ADVERTISEMENT

ಪ್ರಶ್ನೋತ್ತರ: ಆದಾಯ ತೆರಿಗೆಯಲ್ಲಿ ವಿಶೇಷ ರಿಯಾಯಿತಿಗಳಿವೆಯೇ?

ಪ್ರಮೋದ್ ಶ್ರೀಕಾಂತ್ ದೈತೋಟ ಅವರ ಪ್ರಶ್ನೋತ್ತರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 12 ಡಿಸೆಂಬರ್ 2023, 21:08 IST
Last Updated 12 ಡಿಸೆಂಬರ್ 2023, 21:08 IST
   

ಮಹಾದೇವಪ್ಪ ನಿಂಗಪ್ಪ ಮಲ್ಲಿಗವಾಡ, ಹುಬ್ಬಳ್ಳಿ ಪ್ರಶ್ನೆ: ನಾನು 2023ರ ಮಾರ್ಚ್‌ 31ರಂದು ನನ್ನ ಸ್ವಂತ ವಶದಲ್ಲಿದ್ದ ಜಮೀನನ್ನು ಮಾರಾಟ ಮಾಡಿರುತ್ತೇನೆ. ಇದರಲ್ಲಿ ಎರಡು ಪ್ರತ್ಯೇಕ ಜಮೀನುಗಳಿದ್ದು ₹65.63 ಲಕ್ಷ ಹಾಗೂ ₹17.50 ಲಕ್ಷ ಹೀಗೆ ಒಟ್ಟಾರೆ ₹83.13 ಲಕ್ಷ ಈ ಮಾರಾಟದಿಂದ ಬಂದಿದೆ. ಮೊದಲು ಉಲ್ಲೇಖಿಸಿದ ಮೊತ್ತಕ್ಕೆ ₹65,625 ತೆರಿಗೆ ಕಟಾಯಿಸಲಾಗಿದೆ. ಈ ಮಾರಾಟಕ್ಕೆ ಸಂಬಂಧಿಸಿ ತೆರಿಗೆ ವಿವರ ಸಲ್ಲಿಸಲು ಇಬ್ಬರು ಲೆಕ್ಕ ಪರಿಶೋಧಕರನ್ನು ಭೇಟಿಯಾದೆ. ಒಬ್ಬರ ಪ್ರಕಾರ ₹12 ಲಕ್ಷ ಹಾಗೂ ಇನ್ನೊಬ್ಬರ ಪ್ರಕಾರ ₹8 ಲಕ್ಷ ತೆರಿಗೆ ಬರುವ ಬಗ್ಗೆ ಹೇಳಿರುತ್ತಾರೆ. ಆದರೆ, ನಾವು ರೈತಾಪಿ ಜನರು ಮಾರಾಟದ ಹಣದಲ್ಲಿ ನನ್ನ ಇಬ್ಬರ ಹೆಣ್ಣುಮಕ್ಕಳಿಗೆ ತಲಾ ₹10 ಲಕ್ಷ, ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬನ ಮಗನಿಗೆ (ಮೊಮ್ಮಗನಿಗೆ) ₹32 ಲಕ್ಷ ಕೊಟ್ಟು ಕೃಷಿ ಭೂಮಿ ಖರೀದಿಸಿದ್ದೇನೆ ಹಾಗೂ ಇನ್ನೊಬ್ಬ ಮಗನಿಗೆ ವ್ಯಾಪಾರ ವಹಿವಾಟು ಮಾಡಲು ₹20 ಲಕ್ಷ ಹಂಚಿಕೆ ಮಾಡಿ ಉಳಿದ ಮೊತ್ತವನ್ನು ನಾನು ಹಾಗೂ ನನ್ನ ಹೆಂಡತಿಯ ಹೆಸರಲ್ಲಿ ಬ್ಯಾಂಕಿನ ಉಳಿತಾಯ ಖಾತೆ ಹಾಗೂ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿದ್ದೇವೆ. ಮುಂದೆ ನಾವು ಈ ಹಣಕ್ಕೆ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಬರಬಹುದೇ. ಈ ಬಗ್ಗೆ ತಿಳಿಸಿಕೊಡಿ.

