ADVERTISEMENT

ಐ.ಟಿ. ವಿವರ: ಇನ್ನೊಂದೇ ತಿಂಗಳು ಸಮಯ

ಪ್ರಮೋದ ಶ್ರೀಕಾಂತ ದೈತೋಟ
Published 13 ಆಗಸ್ಟ್ 2025, 23:30 IST
Last Updated 13 ಆಗಸ್ಟ್ 2025, 23:30 IST
   

ದೇಶದ ಪ್ರಗತಿಯಲ್ಲಿ ವೈಯಕ್ತಿಕ ತೆರಿಗೆದಾರರ ಕೊಡುಗೆ ಗಮನಾರ್ಹ. 2025–26ರ ಒಟ್ಟು ₹50.65 ಲಕ್ಷ ಕೋಟಿ ಮೊತ್ತದ ಬೃಹತ್ ಬಜೆಟ್‌ನಲ್ಲಿ ತೆರಿಗೆ ಸಂಗ್ರಹದ ಗುರಿ ಸುಮಾರು ₹ 42.70 ಲಕ್ಷ ಕೋಟಿ. ಇದರಲ್ಲಿ ಸುಮಾರು ₹25.20 ಲಕ್ಷ ಕೋಟಿಯ ನೇರ ತೆರಿಗೆ ಸಂಗ್ರಹದ ಗುರಿಯೂ ಇದೆ. ಈ ಮೊತ್ತದಲ್ಲಿ ವೈಯಕ್ತಿಕ ತೆರಿಗೆದಾರರ ಪಾಲು ₹14.38 ಲಕ್ಷ ಕೋಟಿ. ಇತರ ಕಂಪನಿ, ಸಂಸ್ಥೆಗಳೆಲ್ಲಾ ಸೇರಿ ಪಾವತಿಸಬಹುದಾದ ನೇರ ತೆರಿಗೆ ಅಂದಾಜು ಮೊತ್ತ ₹10.82 ಲಕ್ಷ ಕೋಟಿ. ಅಂದರೆ ಸಂಗ್ರಹವಾಗುವ ನೇರ ತೆರಿಗೆಯಲ್ಲಿ ಶೇ 57ರಷ್ಟು ಪಾಲು ಸಾಮಾನ್ಯ ವರ್ಗದವರೂ ಅತಿ ಸಿರಿವಂತರೂ ಪಾವತಿಸುವ ಆದಾಯ ತೆರಿಗೆಯದ್ದು.

ದೇಶದಲ್ಲಿ ಕಳೆದ ವರ್ಷ ಸಕಾಲದಲ್ಲಿ ಸಲ್ಲಿಕೆಯಾದ ಒಟ್ಟು ಐ.ಟಿ. ವಿವರಗಳ ಸಂಖ್ಯೆ 7.29 ಕೋಟಿ. ಇದರಲ್ಲಿ ವೈಯಕ್ತಿಕ ತೆರಿಗೆದಾರರು ಸಲ್ಲಿಸಿದ ವಿವರದ ಪ್ರಮಾಣ ಶೇ 98ಕ್ಕೂ ಅಧಿಕ.

ವಿವರ ಯಾವಾಗ ಸಲ್ಲಿಸಬೇಕು?:

ADVERTISEMENT

ಆದಾಯ ತೆರಿಗೆ ಇಲಾಖೆಯ ಮಾರ್ಗಸೂಚಿ ಪ್ರಕಾರ ಪ್ರತಿವರ್ಷ, ತಮ್ಮ ಆದಾಯದ ಲೆಕ್ಕ ಪರಿಶೋಧನೆಯ ಅಗತ್ಯವಿಲ್ಲದ ವೈಯಕ್ತಿಕ ತೆರಿಗೆದಾರರು ಜುಲೈ 31ಕ್ಕೆ ಮೊದಲು ತೆರಿಗೆ ವಿವರ ಸಲ್ಲಿಸಬೇಕು. ಆದರೆ, ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಕಾಲಾವಕಾಶ ನೀಡಬಹುದು. ಕಳೆದ ಆರ್ಥಿಕ ವರ್ಷಕ್ಕೆ (2024-25) ಸಂಬಂಧಿಸಿದ ಐಟಿಆರ್ ನಮೂನೆ ತಡವಾಗಿ ಬಿಡುಗಡೆಯಾದ ಕಾರಣಕ್ಕೆ ಸೆಪ್ಟೆಂಬರ್‌ 15ರವರೆಗೆ ಗಡುವು ವಿಸ್ತರಿಸಲಾಗಿದೆ. ಹೀಗಾಗಿ ತೆರಿಗೆದಾರರಿಗೆ ಈ ಬಾರಿ ಹೆಚ್ಚುವರಿಯಾಗಿ 45 ದಿನಗಳ ಅವಕಾಶ ಸಿಕ್ಕಿದೆ.

