ADVERTISEMENT

Personal Finance ಪ್ರಶ್ನೋತ್ತರ: ಆದಾಯ ತೆರಿಗೆ ಹೇಗೆ ತಗ್ಗಿಸಬೇಕು?

ಪ್ರಮೋದ ಶ್ರೀಕಾಂತ ದೈತೋಟ
Published 7 ಫೆಬ್ರುವರಿ 2023, 21:14 IST
Last Updated 7 ಫೆಬ್ರುವರಿ 2023, 21:14 IST
   

ನಾಗರಾಜ್ , ದೊಡ್ಡಬಳ್ಳಾಪುರ

ಪ್ರಶ್ನೆ: ನಾನು ಹಿರಿಯ ನಾಗರಿಕ, ವಯಸ್ಸು ಸುಮಾರು 69 ವರ್ಷ. ನನಗೆ ಮೂವರು ತಂಗಿಯರು ಹಾಗೂ ಇಬ್ಬರು ಅಣ್ಣಂದಿರಿದ್ದಾರೆ. ನನಗೆ ನನ್ನ ಮುತ್ತಾತನ, ಸುಮಾರು 80-85 ವರ್ಷ ಹಳೆಯ ಆಸ್ತಿ ಬಂದಿರುತ್ತದೆ. ಸರ್ಕಾರಿ ಬೆಲೆ ₹ 4.80 ಲಕ್ಷ ಇರುವ ಈ ಆಸ್ತಿಯನ್ನು ಮಾರುಕಟ್ಟೆ ಮೌಲ್ಯ ₹ 17.80 ಲಕ್ಷಕ್ಕೆ 2021ರ ಮಾರ್ಚ್‌ 28ರಂದು ಮಾರಿದ್ದೇನೆ. ಖರೀದಿಸಿದವರು ₹ 13 ಲಕ್ಷಕ್ಕೆ ಆರ್‌ಟಿಜಿಎಸ್ ಹಾಗೂ ಉಳಿದ ಮೊತ್ತ ₹ 4.80 ಲಕ್ಷವನ್ನು ಡಿ.ಡಿ ಮೂಲಕ ಪಾವತಿಸಿದ್ದಾರೆ. ಅದನ್ನು ನಾವು 6 ಜನ ಸಮವಾಗಿ ಹಂಚಿಕೊಂಡಿದ್ದೇವೆ. ಈಗ ಇರುವ ಪ್ರಶ್ನೆ, ಇದಕ್ಕೆ ಬಂಡವಾಳ ವೃದ್ಧಿ ತೆರಿಗೆ ಬರುತ್ತದೆಯೇ? ಬಂದರೆ ಎಷ್ಟು? ನನ್ನ ವಾರ್ಷಿಕ ಆದಾಯ ₹ 3 ಲಕ್ಷಕ್ಕಿಂತ ಕಡಿಮೆ. ನಾನು ಆದಾಯ ತೆರಿಗೆ ವಿವರ ಸಲ್ಲಿಸಬೇಕೇ?

ಉತ್ತರ: ಬಂಡವಾಳ ಆಸ್ತಿ ಮಾರಾಟದಿಂದ ಆಗುವ ಲಾಭ, ನಷ್ಟವು ಆಸ್ತಿ ಮಾರಾಟ ಅಥವಾ ವರ್ಗಾವಣೆ ಆದ ವರ್ಷದಲ್ಲಿ ತೆರಿಗೆಗೆ ಒಳಪಡುತ್ತದೆ. ಇಲ್ಲಿ, ಮಾರಾಟ ಮಾಡಿದ ವ್ಯಕ್ತಿ ಆಸ್ತಿಯ ಒಡೆತನ ಹೊಂದಿರಬೇಕು ಅಥವಾ ಆ ಆಸ್ತಿಯ ಸ್ವಾಮ್ಯತ್ವದಲ್ಲಿ ಪಾಲುದಾರನಾಗಿರಬೇಕು.

