ADVERTISEMENT

ಪ್ರಶ್ನೋತ್ತರ: ತೆರಿಗೆ ಉಳಿಸಲು ಗೃಹ ಸಾಲ ಉತ್ತಮ ಆಯ್ಕೆಯೇ?

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 20:42 IST
Last Updated 15 ನವೆಂಬರ್ 2022, 20:42 IST
   

ಸಂಜೀವ್, ಊರು ಬೇಡ
ಪ್ರಶ್ನೆ: ನಾನು ಅಧಿಕಾರಿಯಾಗಿ ಕೇಂದ್ರ ಸರ್ಕಾರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಂಬಳ ಮತ್ತು ಉಳಿತಾಯ ಹೀಗಿದೆ: ಒಟ್ಟು ವೇತನ ₹ 71,000, ನಿವ್ವಳ ₹ 50,000. ಸೆಕ್ಷನ್ 80ಸಿ ಅಡಿ ಬರುವ ಹೂಡಿಕೆಗಳನ್ನು (ಎನ್‌ಪಿಎಸ್, ಅವಧಿ ವಿಮೆ, ಪಿಪಿಎಫ್, ವೈದ್ಯಕೀಯ ವಿಮೆ) ಈಗಾಗಲೇ ಪೂರ್ತಿಯಾಗಿ ಬಳಸಿಕೊಂಡಿದ್ದೇನೆ. ಈಗ ₹ 7,000ವನ್ನು ಆದಾಯ ತೆರಿಗೆಯಾಗಿ ನನ್ನ ಸಂಬಳದಿಂದ ಪ್ರತಿ ತಿಂಗಳು ಕಡಿತಗೊಳಿಸಲಾಗುತ್ತಿದೆ. ನಮಗೆ ಮನೆ ಕಟ್ಟಲು ನನ್ನ ಬಳಿ ಸಾಕಷ್ಟು ಉಳಿತಾಯ ಇರುವುದರಿಂದ ತೆರಿಗೆ ಉಳಿಸಲು ಗೃಹ ಸಾಲ ಉತ್ತಮ ಆಯ್ಕೆಯೇ ಎಂಬುದನ್ನು ತಿಳಿಸಿ.

ಉತ್ತರ: ನಿಮ್ಮ ಆದಾಯವು, ಆದಾಯ ತೆರಿಗೆಯ ಶೇ 5 ಹಾಗೂ ಶೇ 20ರ ಸ್ಲ್ಯಾಬ್ ದರಗಳಲ್ಲಿ ಇರಬಹುದು. ಯಾವುದೇ ವ್ಯಕ್ತಿ ಮನೆ ಕಟ್ಟಿಸಲು ಅಥವಾ ಖರೀದಿಸಲು ಪಾವತಿಸುವ ಇಎಂಐ ಮೊತ್ತದಲ್ಲಿ ಅಸಲು ಮತ್ತು ಬಡ್ಡಿ ಬೇರ್ಪಡಿಸಲಾಗುತ್ತದೆ. ಪಾವತಿಸುವ ಅಸಲು ಮೊತ್ತ ನೀವು ಪ್ರಶ್ನೆಯಲ್ಲಿ ಹೇಳಿರುವ ಸೆಕ್ಷನ್ 80 ಸಿ ಅಡಿ ಬರುತ್ತದೆ. ನೀವು ₹ 1.50 ಲಕ್ಷದಷ್ಟು ಹೂಡಿಕೆಯನ್ನು ಈಗಾಗಲೇ ಮಾಡುತ್ತಿದ್ದೀರಿ. ಹೀಗಾಗಿ ಅಸಲು ಪಾವತಿಯಿಂದ ನಿಮ್ಮ ತೆರಿಗೆ ಪಾವತಿಯ ಮೇಲೆ ಯಾವುದೇ ಲಾಭವಿಲ್ಲ.

