ADVERTISEMENT

ಪ್ರಶ್ನೋತ್ತರ | ಎಲ್‌ಟಿಸಿಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಪಡೆಯುವ ಅವಕಾಶಗಳಿವೆ?

ಪ್ರಮೋದ ಶ್ರೀಕಾಂತ ದೈತೋಟ
Published 28 ನವೆಂಬರ್ 2023, 23:39 IST
Last Updated 28 ನವೆಂಬರ್ 2023, 23:39 IST
   

ನಾಗಾನಂದ, ಮಾರತ್ ಹಳ್ಳಿ, ಬೆಂಗಳೂರು

ನಾನು ಮುಂದಿನ ಒಂದು ವರ್ಷದೊಳಗೆ ನಿವೃತ್ತನಾಗುವ ಹಂತದಲ್ಲಿದ್ದೇನೆ. ಪ್ರಸ್ತುತ ಸಾರ್ವಜನಿಕ ಸೇವಾ ಸಂಸ್ಥೆಯೊಂದರಲ್ಲಿ ಇಂಜಿನಿಯರಿಂಗ್ ವಿಭಾಗದ ಪ್ರಧಾನ ವ್ಯವಸ್ಥಾಪಕನಾಗಿ ಸೇವೆಯಲ್ಲಿದ್ದೇನೆ. ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ವಿವಾಹವಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ ಹಾಗೂ ಮೊಮ್ಮಕ್ಕಳಿದ್ದಾರೆ. ನನ್ನ ಪ್ರಶ್ನೆ ಏನೆಂದರೆ ನಿವೃತ್ತಿಯ ಸಮಯ ಒಟ್ಟಾರೆ ನನ್ನ ಪಿಎಫ್, ಇನ್ಶೂರೆನ್ಸ್ ಉಳಿತಾಯ, ಗ್ರಾಟ್ಯುಟಿ ಇತ್ಯಾದಿ ಎಲ್ಲಾ ಮೊತ್ತ ಸೇರಿಸಿ ಸುಮಾರು ಒಂದು ಕೋಟಿ ರೂಪಾಯಿ ಬರಬಹುದೆಂದು ಅಂದಾಜು. ಪೆನ್ಷನ್ ಮೊತ್ತ ಸುಮಾರು ₹ 60 ಸಾವಿರ ಬರಬಹುದು. ಈ ಹಂತದಲ್ಲಿ ನಾನು, ಮುಂದೆ ಸಿಗುವ ಮೊತ್ತವನ್ನು ಬಳಸಿ ತಿಂಗಳಿಗೆ ₹ 1 ಲಕ್ಷ ಹೆಚ್ಚುವರಿ ಆದಾಯ ನಿರೀಕ್ಷಿಸಬಹುದೇ. ಇದಕ್ಕೆ ಯಾವುದರಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ತಿಳಿಸಿ. ಇದಲ್ಲದೆ ನಾನು ದೇಣಿಗೆ ರೂಪದಲ್ಲಿ ಒಂದು ವರ್ಷಕ್ಕೆ ₹ 1 ಲಕ್ಷ ಮೊತ್ತವನ್ನು ಕೊಡಬೇಕೆಂದಿದ್ದೇನೆ. ಇದಕ್ಕೆ ತೆರಿಗೆ ರಿಯಾಯಿತಿ ಇದೆ ಎಂಬುದನ್ನು ತಿಳಿದಿದ್ದೇನೆ. ಈ ಬಗ್ಗೆಯೂ ಮಾಹಿತಿ ನೀಡಿ. ಪ್ರಸ್ತುತ ಸ್ವಂತ ಮನೆಯಿದೆ ಹಾಗೂ ಮನೆಗೆ ಸಂಬಂಧಿಸಿ ಯಾವುದೇ ಸಾಲವಿಲ್ಲ.

ನೀವು ನಿವೃತ್ತಿ ಬದುಕಿಗೆ ಸಜ್ಜಾಗಿ ಆ ಬಗ್ಗೆ ಅಗತ್ಯವಿರುವ ಹಣಕಾಸಿನ ಮಾಹಿತಿ ಹಾಗೂ ಪೂರ್ವತಯಾರಿ ಮಾಡುತ್ತಿರುವುದು ನಿಜಕ್ಕೂ ಸಂತೋಷಕರ ವಿಚಾರ. ಮೊದಲ ಹಂತದಲ್ಲೇ ನೀವು ನಿಮ್ಮ ಗುರಿ ಹಾಗೂ ಅಗತ್ಯಗಳನ್ನು ಸ್ಪಷ್ಟವಾಗಿ ನಿರೂಪಿಸಿರುವುದು ಇನ್ನೂ ಒಳ್ಳೆಯ ವಿಚಾರ. ನಮ್ಮ ಅಗತ್ಯ ಏನೆಂಬುದರ ಬಗ್ಗೆ ಖಚಿತತೆ ಇದ್ದಾಗ ಮಾತ್ರ ಹೂಡಿಕೆಯಿಂದ ಉತ್ತಮ ಪ್ರತಿಫಲ ನಿರೀಕ್ಷಿಸಬಹುದು.

