ಮುಳ್ಳೂರು ಪ್ರಕಾಶ್, ಮೈಸೂರು
ಪ್ರಶ್ನೆ: ನಾನು ಖಾಸಗಿ ವಿಮಾ ಕಂಪನಿಯೊಂದರಲ್ಲಿ ಕೌಟುಂಬಿಕ ಆರೋಗ್ಯ ವಿಮೆ ಹೊಂದಿದ್ದೇನೆ. ನನ್ನ ಹಾಗೂ ಪತ್ನಿಯ ಹೆಸರನ್ನು ವಿಮಾ ಯೋಜನೆಯಲ್ಲಿ ಸೇರಿಸಲಾಗಿದೆ. ಕಂಪನಿಯವರು ಪ್ರತಿಯೊಬ್ಬರಿಗೂ ₹5 ಲಕ್ಷದ ವಿಮೆ ಇದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ನನ್ನ ಪಾಲಿಸಿಗೆ ₹33,653 ಕಂತು ಇತ್ತು. ಈ ವರ್ಷ ನನಗೆ 61 ವರ್ಷ ವಯಸ್ಸಾಗಿರುವುದರಿಂದ, ಕಂಪನಿಯವರು ₹48,002 ಕಂತು ಪಾವತಿಸಲು ತಿಳಿಸಿದ್ದಾರೆ. ಒಂದೇ ಬಾರಿಗೆ ಮೊತ್ತ ಹೆಚ್ಚಾಗಿದೆ. ಇದು ಏಕೆ ಮತ್ತು ಇಂತಹ ಹೆಚ್ಚಳಕ್ಕೆ ವಿಮಾ ನಿಯಂತ್ರಕರ ಸಮ್ಮತಿ ಇರುತ್ತದೆಯೇ? ಇದಲ್ಲದೆ 28 ವರ್ಷ ವಯಸ್ಸಿನ ನನ್ನ ಮಗನಿಗೂ ಅದೇ ಆರೋಗ್ಯ ವಿಮೆ ಯೋಜನೆ ₹5 ಲಕ್ಷಕ್ಕೆ ₹6,901 ಕಂತು ಇದೆ.
ಪ್ರಸ್ತುತ ಈ ಕಂಪನಿಯ ಏಜೆಂಟರು ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಈ ಕಾರಣದಿಂದ ಈ ಏಜೆಂಟ್‌ರನ್ನು ಬದಲಿಸಬಹುದೇ ಎಂಬುದನ್ನು ತಿಳಿಸಿ. ನಮ್ಮ ಮನೆಯ ಹತ್ತಿರವಿರುವ ಇನ್ನೊಂದು ಕಂಪನಿಯ ಏಜೆಂಟ್ ಸ್ನೇಹಿತನಾಗಿದ್ದು, ಅವರ ಪಾಲಿಸಿದಾರರು ಯಾರಾದರೂ ಆಸ್ಪತ್ರೆಗೆ ದಾಖಲಾದರೆ, ಅವರ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಜೊತೆಗೆ, ವಿಮಾ ಕಂಪನಿಯಿಂದ ಆಸ್ಪತ್ರೆ ವೆಚ್ಚ ಭರಿಸಲು ಸಹಾಯ ಮಾಡುತ್ತಾರೆ. ಅಂತಹ ಆಸ್ಪತ್ರೆ ವಿಮಾ ಕಂಪನಿಯ ಸಹಭಾಗಿತ್ವ ಪಟ್ಟಿಯಲ್ಲಿ ಇಲ್ಲದಿದ್ದರೂ ಅವರು ಪಾಲಿಸಿದಾರರಿಗೆ ವೆಚ್ಚ ಭರಿಸಿಕೊಡುವ (ಮರುಪಾವತಿ) ಮೂಲಕ ನೆರವಾಗುತ್ತಾರೆ.