ಉತ್ತರ: ನಿಮ್ಮ ಆಸ್ತಿ ಮಾರಾಟ ವಿಚಾರದಲ್ಲಿ ಈಗಾಗಲೇ ತೆರಿಗೆ ಕಟಾವಣೆಯಾಗಿದೆ ಹಾಗೂ ಈ ಬಗ್ಗೆ ತೆರಿಗೆ ಇಲಾಖೆಯಲ್ಲಿ ಮಾಹಿತಿ ಲಭ್ಯವಿದೆ ಎನ್ನುವುದು ನಿಮ್ಮ ಪ್ರಶ್ನೆಯಲ್ಲಿ ಇರುವ ಅಂಶ. ಇನ್ನೊಂದು ಆಸ್ತಿಯ ಮಾರಾಟವೂ ಆಗಿ ಅದರ ಮೊತ್ತವೂ ನಿಮಗೆ ಲಭ್ಯವಾಗಿದೆ. ಹೀಗಾಗಿ, ಈ ಹಂತದಲ್ಲೇ, ಆರ್ಥಿಕ ವರ್ಷ 2022-23ಕ್ಕೆ ಆಸ್ತಿಯ ಒಡೆತನ ಇದ್ದ ವ್ಯಕ್ತಿಯ ಹೆಸರಲ್ಲಿ ತೆರಿಗೆ ನಿರ್ಧಾರವಾಗುತ್ತದೆ. ಇನ್ನು ತೆರಿಗೆ ರಿಟರ್ನ್ಸ್ ಸಲ್ಲಿಸಲು ಈಗಾಗಲೇ ನಿಗದಿತ ಗಡುವು ಮೀರಿದೆ (ಜುಲೈ 31). ಆದರೆ, ಹೆಚ್ಚುವರಿ ದಂಡ ಪಾವತಿಸಿ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31ರ ತನಕ ಅವಕಾಶವಿದೆ. ಇದರೊಡನೆ, ಅನ್ವಯವಾಗುವ ತೆರಿಗೆ ಹಾಗೂ ಅದರ ಮೇಲೆ ಅನ್ವಯವಾಗುವ ಬಡ್ಡಿಯನ್ನೂ ಪಾವತಿಸಬೇಕಾಗುತ್ತದೆ. ಈ ಬಗ್ಗೆ ತ್ವರಿತ ಸಲಹೆ ಪಡೆದುಕೊಳ್ಳಿ ಹಾಗೂ ನಿಮ್ಮ ನಿರ್ಣಯ ಅಗತ್ಯ.

ನೀವು ಹೇಳಿರುವಂತೆ ಪ್ರತ್ಯೇಕವಾದ ತೆರಿಗೆ ಪಾವತಿಯ ಸಲಹೆಗಳು ಬಂದಿರುತ್ತವೆ. ಇದರ ನಿವಾರಣೆಗೆ ನೀವು ಅವರಿಗೆ ನೀಡಿದ ಮಾಹಿತಿ ಒಂದೇ ಪ್ರಕಾರವಾದುದೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಅವರು ಅದನ್ನು ಅರ್ಥೈಸಿ ಲೆಕ್ಕಾಚಾರಕ್ಕೆ ಪರಿಗಣಿಸಿದ ವಿವರಗಳು ವ್ಯತ್ಯಾಸವಿರಬಹುದು. ಇದಕ್ಕಾಗಿ ಸಂಪೂರ್ಣ ವಿವರದ ಮಾಹಿತಿ ಪಡೆದು ತುಲನೆ ಮಾಡಿಕೊಳ್ಳಿ ಹಾಗೂ ಸಂದೇಹ ಬಗೆಹರಿಸಿಕೊಳ್ಳಿ.

ADVERTISEMENT

ಇನ್ನು ನಿಮ್ಮ ಮಕ್ಕಳ, ಮೊಮ್ಮಕ್ಕಳ ಹೆಸರಿಗೆ ಬಂದಿರುವ ಹಣ ವರ್ಗಾವಣೆ ಮಾಡಿದ ಮಾತ್ರಕ್ಕೆ ನಿಮಗೆ ಅನ್ವಯವಾಗುವ ವೈಯಕ್ತಿಕ ತೆರಿಗೆ ಬಾಧ್ಯತೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ. ಮಾತ್ರವಲ್ಲ ಅವರ ಹಣದ ಮೂಲದ ದಾಖಲೆಯ ದೃಷ್ಟಿಯಿಂದಲೂ ಇದನ್ನು ‘ಉಡುಗೊರೆ’ಯ ರೂಪದಲ್ಲಿ ನೀವೇ ನೀಡಿರುವ ಬಗ್ಗೆ ಸೂಕ್ತ ‘ಗಿಫ್ಟ್ ಡೀಡ್’ ಇರಿಸುವುದು ಸೂಕ್ತ. ಈ ಹಣದ ವರ್ಗಾವಣೆಗೆ ಮತ್ತೊಮ್ಮೆ ತೆರಿಗೆ ಇರುವುದಿಲ್ಲ.  