ADVERTISEMENT

ನಿಮ್ಮ ನಿರೀಕ್ಷೆ ಸರಿದೂಗಿಸಲು ಕೇವಲ ಸಾಂಪ್ರದಾಯಿಕ ರೀತಿಯ ಹೂಡಿಕೆಯಿಂದ ಸಾಧ್ಯವಾಗಲಾರದು ಹಾಗೂ ಒಂದೇ ಉದ್ದೇಶದ ಹೂಡಿಕೆಯಿಂದ ಸಾಧ್ಯವಾಗಲಾರದು. ಹೀಗಾಗಿ ಒಂದಷ್ಟು ಮೊತ್ತವನ್ನು ‘ಸಾಮಾನ್ಯ ಬಡ್ಡಿ’ ಗಿಂತ ‘ಅಧಿಕ ಲಾಭ’ ನೀಡುವ ಹೂಡಿಕೆಗಳನ್ನು ಆಯ್ಕೆ ಮಾಡಿದಾಗ ಮಾತ್ರ ಸಾಧ್ಯ. ಮೊದಲ ಹಂತದಲ್ಲಿ ನೀವು ಅರ್ಧದಷ್ಟು ಮೊತ್ತವನ್ನು ಯಾವುದೇ ಆರ್ಥಿಕ ಅಪಾಯವಿರದ ಹೂಡಿಕೆಗಳಲ್ಲಿ ಹಣ ತೊಡಗಿಸಿ. ನಿವೃತ್ತಿ ಜೀವನಕ್ಕೆ ಕಾಲಿಡುವ ಮಂದಿಗಾಗಿಯೇ ಇರುವ ಅಂಚೆ ಕಚೇರಿಯ ಹಿರಿಯ ನಾಗರಿಕರ ಜಂಟಿ ಖಾತೆಯಲ್ಲಿ ₹ 30 ಲಕ್ಷ (ಬಡ್ಡಿ ದರ 8.20 %) , ಪಿಪಿಎಫ್ ₹ 1.50 ಲಕ್ಷ (ಬಡ್ಡಿ ದರ 7.10 %), ಅಂಚೆ ಕಚೇರಿಯ ಮಾಸಿಕ ಬಡ್ಡಿ ಯೋಜನೆ (ಬಡ್ಡಿ ದರ 7.40 %) ಯ ಜಂಟಿ ಖಾತೆಯಲ್ಲಿ ₹15 ಲಕ್ಷ ಹಣ ತೊಡಗಿಸಿ. ಹಾಗೂ ಆಪತ್ಕಾಲಕ್ಕಾಗಿ ಸುಮಾರು ₹ 10 ರಿಂದ 15 ಲಕ್ಷ ಮೊತ್ತವನ್ನು ಶೇಕಡಾ 7-8 ದ ದರದಲ್ಲಿ ಯಾವುದೇ ಸಮಯ ಹಿಂಪಡೆಯಬಹುದಾದ ನಿಶ್ಚಿತ ಠೇವಣಿ ಖಾತೆಯಲ್ಲಿ ತೊಡಗಿಸಿ.

ಉಳಿದ ₹40 ರಿಂದ ₹ 45 ಲಕ್ಷ  ಮೊದಲ ಹಂತದಲ್ಲಿ ಹೈಬ್ರಿಡ್ ಈಕ್ವಿಟಿ ಸೇವಿಂಗ್ಸ್ ಫಂಡ್‌ನಲ್ಲಿ ಹಾಗೂ ಮುಂದೆ ಹಂತ ಹಂತವಾಗಿ ಬ್ಯಾಲೆನ್ಸ್ಡ್ ಮ್ಯೂಚುವಲ್ ಫಂಡ್, ಹೈಬ್ರಿಡ್ ಅಗ್ರೆಸ್ಸಿವ್ ಫಂಡ್, ಫ್ಲೆಕ್ಸಿ ಕ್ಯಾಪ್ ಹಾಗೂ ಮಲ್ಟಿ ಕ್ಯಾಪ್ ಫಂಡ್‌ಗಳಲ್ಲಿ  ವ್ಯವಸ್ಥಿತವಾಗಿ ವರ್ಗಾವಣೆ ಮಾಡಿ. ಇದು ನಿಮಗೆ ಎರಡರಿಂದ ಮೂರು ವರ್ಷಗಳಲ್ಲಿ ಸಾಮಾನ್ಯ ಬಡ್ಡಿಗಿಂತ ಅಧಿಕ ಆದಾಯ ನೀಡುವಲ್ಲಿ ನೆರವಾದೀತು. ಏನಿದ್ದರೂ ಈ ಬಗ್ಗೆ ಇನ್ನಷ್ಟು ಸಮಯ ನಿಮಗೆ ಇರುವುದರಿಂದ ಹೆಚ್ಚಿನ ಮಾರ್ಗದರ್ಶನ ಅಗತ್ಯ. ಆ ಬಗ್ಗೆ ನುರಿತವರನ್ನು ಸಂಪರ್ಕಿಸಿ ಹಾಗೂ ಆ ಬಗ್ಗೆ ಓದಿ ತಿಳಿದುಕೊಳ್ಳಿ.