ಯಾರು ವಿವರ ಸಲ್ಲಿಸಬೇಕು?:

ಬಹುತೇಕ ಸಂದರ್ಭಗಳಲ್ಲಿ ವಿವರ ಸಲ್ಲಿಸಲು ಆದಾಯ ಮಿತಿಯೇ ಆಧಾರ. ತೆರಿಗೆದಾರರು ತಮ್ಮ ವಯಸ್ಸು ಹಾಗೂ ಆದಾಯ ಪರಿಗಣಿಸಿ ವಿವರ ಸಲ್ಲಿಸಬೇಕು (ಕೆಳಗಿನ ಕೋಷ್ಟಕ ಗಮನಿಸಿ). ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87ಎ ಅಡಿ ವಿನಾಯಿತಿ ಪಡೆಯುವವರು, ಕೆಳಗೆ ಸೂಚಿಸಿದ ಮೊತ್ತಕ್ಕೆ ಮೇಲ್ಪಟ್ಟ ಆದಾಯ ಹೊಂದಿದ್ದಲ್ಲಿ, ವಿವರ ಸಲ್ಲಿಸಿ ವಿನಾಯಿತಿ ಪಡೆಯಬಹುದು. ವಿನಾಯಿತಿ ಇರುವ ಕಾರಣಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ ಎಂದು ಭಾವಿಸಿ, ವಿವರವನ್ನೂ (ರಿಟರ್ನ್ಸ್) ಸಲ್ಲಿಸಬೇಕಾಗಿಲ್ಲ ಎನ್ನುವ ತಪ್ಪು ಕಲ್ಪನೆ ಬೇಡ. ಮೂಲ ತೆರಿಗೆ ಆದಾಯ ಮಿತಿಯನ್ನು ಪರಿಗಣಿಸಿ ತೆರಿಗೆದಾರರು ನಿರ್ಣಯ ತೆಗೆದುಕೊಳ್ಳಬೇಕು.

ಹಳೆಯ ಆದಾಯ ತೆರಿಗೆ ಪದ್ದತಿ ಆಯ್ಕೆ ಮಾಡಿಕೊಂಡವರ ಆದಾಯ ₹5 ಲಕ್ಷ ಮೀರಿದ್ದರೆ ಹಾಗೂ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರ ಆದಾಯ ₹7 ಲಕ್ಷ ಮೀರಿದ್ದರೆ, ಕೆಳಗೆ ಉಲ್ಲೇಖಿಸಲಾದ ಯಾವುದೇ ವಿನಾಯಿತಿ ಲಭ್ಯವಿರುವುದಿಲ್ಲ.

ವಿವರ ಸಲ್ಲಿಸಬೇಕಾದ ಇತರ ಸಂದರ್ಭಗಳು:

ವಿವರ ಸಲ್ಲಿಸಲು ಆದಾಯ ಮಾತ್ರವೇ ಪರಿಗಣನೆಗೆ ಬರುವುದಿಲ್ಲ. ಇತರ ಕೆಲವು ಸಂದರ್ಭಗಳೂ ಆದಾಯ ತೆರಿಗೆ ವಿವರ ಸಲ್ಲಿಸುವುದನ್ನು ಅನಿವಾರ್ಯ ಆಗಿಸಬಹುದು.

