರ್ಕೆಟ್ ಪ್ರೀಮಿಯಂ) ನೋಡಿ ಹಲವರು ಈ ಐಪಿಒಗಳತ್ತ ಆಕರ್ಷಿತರಾಗುತ್ತಾರೆ.

ADVERTISEMENT

ಷೇರು ಉತ್ತಮ ಬೆಲೆಗೆ ಮಾರುಕಟ್ಟೆಯಲ್ಲಿ ಲಿಸ್ಟ್ ಆದರೆ ಧುತ್ತೆಂದು ಲಾಭ ಗಳಿಸಿಕೊಳ್ಳಬಹುದು (ಲಿಸ್ಟಿಂಗ್ ಗೇನ್ಸ್) ಎನ್ನುವುದು ಇಲ್ಲಿ ಬಹುತೇಕರ ಅಂದಾಜು. ಆದರೆ ಲೆಕ್ಕಾಚಾರ ಮಾಡದೆ ಐಪಿಒಗಳ ಮೇಲೆ ಹೂಡಿಕೆ ಮಾಡಿದರೆ ನಷ್ಟ ಉಂಟಾಗುವ ಸಾಧ್ಯತೆಯೇ ಹೆಚ್ಚು.

ಲಿಸ್ಟಿಂಗ್ ಗೇನ್ಸ್‌ಗಾಗಿ ಹೂಡಿಕೆ: ಕಂಪನಿಯೊಂದರ ಐಪಿಒ ಷೇರಿನ ಬೆಲೆ ₹100 ಇರುತ್ತದೆ ಎಂದುಕೊಳ್ಳಿ. ಆ ಷೇರಿನ ಬೆಲೆ ಷೇರು ಮಾರುಕಟ್ಟೆ ಸೇರ್ಪಡೆ ವೇಳೆ (ಲಿಸ್ಟಿಂಗ್ ಡೇ) ₹150 ಆಗಬಹುದು ಎಂದು ಅಂದಾಜು ಮಾಡಿ ಐಪಿಒದಲ್ಲಿ ಹೂಡಿಕೆ ಮಾಡುವುದನ್ನು ಲಿಸ್ಟಿಂಗ್ ಗೇನ್ಸ್‌ಗಾಗಿ ಹೂಡಿಕೆ ಮಾಡುವುದು ಎನ್ನಬಹುದು. ಆದರೆ, ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸುವ ಎಲ್ಲಾ ಷೇರುಗಳು ಲಿಸ್ಟಿಂಗ್ ಗೇನ್ಸ್ ಕೊಡುವುದಿಲ್ಲ. ಸೆಬಿ ವರದಿಯ ಪ್ರಕಾರ 2021ರ ಏಪ್ರಿಲ್‌ನಿಂದ 2023ರ ಡಿಸೆಂಬರ್‌ ನಡುವೆ 144 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಈ ಪೈಕಿ ಶೇ 75ರಷ್ಟು ಕಂಪನಿಗಳು ಮಾತ್ರ ಷೇರು ಮಾರುಕಟ್ಟೆ ಸೇರ್ಪಡೆ ವೇಳೆ ಲಾಭ ಕೊಟ್ಟಿವೆ. ಶೇ 25ರಷ್ಟು ಕಂಪನಿಗಳು ಯಾವುದೇ ಲಾಭ ಕೊಟ್ಟಿಲ್ಲ.

ಪೇಟಿಎಂನಂತಹ ಕಂಪನಿ ಷೇರು ಮಾರುಕಟ್ಟೆ ಲಿಸ್ಟಿಂಗ್ ವೇಳೆ ಶೇ 27ರಷ್ಟು ಕುಸಿದಿದೆ. ಎಲ್ಐಸಿ ಶೇ 7ರಷ್ಟು ಇಳಿಕೆ ಕಂಡು ಲಿಸ್ಟ್‌ ಆಗಿದೆ. ಹುಂಡೈ ಮೋಟರ್ಸ್ ಲಿಸ್ಟಿಂಗ್ ವೇಳೆ ಶೇ 7ರಷ್ಟು ತಗ್ಗಿದೆ. ಹಾಗೆಂದಮಾತ್ರಕ್ಕೆ ಲಿಸ್ಟಿಂಗ್ ಡೇ ವೇಳೆ ಒಳ್ಳೆಯ ಲಾಭ ಕೊಟ್ಟ ಕಂಪನಿ ಇಲ್ಲ ಎಂದಲ್ಲ. ಟಾಟಾ ಟೆಕ್ನಾಲಜೀಸ್ ಮತ್ತು ಜೊಮಾಟೊದಂತಹ ಕಂಪನಿಗಳು ಲಿಸ್ಟಿಂಗ್ ಡೇ ವೇಳೆ ಕ್ರಮವಾಗಿ ಶೇ 162 ಹಾಗೂ ಶೇ 65ರಷ್ಟು ಗಳಿಕೆ ನೀಡಿವೆ. ಈ ವಿವರಣೆಯ ಒಟ್ಟು ತಾತ್ಪರ್ಯ ಇಷ್ಟೆ, ಐಪಿಒ ಹೂಡಿಕೆ ವೇಳೆ ಲಾಟರಿ ಟಿಕೆಟ್ ಲೆಕ್ಕಾಚಾರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬಾರದು.

