ADVERTISEMENT

ಕ್ರೆಡಿಟ್ ಅಂಕ ಚೆನ್ನಾಗಿದ್ದವನೇ ಜಾಣ!

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 20:59 IST
Last Updated 23 ಜುಲೈ 2025, 20:59 IST
   

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ವೃತ್ತಾಧಿಕಾರಿ (ಸಿಬಿಒ) ಹುದ್ದೆಗೆ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿಕೊಂಡಿದ್ದನ್ನು ಈಚೆಗೆ ರದ್ದು ಮಾಡಿತು. ಈ ವ್ಯಕ್ತಿಯ ಕ್ರೆಡಿಟ್ ಅಂಕವು ಚೆನ್ನಾಗಿ ಇರಲಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್‌ ಈ ತೀರ್ಮಾನ ತೆಗೆದುಕೊಂಡಿತು. ಆದರೆ, ಬ್ಯಾಂಕ್‌ನ ಈ ತೀರ್ಮಾನವನ್ನು ಕೆಲಸ ಕಳೆದುಕೊಂಡ ವ್ಯಕ್ತಿಯು ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ತಾನು ಎಲ್ಲ ಬಾಕಿ ಸಾಲಗಳನ್ನು ಮರುಪಾವತಿ ಮಾಡಿರುವುದಾಗಿ, ಕ್ರೆಡಿಟ್ ಕಾರ್ಟ್‌ ಬಿಲ್‌ ಮೊತ್ತವನ್ನು ಪಾವತಿ ಮಾಡಿರುವುದಾಗಿ, ತನ್ನನ್ನು ಯಾವುದೇ ಬ್ಯಾಂಕ್‌ ಸುಸ್ತಿದಾರ ಎಂದು ಘೋಷಣೆ ಮಾಡಿಲ್ಲ ಎಂಬುದಾಗಿ ಅರ್ಜಿದಾರ ನ್ಯಾಯಾಲಯಕ್ಕೆ ವಿವರಿಸಿದರು.

ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌, ಎಸ್‌ಬಿಐ ತೀರ್ಮಾನವನ್ನು ಎತ್ತಿಹಿಡಿಯಿತು. ಅರ್ಜಿಯನ್ನು ವಜಾಗೊಳಿಸಿತು. ಹಣಕಾಸಿನ ವಿಚಾರದಲ್ಲಿ ಶಿಸ್ತು ಕಾಯ್ದುಕೊಳ್ಳದ ವ್ಯಕ್ತಿಯನ್ನು ಸಾರ್ವಜನಿಕರ ಹಣವನ್ನು ನಿರ್ವಹಿಸುವ ಕೆಲಸಗಳಲ್ಲಿ ನಂಬಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತು. ಇಂದಿನ ಜಗತ್ತಿನಲ್ಲಿ ಕ್ರೆಡಿಟ್ ಅಂಕವು ವ್ಯಕ್ತಿಯು ಹಣಕಾಸಿನ ವಿಚಾರದಲ್ಲಿ ಎಷ್ಟರಮಟ್ಟಿಗೆ ಒಳ್ಳೆಯ ಹೆಸರು ಹೊಂದಿದ್ದಾನೆ ಎಂಬುದನ್ನು ತಿಳಿಸುತ್ತದೆ. ಅಲ್ಲದೆ, ಸಾಲಗಳನ್ನು ನಿಭಾಯಿಸಲು ಆತ ಎಷ್ಟರಮಟ್ಟಿಗೆ ಸಮರ್ಥ ಎಂಬುದನ್ನೂ ಅದು ಹೇಳುತ್ತದೆ.