ಇನ್ನು ದೇಣಿಗೆ ನೀಡುವಾಗ ಸಿಗುವ 80ಜಿ ತೆರಿಗೆ ರಿಯಾಯಿತಿ ಬಗ್ಗೆ ಹೇಳುವುದಾದರೆ, ವಿವಿಧ ರೂಪದ ದೇಣಿಗೆಗಳು , ನಾವು ಪಾವತಿಸುವ ಪೂರ್ಣ ಮೊತ್ತ ಅಥವಾ ಅದರ ಶೇಕಡಾ 50 ರ ಮಿತಿಯೊಳಗೆ ಆದಾಯದಿಂದ ವಿನಾಯಿತಿ ಪಡೆಯುವಲ್ಲಿ ನೆರವಾಗುತ್ತವೆ. ಇದಲ್ಲದೆ ಈ ವಿನಾಯಿತಿ ನೀಡಿವ ಮೊದಲು ನಿರ್ಣಯವಾಗುವ ಆದಾಯದ ಶೇ 10 ರ ಮಿತಿಯನ್ನೂ ಹೇರಲಾಗಿದೆ. ಹೀಗಾಗಿ ದೇಣಿಗೆ ನೀಡುವ ಮೊದಲು ಈ ಬಗ್ಗೆಯೂ ಗಮನವಿರಲಿ.

ಮಹೇಶ್ ಪಿ, ಬಿಡದಿ

ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಂಪನಿಯವರು ವೇತನಕ್ಕೆ ಸಂಬಂಧಿಸಿದ ಸ್ಟ್ರಕ್ಚರ್ ಮುಂದಿನ ವರ್ಷದಿಂದ ನಾವು ಆಂತರಿಕವಾಗಿ ಬದಲಾಯಿಸುವುದಕ್ಕೆ ಅವಕಾಶ ಕಲ್ಪಿಸಿದ್ದಾರೆ. ನಮ್ಮ ಒಟ್ಟಾರೆ ಸಿಟಿಸಿ ಪ್ರಸ್ತುತ ಇರುವ ಮೌಲ್ಯದ್ದೇ ಇರುತ್ತದೆ. ಆದರೆ ಬದಲಾವಣೆಯಿಂದ ತೆರಿಗೆ ಉಳಿತಾಯ ಮಾಡುವ ಸೌಲಭ್ಯ ಇದೆ. ನಾವು ಲೀಸ್ ಮೂಲಕ ಕಾರು ತೆಗೆದುಕೊಳ್ಳಬಹುದು ಹಾಗೂ ನಮ್ಮ ಪಿಎಫ್ ದೇಣಿಗೆಗೆ ಸಂಬಂಧಿಸಿ ತಿಂಗಳ ಪಾವತಿ ವೃದ್ಧಿಗೊಳಿಸಬಹುದು, ಮೀಲ್ ಕೂಪನ್ ಪಡೆಯಬಹುದು ಹಾಗೂ ಎಲ್‌ಟಿಸಿಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಪಡೆಯುವ ಅವಕಾಶಗಳಿವೆ. ಇವನ್ನು ಹೇಗೆ ಸರಿದೂಗಿಸಬಹುದು ಹಾಗೂ ಇವುಗಳನ್ನು ಹೊಂದುವುದರಿಂದ ಯಾವುದಾದರೂ ತೊಂದರೆಗಳಿವೆಯೇ.

