ADVERTISEMENT

ಹಣಕಾಸು ವಿಚಾರ: ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 19 ಅಕ್ಟೋಬರ್ 2021, 19:09 IST
Last Updated 19 ಅಕ್ಟೋಬರ್ 2021, 19:09 IST
ಪುರಾಣಿಕ್
ಪುರಾಣಿಕ್   

ಅಬ್ದುಲ್‌ ಖಾದರ್, ಹೈದರಾಬಾದ್

l ಪ್ರಶ್ನೆ: ನಾನು ಕರ್ನಾಟಕದವನು. ಸದ್ಯ ಹೈದರಾಬಾದ್‌ನಲ್ಲಿ ನೆಲೆಸಿದ್ದೇನೆ. ಬಹಳ ವರ್ಷಗಳಿಂದ ನಿಮ್ಮ ಅಂಕಣ ಓದುತ್ತಿದ್ದೇನೆ. ನನ್ನ ಪ್ರಶ್ನೆ: ನನಗೆ ಮೂವರು ಮಕ್ಕಳು. ನನ್ನ ಎಲ್‌ಐಸಿ ಪಾಲಿಸಿಗೆ ನನ್ನ ಹೆಂಡತಿಯನ್ನು ನಾಮನಿರ್ದೇಶನ ಮಾಡಿದ್ದೆ. ಅವಳು ಎರಡು ವರ್ಷಗಳ ಹಿಂದೆ ಮೃತಳಾದಳು. ನಾನು ಈ ವಿಚಾರವನ್ನು ಎಲ್‌ಐಸಿಗೆ ತಿಳಿಸಿಲ್ಲ. ನನ್ನ ನಂತರ ನನ್ನ ಮಕ್ಕಳಿಗೆ ಎಲ್‌ಐಸಿ ಹಣ ದೊರೆಯಬೇಕು. ಸಲಹೆ ನೀಡಿ.

ಉತ್ತರ: ನೀವು ನಿಮ್ಮ ಹೆಂಡತಿಯ ಮರಣ ಪತ್ರದ ನಕಲನ್ನು ಎಲ್‌ಐಸಿಗೆ ತಕ್ಷಣ ಕೊಟ್ಟು ನಿಮ್ಮ ಮಕ್ಕಳ ಪೈಕಿ ಒಬ್ಬರ ಹೆಸರಿನಲ್ಲಿ ಮರು ನಾಮನಿರ್ದೇಶನ ಮಾಡಿ. ಹೀಗೆ ಮಾಡದೇ ಇದ್ದರೆ ನಿಮ್ಮ ಕಾಲಾನಂತರ ಎಲ್‌ಐಸಿಯವರು ನಿಮ್ಮ ಮಕ್ಕಳಿಗೆ ಪಾಲಿಸಿ ಹಣ ಕೊಡುವುದಿಲ್ಲ. ಅವರು ವಾರಸುದಾರರ ಹಕ್ಕಿನ ಪತ್ರವನ್ನು ಕೋರ್ಟ್‌ನಲ್ಲಿ ಪಡೆಯಲು ನಿಮ್ಮ ಮಕ್ಕಳಿಗೆ ತಿಳಿಸುತ್ತಾರೆ. ಇದು ಸುಲಭದ ಕೆಲಸ ಅಲ್ಲ. ಜೊತೆಗೆ ಬಹಳಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಓರ್ವ ವ್ಯಕ್ತಿ ತನ್ನ ಹೂಡಿಕೆಗೆ ನಾಮನಿರ್ದೇಶನ ಮಾಡಿದ ನಂತರ ನಾಮನಿರ್ದೇಶನ ಇರುವವ್ಯಕ್ತಿ ಮೃತಪಟ್ಟಲ್ಲಿ, ತಕ್ಷಣ ಬೇರೊಬ್ಬರನ್ನು ಮರು ನಾಮನಿರ್ದೇಶನ ಮಾಡಲು ಮರೆಯಬಾರದು. ಇಂದು ಬ್ಯಾಂಕ್‌ಗಳಲ್ಲಿ ಹಾಗೂ ವಿಮಾ ಕಂಪನಿಗಳಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ವಾರಸುದಾರರು ಪಡೆಯಲಾಗದೆ ಪರದಾಡುತ್ತಿರುವುದನ್ನು ನೋಡುತ್ತಿದ್ದೇನೆ. ಓದುಗರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.

