ADVERTISEMENT

ಪ್ರಶ್ನೋತ್ತರ: ಹೊಸ ತೆರಿಗೆ ಪದ್ಧತಿ ಅನುಕೂಲವೇ?

ಪ್ರಮೋದ ಶ್ರೀಕಾಂತ ದೈತೋಟ
Published 16 ಜನವರಿ 2024, 20:04 IST
Last Updated 16 ಜನವರಿ 2024, 20:04 IST
   

ಪ್ರಶ್ನೆ: ನಾನು ಮೇ 2020ರಲ್ಲಿ ಸಾರ್ವಜನಿಕ ವಲಯದ ಕಂಪನಿಯಿಂದ ನಿವೃತ್ತಿ ಪಡೆದೆ. ಈ ಸಂದರ್ಭದಲ್ಲಿ ನಾನು ರಜಾ ನಗದೀಕರಣದ ಮೊತ್ತ ಪಡೆದೆ. ನನ್ನ ಕಂಪನಿಯವರು ಈ ಮೊತ್ತ ಪಾವತಿಸುವಾಗ ಆದಾಯ ತೆರಿಗೆಯ ಸೆಕ್ಷನ್ 10(10ಎಎ) ಇದರಡಿ ಅನ್ವಯವಾಗುವ ತೆರಿಗೆ ಕಡಿತಗೊಳಿಸಿ ಪಾವತಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಕಂಪನಿ ಉದ್ಯೋಗಿಗಳಿಗೆ ವಿನಾಯಿತಿ ಮಿತಿ ₹3 ಲಕ್ಷ ಮಾತ್ರ ಇತ್ತು. ಈ ವರ್ಷಕ್ಕೆ ಸಂಬಂಧಿಸಿ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ರಜಾ ನಗದೀಕರಣಕ್ಕೆ ಸಂಬಂಧಿತ ಸಂಪೂರ್ಣ ಮೊತ್ತಕ್ಕೆ ವಿನಾಯಿತಿ ಸಿಗುವಂತೆ ನಾನು ರಿಫಂಡ್ ಕ್ಲೈಂ ಮಾಡಿದ್ದೆ. ತದನಂತರ ನನ್ನ ರಿಟರ್ನ್ಸ್ ಡಿಮಾಂಡ್ ಸಹಿತ ಅಸೆಸ್ ಆದ ಮಾಹಿತಿ ಬಂತು. ಇದರ ಬಗ್ಗೆ ಅಪೀಲ್ ಸಲ್ಲಿಸಿದ್ದು ಮಾನ್ಯವಾಗದೆ, ಬಡ್ಡಿ ಸಮೇತ (ತೆರಿಗೆ ಡಿಮ್ಯಾಂಡ್‌) ತೆರಿಗೆ ಇಲಾಖೆ ತಿಳಿಸಿರುವಂತೆ ಪಾವತಿಸಿದೆ. ಇದಾದ ನಂತರವೂ ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನಲ್ಲಿ ಈ ಮೊತ್ತ ಇನ್ನೂ ಬಾಕಿ ಇದೆ ಎಂದು ಕಾಣಿಸುತ್ತಿದೆ. ಇದನ್ನು ಕಂಡು ಮತ್ತೆ ನಾನು ಐಟಿಆರ್ - ಯು ರಿಟರ್ನ್ಸ್ ಶೇ 25ರ ದಂಡದೊಡನೆ ಪಾವತಿಸಿದೆ. ಇದು ಕಳೆದ ಡಿಸೆಂಬರ್ 2023ರಲ್ಲಿ ಆದಾಯ ತೆರಿಗೆ ಇಲಾಖೆ ಪರಿಶೀಲಿಸಿದಾಗ ಮತ್ತೆ ಡಿಮ್ಯಾಂಡ್‌ ಹಾಗೂ ಬಡ್ಡಿ ಹಾಕಿ ನೋಟಿಸ್ ಜಾರಿ ಮಾಡಿದೆ. ಇದು ಸರಿಯಲ್ಲವೆನ್ನುವುದು ನನ್ನ ಅಭಿಪ್ರಾಯ. ಪ್ರಸ್ತುತ ಎರಡನೆಯ ವರ್ಷವಾದ್ದರಿಂದ, ಹಿಂದೆ ಸಲ್ಲಿಸಿದ್ದ ಐಟಿಆರ್ - ಯು ರಿಟರ್ನ್ಸ್ ಅನ್ನು ಮತ್ತೆ ಪರಿಷ್ಕರಿಸಿ ಶೇ 50ರ ದಂಡದೊಡನೆ ಪಾವತಿಸಿ ಈ ತೊಂದರೆ ನಿವಾರಿಸಿಕೊಳ್ಳಬಹುದೆ? ಐ.ಟಿ ಪೋರ್ಟಲ್‌ನಲ್ಲಿ ಮಾಹಿತಿ ಸರಿಯಾಗಿ ಕಾಣುವಂತಾಗಲು ಹಾಗೂ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದೇನು ಮಾಡಬೇಕು.
 

