ADVERTISEMENT

ಈ ಐದು ಹೂಡಿಕೆ ಅ‍ಪಾಯಕಾರಿ

ರಾಜೇಶ್ ಕುಮಾರ್ ಟಿ. ಆರ್.
Published 19 ಜನವರಿ 2025, 22:57 IST
Last Updated 19 ಜನವರಿ 2025, 22:57 IST
<div class="paragraphs"><p>ಷೇರು ಆಧಾರಿತ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ </p></div>

ಷೇರು ಆಧಾರಿತ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ

   

ಹೂಡಿಕೆ ಉತ್ಪನ್ನಗಳು ಎಂದಾಗ ಮಾರುಕಟ್ಟೆಯಲ್ಲಿ ಹತ್ತಾರು ಆಯ್ಕೆಗಳಿವೆ. ಎಲ್ಲಾ ಹೂಡಿಕೆ ಆಯ್ಕೆಗಳಲ್ಲೂ ಅದರದ್ದೇ ಆದ ಸಾಧಕ, ಬಾಧಕಗಳಿವೆ. ಆದರೆ, ಕೆಲವು ಹೂಡಿಕೆಗಳಲ್ಲಿ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಿರುತ್ತದೆ.

ಅತಿಯಾದ ನಿರ್ವಹಣಾ ಶುಲ್ಕ, ಗೋಪ್ಯ ನಿಯಮಗಳು, ಕಡಿಮೆ ಲಾಭ ಗಳಿಕೆ ಒಳಗೊಂಡಂತೆ ಹೂಡಿಕೆದಾರನಿಗೆ ಪೂರಕವಲ್ಲದ ಅಂಶಗಳು ಅಂತಹ ಹೂಡಿಕೆಗಳಲ್ಲಿವೆ. ಆ ಹೂಡಿಕೆಗಳು ಯಾವುವು, ಯಾಕೆ ಹೂಡಿಕೆಗೆ ಇವು ಉತ್ತಮ ಆಯ್ಕೆಗಳಲ್ಲ ಎನ್ನುವ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ADVERTISEMENT

* ಡಿಜಿಟಲ್ ಗೋಲ್ಡ್‌ನಲ್ಲಿ ಪಾರದರ್ಶಕತೆ ಕೊರತೆ: ಡಿಜಿಟಲ್ ಗೋಲ್ಡ್ ಒಂದು ಜನಪ್ರಿಯ ಹೂಡಿಕೆ ಮಾದರಿಯಾಗಿದ್ದರೂ ಸಾಕಷ್ಟು ಅನನಕೂಲಗಳು ಈ ಹೂಡಿಕೆಯಲ್ಲಿವೆ. ಪ್ರತಿ ಬಾರಿ ನೀವು ಡಿಜಿಟಲ್ ಗೋಲ್ಡ್ ಖರೀದಿಸಿದಾಗ ಶೇ 3ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಆದರೆ, ಡಿಜಿಟಲ್ ಚಿನ್ನ ಮಾರಾಟ ಮಾಡುವಾಗ ನಿಮಗೆ ಜಿಎಸ್‌ಟಿಗೆ ಕಟ್ಟಿದ ಹಣ ಸಿಗುವುದಿಲ್ಲ. ಅಲ್ಲದೆ, ಡಿಜಿಟಲ್ ಗೋಲ್ಡ್ ಕೊಳ್ಳುವಾಗ ಅದರ ಬೆಲೆ ಜಾಸ್ತಿ ಇರುತ್ತದೆ. ಮಾರಾಟ ಮಾಡುವಾಗ ಕಡಿಮೆ ಬೆಲೆ ಇರುತ್ತದೆ. ಇಂತಹ ರೂಢಿ ಡಿಜಿಟಲ್ ಗೋಲ್ಡ್‌ನಲ್ಲಿದೆ.

ಇನ್ನು ಡಿಜಿಟಲ್ ಗೋಲ್ಡ್ ಮಾರಾಟ ಮಾಡುವ ವೇದಿಕೆಗಳಲ್ಲಿ ಬೆಲೆ ನಿಗದಿ, ನಿರ್ವಹಣಾ ಶುಲ್ಕ ವಿಧಿಸುವಿಕೆಯು ಪಾರದರ್ಶಕವಾಗಿಲ್ಲ. ಆದ್ದರಿಂದ ಈ ಹೂಡಿಕೆ ಮಾಡುವ ನಿರ್ಧಾರ ಕೈಗೊಳ್ಳುವ ಮುನ್ನ ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಿ.

