ADVERTISEMENT

ಪ್ರಶ್ನೊತ್ತರ: ಕೃಷಿ ಆದಾಯಕ್ಕೆ ಎಷ್ಟರ ತನಕ ತೆರಿಗೆ ವಿನಾಯಿತಿ ಇದೆ?

ಯು.ಪಿ.ಪುರಾಣಿಕ್
Published 21 ಡಿಸೆಂಬರ್ 2021, 19:30 IST
Last Updated 21 ಡಿಸೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಶ್ನೆ: ನನ್ನ ಸ್ನೇಹಿತನೊಬ್ಬನಿಗೆ ₹ 25 ಸಾವಿರ ಕೈಗಡವಾಗಿ ಕೊಟ್ಟು ಆತನಿಂದ ₹ 25 ಸಾವಿರಕ್ಕೆ ಚೆಕ್‌ ಪಡೆದಿದ್ದೇನೆ. ಆತ ಹಣ ಕೊಡುತ್ತಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಸಲಹೆ ನೀಡಿ.

–ಚಂದ್ರಮೋಹನ್‌, ಬಳ್ಳಾರಿ

ಉತ್ತರ: ಚೆಕ್‌, ಡಿ.ಡಿ. ನಗದೀಕರಿಸಲು ಇರುವ ಅವಧಿ 90 ದಿನಗಳು ಮಾತ್ರ. ನೀವು ಪಡೆದ ಚೆಕ್‌ನ ತಾರೀಕಿನಿಂದ ಇದುವರೆಗೆ 90 ದಿನಗಳು ಆಗದೇ ಇರುವಲ್ಲಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್‌ನ 138ನೇ ಸೆಕ್ಷನ್‌ ಅಡಿ ಚೆಕ್‌ ಅನ್ನು ಬ್ಯಾಂಕ್‌ಗೆ ನೀಡಿ. ಅದು ಬೌನ್ಸ್‌ ಆದಲ್ಲಿ ನ್ಯಾಯಾಲಯದಲ್ಲಿ ಹಣ ವಸೂಲಾತಿಗೆ ದಾವೆ ಹೂಡಬಹುದು. ಚೆಕ್‌ ಬೌನ್ಸ್‌ ಆದಲ್ಲಿ ಅದಕ್ಕೆ ಕಾರಣವೇನೆಂದು ಬ್ಯಾಂಕ್‌ ನೀಡುವ ಮೆಮೊವನ್ನು ಕೋರ್ಟ್‌ಗೆ ಹಾಜರುಪಡಿಸಬೇಕಾಗುತ್ತದೆ. ಹೀಗೆ ಚೆಕ್‌ ಬೌನ್ಸ್‌ ಆದ 15 ದಿನಗಳೊಳಗೆ ದಾವೆ ದಾಖಲು ಮಾಡಬೇಕು. ದಾವೆ ದಾಖಲು ಮಾಡುವ ಮುನ್ನ ಚೆಕ್‌ ಮತ್ತು ಬ್ಯಾಂಕ್‌ ಮೆಮೊ ನಕಲು ಪ್ರತಿ ಇಟ್ಟುಕೊಳ್ಳಿ. ಸಾಧ್ಯವಾದರೆ ಇತರರಿಗೆ ಸಾಲ ನೀಡುವುದಾಗಲಿ, ನೀವು ಇತರರಿಂದ ಸಾಲ ಪಡೆಯುವುದಾಗಲಿ ಮಾಡದಿರಿ. ಹಣದ ವ್ಯವಹಾರದ ಅಜಾಗರೂಕತೆಯಿಂದಾಗಿ ಜೀವನದ ನೆಮ್ಮದಿ ಭಂಗವಾಗುತ್ತದೆ.

ADVERTISEMENT

ಪ್ರಶ್ನೆ: ನೀವು ಬಹು ಉಪಯುಕ್ತವಾದ ಸಲಹೆಗಳನ್ನು ನೀಡುತ್ತೀರಿ. ನಿಮ್ಮ ಪ್ರಶ್ನೋತ್ತರದಿಂದ ಪ್ರಭಾವಿತನಾಗಿ ನಾನು ಕಳೆದ ವರ್ಷ ಎರಡು ಎಕರೆ ಜಮೀನು ಕೊಂಡಿದ್ದೇನೆ. ಇದನ್ನು ಅಡಿಕೆ ತೋಟ ಮಾಡಬೇಕೆಂದಿದ್ದೇನೆ. ನನಗೆ ಈಗಾಗಲೇ ಮೂರು ಎಕರೆ ಅಡಿಕೆ ತೋಟ ಇದೆ. ಉಪ ಬೆಳೆ; ಬಾಳೆ, ಕಾಳುಮೆಣಸು ಹಾಗೂ ಏಲಕ್ಕಿ ಇದೆ. ಎಲ್ಲಾ ಕೃಷಿ ಉತ್ಪನ್ನಗಳಿಂದ ನನ್ನ ವಾರ್ಷಿಕ ಕನಿಷ್ಠ ಆದಾಯ ₹ 4 ಲಕ್ಷದಿಂದ ₹ 5 ಲಕ್ಷ. ಕೃಷಿ ಆದಾಯಕ್ಕೆ ಎಷ್ಟರ ತನಕ ತೆರಿಗೆ ವಿನಾಯಿತಿ ಇದೆ? ನನ್ನ ಮಗ ನನ್ನೊಡನೆ ಇದ್ದು ಕೃಷಿ ಮಾಡುತ್ತಾನೆ. ಉತ್ತಮ, ಭದ್ರವಾದ ಉಳಿತಾಯ ಯೋಜನೆ ತಿಳಿಸಿ.

