ADVERTISEMENT

ಉಳಿತಾಯಕ್ಕೆ ಜಪಾನಿಯರ ‘ಕಕೆಬೋ’

ಕ್ಲಿಯೋನ್ ಡಿಸೋಜ
Published 2 ಫೆಬ್ರುವರಿ 2020, 19:45 IST
Last Updated 2 ಫೆಬ್ರುವರಿ 2020, 19:45 IST
   
""

ದುಡ್ಡು ಉಳಿಸೋಕೆ ಜನರು ಹತ್ತಾರು ಕಸರತ್ತುಗಳನ್ನು ನಡೆಸುತ್ತಾರೆ. ಏನೇ ಮಾಡಿದರು ಉಳಿತಾಯದ ಪ್ರಯತ್ನದಲ್ಲಿ ಸೋಲುವವರೇ ಹೆಚ್ಚು. ಆದರೆ ‘ಕಕೆಬೋ’ ಎಂಬ ಉಳಿತಾಯದ ವಿದ್ಯೆ ಜಪಾನಿಯರ ಬದುಕಿನಲ್ಲಿ ಹಣಕಾಸು ಶಿಸ್ತು ತರುವಲ್ಲಿ ಯಶಸ್ವಿಯಾಗಿದೆ. ಕಕೆಬೋ’ ಅಂದ್ರೆ ಮನೆಯ ಲೆಕ್ಕದ ಪುಸ್ತಕ. ಜಪಾನ್‌ನ ಮೊದಲ ಮಹಿಳಾ ಪತ್ರಕರ್ತೆ ಹನಿ ಮೊಟೊಕೊ 1904 ರಲ್ಲಿ ಕಕೆಬೋ ಪರಿಕಲ್ಪನೆ ಹುಟ್ಟು ಹಾಕಿದರು. ಅಂದಿನಿಂದ ಇಂದಿನ ವರೆಗೆ ಸುಮಾರು 116 ವರ್ಷಗಳ ಕಾಲ ‘ಕಕೆಬೋ’ ಜಪಾನಿಯರ ಹಣಕಾಸು ನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ.

ಏನಿದು ಕಕೆಬೋ: ಕಕೆಬೋ ಬೇರೆ ಮಾದರಿಯ ಉಳಿದ ಲೆಕ್ಕಾಚಾರಗಳಿಗಿಂತ ಸರಳವಾಗಿರುವುದೇ ಅದರ ಜನಪ್ರಿಯತೆಗೆ ಕಾರಣ. ಇದಕ್ಕೆ ಕಂಪ್ಯೂಟರ್, ಸಾಫ್ಟ್‌ವೇರ್, ಎಕ್ಸೆಲ್ ಶೀಟ್‌ಗಳ ಅಗತ್ಯವಿಲ್ಲ. ಸಾಮಾನ್ಯ ಜ್ಞಾನವಿದ್ದು ಹಣದ ಲೆಕ್ಕಾಚಾರ ಗೊತ್ತಿದ್ದರೆ ಸಾಕು, ಕಕೆಬೋ ನಿಮಗೆ ಆಪ್ತವಾಗುತ್ತದೆ.

ಎರಡೇ ಪುಟದಲ್ಲಿ ನಿಮ್ಮ ಇಡೀ ತಿಂಗಳ ಲೆಕ್ಕಾಚಾರ ಮಾಡಲು ಅನುವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.ಸರಳವಾಗಿ ಹೇಳುವುದಾದರೇ ನಮ್ಮ ಗಳಿಕೆ ಎಷ್ಟು? ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು? ಎಷ್ಟು ಉಳಿತಾಯ ಮಾಡಬೇಕು? ಖರ್ಚು ಕಡಿಮೆ ಮಾಡುವುದು ಹೇಗೆ ? ಎನ್ನುವುದನ್ನು ನಾವೇ ಲೆಕ್ಕಾಚಾರ ಮಾಡಿ ಅದರಂತೆ ನಡೆದುಕೊಳ್ಳಲು ಪ್ರೇರೆಪಿಸುವ ಸಾಧನ ಕಕೆಬೋ.

ADVERTISEMENT

ತಿಂಗಳ ಆರಂಭದಲ್ಲಿ ಕಕೆಬೋ ಪುಸ್ತಕ ಇಟ್ಟುಕೊಂಡು ಈ ತಿಂಗಳು ಎಷ್ಟು ಉಳಿತಾಯ ಮಾಡಬೇಕು? ಖರ್ಚು ತಗ್ಗಿಸಿ ಉಳಿತಾಯದ ಗುರಿ ಮುಟ್ಟಲು ಏನು ಮಾಡಬೇಕು? ಎನ್ನುವ ಲೆಕ್ಕಾಚಾರ ಮಾಡಿ ಬರೆಯಬೇಕಾಗುತ್ತದೆ. ನಾವೇ ಪುಸ್ತಕದಲ್ಲಿ ಲೆಕ್ಕಾಚಾರ ಮಾಡುವುದರಿಂದ ಖರ್ಚು ಮಾಡುವಾಗ ವಿವೇಚನೆ ಬಳಸುವ ಜತೆಗೆ ಉಳಿತಾಯದ ಗುರಿಯ ಬಗ್ಗೆ ಎಚ್ಚರಿಕೆಯಿಂದ ಇರುತ್ತೇವೆ.