* ಯುಲಿಪ್‌ನಲ್ಲಿ ಶುಲ್ಕ ದುಬಾರಿ, ಗಳಿಕೆ ಕಡಿಮೆ: ಇನ್ಶೂರೆನ್ಸ್ ಮತ್ತು ಹೂಡಿಕೆ ಇವೆರಡನ್ನೂ ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್‌ಗಳು (ಯುಲಿಪ್ಸ್) ಒಳಗೊಂಡಿರುತ್ತವೆ. ವಾಸ್ತವದಲ್ಲಿ ಈ ಪ್ಲಾನ್‌ಗಳಿಂದ ಹೆಚ್ಚು ಇನ್ಶೂರೆನ್ಸ್ ಕವರೇಜ್ ಸಿಗುವುದಿಲ್ಲ ಜೊತೆಗೆ, ಅಧಿಕ ಹೂಡಿಕೆ ಲಾಭವೂ ದಕ್ಕುವುದಿಲ್ಲ. ಯುಲಿಪ್‌ಗಳಲ್ಲಿ ಹೂಡಿಕೆ ಮಾಡಿದಾಗ ಮೊದಲ ವರ್ಷದ ಶುಲ್ಕ ಶೇ 8ರಿಂದ ಶೇ 10ರಷ್ಟು ಇರುತ್ತದೆ.

ಇಷ್ಟೆಲ್ಲಾ ಶುಲ್ಕವೇ ಇರುವಾಗ ಗಳಿಕೆ ಸಾಧ್ಯತೆಯು ಈ ಹೂಡಿಕೆಯಲ್ಲಿ ಕುಂಠಿತವಾಗುತ್ತದೆ. ನಿರ್ವಹಣಾ ಶುಲ್ಕ, ಆಡಳಿತ ಶುಲ್ಕ, ಕಂತಿನ ಹಂಚಿಕೆ ಶುಲ್ಕ, ಪ್ರಾಣ ಹಾನಿ ಶುಲ್ಕ (ಮೊರ್ಟಾಲಿಟಿ ಶುಲ್ಕ) ಜೊತೆಗೆ ವಿಮಾ ಕಂತಿನ ಮೇಲೆ ಶೇ 18ರಷ್ಟು ಜಿಎಸ್‌ಟಿಯನ್ನು ಯುಲಿಪ್ ಪಾಲಿಸಿಗಳಲ್ಲಿ ವಿಧಿಸಲಾಗುತ್ತದೆ. ಹಾಗಾಗಿ ನೀವು ಹೂಡಿಕೆ ಮಾಡಿರುವ ಯುಲಿಪ್ ಫಂಡ್ ಶೇ 10ರಷ್ಟು ಗಳಿಕೆ ನೀಡಿದರೂ ನಿಮಗೆ ಅದರ ಲಾಭ ದಕ್ಕುವುದಿಲ್ಲ.

ಅಲ್ಲದೆ, ಯುಲಿಪ್ ಹೂಡಿಕೆಗಳು ಸಾಕಷ್ಟು ಗೋಪ್ಯ ಶುಲ್ಕಗಳನ್ನೂ ಒಳಗೊಂಡಿರುತ್ತವೆ. ಸಾಮಾನ್ಯ ಹೂಡಿಕೆದಾರನಿಗೆ ಇದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಈ ಕಾರಣಗಳಿಂದ ಆದಷ್ಟು ಯುಲಿಪ್ ಹೂಡಿಕೆಗಳಿಂದ ದೂರ ಉಳಿಯುವುದು ಒಳಿತು.