ಈಗ ನನ್ನ ಪಾಲಿಸಿಯನ್ನು ಬೇರೆ ಕಂಪನಿಗೆ ವರ್ಗಾವಣೆ (ಪೋರ್ಟ್) ಮಾಡಿಕೊಂಡರೆ, ಇದೇ ₹48 ಸಾವಿರ ಕಂತಿಗೆ ₹10 ಲಕ್ಷದ ವಿಮೆ ಪಡೆಯಬಹುದು ಎಂದು ಹೇಳಿದ್ದಾರೆ. ಪೋರ್ಟ್ ಮಾಡಿದರೆ ತಕ್ಷಣವೇ ವಿಮಾ ಸೌಲಭ್ಯ ಲಭ್ಯವಾಗುತ್ತದೆಯೇ? ನಾನು 2021ರ ಜೂನ್ 6ರಿಂದ ವಿಮೆ ಹೊಂದಿದ್ದು, ನಾಲ್ಕು ವರ್ಷದೊಳಗೆ ಪೋರ್ಟ್ ಮಾಡಬಹುದು ಎಂದು ಹೇಳಿದ್ದಾರೆ. ನನ್ನ ಪ್ರಶ್ನೆಗಳೇನೆಂದರೆ, ನಾನು ಏಜೆಂಟ್‌ರನ್ನು ಬದಲಿಸಬಹುದೇ? ಬೇರೆ ಕಂಪನಿಗೆ ನನ್ನ ಪಾಲಿಸಿಯನ್ನು ಪೋರ್ಟ್ ಮಾಡಬಹುದೇ? ಅವಧಿಯೊಳಗೆ ಪೋರ್ಟ್ ಮಾಡಿದರೆ ಎಲ್ಲಾ ಸೌಲಭ್ಯಗಳು ಲಭ್ಯವಾಗುತ್ತವೆಯೇ?
ಉತ್ತರ: ನೀವು ನೀಡಿರುವ ಮಾಹಿತಿಯಂತೆ, ಪ್ರಸ್ತುತ ನೀವು ಖರೀದಿಸಿರುವ ವಿಮಾ ಯೋಜನೆಯ ಅಡಿಯಲ್ಲಿ ಅವರು ನೀಡುವ ಸೇವೆಯ ವಿಚಾರದಲ್ಲಿ ನಿಮಗೆ ಅಸಮಾಧಾನವಿದೆ. ಅವರು ಪಡೆಯುವ ಕಂತು ಇತರ ವಿಮಾ ಕಂಪನಿಗಳ ಕಂತಿನ ಜೊತೆ ತುಲನೆ ಮಾಡಿದರೆ ಹೆಚ್ಚಾಗಿದೆ ಎಂಬ ಅಸಮಾಧಾನವಿದೆ. ಹೀಗಾಗಿ ನೀವು ಹೊಸದೊಂದು ವಿಮಾ ಕಂಪನಿಗೆ ನಿಮ್ಮ ವಿಮಾ ಯೋಜನೆಯನ್ನು ವರ್ಗಾಯಿಸುವ ಬಗ್ಗೆ ಮಾಹಿತಿ ಕೇಳಿರುತ್ತೀರಿ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಕೆಲವು ಅಂಶಗಳನ್ನು ಪರಿಗಣಿಸುವುದು ಸೂಕ್ತ.
ವಿಮೆ ಪಡೆಯುತ್ತಿರುವ ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ಹಾಗೂ ವಯಸ್ಸಿನ ಹಂತದ ಆಧಾರದಲ್ಲಿ ಆಯಾ ವರ್ಗದ ವಿಮಾ ಯೋಜನೆಗಳಿಗೆ ವಿಮಾ ದರ ನಿಗದಿಯಾಗುತ್ತದೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆ ಕಂತು ಹೆಚ್ಚಳದ ವಿಚಾರವಾಗಿ ಈ ವರ್ಷದ ಜನವರಿಯಲ್ಲೇ ಎಲ್ಲಾ ವಿಮಾ ಕಂಪನಿಗಳಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ನೀಡಿದ ಸುತ್ತೋಲೆಯಂತೆ, ಶೇಕಡ 10ಕ್ಕಿಂತ ಹೆಚ್ಚಿನ ವಾರ್ಷಿಕ ಕಂತು ವೃದ್ಧಿಸುವುದಿದ್ದಲ್ಲಿ, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಂಗೀಕಾರ ಬೇಕಾಗಿರುತ್ತದೆ.