ಖರೀದಿಗೆ ಮುನ್ನ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ: ಕಕೆಬೋ ಪ್ರಕಾರ ಯಾವುದೇ ಖರೀದಿಗೆ ಮುನ್ನ ಕೆಲ ಪ್ರಶ್ನೆಗಳನ್ನು ನಾವು ನಮಗೆ ಕೇಳಿಕೊಳ್ಳಬೇಕು. ಇದರಿಂದ ಅವಶ್ಯಕ ವಸ್ತುಗಳನ್ನು ಮಾತ್ರ ನಾವು ಖರೀದಿಸುತ್ತೇವೆ.

*ಈ ವಸ್ತು ಖರೀದಿಸದೆ ನಾನು ಜೀವಿಸಬಹುದೇ?

*ಸದ್ಯ ಇರುವ ಹಣಕಾಸಿನ ಪರಿಸ್ಥಿತಿಯಲ್ಲಿ ನಾನಿದನ್ನು ಖರೀದಿಸಬಹುದೇ ?

*ನಾನು ನಿಜವಾಗಲೂ ಇದನ್ನು ಬಳಸುತ್ತೇನೆಯೇ?

*ಈ ವಸ್ತುವಿಗೆ ಮನೆಯಲ್ಲಿ ಜಾಗವಿದೆಯೇ ?

*ನಾನು ಬೇಸರದಿಂದ ಅಥವಾ ಕೊಳ್ಳುಬಾಕತನದಿಂದ ಈ ಖರೀದಿ ಮಾಡುತ್ತಿರುವನೇ?

ಕಕೆಬೋ ಪ್ರಕಾರ ಖರ್ಚು ನಿಯಂತ್ರಣ ಹೇಗೆ?

*ಪದೇ ಪದೇ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ

*ನಗದು ಬಳಸಿ ವಹಿವಾಟು ನಡೆಸಿ

*ಡಿಸ್ಕೌಂಟ್ ಕಾರಣಕ್ಕೆ ಬೇಡದೇ ಇರುವುದನ್ನು ಖರೀದಿಸಬೇಡಿ

*ವಸ್ತು ಬೇಕೋ ಬೇಡವೋ ಗೊಂದಲವಿದ್ದರೆ ಖರೀದಿ ಮುಂದೂಡಿ

ಬಜೆಟ್ ಘೋಷಣೆಗಳಿಗೆ ಸ್ಪಂದಿಸದ ಪೇಟೆ

ಮಾರುಕಟ್ಟೆ ನಿರೀಕ್ಷೆಯು ಬಜೆಟ್‌ನಲ್ಲಿ ಹುಸಿಯಾಗಿರುವುದರ ಜತೆಗೆ ಕರೊನಾ ವೈರಸ್ ಭೀತಿಯ ಕಾರಣ ಷೇರುಪೇಟೆ ಸೂಚ್ಯಂಕಗಳು ವಾರದ ಅವಧಿಯಲ್ಲಿ ತತ್ತರಿಸಿವೆ. ವಾರಾಂತ್ಯಕ್ಕೆ ಶೇ 4.5 ರಷ್ಟು ಕುಸಿತ ಕಂಡಿರುವ (1,877 ಅಂಶಗಳ ಇಳಿಕೆ) ಸೆನ್ಸೆಕ್ಸ್ 39,753 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದೆ. ಶೇ 4.78 ರಷ್ಟು ಕುಸಿತ (586 ಅಂಶಗಳ ಇಳಿಕೆ) ದಾಖಲಿಸಿರುವ ನಿಫ್ಟಿ 11,661 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಬಜೆಟ್ ದಿನದಂದು ಷೇರುಪೇಟೆ ಒಂದೇ ದಿನ 988 ಅಂಶಗಳ ಕುಸಿತ ಕಂಡಿರುವ ಕಾರಣ ಹೂಡಿಕೆದಾರರ ಸಂಪತ್ತು ₹ 3.46 ಲಕ್ಷ ಕೋಟಿ ಕರಗಿದೆ. ಸೆನ್ಸೆಕ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ. ದೀರ್ಘಾವಧಿ ಬಂಡವಾಳ ಗಳಿಕೆಗೆ ಯಾವುದೇ ತೆರಿಗೆ ವಿನಾಯಿತಿ ಘೋಷಿಸದೆ ಇರುವುದು, ಆದಾಯ ತೆರಿಗೆ ಹಂತದಲ್ಲಿನ ಬದಲಾವಣೆಯಿಂದಾಗಿ ಹೂಡಿಕೆ ಸಾಧನಗಳಲ್ಲಿ ಉಳಿತಾಯ ಕಡಿಮೆಯಾಗುವ ಆತಂಕ ಸೇರಿ ಹಲವು ಅಂಶಗಳು ಮಾರುಕಟ್ಟೆಯ ನಿರಸ ಪ್ರತಿಕ್ರಿಯೆಗೆ ಕಾರಣವಾಗಿವೆ.