ಸೆಕ್ಷನ್ 24ರ ಪ್ರಕಾರ, ಸ್ವಂತ ವಾಸಕ್ಕೆ ನಿರ್ಮಿಸಲಾಗುವ ಮನೆಯ ಸಾಲದ ಮೇಲೆ ಕಟ್ಟುವ ಬಡ್ಡಿ ಮೊತ್ತಕ್ಕೆ ವಾರ್ಷಿಕವಾಗಿ ₹ 2 ಲಕ್ಷದವರೆಗೆ, ಆದಾಯದೊಡನೆ ಬಡ್ಡಿ ವಜಾ ಮಾಡುವ ಅವಕಾಶವಿದೆ. ನೀವು ₹ 2 ಲಕ್ಷದ ಮೇಲೆ ಪಾವತಿಸುವ ವಾರ್ಷಿಕ ಬಡ್ಡಿ ಮೊತ್ತಕ್ಕೆ ನಿಮಗೆ ಅನ್ವಯವಾಗುವ ಶೇ 20.8ರ ತೆರಿಗೆ ದರದಲ್ಲಿ ಹೆಚ್ಚೆಂದರೆ ₹ 41,600 ವಾರ್ಷಿಕ ತೆರಿಗೆ ಉಳಿತಾಯವಾಗುತ್ತದೆ. ಆದರೆ, ಈ ತೆರಿಗೆ ಉಳಿಸಲು ನೀವು ಸುಮಾರು ₹ 2 ಲಕ್ಷದವರೆಗೆ ಬಡ್ಡಿ ಪಾವತಿಸುತ್ತೀರಿ ಎನ್ನುವುದು ನೆನಪಿರಲಿ. ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ, ನಿಮ್ಮ ಉಳಿತಾಯದ ಮೊತ್ತ ಮನೆ ಕಟ್ಟಲು ಬಳಸಿದಾಗ ಬ್ಯಾಂಕಿನಿಂದ ಬರುವ ಶೇ 6ರ ಬಡ್ಡಿ ನಷ್ಟವಾಗಬಹುದು. ಆದರೆ ಅದೇ ಮೊತ್ತವನ್ನು ಗೃಹ ಸಾಲವಾಗಿ ಪಡೆದಾಗ ನೀವು ಶೇ 8.5ರಷ್ಟು ಬಡ್ಡಿ ತೆರಬೇಕಾಗುತ್ತದೆ.

ADVERTISEMENT

ಇದಕ್ಕಾಗಿ ನೀವು ಮೊದಲು ನಿಮ್ಮ ಮನೆ ನಿರ್ಮಾಣಕ್ಕೆ ಆಗಬಹುದಾದ ವೆಚ್ಚ, ನಿರ್ಮಾಣದ ಅವಧಿ ಹಾಗೂ ನಿಮ್ಮ ಉಳಿತಾಯದಿಂದ ಮನೆ ಕಟ್ಟಲು ಎಷ್ಟು ಮೊತ್ತ ಸರಿದೂಗಿಸಬಹುದು ಎಂಬುದನ್ನು ನಿರ್ಧರಿಸಿ. ಇರುವ ಸಂಪೂರ್ಣ ಉಳಿತಾಯ ಮೊತ್ತ ಮನೆ ಕಟ್ಟಲು ಬಳಸಿ ಮುಂದೆ ಯಾವುದೇ ಆರ್ಥಿಕ ಅಡಚಣೆಯಾದಾಗ ಖಾಸಗಿ ಸಾಲಗಳಿಗೆ ಮೊರೆ ಹೋಗುವುದು ದುಬಾರಿಯಾಗಬಹುದು. ಹೀಗಾಗಿ ಆರ್ಥಿಕ ಸಂಧಿಗ್ಧತೆ ನಿವಾರಿಸಲು ಒಂದಿಷ್ಟು ಉತ್ತಮ ಮೊತ್ತವನ್ನು ಭದ್ರವಾಗಿಟ್ಟು ಉಳಿದ ಸಂಪೂರ್ಣ ಮೊತ್ತವನ್ನು ಮನೆಗೆ ಬಳಸಿ. ಮತ್ತೂ ಕೊರತೆಯಾಗುವ ಮೊತ್ತವನ್ನಷ್ಟೇ ನೀವು ಗೃಹ ಸಾಲವಾಗಿ ಪಡೆಯಿರಿ ಹಾಗೂ ಅದರ ಮೇಲೆ ಸಿಗುವ ತೆರಿಗೆ ರಿಯಾಯಿತಿಗಳನ್ನು ಉಪಯೋಗಿಸಿಕೊಳ್ಳಿ.