ವ್ಯಕ್ತಿಯು ಗೃಹಸಾಲಕ್ಕೆ, ಚಿನ್ನದ ಮೇಲಿನ ಸಾಲಕ್ಕೆ, ವಾಹನ ಸಾಲಕ್ಕೆ, ವೈಯಕ್ತಿಕ ಸಾಲಕ್ಕೆ ಅಥವಾ ಕ್ರೆಡಿಟ್ ಕಾರ್ಡ್ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದಾಗ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಕಿರುಸಾಲ ಕಂಪನಿಗಳು, ಗೃಹಸಾಲ ಕಂಪನಿಗಳು ಹಾಗೂ ಫಿನ್‌ಟೆಕ್‌ ಕಂಪನಿಗಳು ಮೊದಲು ಗಮನಿಸುವುದು ಕ್ರೆಡಿಟ್ ಅಂಕಗಳನ್ನು. ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಸಾಮರ್ಥ್ಯ ಹೇಗಿದೆ ಎಂಬುದನ್ನು ಪರಿಶೀಲಿಸಲು ಹಾಗೂ ಸಾಲ ನೀಡುವ ಬಗ್ಗೆ ತೀರ್ಮಾನಿಸಲು ಅವು ಈ ಅಂಕವನ್ನು ಗಮನಿಸುತ್ತವೆ. ಬ್ಯಾಂಕುಗಳು ಹಾಗೂ ಸಾಲ ನೀಡುವ ಕಂಪನಿಗಳು ಮಾತ್ರವೇ ಅಲ್ಲದೆ, ಇತರ ಕೆಲವು ಕಂಪನಿಗಳೂ ಕ್ರೆಡಿಟ್ ಅಂಕವನ್ನು ಪರಿಶೀಲಿಸುತ್ತವೆ.

ADVERTISEMENT

ಕೆಲವು ಬಗೆಯ ವಿಮಾ ಪಾಲಿಸಿಗಳ ಪ್ರೀಮಿಯಂ ಮೊತ್ತವನ್ನು ತೀರ್ಮಾನಿಸುವ ಸಂದರ್ಭದಲ್ಲಿ ವಿಮಾ ಕಂಪನಿಗಳು ಕೂಡ ಕ್ರೆಡಿಟ್ ಅಂಕವನ್ನು ಪರಿಶೀಲಿಸುತ್ತಿವೆ. ಮನೆ ಅಥವಾ ಕಚೇರಿ ಸ್ಥಳವನ್ನು ಬಾಡಿಗೆ ಆಧಾರದಲ್ಲಿ ಕೊಡುವವರು ಕೂಡ ಕ್ರೆಡಿಟ್ ವರದಿಯನ್ನು ಕೇಳುವುದಿದೆ. ಬಾಡಿಗೆಗೆ ಪಡೆಯುವ ವ್ಯಕ್ತಿಗೆ ಬಾಡಿಗೆ ಮೊತ್ತವನ್ನು ಸಕಾಲದಲ್ಲಿ ಪಾವತಿಸುವ ಸಾಮರ್ಥ್ಯ ಇದೆಯೇ ಎಂಬುದನ್ನು ಅರಿಯಲು ಅವರು ಈ ವರದಿಯನ್ನು ಗಮನಿಸುತ್ತಾರೆ. ಚುಟುಕಾಗಿ ಹೇಳಬೇಕು ಎಂದಾದರೆ ಈ ಅಂಕವು ವ್ಯಕ್ತಿಯ ಸಾಲಗಳು ಹಾಗೂ ಅವುಗಳ ಮರುಪಾವತಿಯ ಒಂದು ಚಿತ್ರಣ ನೀಡುತ್ತವೆ.

ಹೀಗಾಗಿ ಕ್ರೆಡಿಟ್ ಅಂಕಗಳ ಮಹತ್ವ ಹಾಗೂ ಅವುಗಳ ಅಗತ್ಯವನ್ನು ಅರ್ಥ ಮಾಡಿಕೊಳ್ಳುವುದು ಮಹತ್ವದ್ದಾಗುತ್ತದೆ. ಅಲ್ಲದೆ, ಒಳ್ಳೆಯ ಕ್ರೆಡಿಟ್ ಅಂಕ ಅಂದರೆ ಏನೆಂಬುದನ್ನೂ ತಿಳಿಯುವುದು ಮುಖ್ಯವಾಗುತ್ತದೆ.

ಸಾಲಗಾರರಿಗೆ ಅಂಕ ಯಾರು ನೀಡುತ್ತಾರೆ?