–ಸುರೇಶ್ ನಾರಾಯಣ್ ನಾಯ್ಕ, ಕುಮಟಾ 

ಉತ್ತರ: ನಿಮ್ಮ ಸುದೀರ್ಘ ಪ್ರಶ್ನೆಯಲ್ಲಿ ಉಲ್ಲೇಖಿಸಿದ ಅನೇಕ ವಿವರಗಳನ್ನು ನೋಡಿದಾಗ ಈ ಬಗ್ಗೆ ಸಾಕಷ್ಟು ವಿವರವನ್ನು ಅವಲೋಕಿಸಿ ನಿಮ್ಮ ರಿಟರ್ನ್ಸ್ ಬಗೆಗಿನ ಅಸೆಸ್ಮೆಂಟ್ ವಿವರಗಳನ್ನು ಸಲ್ಲಿಸಬೇಕಿತ್ತು ಎನ್ನುವುದು ಮೊದಲ ಹಂತದಲ್ಲಿ ತಿಳಿಯುತ್ತದೆ. ನೀವು ಸಲ್ಲಿಸಿದ್ದ ಪ್ರಥಮ ಹಂತದ ರಿಟರ್ನ್ಸ್ ಮಿತಿಗಿಂತ ಹೆಚ್ಚುವರಿ ವಿನಾಯಿತಿ ಪಡೆದಾಗ ಅಥವಾ ಉದ್ಯೋಗಿಯ ಕಂಪನಿ ಸಲ್ಲಿಸಿದ್ದ ಫಾರಂ 16ಕ್ಕೆ ವ್ಯತ್ಯಸ್ಥವಾದ ವಿವರ ತೆರಿಗೆದಾರನಿಂದ ಸಲ್ಲಿಕೆಯಾಗಿದ್ದರೂ ಇಂತಹ ಸಮಸ್ಯೆ ಮೂಲ ಹಂತದಲ್ಲಿ ಉದ್ಭವಿಸಬಹುದು.   

