ADVERTISEMENT

ವಾಹನ ವಿಮೆ ಇನ್ನಷ್ಟು ದುಬಾರಿ?

ಕ್ಲಿಯೋನ್ ಡಿಸೋಜ
Published 16 ಸೆಪ್ಟೆಂಬರ್ 2019, 3:07 IST
Last Updated 16 ಸೆಪ್ಟೆಂಬರ್ 2019, 3:07 IST
   

ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ದಂಡದ ‘ಹೊರೆ’ಯ ಜತೆಗೆ ಇನ್ಶುರೆನ್ಸ್‌ ಪ್ರೀಮಿಯಂನ ‘ಭಾರ’ವನ್ನೂ ಹೆಚ್ಚಿಸಲು ‘ಐಆರ್‌ಡಿಎಐ’ (ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಸೆಪ್ಟೆಂಬರ್ 6 ರಂದು 9 ಮಂದಿ ತಜ್ಞರ ಸಮಿತಿಯನ್ನು ರಚಿಸಿದೆ. ಹೊಸ ನಿಯಮ ಜಾರಿಗೆ ಬಂದಲ್ಲಿ ಸಣ್ಣ ಪುಟ್ಟ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದರೂ ಅದರ ನೇರ ಪರಿಣಾಮ ವಾಹನದ ಇನ್ಶುರೆನ್ಸ್ ಪ್ರೀಮಿಯಂ ಮೇಲೆ ಆಗಲಿದೆ.

ಕ್ಲಿಯೋನ್‌ ಡಿಸೋಜ

ಸುಗಮ ಸಂಚಾರಕ್ಕೆ ಇನ್ಶುರೆನ್ಸ್‌ ಅಸ್ತ್ರ: ಸಂಚಾರಿ ನಿಯಮ ಉಲ್ಲಂಘನೆಗೂ, ವೆಹಿಕಲ್ ಇನ್ಶುರೆನ್ಸ್‌ ಪ್ರೀಮಿಯಂಗೂ ಎತ್ತಣಿಂದೆತ್ತ ಸಂಬಂಧ ಅಂತ ನೀವು ಕೇಳಬಹುದು. ಆದರೆ, ಸಂಚಾರಿ ನಿಯಮ ಪಾಲನೆ ಜತೆ ವಾಹನದ ಇನ್ಶುರೆನ್ಸ್‌ ಪ್ರೀಮಿಯಂ ಅನ್ನು ತಳುಕು ಹಾಕುವುದರ ಹಿಂದೆ ಪಕ್ಕಾ ಲೆಕ್ಕಾಚಾರವಿದೆ.

ಉತ್ತಮ ವಾಹನ ಚಾಲನಾ ಕ್ರಮಗಳನ್ನು ಪ್ರೋತ್ಸಾಹಿಸಿ, ಸಂಚಾರ ನಿಯಮ ಉಲ್ಲಂಘಿಸುವ ಚಾಲನೆಯನ್ನು ತಡೆಯಲು ಈ ರೀತಿಯ ಕ್ರಮಕ್ಕೆ ಐಆರ್‌ಡಿಎಐ ಮುಂದಾಗಿದೆ. ಇಲ್ಲಿಯ ತನಕ ಇನ್ಶುರೆನ್ಸ್‌ ಪ್ರೀಮಿಯಂ ನಿಗದಿ ಮಾಡಲು ವಾಹನದ ತಯಾರಿಕಾ ವರ್ಷ ಮತ್ತು ಮಾಡೆಲ್ ಅನ್ನು ಪರಿಗಣಿಸಲಾಗುತ್ತಿತ್ತು. ಆದರೆ, ಹೊಸ ನಿಯಮ ಜಾರಿಗೆ ಬಂದರೆ ಚಾಲನಾ ಹವ್ಯಾಸಗಳು ಕೂಡ ಪ್ರಮುಖ ಮಾನದಂಡವಾಗಲಿವೆ.

