ADVERTISEMENT

ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ಇಲ್ಲಿದೆ

ಪ್ರಮೋದ ಶ್ರೀಕಾಂತ ದೈತೋಟ
Published 22 ಮಾರ್ಚ್ 2022, 19:38 IST
Last Updated 22 ಮಾರ್ಚ್ 2022, 19:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಶ್ನೆ: ನನ್ನ ಬಳಿ ₹ 1 ಲಕ್ಷ ಇದೆ. ಇದನ್ನು ನಾನು ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಬೇಕು ಎಂದು ತೀರ್ಮಾನಿಸಿರುವೆ. ಈ ಮೊತ್ತವನ್ನು ಒಮ್ಮೆಲೇ ತೊಡಗಿಸಲೇ? ಅಥವಾ ಎಸ್‌ಐಪಿ ಮೂಲಕ ತೊಡಗಿಸಲೇ? ‘ಒಮ್ಮೆಲೇ ತೊಡಗಿಸಿ, ಯುದ್ಧ ಮುಗಿದ ನಂತರ ಮಾರುಕಟ್ಟೆ ಜಿಗಿಯುತ್ತದೆ, ಆಗ ಒಳ್ಳೆಯ ಲಾಭ ಬರುತ್ತದೆ’ ಎಂದು ಆಪ್ತರು ಕೆಲವರು ಹೇಳುತ್ತಿದ್ದಾರೆ. ಎಸ್ಐಪಿ ಮಾಡಿದರೆ ಲಾಭ ಕಡಿಮೆ ಎನ್ನುತ್ತಿದ್ದಾರೆ. ಏನು ಮಾಡಲಿ?

-ಸುನಿತಾ, ಕುಂದಾಪುರ

ಉತ್ತರ: ಪ್ರತಿ ವ್ಯಕ್ತಿಯ ಹೂಡಿಕೆ ರೀತಿ, ನಿರೀಕ್ಷಿಸುವ ಲಾಭ, ಹೂಡಿಕೆ ಅವಧಿ ಹಾಗೂ ಯೋಚನಾ ಶೈಲಿ ಭಿನ್ನ. ಹೂಡಿಕೆದಾರರ ಅನುಭವ ಮತ್ತು ಮಾರುಕಟ್ಟೆ ಭಿನ್ನ ಸನ್ನಿವೇಶಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವ ಅರಿವು ಎಷ್ಟಿದೆ ಎನ್ನುವುದೂ ಇದಕ್ಕೆ ಕಾರಣ. ನೀವು ಕೇಳಿರುವುದು, ಹೂಡಿಕೆಗೆ ಹೆಚ್ಚುವರಿ ಹಣ ಇದೆ ಎಂದಾಗ ಮೂಡುವ ಸಹಜ ಪ್ರಶ್ನೆಯನ್ನು.

ADVERTISEMENT

ಹೂಡಿಕೆದಾರ ಪರಿಣತನಾಗಿದ್ದರೆ, ಮ್ಯೂಚುವಲ್ ಫಂಡ್ ಅಷ್ಟೇ ಏಕೆ , ಮ್ಯೂಚುವಲ್ ಫಂಡ್ ಕಂಪನಿಗಳು ಹೂಡಿಕೆ ಮಾಡುವ ಷೇರುಪೇಟೆಯ ಅನೇಕ ಉತ್ಪನ್ನಗಳಲ್ಲಿ ನೇರವಾಗಿ ಹೂಡಿಕೆ ಮಾಡಬಹುದು. ಹೂಡಿಕೆಯು ಆರ್ಥಿಕ ಜಗತ್ತಿನ ತಲ್ಲಣಗಳಿಗೆ ಅನುಗುಣವಾಗಿ ಏರುತ್ತ, ಕುಸಿಯುತ್ತ ಇರುತ್ತದೆ. ಹೂಡಿಕೆದಾರ ತನ್ನ ಅರಿವಿನ ಇತಿಮಿತಿಯೊಳಗೆ, ಹೂಡಿಕೆಯಲ್ಲಿನ ಅಪಾಯಗಳನ್ನು ಅರಿತು ಯಾವುದರಲ್ಲೂ ಹಣ ತೊಡಗಿಸಬಹುದು.