ADVERTISEMENT

ಒಂದು ವೇಳೆ ಈ ವ್ಯತ್ಯಾಸವನ್ನು ತೆರಿಗೆ ಇಲಾಖೆ ಕಂಡು ಹಿಡಿದ ಬಳಿಕವೂ ತೆರಿಗೆದಾರನಿಗೆ ನೋಟಿಸ್ ಜಾರಿ ಮಾಡಿ ಡಿಮ್ಯಾಂಡ್‌ ಚಲನ್ ಸಹಿತ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಡುತ್ತದೆ. ಈ ಹಂತದಲ್ಲಿ ನಿಮ್ಮ ಅಪೀಲ್ ಇದ್ದರೂ ಅದು ಮಾನ್ಯವಾಗದ ಕಾರಣ ಕೊನೆಗೆ ನೀವು ತೆರಿಗೆ ಹಾಗೂ ಬಡ್ಡಿ ಕಟ್ಟಿ ಸಮಸ್ಯೆಯಿಂದ ಹೊರಬರುವ ಪ್ರಯತ್ನ ಮಾಡಿದ್ದೀರಿ. ಆದರೆ ಕಟ್ಟಿದ ತೆರಿಗೆ ಪೋರ್ಟಲ್‌ನಲ್ಲಿ ಕಾಣದ ಕಾರಣಕ್ಕೆ ಮತ್ತೆ ಐಟಿಆರ್ - ಯು ಸಹಿತ ಶೇ 25ರ ತೆರಿಗೆಯನ್ನೂ ಕಟ್ಟಿದ್ದೀರಿ. ಕೊನೆಗೆ ಈ ಹಂತದಲ್ಲೂ ಹೊಸ ಡಿಮಾಂಡ್ ಬಂದಿದೆ ಎಂಬುದಾಗಿ ತಿಳಿಸಿರುತ್ತೀರಿ.

ಇಲ್ಲಿ ಕೆಲವೆಲ್ಲ ಮೂಲಭೂತ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದಾಯ ತೆರಿಗೆಯ ನಿಯಮ 139 (8ಎ) ಇದರಂತೆ, ಮೊದಲನೆಯದಾಗಿ, ಆದಾಯ ತೆರಿಗೆ ಇಲಾಖೆ ನಿರ್ದಿಷ್ಟ ವರ್ಷದ ಆದಾಯವನ್ನು ಪರಿಶೀಲಿಸಿ ನೋಟಿಸ್ ಜಾರಿ ಮಾಡಿ ಅಸೆಸ್ಮೆಂಟ್ ಮುಗಿಸಿರುವಾಗ ಅದೇ ವರ್ಷದ ಆದಾಯಕ್ಕೆ ನಾವೇ ತಿದ್ದುಪಡಿ ’ಐಟಿಆರ್ - ಯು’ ಸಲ್ಲಿಸುವ ಅವಕಾಶ ಇರುವುದಿಲ್ಲ. ಮಾತ್ರವಲ್ಲ ಒಂದು ವರ್ಷಕ್ಕೆ ಸಂಬಂಧಿಸಿ ಐಟಿಆರ್ - ಯು ಇದನ್ನು ಒಂದೇ ಬಾರಿ ಸಲ್ಲಿಸಬಹುದಾಗಿರುತ್ತದೆ. ಇದಲ್ಲದೆ, ನೀವು ಆದಾಯ ತೆರಿಗೆಯ ಡಿಮ್ಯಾಂಡ್‌ ನೋಟಿಸ್‌ಗೆ ಸಂಬಂಧಿಸಿ ಸಂಪೂರ್ಣ ತೆರಿಗೆ ಪಾವತಿಸಿದ ನಂತರವೂ ತೆರಿಗೆ ಸಂದಾಯವಾದ ಮಾಹಿತಿ ಪೋರ್ಟಲ್‌ನಲ್ಲಿ ದಾಖಲಾಗದಿದ್ದರೆ ಈ ಬಗ್ಗೆ ಲಿಖಿತ ಮಾಹಿತಿಯನ್ನು ನಿಮ್ಮ ಸಂಬಂಧಿತ ಆದಾಯ ತೆರಿಗೆ ಆಫೀಸ್‌ಗೆ ನೀಡುವ ಅವಕಾಶವಿದೆ ಅಥವಾ ಈ ಬಗ್ಗೆ ಆನ್‌ಲೈನ್‌ನಲ್ಲಿ ಈ ಸಮಸ್ಯೆ ದಾಖಲಿಸಿ ಪರಿಹರಿಸಿಕೊಳ್ಳಲು ಅವಕಾಶಗಳಿವೆ. ನೀವು ಒಂದು ಹಂತ ಮುಂದುವರಿದು ಶೇ 25ರ ಹೆಚ್ಚುವರಿ ತೆರಿಗೆಯನ್ನೂ ಪಾವತಿಸಿದ್ದೀರಿ ಹಾಗೂ ಇನ್ನೂ ಹೆಚ್ಚಿನ ತೆರಿಗೆ ಪಾವತಿಸುವ ಹಂತದ ಬಗ್ಗೆಯೂ ಯೋಚಿಸುತ್ತೀದ್ದೀರಿ.