ಭಾರತದಲ್ಲಿ ಪ್ರಮುಖವಾಗಿ ನಾಲ್ಕು ಸಂಸ್ಥೆಗಳು ಈ ಅಂಕವನ್ನು ನೀಡುತ್ತವೆ. ಟ್ರಾನ್ಸ್‌ಯೂನಿಯನ್ ಸಿಬಿಲ್ ಎಕ್ಸ್‌ಪೀರಿಯನ್ ಈಕ್ವಿಫಾಕ್ಸ್ ಮತ್ತು ಸಿಆರ್‌ಐಎಫ್‌ ಹೈಮಾರ್ಕ್‌ ಆ ಸಂಸ್ಥೆಗಳು. ಸಿಬಿಲ್‌ ಸಂಸ್ಥೆಯು ಅದೆಷ್ಟು ಜನಪ್ರಿಯವಾಗಿದೆ ಎಂದರೆ ಕ್ರೆಡಿಟ್ ಅಂಕಗಳನ್ನು ಈ ಸಂಸ್ಥೆಯ ಹೆಸರಿನ ಜೊತೆಯೇ ಗುರುತಿಸಲಾಗುತ್ತಿದೆ! ಈ ಸಂಸ್ಥೆಗಳು ಬ್ಯಾಂಕುಗಳು ಎನ್‌ಬಿಎಫ್‌ಸಿಗಳಿಂದ ಸಾಲಕ್ಕೆ ಸಂಬಂಧಿಸಿದ ವಿವರಗಳನ್ನು ಪಡೆದು ವ್ಯಕ್ತಿಗಳಿಗೆ ಅಂಕ ನೀಡುತ್ತವೆ. 

ಎಷ್ಟಿದ್ದರೆ ಒಳ್ಳೆಯ ಅಂಕ?

ಇದಕ್ಕೆ ನಿರ್ದಿಷ್ಟವಾದ ಉತ್ತರ ಇಲ್ಲ. ಕ್ರೆಡಿಟ್ ಅಂಕಗಳು ಸಾಮಾನ್ಯವಾಗಿ 300ರಿಂದ 900ರ ನಡುವೆ ಇರುತ್ತವೆ. ಈ ಅಂಕಗಳು ವ್ಯಕ್ತಿಯ ಸಾಲ ಪಡೆಯುವ ಅರ್ಹತೆಯನ್ನು ಹೇಳುತ್ತವೆ.

* 750ಕ್ಕಿಂತ ಹೆಚ್ಚಿನ ಅಂಕ ಇರುವುದು ಅತ್ಯುತ್ತಮ ಎಂದು ಪರಿಗಣಿತವಾಗಿದೆ. ಈ ಮಟ್ಟದ ಅಂಕ ಹೊಂದಿರುವವರ ಮರುಪಾವತಿ ಇತಿಹಾಸ ಅತ್ಯುತ್ತಮವಾಗಿರುತ್ತದೆ ಇವರಿಗೆ ಸಾಲ ನೀಡುವಲ್ಲಿ ಹೆಚ್ಚಿನ ಅಪಾಯ ಇರುವುದಿಲ್ಲ. ಈ ಮಟ್ಟದ ಅಂಕ ಹೊಂದಿರುವವರು ಸಾಲದ ಮೇಲಿನ ಬಡ್ಡಿ ದರದಲ್ಲಿ ವಿನಾಯಿತಿ ಕೇಳಬಹುದು ಹೆಚ್ಚಿನ ಮೊತ್ತದ ಸಾಲ ಕೋರಬಹುದು.