ADVERTISEMENT

ನಿಮ್ಮ ಮಾಹಿತಿಯಂತೆ, ಮೊದಲ ಹಂತದಲ್ಲಿ ನೀವೊಬ್ಬರೇ ಆ ಆಸ್ತಿಗೆ ಮಾಲೀಕರಂತೆ ಗೋಚರಿಸುತ್ತದೆ ಹಾಗೂ ನಿಮ್ಮ ಮುತ್ತಾತನ ಆಸ್ತಿಯ ಮಾರಾಟದಿಂದ ಬಂದ ಮೊತ್ತವನ್ನು ನಿಮ್ಮೊಳಗೆ ಸಮಾನವಾಗಿ ಹಂಚಿಕೊಂಡಿದ್ದೀರಿ. ಈ ಹಂಚಿಕೆಯು ಸಹೋದರ-ಸಹೋದರಿಯರ ಆಂತರಿಕ ವಿಚಾರ. ಮೂಲತಃ ನೀವೊಬ್ಬರೇ ಆ ಆಸ್ತಿಯ ಒಡೆತನ ಹೊಂದಿದವರಾಗಿದ್ದರೆ, ನೀವು ಸಂಪೂರ್ಣ ತೆರಿಗೆಗೆ ಬಾಧ್ಯಸ್ಥರು. ಆದರೆ ಆಸ್ತಿಯಲ್ಲಿ ಅನೇಕ ಮಂದಿ ಹಕ್ಕು ಹೊಂದಿ ಅಂತಹ ಆಸ್ತಿ ಮಾರಾಟ ಮಾಡಿದಾಗ ಬರುವ ಲಾಭಕ್ಕೆ ತಮ್ಮ ಪಾಲಿಗನುಗುಣವಾಗಿ ತೆರಿಗೆ ಬರುತ್ತದೆ. ನಿಮ್ಮ ಆಸ್ತಿ ತುಂಬಾ ಹಿಂದಿನ ಕಾಲದ್ದಾದ ಕಾರಣ ಇದರ ಖರೀದಿ ಮೌಲ್ಯ ಊಹಿಸುವುದು ಕಷ್ಟ. ಇಂತಹ ಸಂದರ್ಭದಲ್ಲಿ 2001ರ ಏಪ್ರಿಲ್ 1ರ ದಿನಾಂಕದಂದು ಇದ್ದ ಆಸ್ತಿಯ ಬೆಲೆ ನಿರ್ಣಯಿಸಿ ಅದನ್ನು ಮಾರಾಟವಾದ ವರ್ಷದಲ್ಲಿ ಹಣದುಬ್ಬರ ಮೌಲ್ಯಾಂಕಕ್ಕೆ ತಾಳೆ ಮಾಡಿ ಪ್ರಸ್ತುತ ಅಂದಾಜು ಮೌಲ್ಯ ನಿರ್ಣಯಿಸಲಾಗುತ್ತದೆ. ಇದಕ್ಕಿಂತ ಹೆಚ್ಚಿನ ಮೊತ್ತ ಬಂದಿದ್ದರೆ ಲಾಭವೆಂದು ಪರಿಗಣಿಸಿ ಸೆಸ್ ಮೊತ್ತ ಸೇರಿಸಿ ಶೇ 20.80ರ ತೆರಿಗೆ ವಿಧಿಸಲಾಗುತ್ತದೆ.

ನಿಮ್ಮ ಈ ವ್ಯವಹಾರ ಆರ್ಥಿಕ ವರ್ಷ 2020-21ರಲ್ಲೇ ನಡೆದಿರುವ ಕಾರಣ ಆ ವರ್ಷವೇ ತೆರಿಗೆಗೊಳಪಡಬೇಕಾಗಿತ್ತು. ಆ ವರ್ಷದ ವಿವರ ಸಲ್ಲಿಸುವ ಕಾಲಾವಧಿ ಮುಗಿದಿದೆ. ನಿಮ್ಮ ಒಟ್ಟು ತೆರಿಗೆ ಆದಾಯ ₹ 3 ಲಕ್ಷ ಮೀರಿದಲ್ಲಿ ತೆರಿಗೆ ವಿವರ ಸಲ್ಲಿಸಬೇಕು. ಹೀಗಾಗಿ ನೀವು ಹೆಚ್ಚಿನ ಮಾಹಿತಿಯೊಂದಿಗೆ ಸ್ಥಳೀಯ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಪ್ರಕೃತಿ ಪ. ದೊಡ್ಡಮನಿ, ಹುಲಗಂಜಿಕೊಪ್ಪ, ಧಾರವಾಡ

