ADVERTISEMENT

ಹಣಕಾಸು: ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 10 ಆಗಸ್ಟ್ 2021, 19:32 IST
Last Updated 10 ಆಗಸ್ಟ್ 2021, 19:32 IST
ಪುರಾಣಿಕ್
ಪುರಾಣಿಕ್   

ಸ್ವಾಮಿನಾಥನ್,ಎಂ.ಜಿ. ರಸ್ತೆ, ಬೆಂಗಳೂರು

l ಪ್ರಶ್ನೆ: ನಾನು ನಿಮ್ಮ ಅಭಿಮಾನಿ. ಸದ್ಯದಲ್ಲಿಯೇ ನಿವೃತ್ತನಾಗುತ್ತಿದ್ದೇನೆ. ಸ್ವಂತ ಮನೆ ಇದೆ. ಪಿಂಚಣಿ ತಿಂಗಳಿಗೆ ಸುಮಾರು ₹ 48 ಸಾವಿರ. ನಿವೃತ್ತಿಯಿಂದ ಬರುವ ಮೊತ್ತ ಸುಮಾರು ₹ 75 ಲಕ್ಷ. ಈ ಮೊತ್ತಕ್ಕೆ ತೆರಿಗೆ ಇದೆಯೇ? ಸುರಕ್ಷಿತ ಹೂಡಿಕೆ ವಿಚಾರವಾಗಿ ತಿಳಿಸಿ.

ಉತ್ತರ: ನಿವೃತ್ತಿಯಿಂದ ನೀವು ಪಡೆಯುವ ಮೊತ್ತಕ್ಕೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಇದೆ.

ADVERTISEMENT

ವಿ.ಸೂ: ಕೆಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಿಗೆ ಮಾತ್ರ ರಜಾ ಸಂಬಳಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಇತರರ ಗರಿಷ್ಠ ಮಿತಿ ₹ 3 ಲಕ್ಷ.

ನಿಮಗೆ ಬರುವ ₹ 75 ಲಕ್ಷದಲ್ಲಿ, ₹ 15 ಲಕ್ಷ ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರ ಠೇವಣಿಯಲ್ಲಿ ಹಾಗೂ ₹ 15 ಲಕ್ಷ ಎಲ್‌.ಐ.ಸಿ.ಯ ವಯೋವಂದನಾ ಯೋಜನೆಯಲ್ಲಿ ಇರಿಸಿರಿ. ₹ 5 ಲಕ್ಷ ಉಳಿತಾಯ ಖಾತೆಯಲ್ಲಿ ಇರಿಸಿಕೊಳ್ಳಿ ಹಾಗೂ ಇನ್ನುಳಿದ ₹ 40 ಲಕ್ಷವನ್ನು ₹ 5 ಲಕ್ಷದಂತೆ ಠೇವಣಿಯಲ್ಲಿ ಇರಿಸಿ. ನೀವು ಹಾಗೂ ನಿಮ್ಮ ಹೆಂಡತಿ ಒಳಗೊಂಡು ₹ 5 ಲಕ್ಷದ ಆರೋಗ್ಯ ವಿಮೆಯನ್ನು ತಪ್ಪದೇ ಮಾಡಿ. ಫ್ಲೋಟರ್‌ ಪಾಲಿಸಿ ಮಾಡಿಸಿ. ಇದರಿಂದ ₹ 5 ಲಕ್ಷದ ಮಿತಿಯೊಳಗೆ ಇಬ್ಬರೂ ಸವಲತ್ತು ಪಡೆಯಬಹುದು.

***

ಕೃಷ್ಣರಾಜ್‌,ಊರುಬೇಡ

lಪ್ರಶ್ನೆ: ನನ್ನ ವಯಸ್ಸು 41 ವರ್ಷ. ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಪನ್ಯಾಸಕ. ತಿಂಗಳ ಸಂಬಳ ₹ 42 ಸಾವಿರ. ಒಬ್ಬಳು ಮಗಳು. ಅವಳ ವಯಸ್ಸು 5 ವರ್ಷ. ನನ್ನ ಉಳಿತಾಯ ಖಾತೆಯಲ್ಲಿ ₹ 60 ಸಾವಿರ ಇದೆ. ಈ ಹಣದಿಂದ ಬಂಗಾರದ ನಾಣ್ಯ ಕೊಂಡು ಮುಂದೆ ಬೆಲೆ ಬಂದಾಗ ಮಾರಾಟ ಮಾಡಬೇಕೆಂದಿದ್ದೇನೆ. ಉಳಿತಾಯ ಹಾಗೂ ತೆರಿಗೆ ವಿಚಾರದಲ್ಲಿ ಸೂಕ್ತ ಸಲಹೆ ನೀಡಿ.

