ADVERTISEMENT

ಮ್ಯೂಚುವಲ್‌ ಫಂಡ್‌ ಹೂಡಿಕೆಯಿಂದ ಲಾಭಾಂಶ ಸಿಗುವುದಿಲ್ಲವೇ?

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 23:30 IST
Last Updated 30 ಜುಲೈ 2025, 23:30 IST
   

ನೇರವಾಗಿ ಷೇರುಗಳಲ್ಲಿ ಹಣ ತೊಡಗಿಸುವವರಿಗೆ ಲಾಭಾಂಶದ ಬಗ್ಗೆ ಮಾಹಿತಿ ಇದ್ದೇ ಇರುತ್ತದೆ. ಅವರು ಹಣ ತೊಡಗಿಸಿದ ಕಂಪನಿಯು ಲಾಭಾಂಶ ಘೋಷಿಸಿದಾಗಲೆಲ್ಲ, ಹೂಡಿಕೆದಾರರ ಖಾತೆಗೆ ಲಾಭಾಂಶದ ಹಣ ಸಂದಾಯ ಆಗುತ್ತದೆ. ಆದರೆ ಮ್ಯೂಚುವಲ್‌ ಫಂಡ್‌ಗಳ ಮೂಲಕ ಹಣ ತೊಡಗಿಸಿದವರಿಗೆ ಈ ಬಗೆಯಲ್ಲಿ ಲಾಭಾಂಶ ಸಿಗುವುದಿಲ್ಲ.

ಶುದ್ಧ ಈಕ್ವಿಟಿ ಫಂಡ್‌ಗಳಲ್ಲಿ ಹಣ ತೊಡಗಿಸಿದವರಿಗೂ ಲಾಭಾಂಶ ಸಿಗುವುದಿಲ್ಲ. ಈಕ್ವಿಟಿ ಫಂಡ್‌ಗಳು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ವಿವಿಧ ಕಂಪನಿಗಳ ಷೇರುಗಳ ಮೇಲೆ ತೊಡಗಿಸಿರುತ್ತವೆ. ಆದರೂ, ಕಂಪನಿಗಳು ಲಾಭಾಂಶ ಘೋಷಿಸಿದಾಗ ಮ್ಯೂಚುವಲ್‌ ಫಂಡ್‌ ಹೂಡಿಕೆದಾರರಿಗೆ ಲಾಭಾಂಶ ಸಿಗುವುದಿಲ್ಲ. ಇದೇಕೆ ಹೀಗೆ ಎಂಬ ಪ್ರಶ್ನೆಯು ಮ್ಯೂಚುವಲ್‌ ಫಂಡ್‌ಗಳ ಮೂಲಕ ಈಕ್ವಿಟಿಗಳಲ್ಲಿ ಹಣ ತೊಡಗಿಸುವವರನ್ನು ಕಾಡಿರಬಹುದು.

ನಿರ್ದಿಷ್ಟವಾಗಿ ಒಂದು ಬಗೆಯ ಮ್ಯೂಚುವಲ್‌ ಫಂಡ್‌ಗಳನ್ನು ಹೊರತುಪಡಿಸಿದರೆ ಬೇರೆ ಬಗೆಯ ಮ್ಯೂಚುವಲ್‌ ಫಂಡ್‌ಗಳು ಲಾಭಾಂಶವನ್ನು ನೇರವಾಗಿ ಹೂಡಿಕೆದಾರರಿಗೆ ವರ್ಗಾವಣೆ ಮಾಡುವುದಿಲ್ಲ. ಮ್ಯೂಚುವಲ್‌ ಫಂಡ್‌ ತಾನು ಹಣ ತೊಡಗಿಸಿರುವ ಕಂಪನಿಯು ಲಾಭಾಂಶವನ್ನು ಘೋಷಿಸಿದಾಗ, ಆ ಮೊತ್ತವು ಫಂಡ್‌ಗೆ ವರ್ಗಾವಣೆ ಆಗುತ್ತದೆ ಎಂಬುದು ನಿಜ. ಆದರೆ ಆ ಹಣವನ್ನು ಫಂಡ್‌ನ ನಿರ್ವಾಹಕ ಮತ್ತೆ ಹೊಸ ಹೂಡಿಕೆಗೇ ಬಳಸಿಕೊಳ್ಳುತ್ತಾನೆಯೇ ವಿನಾ ಅದನ್ನು ತನ್ನಲ್ಲಿ ಹಣ ತೊಡಗಿಸಿದ ಸಾರ್ವಜನಿಕರಿಗೆ ವಿತರಿಸುವುದಿಲ್ಲ.

ADVERTISEMENT

ಲಾಭಾಂಶದ ರೂಪದಲ್ಲಿ ಬಂದ ಹಣವನ್ನು ಹೀಗೆ ಪುನಃ ಹೂಡಿಕೆ ಮಾಡುವುದರಿಂದ ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ಲಾಭವೇ ಆಗುತ್ತದೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ಲಾಭಾಂಶವನ್ನು ಮತ್ತೆ ಉತ್ತಮ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ, ಆ ಷೇರುಗಳ ಮೌಲ್ಯವರ್ಧನೆಯ ಪ್ರಯೋಜನವು ಹೂಡಿಕೆದಾರನಿಗೆ ಸಿಗುತ್ತದೆ.

ಲಾಭಾಂಶದ ರೂಪದಲ್ಲಿ ಸಿಗುವ ಹಣವನ್ನು ಮ್ಯೂಚುವಲ್‌ ಫಂಡ್‌ ನಿರ್ವಾಹಕರು ತಕ್ಷಣವೇ ಮರುಹೂಡಿಕೆ ಮಾಡಬೇಕು ಎಂಬುದೇನೂ ಇಲ್ಲ. ಅವರು ಆ ಹಣವನ್ನು ನಗದು ರೂಪದಲ್ಲಿ ತಮ್ಮಲ್ಲಿಯೇ ಇರಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಹೊಸದಾಗಿ ಹಣ ತೊಡಗಿಸಲು ಒಳ್ಳೆಯ ಅವಕಾಶ ಕಂಡಾಗ ಅವರು ಆ ಹಣವನ್ನು ತೊಡಗಿಸುವ ಕೆಲಸ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.