ADVERTISEMENT

***

ಮಂಜುಳಾ, ಹಾಸನ

l ಪ್ರಶ್ನೆ: ನಾನು ಐ.ಟಿ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತೇನೆ. ತಿಂಗಳ ಸಂಬಳ ₹ 76,000. ಎಲ್ಲಾ ಖರ್ಚು ಕಳೆದು ₹ 55 ಸಾವಿರ ಉಳಿಯುತ್ತದೆ. ವಯಸ್ಸು 23 ವರ್ಷ. ಅವಿವಾಹಿತೆ. ನನಗೆ ವಿಮೆ, ಠೇವಣಿ, ಮ್ಯೂಚುವಲ್‌ ಫಂಡ್‌, ಷೇರು ಮಾರುಕಟ್ಟೆ ಹಾಗೂ ತೆರಿಗೆ ವಿಚಾರದಲ್ಲಿ ಸಲಹೆ ನೀಡಿ.

ಉತ್ತರ: ನೀವು ಉಳಿಸಬಹುದಾದ ₹ 55 ಸಾವಿರದಲ್ಲಿ ₹ 5 ಸಾವಿರವನ್ನು ಉಳಿತಾಯ ಖಾತೆಯಲ್ಲಿ ಇಡುತ್ತಾ ಬನ್ನಿ. ಉಳಿದ ₹ 50 ಸಾವಿರವನ್ನು ಕ್ರಮವಾಗಿ ಜೀವ ವಿಮೆಯಲ್ಲಿ ₹ 5 ಸಾವಿರ, ಪಿಪಿಎಫ್‌ ₹ 5 ಸಾವಿರ, ಎನ್‌ಪಿಎಸ್‌ನಲ್ಲಿ ₹ 5 ಸಾವಿರ, ಮ್ಯೂಚುವಲ್ ಫಂಡ್‌ನಲ್ಲಿ ₹ 5 ಸಾವಿರ, ಬಂಗಾರದ ಸಲುವಾಗಿ ₹ 10 ಸಾವಿರ, ಮದುವೆ ಸಲುವಾಗಿ ₹ 20 ಸಾವಿರ ತಿಂಗಳಿಗೆ ಉಳಿಸಲು ಪ್ರಾರಂಭಿಸಿ. ಪಿಪಿಎಫ್‌ ಹಾಗೂ ಜೀವ ವಿಮೆ ಸೆಕ್ಷನ್‌ 80ಸಿ ಆಧಾರದ ಮೇಲೆ ಹಾಗೂ ಎನ್‌ಪಿಎಸ್‌ ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ತೆರಿಗೆ ಉಳಿಸಲು ಅನುಕೂಲ ಆಗುತ್ತದೆ. ಬಂಗಾರದ ಸಲುವಾಗಿ ಹಾಗೂ ಮದುವೆಯ ಸಲುವಾಗಿ ಉಳಿಸಲು ಹಣವನ್ನು ಆರ್‌.ಡಿ.ಯಲ್ಲಿ ತೊಡಗಿಸಿ. ಮ್ಯೂಚುವಲ್‌ ಫಂಡ್‌ನ ಇಂಡೆಕ್ಸ್‌ ಫಂಡ್‌ನಲ್ಲಿ ಎಸ್‌ಐಪಿ ಮಾಡಿ. ಷೇರು ಮಾರುಕಟ್ಟೆಯಲ್ಲಿ ತೊಡಗಿಸುವ ಮುನ್ನ ಡಿಮ್ಯಾಟ್‌ ಖಾತೆ ತೆರೆಯಿರಿ. ಇಲ್ಲಿ ನೀವು ಬ್ಲೂಚಿಪ್ ಕಂಪನಿಗಳ ಷೇರುಗಳನ್ನೇ ಕೊಳ್ಳಿರಿ. ಈ ಕ್ರಮಬದ್ಧವಾದ ಹೂಡಿಕೆಗಳು ಭವಿಷ್ಯದಲ್ಲಿ ತುಂಬಾ ಅನುಕೂಲ ಆಗುತ್ತವೆ. ಜೊತೆಗೆ ತೆರಿಗೆ ಉಳಿಸಲು ಕೂಡ ಸಹಾಯಕ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಕರೆ ಮಾಡಿ.