ಅರಿಯದೇ ಹೂಡಿಕೆ: ಬಹುತೇಕರು ಐಪಿಒಗಳಲ್ಲಿ ಹೂಡಿಕೆ ಮಾಡುವಾಗ ಅರಿತು ಹಣ ತೊಡಗಿಸುವುದಿಲ್ಲ. ಸ್ನೇಹಿತರು, ಪರಿಚಯದವರ ಮಾತು ಕೇಳಿ, ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ ನೋಡಿ ಪೂರ್ವಾಪರ ಅರಿಯದೇ, ಲಾಭದ ಆಸೆಗಾಗಿ ಕಣ್ಣುಮುಚ್ಚಿ ಐಪಿಒಗಳಲ್ಲಿ ಹಣ ತೊಡಗಿಸುವ ಪರಿಪಾಠವಿದೆ. ಯಾವುದೇ ಕಂಪನಿಯ ಮೇಲೆ ಹೂಡಿಕೆ ಮಾಡುವಾಗ ಆ ಕಂಪನಿ ಏನು ಕೆಲಸ ಮಾಡುತ್ತದೆ, ಅದರ ವ್ಯವಹಾರದ ಮಾದರಿ ಏನು, ಆರ್ಥಿಕ ಪರಿಸ್ಥಿತಿ ಹೇಗಿದೆ, ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ, ಐಪಿಒದ ಉದ್ದೇಶ ಸಾಲ ಮರುಪಾವತಿಯೋ ಅಥವಾ ಕಂಪನಿಯ ಬೆಳವಣಿಗೆಯೋ, ಕಂಪನಿಯಲ್ಲಿರುವ ರಿಸ್ಕ್‌ಗಳೇನು ಎನ್ನುವ ಬಗ್ಗೆ ಅರಿತುಕೊಳ್ಳಬೇಕು. ಯಾವುದೇ ಕಂಪನಿ ಐಪಿಒ ನಡೆಸುವಾಗ ಡಿಆರ್‌ಎಚ್‌ಪಿ ಬಿಡುಗಡೆ ಮಾಡುತ್ತದೆ. ಅದರಲ್ಲಿ ಈ ಮಾಹಿತಿ ಸಿಗುತ್ತದೆ.

ಕಳೆದುಕೊಳ್ಳುವ ಭಯ: 2023ರಲ್ಲಿ ನಾನು ಆಯ್ದ ಉತ್ತಮ ಕಂಪನಿಗಳ ಐಪಿಒಗಳಲ್ಲಿ ಬಿಡ್ ಮಾಡಿದೆ. ಅರ್ಜಿ ಹಾಕಿದ 5 ಐಪಿಒಗಳ ಪೈಕಿ 2 ಐಪಿಒಗಳು ಸಿಕ್ಕಿದವು. ಇದನ್ನು ತಿಳಿದ ನನ್ನ ಸ್ನೇಹಿತ ಯಾವುದೇ ಅಧ್ಯಯನ, ಆಲೋಚನೆ ಮಾಡದೆ ಅಷ್ಟು ಉತ್ತಮವಲ್ಲದ ಕಂಪನಿಯ ಐಪಿಒ ಮೇಲೆ ಹೂಡಿಕೆ ಮಾಡಿ ಅಲಾಟ್‌ಮೆಂಟ್ ಕೂಡ ಪಡೆದ. ಆದರೆ ಷೇರು ಮಾರುಕಟ್ಟೆ ಸೇರ್ಪಡೆಯ ದಿನವೇ ಐಪಿಒ ನಷ್ಟ ಅನುಭವಿಸಿದ ಕಾರಣ ಅವನ ಅಸಲಿನ ಮೊತ್ತವೂ ಕೊಂಚ ಕರಗಿತು. ನಂತರ ನನ್ನ ಬಳಿ ಬಂದು ಹೀಗೇಕೆ ಆಯಿತು ಎಂದು ಕೇಳಿದ. ಐಪಿಒ
ಬಗ್ಗೆ ನಿನಗೆ ಏನು ಗೊತ್ತು ಎಂದು ಕೇಳಿದೆ. ನೀನು ಹೂಡಿಕೆ ಮಾಡಿ ಲಾಭ ಮಾಡಿದೆಯಲ್ಲಾ ಅದಕ್ಕಾಗಿ ನಾನೂ ಮಾಡಿದೆ ಅಂದ. ಅಲ್ಲಿಗೆ ಸಮಸ್ಯೆ ಎಲ್ಲಾಗಿದೆ ಎನ್ನುವುದು ನನ್ನ ಅರಿವಿಗೆ ಬಂತು. ನೆನಪಿಡಿ, ಅನುಕರಣೆ ಮಾಡಿ ಎಂದಿಗೂ ಹೂಡಿಕೆ ಮಾಡಬೇಡಿ, ಅಧ್ಯಯನ ಮಾಡಿ ಮುಂದುವರಿಯಿರಿ.