–ಪ್ರಸ್ತುತ ನಿಮ್ಮ ಎಲ್ಲಾ ಪಾವತಿ ವಿವರಗಳನ್ನು ನಿಮಗೆ ಸಂಬಂಧಪಟ್ಟ ಆದಾಯ ತೆರಿಗೆ ಆಫೀಸ್‌ಗೆ ಖುದ್ದು ಭೇಟಿ ಮಾಡಿ ಬಗೆಹರಿಸಿಕೊಳ್ಳಬಹುದು. ಅಗತ್ಯ ಬಿದ್ದಲ್ಲಿ ಸಮೀಪದ ತೆರಿಗೆ ಸಲಹೆಗಾರರ ನೆರವನ್ನೂ ಪಡೆದುಕೊಳ್ಳಿ. ಕೆಲವೊಮ್ಮೆ ಸಂಪೂರ್ಣ ತೆರಿಗೆ ಕಟ್ಟಿದ ಮೇಲೂ ವಿವರಗಳು ಸರಿಯಾಗಿ ಮೂಡಿ ಬರದಿರುವುದಕ್ಕೆ ತಾಂತ್ರಿಕ ಕಾರಣ, ಪಾವತಿ ಚಲನ್ ಹಾಗೂ ಡಿಮ್ಯಾಂಡ್‌ ವಿವರ ಜೋಡಣೆ ಇತ್ಯಾದಿಯಲ್ಲಿನ ಸಮಸ್ಯೆಯೂ ಕಾರಣವಾಗಿರಬಹುದು. ಆದರೆ ಯಾವುದೇ ಆದಾಯಕ್ಕೆ ಸಮರ್ಪಕ ತೆರಿಗೆ ಪಾವತಿಯಾಗದೆ ಇದ್ದಾಗ ನೋಟಿಸ್ ಬಂದ ಹಂತದಲ್ಲಿ ಒಂದು ಬಾರಿ ಎಲ್ಲಾ ತೆರಿಗೆ, ಬಡ್ಡಿ ಪಾವತಿಸಿದ ಮೇಲೆ ಮತ್ತೆ ಅದನ್ನು ಬೇರೆ ಹಂತದಲ್ಲಿ ಕಟ್ಟುವ ಅಗತ್ಯ ಇಲ್ಲ ಎನ್ನುವುದನ್ನು ಮೊದಲು ಮನನ ಮಾಡಿಕೊಳ್ಳಿ ಹಾಗೂ ನಿಮ್ಮ ಪ್ರತಿ ಪಾವತಿಯೂ ಸಕಾರಣ ಹೊಂದಿರಲಿ.
       