ದೀರ್ಘ ಅವಧಿಯಲ್ಲಿ ಒಳ್ಳೆಯ ಆದಾಯ ಕೊಡಬಲ್ಲ ಕಾರಣಕ್ಕಾಗಿ ಇಂದು ಎಸ್ಐಪಿ ಯೋಜನೆಗಳು ಜನಪ್ರಿಯವಾಗಿವೆ. ಪ್ರಪಂಚದ ಹಲವಾರು ವಿಚಾರಗಳು ಆರ್ಥಿಕ ರಂಗದ ಮೇಲೆ ಪರಿಣಾಮ ಬೀರುವ ಕಾರಣ, ಮಾರುಕಟ್ಟೆಯ ಗತಿ ಸುಲಭಕ್ಕೆ ಊಹೆಗೆ ಸಿಗುವುದಿಲ್ಲ.

ಯುದ್ಧದ ಸನ್ನಿವೇಶವು ಹಲವು ಹೂಡಿಕೆದಾರರನ್ನು ಕಂಗೆಡಿಸಿದೆ. ಯುದ್ಧ ಮುಗಿದ ನಂತರ ಮಾರುಕಟ್ಟೆ ಜಿಗಿಯುತ್ತದೆ ಎಂಬ ಊಹೆ ಹೂಡಿಕೆದಾರರಲ್ಲಿ ಬರುವುದು ಸಹಜ. ಯುದ್ಧವಷ್ಟೇ ಅಲ್ಲದೆ, ಅನೇಕ ಸನ್ನಿವೇಶಗಳು ಮಾರುಕಟ್ಟೆಯನ್ನು ಮೇಲಕ್ಕೆ ಅಥವಾ ಕೆಳಕ್ಕೆ ಕೊಂಡೊಯ್ಯಬಾರದೆಂದೇನೂ ಇಲ್ಲ. ಹಣದುಬ್ಬರ, ಬಡ್ಡಿದರ, ಕಂಪನಿಗಳ ಲಾಭಾಂಶದ ಹಿನ್ನಡೆ, ವಹಿವಾಟು ಕುಸಿತ ಹೀಗೆ ಪಟ್ಟಿ ಮಾಡಿದರೆ ಇನ್ನೆಷ್ಟೋ ಕಾರಣಗಳು ಸಿಗುತ್ತವೆ. ಜಾಗತಿಕ, ದೇಶಿ ಮಟ್ಟದಲ್ಲಾಗುವ ಬದಲಾವಣೆಗಳಿಗೆ ಅನುಗುಣವಾಗಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದೂ ಅನೇಕ ಬಾರಿ ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ. ಸಾಮಾನ್ಯ ಹೂಡಿಕೆದಾರರು ಇಂತಹ ವಿಚಾರಗಳ ಜಾಡು ಹಿಡಿದು ಹೂಡಿಕೆ ಮಾಡುವುದು ತುಸು ಕಷ್ಟ.