ಗ್ರೇ ಮಾರ್ಕೆಟ್ ಪ್ರೀಮಿಯಂ ಅಂದಾಜಿನಲ್ಲಿ ಐಪಿಒಗಳ ಮೇಲೆ ಹೂಡಿಕೆ ಮಾಡುವುದು ದೊಡ್ಡ ತಪ್ಪು. ಗ್ರೇ ಮಾರ್ಕೆಟ್ ಪ್ರೀಮಿಯಂ ಅಂದರೆ ನಿರ್ದಿಷ್ಟ ಕಂಪನಿಯ ಐಪಿಒ ಷೇರು ಮಾರುಕಟ್ಟೆಗೆ ಸೇರ್ಪಡೆಯಾಗುವ ಮುನ್ನ ಪಡೆಯುತ್ತಿರುವ ಅನಧಿಕೃತ ಬೆಲೆ. ಉದಾಹರಣೆಗೆ ಐಪಿಒ ಒಂದರಲ್ಲಿ ಷೇರಿನ ಬೆಲೆ ₹100 ಆಗಿದ್ದು ಗ್ರೇ ಮಾರ್ಕೆಟ್ ಪ್ರೀಮಿಯಂ ₹60 ಇದ್ದರೆ ಜನ ಆ ಕಂಪನಿಯ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸುವ ಹೊತ್ತಿನಲ್ಲಿ ₹160ಕ್ಕೆ ಪಡೆಯುತ್ತದೆ ಎಂದು ಭಾವಿಸುತ್ತಾರೆ. ಆದರೆ ಗ್ರೇ ಮಾರ್ಕೆಟ್ ಪ್ರೀಮಿಯಂ ಎಂಬುದು ನಿಯಂತ್ರಿತ ವ್ಯವಸ್ಥೆ ಅಲ್ಲ. ನಿರ್ದಿಷ್ಟ ಐಪಿಒ ಷೇರಿನ ಬೆಲೆ ಹೀಗೆಯೇ ಆಗುತ್ತದೆ ಎಂದು ಹೇಳಲು ಗ್ರೇ ಮಾರ್ಕೆಟ್ ಪ್ರೀಮಿಯಂ ನಿಖರ ಮಾನದಂಡವಲ್ಲ. ಕಂಪನಿಗಳ ಷೇರು ಗ್ರೇ ಮಾರ್ಕೆಟ್‌ ಪ್ರೀಮಿಯಂಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಿದ ನಿದರ್ಶನಗಳು ಹಲವು ಇವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

Cut-off box - ಐಪಿಒ ಹೂಡಿಕೆ ಮಾಡುವಾಗ ನೆನಪಿಡಿ * ಕಂಪನಿಯಲ್ಲಿ ಆರಂಭದಲ್ಲಿ ಹಣ ತೊಡಗಿಸಿದ ಹೂಡಿಕೆದಾರರಿಗೆ ನಗದೀಕರಣ ಮಾಡಿಕೊಳ್ಳಲು ಕೆಲ ಬಾರಿ ಐಪಿಒಗಳು ನಡೆಯುತ್ತವೆ. ಅದನ್ನು ನಿಮ್ಮ ಲಾಭ ಗಳಿಕೆಯ ಗಣಿ ಎಂದು ಭಾವಿಸುವುದು ತಪ್ಪು * ನಿರ್ದಿಷ್ಟ ಐಪಿಒಗಳಲ್ಲಿ ಹೂಡಿಕೆ ಮಾಡುವಾಗ ಅದೇ ವಲಯದ ಇತರ ಕಂಪನಿಗಳ ಬೆಲೆ ನೋಡಿ. ಬೆಲೆ ಜಾಸ್ತಿ ಇದ್ದರೆ ಹೂಡಿಕೆ ಪರಿಗಣಿಸಬೇಡಿ * ಐಪಿಒ ನಡೆಸುತ್ತಿರುವುದು ಜನಪ್ರಿಯ ಕಂಪನಿ ಎಂದಾಕ್ಷಣ ಅದು ಲಾಭ ಕೊಡುತ್ತದೆ ಎಂದಲ್ಲ * ನಿಮ್ಮ ಪೋರ್ಟ್‌ಫೋಲಿಯೋದ ಶೇ 10ಕ್ಕಿಂತ ಹೆಚ್ಚಿನ ಮೊತ್ತವನ್ನು ಐಪಿಒಗಳ ಮೇಲೆ ಹೂಡಿಕೆ ಮಾಡದಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.