*

ವಿಶ್ವನಾಥ್ , ಆರ್.ಟಿ. ನಗರ, ಬೆಂಗಳೂರು
ಪ್ರಶ್ನೆ: ನಾನು ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಅವುಗಳಿಂದ ಡಿವಿಡೆಂಡ್ ಬರುತ್ತಿರುತ್ತದೆ. ಕಳೆದ ಒಂದೆರಡು ವರ್ಷಗಳ ಹಿಂದೆ ಬಜೆಟ್‌ನಲ್ಲಿ ಇದಕ್ಕೆ ಹೂಡಿಕೆದಾರರೇ ತೆರಿಗೆ ಪಾವತಿಸಬೇಕೆಂದು ಹೇಳಲಾಗಿತ್ತು. ಆದರೆ ಡಿವಿಡೆಂಡ್ ಪಾವತಿಸುವಾಗ ತೆರಿಗೆ ಕಡಿತ ಮಾಡಿ ನಮಗೆ ಹಣ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಕಂಪನಿಗಳು ಇಮೇಲ್ ಮೂಲಕ ತಿಳಿಸುತ್ತಿವೆ. ತೆರಿಗೆ ಕಡಿತ ಮಾಡಿ ಉಳಿದ ಮೊತ್ತ ಪಾವತಿಸುವ ಕ್ರಮ ಸರಿಯೇ? ನಾವೂ ತೆರಿಗೆ ಪಾವತಿಸುತ್ತಿರುವಾಗ ಕಂಪನಿಗಳು ಹೀಗೆ ಮಾಡುವ ಔಚಿತ್ಯವೇನು?

ಸಂದೇಶ್ ಎನ್., ರಾಜಾಜಿನಗರ, ಬೆಂಗಳೂರು
ಪ್ರಶ್ನೆ: ನನಗೆ ಡಿವಿಡೆಂಡ್ ಪಾವತಿ ಆಗುವಾಗ ತೆರಿಗೆ ಕಡಿತ ಆಗುತ್ತಿಲ್ಲ. ನಾನು ವಾರ್ಷಿಕ ತೆರಿಗೆ ವಿವರ ಸಲ್ಲಿಸುವಾಗ ಡಿವಿಡೆಂಡ್ ಆದಾಯವನ್ನು ತೆರಿಗೆ ಇಲಾಖೆಗೆ ಘೋಷಿಸಿ, ತೆರಿಗೆ ಪಾವತಿ ಮಾಡುತ್ತಿದ್ದೇನೆ. ನನಗೆ ಏಕೆ ತೆರಿಗೆ ಕಡಿತ ಮಾಡುತ್ತಿಲ್ಲ?

ಉತ್ತರ: ಹೂಡಿಕೆದಾರರು ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ಅವರಿಗೆ ಕಂಪನಿಗಳ ಲಾಭದ ಒಂದಷ್ಟು ಮೊತ್ತವನ್ನು ಡಿವಿಡೆಂಡ್ ರೂಪದಲ್ಲಿ ನೀಡಲಾಗುತ್ತದೆ. ಆರ್ಥಿಕ ವರ್ಷ 2019-20ರವರೆಗೆ, ಷೇರುದಾರರು ದೇಶೀಯ ಕಂಪನಿಯಿಂದ ಲಾಭಾಂಶ ಪಡೆದರೆ, ಅಂತಹ ಲಾಭಾಂಶದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸುವ ಅಗತ್ಯವಿರಲಿಲ್ಲ. ಏಕೆಂದರೆ, ಇದಕ್ಕೆ ಆದಾಯ ತೆರಿಗೆಯ ಸೆಕ್ಷನ್ 10(34), (35) ರ ಅಡಿಯಲ್ಲಿ ವಿನಾಯಿತಿ ಇತ್ತು ಹಾಗೂ ಆಗ ದೇಶಿ ಕಂಪನಿಗಳು ಡಿವಿಡೆಂಡ್ ವಿತರಿಸುವ ಮೊದಲು ನಿಗದಿತ ದರದಲ್ಲಿ ಡಿವಿಡೆಂಡ್ ವಿತರಣಾ ತೆರಿಗೆ ಪಾವತಿಸಬೇಕಾಗಿತ್ತು.