ADVERTISEMENT

ಎರಡು ತಿಂಗಳಲ್ಲಿ ವರದಿ: ದೇಶದ ಮಹಾನಗರಗಳಲ್ಲಿ ತಂತ್ರಜ್ಞಾನ ಆಧಾರಿತ ಸಂಚಾರ ನಿಯಂತ್ರಣ ವ್ಯವಸ್ಥೆಯಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕ್ಯಾಮೆರಾ ಕಣ್ಗಾವಲು ಬಳಸಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಈ ದಂಡ ಕಟ್ಟಿರುವ ಮಾಹಿತಿ ಬಳಸಿಕೊಂಡು ವಾಹನಗಳ ಪ್ರೀಮಿಯಂ ನಿಗದಿ ಮಾಡುವ ಬಗ್ಗೆ ಅಧ್ಯಯನ ನಡೆಯಲಿದೆ.

ಜಗತ್ತಿನ ಪ್ರಮುಖ ನಗರಗಳಲ್ಲಿ ಇರುವ ವಾಹನ ವಿಮೆ ನಿಗದಿ ಮಾನದಂಡಗಳನ್ನು ತಜ್ಞರ ಸಮಿತಿ ಪರಾಮರ್ಶಿಸಲಿದ್ದು ನಮ್ಮ ದೇಶಕ್ಕೆ ಹೊಂದುವಂತಹ ವ್ಯವಸ್ಥೆಯನ್ನು ಶಿಫಾರಸು ಮಾಡಲಿದೆ. ತಜ್ಞರ ಸಮಿತಿ ವರದಿಯಲ್ಲಿ ಯೋಜನೆಯ ಚೌಕಟ್ಟು, ಅನುಷ್ಠಾನ ಮತ್ತಿತರ ಮಾಹಿತಿ ಇರಲಿದೆ. ಸಮಿತಿ ವರದಿಯ ಬಳಿಕ, ದೆಹಲಿಯಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬರುವ ನಿರೀಕ್ಷೆಯಿದೆ.

ವಾಹನ ಸವಾರರ ಪ್ರತಿರೋಧ: ಈ ಯೋಜನೆ ಉತ್ತಮ ಚಿಂತನೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ವಾಹನ ಸವಾರರು ಈ ರೀತಿಯ ಯೋಜನೆಗಳಿಗೆ ಆರಂಭಿಕ ಹಂತದಲ್ಲಿ ಪ್ರತಿರೋಧ ತೋರುತ್ತಾರೆ.

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡದ ಪ್ರಮಾಣವನ್ನು ಕೆಲ ದಿನಗಳ ಹಿಂದೆ ಹೆಚ್ಚಿಸಲಾಗಿತ್ತು. ಇದಕ್ಕೆ ದೇಶದಾದ್ಯಂತ ಪ್ರತಿರೋಧ ವ್ಯಕ್ತವಾಯಿತು. ಮೊದಲು ರಸ್ತೆಗಳನ್ನು ಸುಧಾರಿಸಿ, ನಂತರದಲ್ಲಿ ದುಬಾರಿ ದಂಡದ ಬಗ್ಗೆ ಯೋಚಿಸಿ ಎನ್ನುವ ಧ್ವನಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು.

ಈ ಒತ್ತಡಕ್ಕೆ ಮಣಿದ ಹಲವು ರಾಜ್ಯಗಳು ದಂಡದ ಪ್ರಮಾಣವನ್ನು ತಗ್ಗಿಸಲು ಮುಂದಾಗಿವೆ. ಇದೇ ರೀತಿಯ ಸಾಧ್ಯತೆ ಸಂಚಾರಿ ನಿಯಮಗಳ ಆಧಾರದಲ್ಲಿ ಇನ್ಶುರೆನ್ಸ್‌ ಪ್ರೀಮಿಯಂ ನಿಗದಿ ಮಾಡುವ ಯೋಚನೆಯಲ್ಲೂ ಇದೆ. ಆದರೆ, ಈ ರೀತಿಯ ವೈಜ್ಞಾನಿಕ ಯೋಜನೆಗಳು ನೆಲಕಚ್ಚಿದರೆ ದೇಶದ ಸಂಚಾರ ವ್ಯವಸ್ಥೆ ಸುಧಾರಿಸುವುದು ಕಷ್ಟ ಎನ್ನುವುದು ಕಟು ವಾಸ್ತವ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.