ಸಾಮಾನ್ಯವಾಗಿ ಕಂಪನಿಗಳಲ್ಲಿ ವಿಶೇಷ ಭತ್ಯೆಗಳನ್ನು ಕಡಿತಗೊಳಿಸಿ ನೀವು ಉಲ್ಲೇಖಿಸಿರುವ ವಿವಿಧ ರೀತಿಯ ಸವಲತ್ತುಗಳನ್ನು ನೀಡಲಾಗುತ್ತದೆ. ಇವು ಒಟ್ಟು ವೇತನದ ಭಾಗವೇ ಆಗಿರುವುದರಿಂದ ನೇರ ವೇತನದ ಬದಲು ಪರೋಕ್ಷವಾಗಿ ವಿವಿಧ ಸವಲತ್ತುಗಳ ರೂಪದಲ್ಲಿ ನೀಡುವ ಕಾರಣ ಉದ್ಯೋಗಿಗಳಿಗೆ ತೆರಿಗೆ ಉಳಿತಾಯ ಮಾಡುವ ನೆರವಾಗುತ್ತದೆ. ನೀವು ಈಗಾಗಲೇ ಕಾರು ಹೊಂದಿದವರಾಗಿದ್ದರೆ ಹೊಸದಾಗಿ ಲೀಸ್ ಮೂಲಕ ವಾಹನ ಪಡೆಯಬೇಕೆ ಎಂಬುದನ್ನು ನಿಮ್ಮ ವೈಯಕ್ತಿಕ  ಅಗತ್ಯದ ಹಿನ್ನೆಲೆಯಲ್ಲಿ ಹಾಗೂ ಈ ಬದಲಾವಣೆಯಿಂದ ತಗಲುವ ಒಟ್ಟಾರೆ ಲೀಸ್ ಮೊತ್ತ ಹಾಗೂ ಮುಂದೆ ಉಳಿತಾಯ ಮಾಡಬಹುದಾದ ತೆರಿಗೆ ಪ್ರಮಾಣ ಇತ್ಯಾದಿಗಳನ್ನು ತುಲನೆ ಮಾಡಿ ಲಾಭದಾಯಕವೇ ಎಂಬುದನ್ನು ನೋಡಿ.

ಪ್ರಸ್ತುತ ಕಾರು ಹೊಂದಿಲ್ಲದಿದ್ದರೂ , ಖರೀದಿಸುವ ಯೋಚನೆ ಇದ್ದರೆ, ಕಂಪನಿ ಲೀಸ್ ಮೂಲಕ ಕೊಳ್ಳುವ ಹಾಗೂ ನೀವೇ ಸಾಲ ಪಡೆದು ವಾಹನ ಕೊಳ್ಳುವ ಯೋಜನೆಯಲ್ಲಿ ಯಾವುದು ಒಟ್ಟಾರೆ ಬಡ್ಡಿ ಉಳಿತಾಯಕ್ಕೆ ಪೂರಕವಾದೀತು ಎಂಬುದನ್ನು ಗಮನಿಸಿ. ಇನ್ನು ಮೀಲ್ ಕೂಪನ್ ಇತ್ಯಾದಿ ಪ್ರತಿ ತಿಂಗಳಿಗೆ ನಿರ್ದಿಷ್ಟ ಮಿತಿಯೊಳಗೆ  ಪಡೆಯುವ ಆಯ್ಕೆ ಉತ್ತಮ. ಇನ್ನು ಖಾಸಗಿ ಕಂಪನಿಯ ಉದ್ಯೋಗಿಗಳಿಗೆ ಎಲ್‌ಟಿಸಿ ಬಗ್ಗೆ ಆದಾಯ ತೆರಿಗೆ ನಿಯಮದಡಿ 4 ವರ್ಷಗಳ ಅವಧಿಯಲ್ಲಿ ಪ್ರತಿ ಎರಡು ವರ್ಷದ ಅವಧಿಗೊಮ್ಮೆ ಈ ರಿಯಾಯಿತಿ ಪಡೆಯುವ ಅವಕಾಶವಿದೆ. ಪ್ರಯಾಣಕ್ಕೆ ಸಂಬಂಧಿತ ಅಗತ್ಯ ದಾಖಲೆ  ಹೊಂದಿರುವುದು ಸೂಕ್ತ. ಇನ್ನು ಪಿ ಎಫ್ ಮೊತ್ತವನ್ನು ನಿಮ್ಮ ಉಳಿತಾಯ ಅಧಿಕಗೊಳಿಸುವ ದೃಷ್ಟಿಯಲ್ಲಿ ಹೆಚ್ಚಿಸಬಹುದು. ಆದರೆ ನೀವು ಹಳೆಯ ತೆರಿಗೆ ಪದ್ದತಿ ಆಯ್ಕೆ ಮಾಡುವವರಿದ್ದರೆ ನಿಮ್ಮ ಎಲ್ಲಾ ಹೂಡಿಕೆಗಳಿಗೆ ಸಂಬಂಧಿಸಿ ಒಟ್ಟಾರೆ ವಿನಾಯಿತಿ ಮಿತಿ ₹ 1.50 ಲಕ್ಷ ಎಂಬುದು ಗಮನದಲ್ಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.