1. ಯಾವುದೇ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್‌ನ ಚಾಲ್ತಿ ಖಾತೆಯಲ್ಲಿ ಒಟ್ಟು ₹1 ಕೋಟಿಗೂ ಹೆಚ್ಚಿನ ಜಮಾ ಆಗಿದ್ದಲ್ಲಿ,

2. ಸ್ವಂತ ವಿದೇಶ ಪ್ರಯಾಣಕ್ಕೆ ಅಥವಾ ಇತರರ ವಿದೇಶ ಪ್ರಯಾಣಕ್ಕೆ ₹2 ಲಕ್ಷಕ್ಕಿಂತ ಅಧಿಕ ಮೊತ್ತ ವ್ಯಯಿಸಿದ್ದರೆ

3. ವಾರ್ಷಿಕ ₹1 ಲಕ್ಷಕ್ಕೂ ಅಧಿಕ ಮೊತ್ತವನ್ನು ವಿದ್ಯುತ್ ಬಿಲ್‌ಗಾಗಿ ಪಾವತಿಸಿದ್ದಲ್ಲಿ

4. ನಿವಾಸಿ ಭಾರತೀಯ ವ್ಯಕ್ತಿ ವಿದೇಶಿ ಆಸ್ತಿಗಳಲ್ಲಿ ಆರ್ಥಿಕ ಪಾಲು ಹೊಂದಿದ್ದರೆ ಅಥವಾ ಅದರ ವ್ಯವಹಾರಗಳನ್ನು ನಿರ್ವಹಿಸುವ ಅಧಿಕೃತ ಪ್ರತಿನಿಧಿಯಾಗಿದ್ದರೆ

5. ಇತರರ ಆದಾಯಕ್ಕೆ ಅವರ ವಾರಾಸುದಾರನಾಗಿ ಆದಾಯ ಘೋಷಿಸುವ ಸಂದರ್ಭದಲ್ಲಿ ಮೇಲೆ ಸೂಚಿಸಲ್ಪಟ್ಟ ಎಲ್ಲರೂ ರಿಟರ್ನ್ಸ್ ಸಲ್ಲಿಸಬೇಕಾಗಿರುತ್ತದೆ.

ಉದಾಹರಣೆಗೆ, ಆದಾಯ ತೆರಿಗೆಯ ‘ನಿಯಮ 114ಇ’ ಇದರಂತೆ, ಚಾಲ್ತಿ ಖಾತೆಯಲ್ಲಿ ಒಟ್ಟು ₹50 ಲಕ್ಷಕ್ಕೂ ಹೆಚ್ಚಿನ ನಗದು ಜಮಾ ಆದಾಗ ಅಥವಾ ಅಷ್ಟು ಮೊತ್ತವನ್ನು ಖಾತೆಯಿಂದ ಹಿಂಪಡೆದಾಗ, ನಗದು ಪಾವತಿ ಮೂಲಕ ಒಟ್ಟು ₹10 ಲಕ್ಷಕ್ಕಿಂತ ಅಧಿಕ ಮೊತ್ತದ ಡಿ.ಡಿ ಖರೀದಿಸಿದಾಗ, ಅಥವಾ ₹10 ಲಕ್ಷಕ್ಕಿಂತ ಅಧಿಕ ಮೊತ್ತ ನಿಶ್ಚಿತ ಠೇವಣಿ ಅಥವಾ ಉಳಿತಾಯ ಖಾತೆಗೆ ಜಮಾ ಆದಾಗ ಎಲ್ಲಾ ಬ್ಯಾಂಕ್‌ಗಳು (ಸಹಕಾರಿ ಬ್ಯಾಂಕ್ ಸೇರಿ) ಇಂತಹ ಮಾಹಿತಿಯನ್ನು ವಾರ್ಷಿಕವಾಗಿ ಮೇ 31ರೊಳಗೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ.