ನೀವು ಯಾವುದೇ ಬ್ರೋಕರ್, ಏಜೆ೦ಟ್ ಅಥವಾ ವಿಮಾ ಕಂಪನಿಯ ಸೇವೆಯ ಬಗ್ಗೆ ಅಸಮಾಧಾನ ಹೊಂದಿದ್ದರೆ, ಮೊದಲನೆಯದಾಗಿ ನಿಮ್ಮ ಅಹವಾಲನ್ನು ಆಯಾ ಕಂಪನಿಗೆ ಲಿಖಿತ ರೂಪದಲ್ಲಿ ಬರೆದು ಕಳುಹಿಸಿ. ಅಂತಹ ಸಮಸ್ಯೆಗೆ ವಿಮಾ ಕಂಪನಿಯವರು ಸ್ಪಂದಿಸದಿದ್ದರೆ, ಮುಂದೆ ನಿಮಗೆ ಐಆರ್‌ಡಿಎಗೆ ವಿವರವಾಗಿ ಅಹವಾಲು ಸಲ್ಲಿಸುವುದಕ್ಕೆ ಅವಕಾಶ ಇದೆ. ಇದಕ್ಕಾಗಿ ಅದರ ಒಂಬುಡ್ಸ್‌ಮನ್ ಬಗ್ಗೆ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
ವಿಮಾ ಕಂಪನಿಯ ಸೇವೆಯನ್ನು ಪೋರ್ಟ್ ಮಾಡುವ ಅವಕಾಶ ಇದೆಯೇ ಎನ್ನುವ ವಿಚಾರದ ಬಗ್ಗೆ ಕೇಳಿದ್ದೀರಿ. ಇದಕ್ಕೆ ವಾರ್ಷಿಕ ಪಾಲಿಸಿಯ ಅವಧಿ ಮುಗಿಯುವ 45 ದಿನಗಳ ಮುನ್ನ ಪೋರ್ಟ್ ಮಾಡುವ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಈ ಅವಧಿ ಮುಗಿದಿದ್ದರೆ ಮುಂದಿನ ವರ್ಷದ ಅವಧಿಯ ತನಕ ಕಾಯಬೇಕು. ವರ್ಷದ ನಡುವೆ ವಿಮಾ ಸೇವಾ ಕಂಪನಿಯನ್ನು ಬದಲಿಸುವ ಅವಕಾಶ ಇರುವುದಿಲ್ಲ. ವಿಮಾ ಪ್ರಾಧಿಕಾರ ಎಲ್ಲಾ ವ್ಯಕ್ತಿಗಳಿಗೆ ನೀಡಲಾದ ಆರೋಗ್ಯ ವಿಮಾ ಪಾಲಿಸಿಗಳ ವಿವರಗಳನ್ನು ಪಡೆಯಲು ಮತ್ತು ನಿರ್ವಹಿಸಲು ವೆಬ್ ಆಧಾರಿತ ಸೌಲಭ್ಯವನ್ನು ನಿರ್ಮಿಸಿದೆ. ಈ ವ್ಯವಸ್ಥೆಯು, ಪಾಲಿಸಿಯನ್ನು ಪೋರ್ಟ್ ಮಾಡಬೇಕೆಂದಿರುವವರು ತಮ್ಮ ಆರೋಗ್ಯ ವಿಮಾ ಮಾಹಿತಿಯನ್ನು ಹೊಸ ವಿಮಾ ಕಂಪನಿಗೆ ಲಭ್ಯವಾಗುವಂತೆ ಮಾಡುತ್ತದೆ. ಇದರ ಮೂಲಕ, ಹೊಸ ವಿಮಾ ಕಂಪನಿ ಪಾಲಿಸಿಗೆ ಪೋರ್ಟ್ ಮಾಡಲು ಇಚ್ಛಿಸುವ ವ್ಯಕ್ತಿಯ ಆರೋಗ್ಯ ವಿಮಾ ಮಾಹಿತಿಯನ್ನು ಮೊದಲೇ ಸುಲಭವಾಗಿ ಪಡೆಯಬಹುದು. ಈ ಬಗ್ಗೆ ಅಧಿಕೃತ ಮಾಹಿತಿಯನ್ನು https://policyholder.gov.inನ ಜಾಲತಾಣದಲ್ಲೂ ನೋಡಬಹುದು.