ಉತ್ತರ: ನಿಮಗೆ ಸೆಕ್ಷನ್‌ 16 (1ಎ) ಆಧಾರದ ಮೇಲೆ ₹ 50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೌಲಭ್ಯ ಇರುವುದರಿಂದ ನಿಮಗೆ ಬರುವ ಸಂಬಳದ ವರಮಾನದಿಂದ ನೀವು ಸದ್ಯ ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಆದರೆ, ಐ.ಟಿ. ರಿಟರ್ನ್ಸ್‌ ತುಂಬಬೇಕಾಗುತ್ತದೆ. ನಿಮ್ಮೊಡನಿರುವ ₹ 60 ಸಾವಿರದಿಂದ ಬಂಗಾರದ ನಾಣ್ಯ ಕೊಂಡು ಮುಂದೆ ಮಾರಾಟ ಮಾಡುವುದಕ್ಕಿಂತ ಚಿನ್ನದ ಬಾಂಡ್ ಅಥವಾ ಚಿನ್ನದ ಇಟಿಎಫ್‌ಗಳಲ್ಲಿ ತೊಡಗಿಸುವುದು ಸೂಕ್ತ. ನಿಮ್ಮ ಮಗಳ ಸಲುವಾಗಿ ಕನಿಷ್ಠ ₹ 5 ಸಾವಿರವನ್ನು ಪ್ರತಿ ತಿಂಗಳು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಲು ಪ್ರಾರಂಭಿಸಿ. ಇದರಿಂದ ಮಗಳ ವಿದ್ಯಾಭ್ಯಾಸ, ಮದುವೆಗೆ ನೆರವಾಗುವುದಲ್ಲದೆ ಮುಂದೆ ನೀವು ತೆರಿಗೆಗೆ ಒಳಗಾದಲ್ಲಿ ಈ ಯೋಜನೆಯ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದು.

***

ಶಿವರುದ್ರಪ್ಪ,ರಾಣೆಬೆನ್ನೂರು

l ಪ್ರಶ್ನೆ: ನಾನು ಸರ್ಕಾರಿ ನೌಕರ. ಕಳೆದ 10 ವರ್ಷಗಳಿಂದ ನಿಮ್ಮ ಅಂಕಣ ಓದಿ ಸ್ಪೂರ್ತಿ ಪಡೆದು ಆರ್‌.ಡಿ. ಮಾಡುತ್ತಾ ಬಂದು 30X40 ಅಳತೆಯ ನಿವೇಶನವನ್ನು ರಾಣೆಬೆನ್ನೂರಿನಲ್ಲಿ ಕೊಂಡಿರುತ್ತೇನೆ. ತಿಂಗಳ ಸಂಬಳ ₹ 50,375. ಈಗ ಗೃಹ ಸಾಲ ಪಡೆದು ಮನೆ ಕಟ್ಟಿಸಲು ನಿಮ್ಮ ಸಲಹೆ ಬೇಕಾಗಿದೆ. ನಾನು, ನನ್ನ ಹೆಂಡತಿ ಮತ್ತು ಮಕ್ಕಳ ಹೆಸರಿನಲ್ಲಿ ವಿಮೆ ಪಾಲಿಸಿ ಮಾಡಿಸಿದಲ್ಲಿ ಆದಾಯ ತೆರಿಗೆ ಉಳಿಸಲು ಸಾಧ್ಯವೇ?

ಉತ್ತರ: ನಿಮ್ಮ ವಯಸ್ಸು, ಕುಟುಂಬದ ವಿವರ, ಸಂಬಳದಲ್ಲಿ ಕಡಿತ ಹಾಗೂ ಇದುವರೆಗೆ ಮಾಡಿರುವ ಉಳಿತಾಯವನ್ನು ತಿಳಿಸಿಲ್ಲ. ನೀವು ಆರ್‌.ಡಿ. ಮಾಡುತ್ತಾ ಬಂದು ಒಂದು ನಿವೇಶನ ಕೊಂಡಿರುವುದು ಸಂತೋಷದ ವಿಚಾರ. ಸ್ಥಿರ ಆಸ್ತಿಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ. ನೀವು ಆದಷ್ಟು ಬೇಗ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಮನೆ ಕಟ್ಟಲು ಪ್ರಾರಂಭಿಸಿ. ಗೃಹ ನಿರ್ಮಾಣದ ವೆಚ್ಚ ದಿನ ಕಳೆದಂತೆ ಹೆಚ್ಚಾಗುತ್ತಿರುವುದರಿಂದ ಈ ವಿಚಾರ ಮುಂದೂಡಬೇಡಿ. ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ಗೃಹ ಸಾಲ ಮರುಪಾವತಿಸಲು ಬ್ಯಾಂಕ್‌ಗಳು ಗರಿಷ್ಠ 30 ವರ್ಷಗಳ, 360 ಮಾಸಿಕ ಕಂತುಗಳನ್ನು ಕೊಡುತ್ತವೆ. ಸೆಕ್ಷನ್‌ 80ಸಿ ಆಧಾರದ ಮೇಲೆ ಗೃಹ ಸಾಲದ ಕಂತು, ಸೆಕ್ಷನ್‌ 24 (ಬಿ) ಆಧಾರದ ಮೇಲೆ ಗೃಹಸಾಲದ ಬಡ್ಡಿಯಿಂದ ತೆರಿಗೆ ವಿನಾಯಿತಿ ಪಡೆಯಬಹುದು. ನಿಮ್ಮ ಇಂದಿನ ಸಂಬಳದ ಆದಾಯ ಪರಿಗಣಿಸುವಾಗ ನೀವು ಗೃಹಸಾಲ ಪಡೆದರೆ ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಬಹುದು. ನೀವು ಬಯಸಿದಂತೆ ನಿಮ್ಮ ಹೆಂಡತಿ ಹಾಗೂ ಮಕ್ಕಳ ಹೆಸರಿನಲ್ಲಿ ವಿಮಾ ಕಂತು ತುಂಬಿದರೂ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.