ನೀವು ಯಾವ ವರ್ಗದ ಹೂಡಿಕೆದಾರ ಎಂಬುದು ಮುಖ್ಯ. ನೀವು ನಿಮ್ಮ ಅಸಲು ಮೊತ್ತದ ಮೇಲೆ ಆಗಬಹುದಾದ ಸಂಭವನೀಯ ಅಪಾಯವನ್ನು ತಾಳುವ ಶಕ್ತಿ ಹೊಂದಿದವರಾಗಿದ್ದರೆ ಹಾಗೂ ಅಸಲು ಹೂಡಿಕೆ ನಷ್ಟವಾದರೂ, ಮಾರುಕಟ್ಟೆ ಸಮಗ್ರವಾಗಿ ಚೇತರಿಸಿಕೊಳ್ಳುವವರೆಗೆ ಕಾಯುವ ಸಂಯಮ ಉಳ್ಳವರಾಗಿದ್ದರೆ ಒಂದೇ ಬಾರಿ ಹೂಡಿಕೆ ಮಾಡಬಹುದು. ಹೀಗೆ ತಾಳಿಕೊಳ್ಳುವುದು ಕಷ್ಟವಾಗಿದ್ದಲ್ಲಿ, ಮಾರುಕಟ್ಟೆ ಕುಸಿದಾಗ ಹಂತ ಹಂತವಾಗಿ ಹೂಡಿಕೆ ಮಾಡಿ. ಅಥವಾ ಎಸ್ಐಪಿ ಮೂಲಕ ನಿಮ್ಮ ಹೂಡಿಕೆಯನ್ನು ಒಳ್ಳೆಯ ಫಂಡ್‌ಗಳಲ್ಲಿ ತೊಡಗಿಸಿ, ದೀರ್ಘಾವಧಿಯಲ್ಲಿ ಲಾಭ ಪಡೆಯಿರಿ.

**

ಪ್ರಶ್ನೆ: ನಾನು ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಒಂದೆರಡು ತಿಂಗಳ ಹಿಂದೆ ಉದ್ಯೋಗ ಬದಲಾಯಿಸಿದ್ದೇನೆ. ನನ್ನ ಹಳೆಯ ಕಂಪನಿಯ ಎಚ್ಆರ್ ವಿಭಾಗದವರು ನನ್ನಿಂದ ತೆರಿಗೆ ಮಾಹಿತಿ ಕೇಳಿದ್ದರು. ಅವರಿಗೆ ಮಾಹಿತಿ ಕೊಟ್ಟಿದ್ದೇನೆ. ಹೊಸ ಕಂಪನಿಯ ಎಚ್ಆರ್ ವಿಭಾಗದವರೂ ಕೇಳುತ್ತಿದ್ದಾರೆ. ನಾನು ಈ ಮಾಹಿತಿಯನ್ನು ಕೊಡಬಹುದೇ? ಇದರಿಂದ ತೆರಿಗೆ ಲಾಭ ಇದೆಯೇ? ಒಂದು ವೇಳೆ ತೊಂದರೆ ಇದ್ದರೆ ತಿಳಿಸಿ.

-ರಾಧಾ ಮೋಹನ್, ಬಸವನಗುಡಿ, ಬೆಂಗಳೂರು

ಉತ್ತರ: ಯಾವುದೇ ವ್ಯಕ್ತಿ ಉದ್ಯೋಗ ಬದಲಾಯಿಸಿದಾಗ ಕಂಪನಿಯ ಮಾನವ ಸಂಪನ್ಮೂಲ ವಿಭಾಗದವರು ಸಹಜವಾಗಿ ಕೆಲವು ಮಾಹಿತಿ ಕೇಳುತ್ತಾರೆ. ಇದರಲ್ಲಿ ‘ಫಾರಂ - 12 ಬಿಬಿ’ ಮಹತ್ವದ್ದು. ಇದರಲ್ಲಿ ನಿಮ್ಮ ವಾರ್ಷಿಕ ಹೂಡಿಕೆಗೆ ಸಂಬಂಧಪಟ್ಟ ಮಾಹಿತಿ ಕೊಡಬೇಕಾಗುತ್ತದೆ. ನೀವು ಒಂದೇ ಮಾಹಿತಿಯನ್ನು ಒಂದೇ ವರ್ಷದಲ್ಲಿ ಉದ್ಯೋಗ ಬದಲಾಯಿಸಿದಾಗ ಎರಡೂ ಕಂಪನಿಯವರಿಗೆ ಕೊಟ್ಟರೆ, ನೀವು ಕೊಟ್ಟ ಮಾಹಿತಿಯ ಆಧಾರದ ಮೇಲೆ ಎರಡು ಬಾರಿ ತೆರಿಗೆ ವಿನಾಯಿತಿ ನೀಡಿದಂತಾಗುತ್ತದೆ.