ವಲಯವಾರು ಚೇತರಿಕೆಗೆ ದೊಡ್ಡ ಕೊಡುಗೆಗಳು ಸಿಗದಿರುವುದು ಮತ್ತು ಉದ್ದೇಶಿತ ಲಾಭಾಂಶ ವಿತರಣೆ ತೆರಿಗೆಯನ್ನು (ಡಿಡಿಟಿ) ಹೂಡಿಕೆದಾರರಿಗೆ ವರ್ಗಾಯಿಸುವ ನಿರ್ಧಾರದಿಂದಲೂ ಸಹ ಷೇರುಪೇಟೆ ನಕಾರಾತ್ಮಕ ಹಾದಿ ತುಳಿದಿದೆ.

ವಲಯವಾರು ನೋಡಿದಾಗ ಲೋಹ ವಲಯ ಶೇ 11.29 ರಷ್ಟು ಕುಸಿದಿದೆ. ವಿದ್ಯುತ್ ಉತ್ಪಾದನೆ ಶೇ 7.96, ರಿಯಲ್ ಎಸ್ಟೇಟ್ ಶೇ 7.2 ಮತ್ತು ಮಾಧ್ಯಮ ವಲಯ ಶೇ 7.09 ರಷ್ಟು ತಗ್ಗಿವೆ.

ಏರಿಕೆ- ಇಳಿಕೆ: ಬಿಎಸ್‌ಸಿ ಲಾರ್ಜ್ ಕ್ಯಾಪ್‌ನಲ್ಲಿ ಅವಿನ್ಯೂ ಸೂಪರ್ ಮಾರ್ಕೆಟ್ಸ್ ಶೇ 6.31, ಡಾ ರೆಡ್ಡಿ ಲ್ಯಾಬೊರೇಟರಿಸ್ ಶೇ 2.90, ಟೆಕ್ ಮಹಿಂದ್ರಾ ಶೇ 2.56, ಬಜಾಜ್ ಆಟೋ ಶೇ 2.21 ಮತ್ತು ಪಿಡಿಲೈಟ್ ಇಂಡಸ್ಟ್ರೀಸ್ ಶೇ 1.96 ರಷ್ಟು ಏರಿಕೆ ಕಂಡಿವೆ. ಎನ್‌ಡಿಎಂಸಿ ಶೇ 18.37, ಇಂಡಿಯಾ ಬುಲ್ಸ್ ಶೇ 13.81, ಪಿರಾಮಲ್ ಎಂಟರ್ ಪ್ರೈಸಸ್ ಶೇ 13.35, ವೇದಾಂತ ಶೇ 13.32 ಮತ್ತು ಟಾಟಾ ಮೋಟರ್ಸ್ ಶೇ 13 ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಐಷರ್ ಮೋಟರ್ಸ್, ಬೋರೋಸಿಲ್, ಸೆಂಚುರಿ ಫ್ಲೈ, ಗೊದ್ರೇಜ್‌ ಪ್ರಾಪರ್ಟಿಸ್, ಸಿಪ್ಲಾ, ಆಂಧ್ರಾ ಬ್ಯಾಂಕ್, ಎಂಆರ್‌ಪಿಎಲ್, ಹುಡ್ಕೋ, ಟಿವಿಎಸ್ ಮೋಟರ್ಸ್, ಉಜ್ಜೀವನ್, ಬಜಾಜ್ ಎಲೆಕ್ಟ್ರಿಕ್, ಆದಾನಿ ಪೋರ್ಟ್ಸ್, ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ವರದಿ ಪ್ರಕಟಿಸುತ್ತಿವೆ. ಬಜೆಟ್ ನಂತರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳು, ಕರೊನಾ ವೈರಸ್ ಭೀತಿ ಹಾಗೂ ಇನ್ನಿತರ ಜಾಗತಿಕ ಅಂಶಗಳು ಸೂಚ್ಯಂಕಗಳ ಗತಿ ನಿರ್ಧರಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.