–ಶ್ರೀಪಾದ ಹೆಗಡೆ, ಸಿದ್ದಾಪುರ, ಉ.ಕ.

-ಯು.ಪಿ. ಪುರಾಣಿಕ್

ಉತ್ತರ: ಸೆಕ್ಷನ್ 10 (1) ಆಧಾರದ ಮೇಲೆ ಕೃಷಿ ಆದಾಯಕ್ಕೆ ಯಾವುದೇ ಮಿತಿ ಇಲ್ಲದೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ನಿಮ್ಮದು ವಾರ್ಷಿಕವಾಗಿ ಬರುವ ಆದಾಯವಾದ್ದರಿಂದ ಮುಂದಿನ ವರ್ಷ ಕೃಷಿ ಮಾಡಲು ಬರುವ ಖರ್ಚು ಕಳೆದು ಉಳಿದ ಹಣ ಎರಡು ಭಾಗ ಮಾಡಿ. ತಿಂಗಳಿಗೆ ಖರ್ಚು ಆಗುವಂತೆ ಒಂದು ಭಾಗವನ್ನು ಅಂಚೆ ಕಚೇರಿ ತಿಂಗಳ ಬಡ್ಡಿ ಪಡೆಯುವ (MIS) ಯೋಜನೆಯಲ್ಲಿ ಇಡಿ. ಇಲ್ಲಿ ವ್ಯಕ್ತಿಯೊಬ್ಬ ಗರಿಷ್ಠ ₹ 4.50 ಲಕ್ಷ ಇಡಬಹುದು. ಉಳಿದ ಹಣ ಬ್ಯಾಂಕ್‌ನಲ್ಲಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಐದು ವರ್ಷಗಳ ಅವಧಿಗೆ ಇರಿಸುತ್ತಾ ಬನ್ನಿ. ಇದರಿಂದ ನಿಮ್ಮ ಠೇವಣಿ ಚಕ್ರಬಡ್ಡಿಯಲ್ಲಿ ಬೆಳೆಯುತ್ತದೆ. ಇದೇ ವೇಳೆ ಹೀಗೆ ಹಣ ಕೂಡಿಟ್ಟು ಮುಂದೆ ಇನ್ನೂ ಹೆಚ್ಚಿನ ಜಮೀನು ಕೊಳ್ಳಿರಿ. ಸ್ಥಿರ ಆಸ್ತಿ ಮಾತ್ರ ಸ್ಥಿರ, ಉಳಿದುದೆಲ್ಲ ಚರ ಎನ್ನುವುದು ಸಾರ್ವಕಾಲಿಕ ಸತ್ಯ. ನನ್ನ ಅಂಕಣದಿಂದ ಪ್ರಭಾವಿತರಾಗಿ ಎರಡು ಎಕರೆ ಜಮೀನು ಕೊಂಡಿರುವುದು ಉತ್ತಮ ನಿರ್ಧಾರ.

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ಸ್ಥಿರ ಆಸ್ತಿ ಮಾರಾಟ ಮಾಡುವವರು ಹಾಗೂ ಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ತೆರಿಗೆ ಉಳಿಸಲು ಕಾನೂನಿನಲ್ಲಿ ಇರುವ ಅವಕಾಶ, ತೆರಿಗೆ ದರ, ಲಾಭಾಂಶ ತೊಡಗಿಸಲು ಇರುವ ಅವಧಿ ವಿವರವಾಗಿ ತಿಳಿಸಿ.

–ನಾಗೇಗೌಡ, ಊರುಬೇಡ

ಉತ್ತರ: ಸ್ಥಿರ ಆಸ್ತಿ ಕೊಂಡ ಮೊತ್ತ ಹಾಗೂ ಅದನ್ನು ಮತ್ತೆ ಮಾರಾಟ ಮಾಡಿ ಬರುವ ಮೊತ್ತದ ನಡುವಿನ ವ್ಯತ್ಯಾಸವನ್ನು ಬಂಡವಾಳ ವೃದ್ಧಿ ಎನ್ನಬಹುದು. ಬಂಡವಾಳ ವೃದ್ಧಿಗೆ ಬರುವ ತೆರಿಗೆಯು ‘ಬಂಡವಾಳ ವೃದ್ಧಿ ತೆರಿಗೆ’. ಇಂದಿನ ಬಂಡವಾಳ ವೃದ್ಧಿ ತೆರಿಗೆ ಪ್ರಮಾಣ ಶೇಕಡ 20ರಷ್ಟು. ಇದೇ ವೇಳೆ, ಖರೀದಿಸಿದ ವರ್ಷದಿಂದ ಮಾರಾಟ ಮಾಡುವ ವರ್ಷದವರೆಗಿನ ಹಣದುಬ್ಬರವನ್ನು ಸರ್ಕಾರ ಸಿದ್ಧಪಡಿಸಿದ ಕೋಷ್ಠಕದಂತೆ ಲೆಕ್ಕ ಹಾಕಿದಾಗ ಬರುವ ಮೊತ್ತಕ್ಕೆ ತೆರಿಗೆ ಇರುವುದಿಲ್ಲ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.

ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.