* ಪೀರ್-ಟು-ಪೀರ್ ಲೆಂಡಿಂಗ್‌ ಬಗ್ಗೆ ಜೋಪಾನ: ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಸಾಲ ಕೊಡಿಸುವ ಪೀರ್–ಟು– ಪೀರ್ ಲೆಂಡಿಂಗ್ ಪ್ಲಾಟ್ ಫಾರಂಗಳಿವೆ. ಈ ಪ್ಲಾಟ್ ಫಾರಂಗಳು ಶೇ 12ರಷ್ಟು ಗಳಿಕೆ ಲಾಭ ಒದಗಿಸುವುದಾಗಿ ಹೇಳುತ್ತವೆ. ಆದರೆ, ಇಂತಹ ಸಾಲ ಕೊಡಿಸುವ ವೇದಿಕೆಗಳಿಗೆ ದುಡ್ಡು ಹಾಕುವುದರಿಂದ ರಿಸ್ಕ್ ಜಾಸ್ತಿ ಇರುತ್ತದೆ.

ಯಾರಿಗೆ ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲ ಸಿಗುವುದಿಲ್ಲವೋ ಅವರು ಪೀರ್–ಟು–ಪೀರ್ ಲೆಂಡಿಂಗ್ ಪ್ಲಾಟ್ ಫಾರಂಗಳಿಂದ ಸಾಲ ಪಡೆದುಕೊಳ್ಳುತ್ತಾರೆ. ಹೀಗೆ ಸಾಲ ಪಡೆದವರು ಅದನ್ನು ಹಿಂದಿರುಗಿಸದಿದ್ದರೆ ನಿಮ್ಮ ಹೂಡಿಕೆ ನಷ್ಟವಾಗುವ ಸಾಧ್ಯತೆ ಇರುತ್ತದೆ. ಪೀರ್-ಟು–ಪೀರ್ ಲೆಂಡಿಂಗ್‌ನಲ್ಲಿ ಲಾಭ ಗಳಿಕೆ ಸಾಧ್ಯತೆಯ ಜೊತೆಗೆ ರಿಸ್ಕ್ ಕೂಡ ಜಾಸ್ತಿಯಿದೆ ಎನ್ನುವುದು ನಿಮಗೆ ಗೊತ್ತಿರಲಿ.

* ಹೋಲ್ ಲೈಫ್ ಇನ್ಶೂರೆನ್ಸ್ ದುಬಾರಿ: ಹೋಲ್ ಲೈಫ್ ಇನ್ಶೂರೆನ್ಸ್ ವ್ಯಕ್ತಿಯ ಜೀವಿತಾವಧಿಗೆ ಕವರೇಜ್ ಒದಗಿಸುತ್ತದೆ. ಆದರೆ, ಈ ಇನ್ಶೂರೆನ್ಸ್ ಪಾಲಿಸಿಗಳು ಟರ್ಮ್ ಲೈಫ್ ಇನ್ಶೂರೆನ್ಸ್ ಪಾಲಿಸಿಗಳಿಗಿಂತ ದುಬಾರಿ. ಬೆಲೆ ಏರಿಕೆ ಕಾರಣದಿಂದ ಹೋಲ್ ಲೈಫ್ ಇನ್ಶೂರೆನ್ಸ್‌ನಲ್ಲಿ ಸಿಗುವ ಕ್ಲೇಮು ಬೆನಿಫಿಟ್ ಕಾಲಕ್ರಮೇಣ ಮೌಲ್ಯ ಕಳೆದುಕೊಳ್ಳುತ್ತಾ ಹೋಗುತ್ತದೆ.

ಅಲ್ಲದೆ, ವಯಸ್ಸಾಗುತ್ತಾ ಸಾಗಿದಂತೆ ವ್ಯಕ್ತಿಯ ಹಣಕಾಸಿನ ಜವಾಬ್ದಾರಿಗಳು ಕಮ್ಮಿಯಾಗುತ್ತಾ ಹೋಗುತ್ತವೆ. ಆಗ ಜೀವಿತಾವಧಿ ಕವರೇಜ್ ಕೂಡ ಅಗತ್ಯವಿರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಹೋಲ್ ಲೈಫ್ ಇನ್ಶೂರೆನ್ಸ್ ದೀರ್ಘಾವಧಿಯಲ್ಲಿ ಪಾಲಿಸಿದಾರನಿಗೆ ಅಷ್ಟು ಅನುಕೂಲ ಒದಗಿಸುವುದಿಲ್ಲ.