ಆದರೆ, 2020ರ ಹಣಕಾಸು ಕಾಯ್ದೆಯಲ್ಲಿ ಮಾಡಲಾದ ಕೆಲವು ಬದಲಾವಣೆಗಳ ಪ್ರಕಾರ, ಸಾಂಪ್ರದಾಯಿಕ ತೆರಿಗೆ ವಿಧಾನವನ್ನು ಮತ್ತೆ ಜಾರಿಗೊಳಿಸಲಾಯಿತು. ಅದರ ಅನ್ವಯ, ಪ್ರಸ್ತುತ ಹೂಡಿಕೆದಾರರ ಕೈಯಲ್ಲಿ ಲಾಭಾಂಶವನ್ನು ತೆರಿಗೆಗೆ ಒಳಪಡಿಸಲಾಗುತ್ತಿದೆ. ಪರಿಣಾಮವಾಗಿ, ಡಿವಿಡೆಂಡ್ ಆದಾಯವು ಈಗ ವೈಯಕ್ತಿಕವಾಗಿ ಅನ್ವಯವಾಗುವ ಆದಾಯ ತೆರಿಗೆ ಸ್ಲ್ಯಾಬ್ ದರಕ್ಕೆ ಅನುಗುಣವಾಗಿ ತೆರಿಗೆಗೊಳಪಡುತ್ತದೆ. ಡಿವಿಡೆಂಡ್ ಮೇಲೆ ಸಂಪೂರ್ಣ ತೆರಿಗೆ ಪಾವತಿಸುವ ಜವಾಬ್ದಾರಿ ತೆರಿಗೆದಾರರದ್ದಾದರೂ, ಡಿವಿಡೆಂಡ್ ವಿತರಿಸುವಾಗ ಸೆಕ್ಷನ್ 194ರ ಪ್ರಕಾರ, 2020ರ ಏಪ್ರಿಲ್ 1ರ ನಂತರ ಯಾವುದೇ ಭಾರತೀಯ ಕಂಪನಿಗಳು ನಿವಾಸಿ ಷೇರುದಾರರಿಗೆ ಒಂದು ಹಣಕಾಸು ವರ್ಷದಲ್ಲಿ ₹ 5,000ಕ್ಕಿಂತ ಅಧಿಕ ಮೊತ್ತವನ್ನು ಪಾವತಿಸುವುದಿದ್ದರೆ, ಅಂತಹ ಲಾಭಾಂಶದಿಂದ ಶೇ 10ರ ದರದಲ್ಲಿ ತೆರಿಗೆಯನ್ನು ಕಡಿತ ಮಾಡಬೇಕೆನ್ನುವ ಹೊಸ ನಿಯಮವನ್ನೂ ತರಲಾಯಿತು. ವಾರ್ಷಿಕ ತೆರಿಗೆ ವಿವರ ಸಲ್ಲಿಸುವಾಗ ಈ ಮೊತ್ತವನ್ನು ಅಂತಿಮ ತೆರಿಗೆಯೊಡನೆ ಸರಿದೂಗಿಸುವ ಅವಕಾಶವಿದೆ. ಒಂದು ವೇಳೆ ಒಂದೇ ಹಣಕಾಸು ವರ್ಷದಲ್ಲಿ ₹ 5,000ಕ್ಕಿಂತ ಕಡಿಮೆ ಡಿವಿಡೆಂಡ್ ಒಂದು ಕಂಪನಿಯಿಂದ ಪಡೆದಿದ್ದರೆ, ಅಂಥ ವೇಳೆ ಕಂಪನಿಗಳು ತೆರಿಗೆ ಕಡಿತ ಮಾಡುವ ಅಗತ್ಯವಿಲ್ಲ. ಆಗ ಸಂಪೂರ್ಣ ತೆರಿಗೆ ಮೊತ್ತವನ್ನು ತೆರಿಗೆದಾರರೇ ತಮ್ಮ ಕಡೆಯಿಂದ ಪಾವತಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.