ಹೀಗಾಗಿ ಇಂತಹ ವ್ಯವಹಾರಗಳ ಮಾಹಿತಿ ಆದಾಯ ತೆರಿಗೆ ಇಲಾಖೆಯ ಬಳಿ ಇರುತ್ತದೆ. ಆದರೆ ಇಂತಹ ವಿಷಯಗಳ ಬಗ್ಗೆ ಖಾತೆದಾರರು ವಿವರ ಸಲ್ಲಿಸುವುದು ಕಡ್ಡಾಯವೆಂಬ ನಿಯಮ ಇಲ್ಲದಿದ್ದರೂ, ವಿವರ ಸಲ್ಲಿಸದೆ ಇದ್ದಲ್ಲಿ ತೆರಿಗೆ ಇಲಾಖೆಯ ನೋಟಿಸ್ ಬರಲಾರದು ಎಂದು ಖಚಿತವಾಗಿ ಹೇಳಲಾಗದು. ಹೀಗಾಗಿ ಅಂತಹ ವ್ಯವಹಾರ ಇದ್ದಾಗ ನಿಮ್ಮ ತೆರಿಗೆ ಸಲಹೆಗಾರರನ್ನು ಮೊದಲೇ ಸಂಪರ್ಕಿಸಿ ನಿರ್ಧಾರ ಕೈಗೊಳ್ಳಿ. ಇದಲ್ಲದೆ, ಯಾವುದೇ ರಿಫಂಡ್ ಪಡೆಯುವ ಸನ್ನಿವೇಶ ಇದ್ದ ಸಂದರ್ಭದಲ್ಲೂ ವಿವರ ಸಲ್ಲಿಕೆ ಅನಿವಾರ್ಯವಾಗಿರುತ್ತದೆ.

ಐಟಿಆರ್ ನಮೂನೆ ಆಯ್ಕೆ ಹೇಗೆ?:

ಸಾಮಾನ್ಯವಾಗಿ ಈ ಕೆಳಗಿನ ನಮೂನೆಗಳನ್ನು ವಿವರ ಸಲ್ಲಿಕೆಗೆ ಬಳಸಬಹುದು. ಆದರೆ, ನಿಮ್ಮ ಪ್ರತಿ ವರ್ಷದ ಆದಾಯದ ಮಾಹಿತಿ ಆಧರಿಸಿ, ನಿಮ್ಮ ತೆರಿಗೆ ಸಲಹೆಗಾರರ ಸೂಚನೆಯಂತೆ ನಮೂನೆಯಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯವೂ ಇರಬಹುದು. ಈ ವರ್ಷದಿಂದ, ತೆರಿಗೆದಾರರಿಗೆ ತಮ್ಮ ಪ್ಯಾನ್ ಸಂಖ್ಯೆಯ ಜೊತೆ ನಮೂದಿಸಲಾದ ತೆರಿಗೆ ಕಡಿತದ ಸೆಕ್ಷನ್ ಆಧರಿಸಿ ನಮೂನೆ ಆಯ್ಕೆ ಆಗುವಂತೆ ಆಂತರಿಕ ವ್ಯವಸ್ಥೆ ರೂಪಿಸಲಾಗಿದೆ. ಉದಾಹರಣೆಗೆ, ತೆರಿಗೆ ಕಡಿತ ತಮ್ಮ ವೃತ್ತಿ ಆಧಾರಿತ ಆದಾಯ ಮೂಲಕ್ಕೆ ಸಂಬಂಧಿಸಿದ್ದಾಗಿದ್ದರೆ, ಅವರು ಐಟಿಆರ್ 1, 2ಅನ್ನು ಆಯ್ಕೆ ಮಾಡುವ ಅವಕಾಶ ನೀಡದಂತೆ ಬದಲಾವಣೆ ತರಲಾಗಿದೆ. ಅದೇ ರೀತಿ ಹಳೆಯ ತೆರಿಗೆ ಪದ್ಧತಿ ಅನುಸರಿಸುವವರು ಹೂಡಿಕೆ, ವಿಮೆ ಇತ್ಯಾದಿಗಳ ನಿಖರ ವಿವರ ನೀಡಬೇಕಾಗಿದೆ.