* ಕಣ್ಮುಚ್ಚಿಕೊಂಡು ಎನ್ಎಫ್ಒನಲ್ಲಿ ಹೂಡಿಕೆ ಬೇಡ: ಮ್ಯೂಚುವಲ್ ಫಂಡ್ ಕಂಪನಿಗಳು (ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು) ಹೊಸದಾಗಿ ಆರಂಭಿಸುವ ಮ್ಯೂಚುವಲ್ ಫಂಡ್‌ಗಳನ್ನು ನ್ಯೂ ಫಂಡ್ ಆಫರ್ (ಎನ್ಎಫ್ಒ) ಎಂದು ಕರೆಯಲಾಗುತ್ತದೆ. ಈ ಎನ್ಎಫ್ಒಗಳಿಗೆ ಸಾಕಷ್ಟು ಮಾರ್ಕೆಟಿಂಗ್ ಕೂಡ ಮಾಡಲಾಗಿರುತ್ತದೆ.

ಎನ್ಎಫ್ಒಗಳಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಸಿಗುತ್ತದೆ ಎಂದು ಬಿಂಬಿಸಲಾಗುತ್ತದೆ. ಆದರೆ, ಎನ್ಎಫ್ಒಗಳು ಹೊಸ ಮ್ಯೂಚುವಲ್ ಫಂಡ್ ಹೂಡಿಕೆಗಳಾಗಿವೆ. ಇದರಿಂದ ಈ ಹಿಂದೆ ಅವು ಎಷ್ಟು ಲಾಭ ಕೊಟ್ಟಿವೆ ಎಂದು ನೋಡಲು ಸಾಧ್ಯವಿಲ್ಲ. ಮುಂದೆ ಬರುವ ಲಾಭಾಂಶ ಹೇಗಿರಬಹುದು ಎಂದು ಅಂದಾಜು ಮಾಡಲೂ ಸಾಧ್ಯವಾಗುವುದಿಲ್ಲ. ಎನ್ಎಫ್ಒಗಳ ಎನ್ಎವಿ (ನೆಟ್ ಆಸೆಟ್ ವ್ಯಾಲ್ಯೂ) ಆಕರ್ಷಕವಾಗಿರುತ್ತದೆ ಎನ್ನುವುದು ನಿಜ. ಆದರೆ, ಎನ್ಎವಿ ನಿರ್ದಿಷ್ಟ ಫಂಡ್ ಇಂತಿಷ್ಟೇ ಲಾಭ ಕೊಡುತ್ತದೆ ಎಂಬ ಖಾತರಿ ಒದಗಿಸುವುದಿಲ್ಲ. ಹಾಗಾಗಿ, ಎನ್ಎಫ್ಒ ಹೂಡಿಕೆಗಳ ಹಿಂದೆ ಕಣ್ಣು ಮುಚ್ಚಿಕೊಂಡು ಓಡಬೇಡಿ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಎರಡನೇ ವಾರವೂ ಕುಸಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರವೂ ಕುಸಿತ ಕಂಡಿವೆ. 76,619 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.98ರಷ್ಟು ಇಳಿಕೆಯಾಗಿದೆ. 23,203 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 0.97ರಷ್ಟು ತಗ್ಗಿದೆ.

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಅಧಿಕಾರ ಸ್ವೀಕರಿಸುವುದು, ಕಂಪನಿಗಳ ಮೂರನೇ ತ್ರೈಮಾಸಿಕ ಫಲಿತಾಂಶದಲ್ಲಿ ಸಾಧಾರಣ ಲಾಭದ ನಿರೀಕ್ಷೆ, ಅಮೆರಿಕದ ಡಾಲರ್ ಮತ್ತು ಬಾಂಡ್ ಮೌಲ್ಯ ಹೆಚ್ಚಳ, ವಿದೇಶಿ ಹೂಡಿಕೆದಾರರಿಂದ ಮಾರಾಟದ ಒತ್ತಡ, ರೂಪಾಯಿ ಮೌಲ್ಯ ಕುಸಿತ ಸೇರಿ ಹಲವು ಅಂಶಗಳು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಐ.ಟಿ ಶೇ 5.78, ರಿಯಲ್ ಎಸ್ಟೇಟ್ ಶೇ 2.5, ಮಾಧ್ಯಮ ಶೇ 2.36, ಎಫ್ಎಂಸಿಜಿ ಶೇ 2.31, ಫಾರ್ಮಾ ಶೇ 1.43, ಆಟೊ ಶೇ 0.98, ಫೈನಾನ್ಸ್ ಶೇ 0.54 ಮತ್ತು ಬ್ಯಾಂಕ್ ಶೇ 0.4ರಷ್ಟು ಕುಸಿದಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.43, ಲೋಹ
ಶೇ 3.13, ಎನರ್ಜಿ ಶೇ 2.79, ಅನಿಲ ಮತ್ತು ತೈಲ ಸೂಚ್ಯಂಕ ಶೇ 1.41ರಷ್ಟು ಗಳಿಸಿಕೊಂಡಿವೆ.