ವಾಸ್ತವವಾಗಿ ಅವರಿಗೆ ನೀವು ಕೊಡುವ ಮಾಹಿತಿಯೇ ಅಂತಿಮ. ಇಂತಹ ಸಂದರ್ಭದಲ್ಲಿ ನಿಮ್ಮ ಒಟ್ಟು ಆದಾಯದ ಮೇಲೆ ‘ಸೆಕ್ಷನ್ 80 ಸಿ’ ಅಡಿ ಎರಡೂ ಕಂಪನಿಯವರು ತೆರಿಗೆ ವಿನಾಯಿತಿ ನೀಡುವುದರಿಂದ, ನಿಮ್ಮ ಆದಾಯದ ಮೇಲೆ ತೆರಿಗೆ ಕಡಿತ ಮಾಡಬೇಕಾದ ಒಟ್ಟು ಮೊತ್ತಕ್ಕಿಂತ ಬಹಳಷ್ಟು ಕಡಿಮೆ ಕಡಿತ ಆಗಿರುತ್ತದೆ. ಇದು ಮುಂದೆ ನೀವು ಎರಡೂ ಕಂಪನಿಗಳ ‘ಫಾರ್ಂ 16’ ಸೇರಿಸಿ ತೆರಿಗೆ ವಿವರ ಸಲ್ಲಿಸುವಾಗಲಷ್ಟೇ ನಿಮ್ಮ ತೆರಿಗೆ ಸಲಹೆಗಾರರಿಂದ ಬಾಕಿ ಇರುವ ದೊಡ್ಡ ಮೊತ್ತ ಪಾವತಿಸಬೇಕೆಂಬ ಮಾಹಿತಿ ಗೊತ್ತಾಗುತ್ತದೆ. ಕೊನೆಗೆ, ನೀವು ಬಾಕಿ ಇರುವ ತೆರಿಗೆಯಷ್ಟೇ ಅಲ್ಲದೆ, ಬಡ್ಡಿಯನ್ನೂ ತೆರಬೇಕಾಗುವ ಸನ್ನಿವೇಶ ಎದುರಾಗುತ್ತದೆ.

ಹೀಗಾಗಿ ನೀವು ಮೊದಲ ಕಂಪನಿಗೆ ಹೂಡಿಕೆಯ ಅಂತಿಮ ಮಾಹಿತಿ ನೀಡಿದ್ದರೆ ಮತ್ತು ಅದನ್ನು ‘ಫಾರ್ಂ 16’ರಲ್ಲಿ ಅಳವಡಿಸಿಕೊಳ್ಳುವುದಿದ್ದರೆ, ಅದೇ ಮಾಹಿತಿಯನ್ನು ಎರಡನೇ ಕಂಪನಿಗೂ ನೀಡುವ ಅಗತ್ಯವಿಲ್ಲ. ಮಾತ್ರವಲ್ಲ, ನೀವು ‘ಫಾರಂ - 12 ಬಿ’ಯನ್ನು ನಿಮ್ಮ ಹೊಸ ಕಂಪನಿಗೆ ಲಿಖಿತ ರೂಪದಲ್ಲಿ ಕೊಡುವುದರಿಂದ ನೀವು ಉಲ್ಲೇಖಿಸಿರುವ ಸಮಸ್ಯೆ ಪರಿಹರಿಸಬಹುದು. ಇದು ನಿಮ್ಮ ಹಿಂದಿನ ಕಂಪನಿಯಿಂದ ಗಳಿಸಿದ ಆದಾಯ, ಹೂಡಿಕೆ ವಿವರ, ಕಡಿತವಾದ ತೆರಿಗೆ ಮಾಹಿತಿ ಇತ್ಯಾದಿ ನಿಖರ ಮಾಹಿತಿ ಹೊಂದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.