ನಾಗರಾಜ್, ಅರಸೀಕೆರೆ ಪ್ರಶ್ನೆ: ಅಕ್ಟೋಬರ್ 25ರ ಸಂಚಿಕೆಯಲ್ಲಿ ನನ್ನ ಪ್ರಶ್ನೆಗೆ ಉತ್ತರಿಸುತ್ತಾ ನೀವು ಊಹಿಸಿರುವಂತೆ ನನ್ನ ಮಾಸಿಕ ಪಿಂಚಣಿ ಆದಾಯ ₹1 ಲಕ್ಷದ ಸಮೀಪ ಇದ್ದು, ಇದು ವಾರ್ಷಿಕವಾಗಿ ₹11 ಲಕ್ಷದಿಂದ ₹12 ಲಕ್ಷ ಆಗಿರುತ್ತದೆ. ನನ್ನ ಮುಖ್ಯ ಪ್ರಶ್ನೆ ಏನೆಂದರೆ ನನಗೆ ವಯಸ್ಸು 82 ಆಗಿರುವುದರಿಂದ ನನ್ನ ಸೂಪರ್ ಸೀನಿಯಾರಿಟಿ ಪರಿಗಣಿಸಿ ಆದಾಯ ತೆರಿಗೆಯಲ್ಲಿ ವಿಶೇಷ ರಿಯಾಯಿತಿಗಳಿವೆಯೇ ಎಂಬುದು. ಇದಲ್ಲದೆ ಸೆಕ್ಷನ್ 194ಪಿ ಇದರಲ್ಲಿ ಏನಿದೆ. ಹಾಗೆ ಹಳೆಯ ಪದ್ಧತಿ ಆಯ್ಕೆ ಮಾಡಿಕೊಂಡರೆ ₹5 ಲಕ್ಷ ತೆರಿಗೆ ಮಿತಿ ಹಾಗೂ ಹೊಸ ತೆರಿಗೆ ಪದ್ಧತಿ ಆರಿಸಿದರೆ ₹7 ಲಕ್ಷ ವಿನಾಯಿತಿ ಎಂಬುದು ಸರಿಯೇ .

ಉತ್ತರ: ನಿಮ್ಮ ಪ್ರಶ್ನೆಯಲ್ಲಿ ಉಲ್ಲೇಖಿಸಿರುವ ವಿಚಾರ ಸರಿಯಾಗಿದ್ದರೂ ಅವನ್ನು ಅನ್ವಯಿಸುವ ಸಂದರ್ಭಗಳನ್ನೂ ನಾವು ಗಮನಿಸಬೇಕಾಗುತ್ತದೆ. ಕಾರಣ ಇಂತಹ ವಿಚಾರದಲ್ಲಿ ಹೊರನೋಟಕ್ಕೆ ಸಾಮಾನ್ಯವಾಗಿ ಎಲ್ಲರೂ ಅರ್ಥೈಸುವ ವಿಚಾರವೆಂದರೆ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದೊಡನೆ ಎಲ್ಲರಿಗೂ ₹7 ಲಕ್ಷದ ಆದಾಯದ ತನಕ ತೆರಿಗೆಯೇ ಇಲ್ಲ ಎಂಬುದು. ಆದರೆ, ಗಮನಿಸಬೇಕಾದ ಮುಖ್ಯ ಅಂಶವೆಂದರೆ, ತೆರಿಗೆಗೊಳಪಡುವ ಆದಾಯ ₹7 ಲಕ್ಷದ ಮಿತಿ ದಾಟಿದೊಡನೆ ಎಲ್ಲಾ ವಯೋಮಾನದವರಿಗೂ ಸೆಕ್ಷನ್ 87ಎ ಅಡಿ ಸಿಗುವ ₹25,000 ತನಕದ ವಿಶೇಷ ತೆರಿಗೆ ರಿಬೇಟ್ ಲಭ್ಯವಾಗುವುದಿಲ್ಲ. ಹೀಗಾಗಿ ತೆರಿಗೆ ₹3 ಲಕ್ಷದಿಂದಲೇ ಆರಂಭವಾಗುತ್ತದೆ. ಈ ವಿನಾಯಿತಿಯ ಲಭ್ಯತೆ ₹7 ಲಕ್ಷದೊಳಗೆ ತೆರಿಗೆಗೊಳಪಡುವ ಆದಾಯ ಇರುವವರಿಗೆ ಮಾತ್ರ ಲಭ್ಯವಾಗುತ್ತದೆ.