ಇಳಿಕೆ– ಗಳಿಕೆ: ವಾರದ ಅವಧಿಯನ್ನು ಗಣನೆಗೆ ತೆಗೆದುಕೊಂಡಾಗ ನಿಫ್ಟಿಯಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 10.31, ಇನ್ಫೊಸಿಸ್ ಶೇ 7.6, ವಿಪ್ರೊ ಶೇ 6.27, ಟ್ರೆಂಟ್ ಶೇ 5.8, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 5.51, ಎಕ್ಸಿಸ್ ಬ್ಯಾಂಕ್ ಶೇ 4.68, ಡಾ.ರೆಡ್ಡೀಸ್ ಶೇ  3.35, ಟಿಸಿಎಸ್ ಶೇ 3.31, ಹಿಂದುಸ್ತಾನ್ ಯುನಿಲಿವರ್ ಶೇ 3.28, ಅಪೋಲೊ ಹಾಸ್ಪಿಟಲ್ಸ್ ಶೇ 3.17, ಟೆಕ್ ಮಹೀಂದ್ರ ಶೇ 2.81, ಏಷ್ಯನ್ ಪೇಂಟ್ಸ್ ಶೇ 2.72ರಷ್ಟು ಕುಸಿದಿವೆ.

ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 7.23, ಎನ್‌ಟಿಪಿಸಿ ಶೇ 5.81, ಎಚ್‌ಡಿಎಫ್‌ಸಿ ಲೈಫ್ ಶೇ 5.51, ಕೋಲ್ ಇಂಡಿಯಾ ಶೇ 5.4, ರಿಲಯನ್ಸ್ ಇಂಡಸ್ಟ್ರೀಸ್ ಶೇ 4.68, ಅದಾನಿ ಪೋರ್ಟ್ಸ್ ಶೇ 4.57, ಮಾರುತಿ ಸುಜುಕಿ ಶೇ 4.11, ಎಸ್‌ಬಿಐ ಲೈಫ್ ಶೇ 4.11, ಭಾರತ್ ಎಲೆಕ್ಟ್ರಾನಿಕ್ಸ್ 4.04, ಇಂಡಸ್‌ಇಂಡ್ ಬ್ಯಾಂಕ್ ಶೇ 3.76, ಟಾಟಾ ಸ್ಟೀಲ್
ಶೇ 2.13 ಮತ್ತು ಎಸ್‌ಬಿಐ ಶೇ 2.11ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಜೊಮಾಟೊ, ಪೇಟಿಎಂ, ಐಆರ್‌ಎಫ್‌ಸಿ, ಡಿಕ್ಸಾನ್ ಟೆಕ್ನಾಲಜೀಸ್, ಐಡಿಬಿಐ ಬ್ಯಾಂಕ್, ಟಾಟಾ ಟೆಕ್ನಾಲಜೀಸ್, ಕೆಇಐ ಇಂಡಸ್ಟ್ರೀಸ್, ಐಸಿಐಸಿಐ ಪ್ರೂಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ, ಹಿಂದುಸ್ತಾನ್ ಯುನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್, ಪಿಡಿಲೈಟ್ ಇಂಡಸ್ಟ್ರೀಸ್, ಪಾಲಿಕ್ಯಾಬ್ ಇಂಡಿಯಾ, ಎಚ್‌ಪಿಸಿಎಲ್, ಬಿಪಿಸಿಎಲ್, ಅಲ್ಟ್ರಾಟೆಕ್ ಸಿಮೆಂಟ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಜೆಕೆ ಸಿಮೆಂಟ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.