***

ಎಂ.ಆರ್‌. ನರಸಿಂಹಮೂರ್ತಿ, ವಿದ್ಯಾರಣ್ಯಪುರ, ಬೆಂಗಳೂರು

l ಪ್ರಶ್ನೆ: ನಾನು ಇದೇ ಡಿಸೆಂಬರ್‌ನಲ್ಲಿ ನಿವೃತ್ತನಾಗುತ್ತಿದ್ದೇನೆ. ನನಗೆ ಪಿಂಚಣಿ ಇಲ್ಲ. ನಿವೃತ್ತಿಯಿಂದ ಸುಮಾರು ₹ 42 ಲಕ್ಷ ಬರಬಹುದು. ಉಳಿಯಲು ಮನೆ ಇದೆ. ಒಬ್ಬಳೇ ಮಗಳು. ಅವಳಿಗೆ ಮದುವೆ ಆಗಿದೆ. ನನ್ನ ಹಣಕ್ಕೆ ಭದ್ರತೆ ಮುಖ್ಯ. ಬಡ್ಡಿಯಿಂದಲೇ ಜೀವಿಸಲು ಸರಿಯಾದ ಮಾರ್ಗದರ್ಶನ ನೀಡಿ.

ಉತ್ತರ: ನೀವು ಅಂಚೆ ಕಚೇರಿ ಹಿರಿಯ ನಾಗರಿಕ ಠೇವಣಿ ಹಾಗೂ ಎಲ್‌ಐಸಿಯವರ ವಯೋವಂದನಾ ಯೋಜನೆಗಳಲ್ಲಿ ತಲಾ ₹ 15 ಲಕ್ಷದಂತೆ (ಒಟ್ಟು ₹ 30 ಲಕ್ಷ) ತೊಡಗಿಸಿರಿ. ಅಂಚೆ ಕಚೇರಿಯಲ್ಲಿ ಮೂರು ತಿಂಗಳಿಗೊಮ್ಮೆ ಹಾಗೂ ಎಲ್‌ಐಸಿಯಲ್ಲಿ ಪ್ರತಿ ತಿಂಗಳೂ ಬಡ್ಡಿ ಕೊಡುತ್ತಾರೆ. ಬಡ್ಡಿದರ ಎರಡರಲ್ಲೂ ಶೇಕಡ 7.4ರಷ್ಟು ಇದೆ.

ಉಳಿದ ₹ 12 ಲಕ್ಷದಲ್ಲಿ ₹ 2 ಲಕ್ಷವನ್ನು ಅತೀ ಅವಶ್ಯಕತೆಗಳಿಗೆ ಎಂದು ಉಳಿತಾಯ ಖಾತೆಯಲ್ಲಿ ಇರಿಸಿ. ಇನ್ನುಳಿದ ₹ 10 ಲಕ್ಷ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ ಎಫ್‌.ಡಿ. ಮಾಡಿ. ಮೂರು ತಿಂಗಳಿಗೆ ಒಮ್ಮೆ ಬಡ್ಡಿ ಪಡೆಯಿರಿ. ಈ ಎಲ್ಲ ಹೂಡಿಕೆಗಳು ಭದ್ರವಾಗಿವೆ. ಕಮಿಷನ್‌, ಹೆಚ್ಚಿನ ಬಡ್ಡಿ ವರಮಾನ, ಉಡುಗೊರೆ ಆಸೆ ತೋರಿಸಿ ದಾರಿ ತಪ್ಪಿಸುವವರಿದ್ದಾರೆ, ಜಾಗ್ರತೆ. ನೀವು ಖಾತೆ ಹೊಂದಿದ ಬ್ಯಾಂಕ್‌ನಲ್ಲಿ ₹ 3 ಲಕ್ಷ ಮೊತ್ತದ ಆರೋಗ್ಯ ವಿಮೆಯನ್ನು ನೀವು, ನಿಮ್ಮ ಹೆಂಡತಿ ಸೇರಿ ಫ್ಲೋಟರ್‌ ಪಾಲಿಸಿ ಮಾಡಿರಿ. ವಾರ್ಷಿಕ ಪ್ರೀಮಿಯಂ ಮೊತ್ತ ₹ 6 ಸಾವಿರದಿಂಧ ₹ 8 ಸಾವಿರ ಇರಬಹುದು.ನಿಮ್ಮ ಸ್ಥಿರ ಆಸ್ತಿ–ಮನೆ ವಿಚಾರದಲ್ಲಿ ಉಯಿಲನ್ನು ಮಗಳ ಹೆಸರಿನಲ್ಲಿ ಬರೆಯಿರಿ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.