* ಕ್ರೆಡಿಟ್ ಅಂಕವು 700ರಿಂದ 749ರ ನಡುವೆ ಇದ್ದರೆ ಅದನ್ನು ಒಳ್ಳೆಯ ಅಂಕ ಎಂದು ಪರಿಗಣಿಸಲಾಗುತ್ತದೆ. ಈ ಮಟ್ಟದ ಅಂಕ ಇರುವವರಿಗೆ ಅನುಕೂಲಕರ ಷರತ್ತುಗಳೊಂದಿಗೆ ಸಾಲ ಸಿಗುತ್ತದೆ. * 650ರಿಂದ 699ರ ನಡುವೆ ಕ್ರೆಡಿಟ್ ಅಂಕ ಇದ್ದರೆ ಅದನ್ನು ಸಾಮಾನ್ಯ ಮಟ್ಟ ಎಂದು ಪರಿಗಣಿಸಲಾಗುತ್ತದೆ. ಈ ಮಟ್ಟದ ಅಂಕ ಹೊಂದಿರುವವರು ಸಾಲ ಪಡೆಯಲು ಅರ್ಹರಾಗಿರುತ್ತಾರಾದರೂ ಅವರಿಗೆ ಹೆಚ್ಚಿನ ಅನುಕೂಲಗಳು ಸಿಗುವುದಿಲ್ಲ. ಬಡ್ಡಿಯ ದರವೂ ಹೆಚ್ಚಿರಬಹುದು. ಇವರು ತಮ್ಮ ಕ್ರೆಡಿಟ್ ಅಂಕವನ್ನು ಸುಧಾರಿಸಿಕೊಳ್ಳುವ ಅಗತ್ಯ ಇರುತ್ತದೆ.

* 550ರಿಂದ 649ರವರೆಗಿನ ಮಟ್ಟದಲ್ಲಿ ಅಂಕ ಇದ್ದರೆ ಅದನ್ನು ಕಳಪೆ ಎಂದು ಪರಿಗಣಿಸಲಾಗುತ್ತದೆ. ಇಷ್ಟು ಅಂಕ ಹೊಂದಿರುವವರು ಸಾಲ ಕೋರಿ ಸಲ್ಲಿಸುವ ಅರ್ಜಿಗೆ ಅನುಮೋದನೆ ಸಿಗುವುದು ಕಷ್ಟ. ಒಂದುವೇಳೆ ಅನುಮೋದನೆ ದೊರೆತರೂ ಹೆಚ್ಚಿನ ಬಡ್ಡಿ ದರ ನಿಗದಿ ಮಾಡಬಹುದು. ಈ ಮಟ್ಟದ ಅಂಕ ಹೊಂದಿರುವವರು ಅದನ್ನು ಉತ್ತಮಪಡಿಸಿಕೊಳ್ಳಲು ಗಮನ ಕೊಡಬೇಕು.

* 550ಕ್ಕಿಂತ ಕಡಿಮೆ ಅಂಕ ಹೊಂದಿರುವವರ ಸಾಲದ ಅರ್ಜಿಯು ತಿರಸ್ಕೃತವಾಗುವ ಸಾಧ್ಯತೆ ಹೆಚ್ಚು. ಇಷ್ಟು ಅಂಕ ಹೊಂದಿರುವವರ ಸಾಲ ಮರುಪಾವತಿ ಇತಿಹಾಸ ಚೆನ್ನಾಗಿಲ್ಲ ಎಂದು ಅರ್ಥ. 300ಕ್ಕಿಂತ ಕಡಿಮೆ ಅಂಕ ಹೊಂದಿದ್ದರೆ ಅವರು ಸಾಲದ ಕಂತುಗಳನ್ನು ಸರಿಯಾಗಿ ಕಟ್ಟಿಲ್ಲ ಸಾಲವನ್ನು ವಿಪರೀತವಾಗಿ ಬಳಸಿಕೊಂಡಿದ್ದಾರೆ ಎಂದು ಅರ್ಥ.

ಅಂಕವನ್ನು ಹೇಗೆ ಸುಧಾರಿಸಿಕೊಳ್ಳಬಹುದು?