ಪ್ರಶ್ನೆ: ನಮ್ಮ ತಂದೆ ಕಾಲೇಜು ಉಪನ್ಯಾಸಕರಾಗಿದ್ದು, ಅವರಿಗೆ ನಾವು ಮೂವರು ಹೆಣ್ಣುಮಕ್ಕಳು. ಔಷಧ, ಮನೆ ಖರ್ಚು ಹಾಗೂ ನಮ್ಮ ಓದಿನ ಸಲುವಾಗಿ ತಿಂಗಳಿಗೆ ಸುಮಾರು ₹ 45,000 ಖರ್ಚು ಇದೆ. ತಂದೆಯ ತಿಂಗಳ ಆದಾಯ ₹ 75,000 (ವರ್ಷಕ್ಕೆ ₹ 9 ಲಕ್ಷ). ನಾವು ಯಾವುದೇ ಉಳಿತಾಯ, ವಿಮೆ ಇತ್ಯಾದಿ ಮಾಡಿಲ್ಲ. ಈಗ ಸುಮಾರು ₹ 70,000 ಆದಾಯ ತೆರಿಗೆ ಕಟ್ಟಬೇಕೆಂದು ಆದೇಶವಾಗಿದೆ. ಆದಾಯ ತೆರಿಗೆ ಹೇಗೆ ತಗ್ಗಿಸಬೇಕು? ಉಳಿತಾಯ ಹೇಗೆ ಮಾಡಬೇಕು? ತಿಳಿಸಿ.

ಉತ್ತರ: ಪ್ರಸ್ತುತ ಆರ್ಥಿಕ ವರ್ಷಕ್ಕೆ (2022-23) ಸಂಬಂಧಿಸಿ ಯಾವ ತೆರಿಗೆ ಪದ್ಧತಿ ಅನುಸರಿಸಿ ತೆರಿಗೆ ಲೆಕ್ಕ ಹಾಕಲಾಗುತ್ತಿದೆ ಎಂಬುದನ್ನು ಗಮನಿಸಿ. ಒಂದು ವೇಳೆ ಹಳೆಯ ಪದ್ಧತಿ ಅನುಸರಿಸಿದರೆ ಯಾವುದೇ ಹೂಡಿಕೆ ಇರದ ಸಂದರ್ಭದಲ್ಲಿ ಹೆಚ್ಚಿನ ತೆರಿಗೆ ಬರುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಹೊಸ ತೆರಿಗೆ ಪದ್ದತಿಗೂ ಹೋಗಬಹುದು. ಇದರಲ್ಲಿ ತೆರಿಗೆ ದರ ಪ್ರತಿ ₹ 2.50 ಲಕ್ಷ ಆದಾಯಕ್ಕೆ ಶೇ 5ರಷ್ಟು ವ್ಯತ್ಯಾಸವಾಗುತ್ತದೆ. ತೆರಿಗೆ ಉಳಿತಾಯಕ್ಕೆ ಯಾವುದೇ ಹೂಡಿಕೆ ಮಾಡಲು ವೈಯಕ್ತಿಕ ಖರ್ಚು ವೆಚ್ಚಗಳ ಕಾರಣಕ್ಕೆ ಸಾಧ್ಯವಿಲ್ಲದಿದ್ದರೆ ಅಥವಾ ಆ ಬಗ್ಗೆ ಉತ್ಸುಕರಲ್ಲದ ತೆರಿಗೆದಾರರಿಗೆ ಹೊಸ ತೆರಿಗೆ ಪದ್ಧತಿ ಅನುಸರಿಸುವ ಅವಕಾಶವಿದೆ. ಇದರಂತೆ ನಿಮ್ಮ ಸನ್ನಿವೇಶದಲ್ಲಿ ನೇರವಾಗಿ ₹ 2.50 ಲಕ್ಷದಿಂದ ₹ 5 ಲಕ್ಷದತನಕ ಶೇ 5ರಷ್ಟು, ₹ 5 ಲಕ್ಷದಿಂದ ₹ 7.50 ಲಕ್ಷಕ್ಕೆ ಶೇ 10ರಷ್ಟು ಹಾಗೂ ₹ 7.50 ಲಕ್ಷದಿಂದ ₹ 10 ಲಕ್ಷದ ತನಕ ಶೇ 15ರಷ್ಟು ತೆರಿಗೆ ಇರುತ್ತದೆ ಮತ್ತು ಶೇ 4ರಷ್ಟು ಸೆಸ್ ಇದೆ. ಇದರಂತೆ ಹೆಚ್ಚೆಂದರೆ ₹ 62,400 ತೆರಿಗೆ ಇರುತ್ತದೆ.