ಪಾಲಿಸಿ ಪೋರ್ಟ್ ಮಾಡುವ ಬಗೆಗಿನ ಯಾವುದೇ ನಿರ್ಧಾರ ಮಾಡುವ ಮೊದಲು ನಿಮ್ಮ ಈಗಿರುವ ಪಾಲಿಸಿಯ ಉತ್ತಮ ಅಂಶಗಳನ್ನು ನೋಡಿ. ಈ ಸೇವೆಗಳು ಮುಂದೆ ಪೋರ್ಟ್ ಮಾಡುವ ವಿಮಾ ಕಂಪನಿಯಿಂದಲೂ ಲಭ್ಯವಾಗುವಂತಿರಬೇಕು. ಇದಕ್ಕಾಗಿ ಅವರಿಂದ ಖಚಿತವಾಗಿ ಲಿಖಿತ ರೂಪದಲ್ಲಿ ಮಾಹಿತಿ ಪಡೆದು ತುಲನೆ ಮಾಡಿ. ಯಾವುದೇ ಕಾಯಿಲೆಗಳಿಗೆ ಸಂಬಂಧಿಸಿ ಹೆಚ್ಚುವರಿ ಕಾಯುವಿಕೆಯ ಅನಿವಾರ್ಯತೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇನ್ನೂ ಕೆಲವು ಪರಿಗಣಿಸಬೇಕಾದ ಅಂಶಗಳೆಂದರೆ, ವಿಮಾ ಕಂಪನಿ ನೀಡುವ ಪರಿಹಾರ ಅನುಪಾತ, ನೆಟ್‌ವರ್ಕ್ ಆಸ್ಪತ್ರೆಗಳ ಸಂಖ್ಯೆ, ಪಾಲಿಸಿಯಲ್ಲಿ ಒಳಗೊಳ್ಳುವ ಪರಿಹಾರದ ಅಂಶಗಳು ಮತ್ತು ಮಾರಾಟದ ನಂತರದ ಸೇವೆಗಳ ಗುಣಮಟ್ಟವೂ ಮಹತ್ವ ಹೊಂದಿರುತ್ತವೆ. ಈ ಅಂಶಗಳನ್ನು ಅಂತಹ ವಿಮಾ ಕಂಪನಿಯ ಸೇವೆ ಪಡೆದವರ ಮೂಲಕವೇ ಗೊತ್ತುಮಾಡಿ ನಿರ್ಧರಿಸುವುದು ಉತ್ತಮ. ಕಡಿಮೆ ಕಂತು ನಿಗದಿಪಡಿಸಿ, ಗ್ರಾಹಕರನ್ನು ಸೆಳೆಯುವ ಉದ್ದೇಶ ಇರುವ ಕಂಪನಿಗಳೂ ಇಲ್ಲವೆನ್ನಲಾಗದು. ಹೀಗಾಗಿ, ನಿಮ್ಮ ತೀರ್ಮಾನ ಕೈಗೊಳ್ಳುವ ಮೊದಲು ವಿಮಾ ತಜ್ಞರ ಸಲಹೆ ಪಡೆದು ಸಮಗ್ರವಾಗಿ ಹೋಲಿಕೆ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.