ತಡವಾಗಿ ವಿವರ ಸಲ್ಲಿಕೆ ಪರಿಷ್ಕರಣೆ:

ಕಾಲಮಿತಿಯೊಳಗೆ ಅಥವಾ ಮುಂದೂಡಲಾದ ಗಡುವಿನೊಳಗೆ ವಿವರ ಸಲ್ಲಿಸದಿದ್ದರೆ ₹5000 ದಂಡ ಪಾವತಿಸಬೇಕಾಗುತ್ತದೆ. ₹5 ಲಕ್ಷಕ್ಕೂ ಕಡಿಮೆ ತೆರಿಗೆ ಆದಾಯ ಇರುವ ವ್ಯಕ್ತಿಗಳಿಗೆ ದಂಡದ ಮೊತ್ತವನ್ನು ₹1000ಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ಈ ದಂಡ ಪಾವತಿಸಿ ತಮಗೆ ಬೇಕಾದ ಸಮಯಕ್ಕೆ ವಿವರ ಸಲ್ಲಿಸಲು ಅವಕಾಶವಿದೆಯೇ ಎಂದು ಕೇಳಿದರೆ ‘ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಎನ್ನಬೇಕಾಗುತ್ತದೆ.

ಶುಲ್ಕ ಸಹಿತ ತೆರಿಗೆ ವಿವರ ಸಲ್ಲಿಸಲು ಆರ್ಥಿಕ ವರ್ಷ ಕೊನೆಗೊಂಡ ನಂತರ 9 ತಿಂಗಳೊಳಗೆ ಅಂದರೆ 2024-25ನೇ ಸಾಲಿನ ಆದಾಯಕ್ಕೆ ಸಂಬಂಧಿಸಿದ ವಿವರಗಳನ್ನು 2025ರ ಡಿಸೆಂಬರ್ 31ರ ತನಕ ಸಲ್ಲಿಸಲು ಅವಕಾಶ ಇರುತ್ತದೆ. ಒಂದು ವೇಳೆ ಯಾವುದಾದರೂ ಮಾಹಿತಿ ತಪ್ಪಾಗಿ ಸಲ್ಲಿಕೆಯಾಗಿದ್ದರೆ ಅಂತಹ ವಿವರಗಳನ್ನು ಪರಿಷ್ಕರಿಸುವುದಕ್ಕೂ ಈ ಅವಧಿಯಲ್ಲಿ ಅವಕಾಶ ಇದೆ. ಈ ಎಲ್ಲಾ ಗಡುವು ಕಳೆದರೆ ವಿವರ ಸಲ್ಲಿಸಲು ಅವಕಾಶ ಇರುವುದಿಲ್ಲ.

ಹೀಗಿದ್ದರೂ ಯಾರಿಗಾದರೂ ವಿವರ ಸಲ್ಲಿಸಲು ಆಗದಿದ್ದ ಸಂದರ್ಭದಲ್ಲಿ ಸೆಕ್ಷನ್ 139(8ಎ) ಅಡಿ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ವಿವರ ಸಲ್ಲಿಸಲು ಕೊನೆಯ ಅವಕಾಶ ಇರುತ್ತದೆ. ಆದರೆ ಅಂತಹ ತೆರಿಗೆ ವಿವರ ಸಲ್ಲಿಕೆಗಳುಮರುಪಾವತಿ ಪಡೆಯುವ ಅಥವಾ ತೆರಿಗೆ ತಗ್ಗಿಸುವ ಉದ್ದೇಶಕ್ಕಾಗಿರಬಾರದು. ಇತ್ತೀಚಿನ ಬದಲಾವಣೆಯ ಅನ್ವಯ ನವೀಕೃತ ವಿವರ ಸಲ್ಲಿಸಲು ಆರ್ಥಿಕ ವರ್ಷ ಕೊನೆಗೊಂಡ ಸಮಯದಿಂದ ಐದು ವರ್ಷಗಳ (ಅಸೆಸ್ಮೆಂಟ್ ವರ್ಷದಿಂದ 48 ತಿಂಗಳು) ಕಾಲಮಿತಿ ಇರುತ್ತದೆ. ಆದರೆ ಇದಕ್ಕೆ ಅನ್ವಯವಾಗುವ ತೆರಿಗೆ ಬಡ್ಡಿ ಇತ್ಯಾದಿಯಲ್ಲದೆ ಹೆಚ್ಚುವರಿ ದಂಡ ತೆರಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.