ಕ್ರೆಡಿಟ್ ಅಂಕ ನೀಡುವ ಸಂಸ್ಥೆಗಳು ಸಾಲದಾತ ಕಂಪನಿಗಳು ತಮಗೆ ಕಳುಹಿಸುವ ಮಾಹಿತಿಯನ್ನು ಮಾತ್ರವೇ ನೆಚ್ಚಿಕೊಂಡಿರುತ್ತವೆ. ಈ ಸಂಸ್ಥೆಗಳಿಗೆ ವ್ಯಕ್ತಿಗಳ ಸಾಲದ ಮರುಪಾವತಿ ಇತಿಹಾಸವನ್ನು ಅರಿಯಲು ಬೇರೆ ಯಾವುದೇ ಮಾರ್ಗ ಇರುವುದಿಲ್ಲ. ಸಾಲದಾತ ಕಂಪನಿಗಳ ಕಡೆಯಿಂದ ಆಗುವ ಯಾವುದೇ ಲೋಪವು ಕ್ರೆಡಿಟ್ ಅಂಕದ ಮೇಲೆ ಪರಿಣಾಮ ಬೀರಬಹುದು.

ಸಾಲ ಪಡೆದ ವ್ಯಕ್ತಿಯು ಎಲ್ಲ ಕಂತುಗಳನ್ನು ಸರಿಯಾಗಿ ಪಾವತಿ ಮಾಡಿದ್ದರೂ ಸಾಲದಾತ ಕಂಪನಿಯ ಕಡೆಯಿಂದ ತಪ್ಪು ವರದಿ ಸಲ್ಲಿಕೆಯಾದರೆ ಅಂಕಗಳು ಕಡಿಮೆ ಆಗುತ್ತವೆ. ನಾಲ್ಕೂ ಸಂಸ್ಥೆಗಳಿಂದ ಪ್ರತಿ ವರ್ಷ ತಲಾ ಒಂದು ವರದಿಯು ಉಚಿತವಾಗಿ ಸಿಗುವ ಕಾರಣ ಸಾಲ ಪಡೆದವರು ಕಾಲಕಾಲಕ್ಕೆ ವರದಿಯನ್ನು ಪರಿಶೀಲಿಸುತ್ತ ಇರಬೇಕು. ವರದಿಯಲ್ಲಿ ಯಾವುದೇ ಲೋಪಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಹಲವು ಸಾಲದಾತ ಕಂಪನಿಗಳಲ್ಲಿ ಸಾಲಕ್ಕಾಗಿ ಮತ್ತೆ ಮತ್ತೆ ವಿಚಾರಣೆ ನಡೆಸಿದ್ದರೆ ಅದು ಕೂಡ ಅಂಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ. ವರದಿಯಲ್ಲಿ ಲೋಪಗಳು ಇದ್ದರೆ ವರದಿ ಸಿದ್ಧಪಡಿಸಿದ ಸಂಸ್ಥೆಗೆ ಹಾಗೂ ಸಂಬಂಧಪಟ್ಟ ಸಾಲದಾತ ಕಂಪನಿಗೆ ಆ ಬಗ್ಗೆ ಒಂದು ಇ–ಮೇಲ್ ಕಳುಹಿಸಿಯೂ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಬ್ಯಾಂಕ್‌ಗಳು ನೀಡುವ ಎನ್‌ಒಸಿ ಸಾಲ ತೀರುವಳಿ ಆಗಿರುವ ಪತ್ರ ಹಾಗೂ ಬ್ಯಾಂಕ್‌ ವಹಿವಾಟಿನ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡರೆ ತಕರಾರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದು.

ನೀವು ಯಾರದಾದರೂ ಸಾಲಕ್ಕೆ ಜಾಮೀನುದಾರ ಆಗಿ ಸಹಿ ಮಾಡಿದ್ದರೆ ಅವರಿಂದ ಸಾಲ ಮರುಪಾವತಿ ಬಾಕಿ ಆಗಿಲ್ಲ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಿ. ಅವರು ಸಾಲವನ್ನು ಸರಿಯಾಗಿ ಹಿಂದಿರುಗಿಸದೆ ಇದ್ದರೆ ನಿಮ್ಮ ಕ್ರೆಡಿಟ್ ಅಂಕದ ಮೇಲೆ ಪರಿಣಾಮ ಉಂಟಾಗುತ್ತದೆ.

ಲೇಖಕ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನಲ್ಲಿ ಪ್ರಾಧ್ಯಾಪಕ ಹಾಗೂ ಸಿಎಫ್‌ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.