ಹೂಡಿಕೆಯಲ್ಲಿ ಆಸಕ್ತಿ ಇದ್ದು ಇದರಲ್ಲಿ ತೊಡಗಿಸಿಕೊಳ್ಳುವುದೇ ಆಗಿದ್ದರೆ, ಸಾಂಪ್ರದಾಯಿಕ ಹೂಡಿಕೆ ಯೋಜನೆಗಳಲ್ಲಿ ಅವಕಾಶವಿದೆ. ವೇತನದಲ್ಲಿ ಪಿ.ಎಫ್ ಕಡಿತವಾಗುತ್ತಿದ್ದರೆ ಅದು ಹೂಡಿಕೆಯ ಒಂದು ಭಾಗವೇ. ನಿಮ್ಮ ಶಿಕ್ಷಣಕ್ಕಾಗಿ ಪಾವತಿಸುವ ಶುಲ್ಕವೂ ತೆರಿಗೆ ಉಳಿಸಲು ಪರಿಗಣಿತವಾಗುತ್ತದೆ. ಜೀವ ವಿಮೆ, ಪಿಪಿಎಫ್, ತೆರಿಗೆ ಉಳಿತಾಯದ ಐದು ವರ್ಷಗಳ ಎಫ್.ಡಿ, ತೆರಿಗೆ ಉಳಿತಾಯಕ್ಕೆ ಸಂಬಂಧಿತ ಮ್ಯೂಚುವಲ್ ಫಂಡ್ (ಇಎಲ್‌ಎಸ್‌ಎಸ್‌) ಇತ್ಯಾದಿಗಳಲ್ಲಿ ಮೊದಲು ತೊಡಗಿಸಿಕೊಳ್ಳಬಹುದು. ನಿವೃತ್ತಿಗಾಗಿ ಎನ್‌ಪಿಎಸ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಮುಂದಿನ ಐದು ವರ್ಷ ಹಣ ಹೊಂದಿಸಿಕೊಂಡು ಪ್ರತಿ ವರ್ಷ ತೆರಿಗೆ ಉಳಿತಾಯದ ಎಫ್.ಡಿ.ಯಲ್ಲಿ ತೊಡಗಿಸಿದರೆ ಆರನೆಯ ವರ್ಷದ ನಂತರ, ಮೊದಲ ವರ್ಷದಲ್ಲಿರಿಸಿದ ಹಣ ಮರು ಹೂಡಿಕೆಗೆ ಸಿಗುತ್ತದೆ. ಇದರೊಡನೆ ಒಂದಷ್ಟು ಬಡ್ಡಿಯೂ ಬರುತ್ತದೆ. ಈ ಎಲ್ಲ ಹೂಡಿಕೆಗಳಿಗೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿ ತೆರಿಗೆ ಲಾಭಗಳಿವೆ. ತೆರಿಗೆ ವಿನಾಯಿತಿ ದೃಷ್ಟಿಯಿಂದ ಒಟ್ಟಾರೆ ವಾರ್ಷಿಕ ₹ 1.50 ಲಕ್ಷ ಹೂಡಿಕೆಗೆ ಅವಕಾಶವಿದೆ. ಇಲ್ಲಿ ಹೇಳಿರುವ ಉಳಿತಾಯಗಳು ಹಳೆಯ ಪದ್ದತಿ ಅನುಸರಿಸುವವರಿಗೆ ಮಾತ್ರವಾದರೂ, ಉಳಿತಾಯದ ದೃಷ್ಟಿಯಲ್ಲಿ ಹೂಡಿಕೆಗಳು ಭವಿಷ್ಯದಲ್ಲಿ ಆರ್ಥಿಕ ನೆರವು ನೀಡುವುದರಲ್ಲಿ ಸಂದೇಹವಿಲ್ಲ.

ನಿಮ್ಮ ತಂದೆಯವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವುದರಿಂದ ತೆರಿಗೆಯ ವಿಚಾರವಾಗಿ ಅಗತ್ಯ ಮಾಹಿತಿ ಅಥವಾ ದಾಖಲೆಗಳನ್ನು ಅವರ ಕಾಲೇಜಿನ ಸಂಬಂಧಪಟ್ಟ ವಿಭಾಗಕ್ಕೆ ಕೊಟ್ಟು ತೆರಿಗೆಯ ಪ್ರಮಾಣವನ್ನು ಇನ್ನಷ್ಟು ತಗ್ಗಿಸಬಹುದು. ಹಳೆಯ ಹಾಗೂ ಹೊಸ ತೆರಿಗೆ ಪದ್ದತಿಯಡಿ ಬರುವ ತೆರಿಗೆ ಅರಿತು ಅದರ ಅಗತ್ಯಕ್ಕೆ ತಕ್ಕಂತೆ ಮುಂದಿನ ಹೂಡಿಕೆ ನಿರ್ಧಾರ ಕೈಗೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.