ನಿಮ್ಮ ವಾರ್ಷಿಕ ಆದಾಯ ಈಗಾಗಲೇ ₹12 ಲಕ್ಷವಿದೆ. ನಿಮಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ₹50 ಸಾವಿರ ಕಳೆದು ಉಳಿದ ಮೊತ್ತದ ಮೇಲೂ ₹11.50 ಲಕ್ಷ ಆದಾಯವಿದ್ದಾಗ ವಯೋಮಾನದ ಪರಿಗಣನೆ ಅನ್ವಯವಾಗದೆ ಸಹಜವಾಗಿ ₹3 ಲಕ್ಷಕ್ಕಿಂತ ಅಧಿಕ ಇರುವ ಆದಾಯದ ಮೇಲೆ (ಹೊಸ ತೆರಿಗೆ ಪದ್ಧತಿಯಡಿ ಇರುವ ಮೂಲ ಆದಾಯ ವಿನಾಯಿತಿ ಮಿತಿ) ವಿವಿಧ ಹಂತದ ಸ್ಲ್ಯಾಬ್ ದರದಂತೆ ತೆರಿಗೆ ಕಟ್ಟಬೇಕಾಗುತ್ತದೆ. ಅಂದರೆ ₹3-6 ಲಕ್ಷಕ್ಕೆ ಶೇ 5, ₹6-9 ಲಕ್ಷಕ್ಕೆ ಶೇ 10, ₹9-12 ಲಕ್ಷಕ್ಕೆ ಶೇ 15ರ ತೆರಿಗೆ ದರ, ಹೀಗೆ ಮುಂದುವರಿಯುತ್ತದೆ.  

ನೀವು ಸೂಪರ್ ಸೀನಿಯರ್ ಆಗಿರುವುದರಿಂದ ನಿಮ್ಮ ವಯಸ್ಸಿಗೆ ಅನ್ವಯಿಸಿ ಹಳೆ ಪದ್ಧತಿ ಆಯ್ಕೆ ಮಾಡಿಕೊಂಡರೆ ₹5 ಲಕ್ಷ ತನಕದ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಉಳಿದ ಹೆಚ್ಚುವರಿ ಮೊತ್ತಕ್ಕೆ ಸ್ಲ್ಯಾಬ್ ದರದಂತೆ ₹5-10 ಲಕ್ಷಕ್ಕೆ ಶೇ 20 ಹಾಗೂ ಮುಂದಿನ ಹೆಚ್ಚುವರಿ ಆದಾಯಕ್ಕೆ ಶೇ 30ರ ದರದಲ್ಲಿ ತೆರಿಗೆ ಇರುತ್ತದೆ.

ನಿಮ್ಮ ವಿಚಾರದಲ್ಲಿ, ಸೆಕ್ಷನ್ 194ಪಿ ಇದರಂತೆ ಕೇವಲ ಪಿಂಚಣಿ ಆದಾಯ ಹಾಗೂ ಬಡ್ಡಿ ಆದಾಯ ಇದ್ದಾಗ ನೀವು ಆಯ್ಕೆ ಮಾಡಿದ ಯಾವುದೇ ಪದ್ಧತಿಯಡಿ ಬ್ಯಾಂಕಿನವರು ನಿಮಗೆ ಅನ್ವಯವಾಗುವ ಸಮರ್ಪಕ ತೆರಿಗೆಯನ್ನು ಕಡಿತಗೊಳಿಸಿ ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಲ್ಲಿಸಿದ್ದರೆ ನೀವು ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ. ನಿಮ್ಮಲ್ಲಿ ಯಾವುದೇ ತೆರಿಗೆ ರಿಯಾಯಿತಿಗೆ ಸಂಬಂಧಿಸಿದ ಹೂಡಿಕೆ ಇಲ್ಲ ಎಂದು ಪರಿಭಾವಿಸಿ ಹೇಳುವುದಾದರೆ ₹12 ಲಕ್ಷದ ಪಿಂಚಣಿ ಆದಾಯಕ್ಕೆ ಹೊಸ ತೆರಿಗೆ ಪದ್ಧತಿಯೇ ಸೂಕ್ತ. ಸುಮಾರಾಗಿ ವರ್ಷಕ್ಕೆ 86 ಸಾವಿರದಷ್ಟು ತೆರಿಗೆ ಬರಬಹುದು. ಇದೇ ಸನ್ನಿವೇಶದಲ್ಲಿ ಹಳೆಯ ತೆರಿಗೆ ಪದ್ಧತಿಯಡಿ ತೆರಿಗೆ ಸುಮಾರು ₹1.51 ಲಕ್ಷವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.