ಪ್ರಶ್ನೆ:  ನಾನು ಈ ವರ್ಷದಿಂದ ಹೊಸ ತೆರಿಗೆ ಪದ್ಧತಿ ಅನುಸರಿಸುತ್ತಿದ್ದೇನೆ. ನನ್ನ ವಾರ್ಷಿಕ ವೇತನ ₹7.60 ಲಕ್ಷ. ಇದರಿಂದ ₹50 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಕಳೆದು ಉಳಿದ ₹7.10 ಲಕ್ಷಕ್ಕೆ ₹27,040 (ಶೇ. 4 ಸೆಸ್ ಸೇರಿ) ತೆರಿಗೆ ಬರುತ್ತದೆ ಎಂದು ಹೊಸ ತೆರಿಗೆ ಪದ್ದತಿಯ ಸ್ಲ್ಯಾಬ್ ದರದಂತೆ ಲೆಕ್ಕ ಹಾಕಿದಾಗ ತಿಳಿದೆ. ಆದರೆ ನಾನು ಹೆಚ್ಚುವರಿ ₹10,000 ಆದಾಯ ಗಳಿಸಿದ್ದಕ್ಕೆ, ಈ ಹೆಚ್ಚುವರಿ ಆದಾಯಕ್ಕಿಂತ ಸುಮಾರು ಮೂರು ಪಾಲು ತೆರಿಗೆ ಪಾವತಿಸಬೇಕಾಗಿ ಬಂದಿರುವುದು ಸರಿಯೇ. ಇದಕ್ಕಿಂತ ಹತ್ತು ಸಾವಿರ ವೇತನ ಕಡಿಮೆ ಮಾಡಿಸಿ ತೆರಿಗೆ ಶೂನ್ಯ ಮಾಡಲು ಕೋರಿಕೆ ಸಲ್ಲಿಸಲೇ. ನಾನು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದೇನೆ.

–ವೀಣಾ ಪ್ರಸಾದ್, ಮಂಗಳೂರು

 
ಉತ್ತರ: ಹೊಸ ತೆರಿಗೆ ಪದ್ಧತಿಯನ್ನು ಸೆಕ್ಷನ್ 115ಬಿಎಸಿ(1ಎ) ಅಡಿ ಆಯ್ಕೆ ಮಾಡಿಕೊಳ್ಳುವ ತೆರಿಗೆದಾರರಿಗೆ ಏಪ್ರಿಲ್ 1, 2023 (ಆರ್ಥಿಕ ವರ್ಷ 2023-24) ರಿಂದ ಅನ್ವಯಿಸಿ ಕನಿಷ್ಠ ತೆರಿಗೆ ಪರಿಹಾರ (ಮಾರ್ಜಿನಲ್ ರಿಲೀಫ್) ಲಭ್ಯವಿದೆ. ಇದರಂತೆ ₹7 ಲಕ್ಷಕ್ಕಿಂತ ಅಧಿಕ ಆದಾಯ ಇದ್ದಾಗ ಮತ್ತು ಪಾವತಿಸಬೇಕಾದ ತೆರಿಗೆ, ಗಳಿಸಿದ ತೆರಿಗೆ ಆದಾಯ ಹಾಗೂ ₹7 ಲಕ್ಷದ ವ್ಯತ್ಯಾಸಕ್ಕಿಂತ ಅಧಿಕ ಇದ್ದಾಗ, ಹೆಚ್ಚುವರಿ ಆದಾಯಕ್ಕಿಂತ ಅಧಿಕ ತೆರಿಗೆ ಏನಿರುತ್ತದೋ ಅದು ಕನಿಷ್ಠ ತೆರಿಗೆ ಪರಿಹಾರವಾಗಿ ಲಭ್ಯವಾಗುತ್ತದೆ. ಈ ಅವಕಾಶವನ್ನು ಪ್ರಸ್ತುತ ವರ್ಷದಿಂದ ಕೊಡಲಾಗಿದೆ. ಹೀಗಾಗಿ ನಿಮ್ಮ ವಿಚಾರದಲ್ಲಿ ತೆರಿಗೆ ₹26,000 ಹಾಗೂ ಹೆಚ್ಚುವರಿ ಆದಾಯ ₹10,000 ಇವುಗಳ ವ್ಯತ್ಯಾಸ ₹16,000 ರಿಲೀಫ್ ರೂಪದಲ್ಲಿ ಸಿಗುತ್ತದೆ. ಹೀಗಾಗಿ ₹ 27,040ರ ಬದಲು ಸೆಸ್ ಸೇರಿ ತೆರಿಗೆ ₹10,400 ಆಗಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.